ಸಿನಿಮಾ ನಾಯಕಿ ಅಂದಾಕ್ಷಣವೇ ಮೊದಲ ಅರ್ಹತೆಯಾಗಿ ಕಾಣಿಸೀಓದು ಗ್ಲಾಮ್ ಲುಕ್. ಬಹುಶಃ ಭಾರತೀಯ ಚಿತ್ರರಂಗದ ಇತ್ತೀಚಿನ ದಿನಗಳ ಬಹುತೇಕ ನಟಿಯರು ಗ್ಲಾಮರ್ ಅನ್ನು ಮೊದಲ ಆಧ್ಯತೆಯಾಗಿಸಿ, ಪಾತ್ರಗಳ ಆಯ್ಕೆ ಮತ್ತು ನಟನಾ ಕೌಶಲ್ಯವನ್ನು ಎರಡನೇ ಆಯ್ಕೆಯಾಗಿಸಿಕೊಂಡಿದ್ದಾರೆ. ನಡೆದಾಡೋ ಸೌಂದರ್ಯವರ್ಧಕಗಳ ಜಾಹೀರಾತಿನಂತೆ ಕಾಣಿಸೋ ನಟಿಯ ನಡುವೆ, ತಾನಿರೋದೇ ಹೀಗೆಂಬಂತೆ ಸಹಜವಾಗಿ ಬದುಕೋದಕ್ಕೆ, ಹಾಗಿದ್ದುಕೊಂಡೇ ಒಳ್ಳೊಳ್ಳೆ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ನಿಜಕ್ಕೂ ಛಾತಿ ಬೇಕಾಗುತ್ತೆ. ಅಂಥಾ ಕಲೆಯನ್ನು ಕರಗತ ಮಾಡಿಕೊಂಡಿರುವಾಕೆ ಸಾಯಿಪಲ್ಲವಿ. ವಿಶೇಷವೆಂದರೆ, ಆಕೆಯ ಮನಃಸ್ಥಿತಿಗೆ ಅನುಗುಣವಾದ ದೊಡ್ಡ ಅವಕಾಶಗಳೇ ಸಾಯಿಪಲ್ಲವಿಯನ್ನು ಅಡಿಗಡಿಗೆ ಅರಸಿ ಬರುತ್ತಿವೆ!
ಇದೀಗ ಭಾರತೀಯ ಸಂಗೀತ ಕ್ಷೇತ್ರದ ಮೇರು ಗಾಯಕಿ ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸೋ ಅವಕಾಶ ಸಾಯಿಪಲ್ಲವಿಗೆ ಕೂಡಿ ಬಂದಿದೆ. ಇಂಥಾ ಅಭಿಜಾತ ಕಲಾವಿದೆಯ ಜೀವನಾಧಾರಿಕ ಕಥೆಯಲ್ಲಿ ಪಾತ್ರವಾಗಬೇಕೆಂಬುದು ಅನೇಕ ನಟಿಯರ ಜೀವಮಾನದ ಕನಸು. ಅಂಥಾದ್ದೊಂದು ಅವಕಾಶ ತಾನೇ ತಾನಾಗಿ ಸಾಯಿಪಲ್ಲವಿಗೆ ಲಭಿಸಿದೆ. ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿರುವ ರಾಮಾಯಣ ಚಿತ್ರದಲ್ಲಿ ಸಾಯಿಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಅದರ ಬೆನ್ನಲ್ಲಿಯೇ ಕಲ್ಕಿ ಸೀಕ್ವೆಲ್ನಲ್ಲಿ ಪ್ರಭಾಸ್ ಜೊತೆ ನಟಸಲೂ ತಯಾರಾಗಿದ್ದಾರೆ. ಇದೆಲ್ಲದರ ನಡುವಲ್ಲಿಯೇ ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಕಥನದ ಭಾಗವಾಗಲು ಸಾಯಿಪಲ್ಲವಿ ತಾಲೀಮು ಶುರುವಿಟ್ಟಿದ್ದಾರೆ.
ಈಗಾಗಲೇ ಚಿತ್ರತಂಡ ಸದರಿ ಸಿನಿಮಾದ ಪೂರ್ವಭಾವಿ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಸುಬ್ಬುಲಕ್ಷ್ಮಿ ಜೀವಿಸಿದ್ದ ಕಾಲಘಟ್ಟಕ್ಕೆ ಹೊಂದಿಕೆಯಾಗುವಂಥಾ ಕಾಸ್ಟ್ಯೂಮ್ ಡಿಸೈನಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ಇದರ ಪಾತ್ರವನ್ನು ಆವಾಹಿಸಿಕೊಳ್ಳಲು ದಿನದಲ್ಲೊಂದಷ್ಟು ಸಮಯವನ್ನು ಸಾಯಿಪಲ್ಲವಿ ಮೀಸಲಿಟ್ಟಿದ್ದಾರಂತೆ. ಇದೀಗ ರಾಮಾಉಯಣ ಚಿತ್ರದತ್ತ ಗಮನ ಕೇಂದ್ರೀಕರಿಸಿರುವ ಈಕೆ, ಅದಾದ ನಂತರ ಕಲ್ಕಿ ಸೀಕ್ವೆಲ್ ಚಿತ್ರವನ್ನು ಮುಗಿಸಿಕೊಳ್ಳಬೇಕಿದೆ. ಕಲ್ಕಿಯ ನಂತರದಲ್ಲಿ ಸುಬ್ಬುಲಕ್ಷ್ಮಿ ಜೀವನಾಧಾರಿತ ಕಥನದ ಚಿತ್ರೀಕರಣ ಚಾಲೂ ಆಗಲಿದೆ. ಇದೆಲ್ಲದರ ಜೊತೆ ಜೊತೆಗೇ ಮತ್ತೊಂದಷ್ಟು ದೊಡ್ಡ ಪ್ರಾಜೆಕ್ಟುಗಳೂ ಸಾಯಿಪಲ್ಲವಿಗಾಗಿ ಕಾದು ಕೂತಿವೆ. ಒಟ್ಟಾರೆಯಾಗಿ ಮೊಡವೆ ಸುಂದರಿ ಪಾಲಿಗಿದು ವೃತ್ತಿಬದುಕಿನ ಪರ್ವಕಾಲ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ!
keywords: sai pallavi, bollywood, ms subbulakshmi biopic

