ಕಾಂತಾರ ಚಾಪ್ಟರ್೧ ಚಿತ್ರದ ಮಹಾ ಗೆಲುವಿನ ಮೂಲಕ ರುಕ್ಮಿಣಿ ವಸಂತ್ ಸಪ್ತಸಾಗರದಾಚೆಗೂ ಸದ್ದು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಟ್ಟಲೆ ಚಾಲ್ತಿಯಲ್ಲಿದ್ದು, ಒಂದಷ್ಟು ಪ್ರಸಿದ್ಧಿ ಬಂದ ಬಳಿಕವೂ ಬಹುತೇಕ ನಟಿಯರ ಕನಸುಗಳು ನನಸಾಗದೆ ಉಳಿದು ಬಿಡುತ್ತೆ. ಆದರೆ, ರುಕ್ಮಿಣಿ ವಸಂತ್ ವಿಚಾರದಲ್ಲಿ ಅಂಥಾ ಮಹಾ ಕನಸು ಒಂದೆರಡು ಹೆಚ್ಚೆಯಲ್ಲಿಯೇ ನನಸಾಗಿ ಬಿಟ್ಟಿದೆ. ಯಾವ ಪಾತ್ರಕ್ಕಾದರೂ ಹೊಂದಿಕೊಳ್ಳಬಲ್ಲ ಪ್ರತಿಭೆ, ಎಲ್ಲರನ್ನೂ ಸೆಳೆಯಬಲ್ಲ ಚೆಲುವು ಮತ್ತು ಸರಿಯಾದ ಸಮಯದಲ್ಲಿ ಸಿಕ್ಕ ಅವಕಾಶಗಳ ದೆಸೆಯಿಂದ ರುಕ್ಮಿಣಿಯ ನಸೀಬು ಏಕಾಏಕಿ ಕುಲಾಯಿಸಿ ಬಿಟ್ಟಿದೆ. ಕಾಂತಾರದ ಮೂಲಕ ಆಕೆಗೆ ದೊರಕಿರುವ ಪ್ರಸಿದ್ಧಿಯಿದೆಯಲ್ಲಾ? ಅದು ಖಂಡಿತವಾಗಿಯೂ ಭಾರತೀಯ ಚಿತ್ರರಂಗದ ಇತರೆ ನಟಿಯರೊಳಗೂ ಕರುಬು ಮೂಡುವಂತೆ ಮಾಡಿರೋಳದು ಸುಳ್ಳಲ್ಲ!

ಸದ್ದೇ ಇಲ್ಲದಂತೆ ಕಾಂತಾರಾ ಚಾಪ್ಟರ್೧ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದವರು ರುಕ್ಮಿಣಿ ವಸಂತ್. ಇದು ಆ ಕ್ಷಣದಲ್ಲಿ ಕ್ರಾಂತಿಕಾರಕ ಅಂಶವಾಗಿ ಕಂಡಿರಲಿಲ್ಲ. ಅದಾಗಲೇ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಗೆಲುವು ಕಂಡಿದ್ದ ಈಕೆ, ತಮಿಳಿಗೆ ಹಾರಿ, ವಿಜಯ್ ಸೇತುಪಥಿಗೆ ನಾಯಕಿಯಾಗಿ ನಟಿಸಿ ಮುಗ್ಗರಿಸಿದ್ದರು. ಆ ಸಿನಿಮಾ ಸೋಲು ಕಂಡಿತ್ತು. ಒಂದು ಗೆಲುವಿನ ನಂತರ ಹೀಗೆ ಏಕಾಏಕಿ ಸೋಲೊಂದು ಸುತ್ತಿಕೊಂಡರೆ, ಅದು ವೃತ್ತಿ ಜೀವನದ ಓಘವನ್ನು ಕಡಿಮೆ ಮಾಡುವುದು ಸಹಜ. ಇಂಥಾ ಸೋಲಿನ ಬೆನ್ನಲ್ಲಿಯೇ ರುಕ್ಮಿಣಿ ತೆಲುಗು ಚಿತ್ರದಲ್ಲಿ ಅವಕಾಶ ಪಡದ ಸುಳ್ಳು ಸುದ್ದಿಯೂ ಹಬ್ಬಿಕೊಂಡಿತ್ತು. ಇದರ ಬೆನ್ನಲ್ಲಿಯೇ ರುಕ್ಮಿಣಿಗೆ ಕಾಂತಾರ ಮೂಲಕ ಅದೃಷ್ಟದ ಹೆಬ್ಬಾಗಿಲು ತೆರೆದುಕೊಂಡಿತ್ತು.

ಹಾಗಂತ ರಿಷಭ್ ಶೆಟ್ಟಿ ರುಕ್ಮಿಣಿ ನಾಯಕಿಯಾದ ಬಗ್ಗೆ ಹೆಚ್ಚೇನು ಹೈಪ್ ಸೃಷ್ಟಿಸಿರಲಿಲ್ಲ. ಕಡೇಯ ಹಂತದವರೆಗೂ ರುಕ್ಮಿಣಿ ಈ ಸಿನಿಮಾ ನಾಯಕಿ ಎಂಬ ವಿಚಾರ ಬಹುತೇಕರಿಗೆ ಗೊತ್ತಿರಲೂ ಇಲ್ಲ. ಆದರೆ, ಕಾಂತಾರದ ಕನಕಾವತಿಯಾಗಿ ರುಕ್ಮಿಣಿ ಕಾಣಿಸಿಕೊಂಡ ರೀತಿ ಕಂಡು ನೋಡುಗರೆಲ್ಲ ಅವಾಕ್ಕಾಗಿದ್ದಾರೆ. ಆಕೆಯ ನಟನೆಗೆ, ಸೌಂದರ್ಯಕ್ಕೆ ಪರಭಾಷಿಗರೂ ಫಿದಾ ಆಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈಕೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಇದು ನಿಜಕ್ಕೂ ಸಮ್ಮೋಹಕ ಗೆಲುವೆಂಬುದು ಎರಡು ಮಾತಿಲ್ಲ. ಹೀಗೆ ರುಕ್ಮಿಣಿಯ ಗೆಲುವಿನ ಝಗಮಗದ ನಡುವೆ ಒಂದಷ್ಟು ಅಭಿಮಾನಿಗಳು ನಿಶ್ವಿಕಾ ನಾಯ್ಢುವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆಕೆಯ ಸಾಮಾಜಿಕ ಜಾಲತಾಣದ ಖಾತೆಯಲ್ಲಿಯೇ ನಿಶ್ವಿಕಾಗಾಗುತ್ತಿರೋ ಹಿನ್ನಡೆಯ ಬಗ್ಗೆ ಬೇಸರದ ಮಾತುಗಳನ್ನಾಡುತ್ತಿದ್ದಾರೆ.

ನಿಶ್ವಿಕಾ ಕೂಡಾ ಪ್ರತಿಭಾನ್ವಿತ ನಟಿ. ನಟನೆ, ರೂಪದಲ್ಲಿಯೂ ಗಮನಸೆಳೆದಿದ್ದ ಹುಡುಗಿ. ಆದರೆ, ಅದೇಕೋ ಸರಿಕಟ್ಟಾದ ಅವಕಾಶಗಳು ಆಕೆಗೆ ದಕ್ಕುತ್ತಿಲ್ಲ. ಒಂದು ವೇಳೆ ಚೆಂದದ ಅವಕಾಶಗಳು ಸಿಕ್ಕರೆ ನಿಶ್ವಿಕಾ ಕೂಡಾ ನಿಸ್ಸಂದೇಹವಾಗಿಯೂ ರುಕ್ಮಿಣಿಯಂತೆಯೇ ಮಿಂಚುತ್ತಾರೆ. ಪ್ರತಿಭೆ ಇದ್ದರೆ ಅವಕಾಶಗಳು ಅರಸಿ ಬರುತ್ತವೆಂಬುದು ಅನೇಕ ನಟ ನಟಿಯರ ವಿಚಾರದಲ್ಲಿ ಸುಳ್ಳಾಗಿದೆ. ಸದ್ಯದ ಮಟ್ಟಿಗೆ ನಿಶ್ವಿಕಾರದ್ದೂ ಕೂಡಾ ಅಂಥಾದ್ದೇ ಸ್ಥಿತಿ. ಒಂದೇ ಒಂದು ಚೆಂದದ ಅವಕಾಶ ಸಿಕ್ಕರೆ ಆಕೆ ಖಂಡಿಕಯವಾಗಿಯೂ ಮೈಕೊಡವಿ ಮುನ್ನುಗ್ಗಬಹುದು. ನಿಶ್ವಿಕಾಗೆ ಅಂಥಾ ಅವಕಾಶಗಳು ಸಿಗವಂತಾಗಲೆಂದು ಅಭಿಮಾನಿ ಬಳಗ ಹಾರೈಸುತ್ತಿದೆ. ಹಾಗಂತ ಇದರ ಹಿಂದೆ ರುಕ್ಮಿಣಿ ಮಿಂಚುತ್ತಿರೋದರ ಬಗ್ಗೆ ಹೊಟ್ಟೆಕಿಚ್ಚಿನ ಕಿಸುರಿದೆ ಅಂದುಕೊಳ್ಳಬೇಕಿಲ್ಲ. ನಾಯಕಿಯಾಗಿ ಮಿಂಚುವ ಎಲ್ಲ ಅರ್ಹತೆಗಳೂ ಇರುವ ನಿಶ್ವಿಕಾ ಕೆಲ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳಲಾರಂಭಿಸಿರೋದು ಅನೇಕರಿಗೆ ಬೇಸರ ತರಿಸಿದೆ. ಈ ಕಾರಣದಿಂದಲೇ ಆಕೆಗೂ ಒಳ್ಳೊಳ್ಳೆ ಅವಕಾಶಗಳು ಅರಸಿ ಬರಲೆಂದು ಆಶಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ರುಕ್ಮಿಣಿಗೆ ಕೂಡಿ ಬರುತ್ತಿರುವ ಅವಕಾಶಗಳನ್ನು ಅದೃಷ್ಟದ ಉಡಿಗೆ ಹಾಕುವಂತೆಯೂ ಇಲ್ಲ. ಕೆಲವೊಮ್ಮೆ ಆಯ್ಕೆ, ಕಾಯುವ ತಾಳ್ಮೆ, ಒಂದೊಂದು ಹೆಜ್ಜೆ ಕೂಡಾ ವೃತ್ತಿ ಬದುಕಿನ ದಿಕ್ಕು ಬದಲಿಸುತ್ತೆ. ಅಂಥಾದ್ದೊಂದು ಸರಿಕಟ್ಟಾದ ಹಾದಿಯಲ್ಲಿ ಎದುರಾಗೋ ಅವಘಡಗಳೂ ಕೂಡಾ ವರವಾಗಿ ಪರಿಣಮಿಸುತ್ತವೆ. ಕಾಂತಾರಾ ಚಾಪ್ಟರ್೧ ಚಿತ್ರೀಕರಣದ ಹಂತದಲ್ಲಿ ಒಂದಷ್ಟು ಆಘಾತಗಳು ಎದುರಾಗಿದ್ದವು.ತೀರ್ಥಹಳ್ಳಿ ಸಮೀಪ ನೀರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ತೆಪ್ಪ ಮಗುಚಿಕೊಂಡು ಅವಘಡ ಸಂಬಂವಿಸಿತ್ತು. ರಿಷಭ್ ಶೆಟ್ಟರು ಬಲು ನಾಜೂಕಿನಿಂದ ಅದನ್ನು ಸಂಭಾಳಿಸಿದ್ದರು. ಹಾಗೆ ತೆಪ್ಪ ಮಗುಚಿಕೊಂಡಾಗ ರುಕ್ಮಿಣಿ ವಸಂತ್ ಕೂಡಾ ನೀರಿಗೆ ಬಿದ್ದು ನಿತ್ರಾಣಗೊಂಡಿದ್ದರು. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಬಚಾವು ಮಾಡಲಾಗಿತ್ತು. ವಿಶೇಷವೆಂದರೆ, ಇಂಥಾ ಘಟನೆಗಳಾಚೆಗೂ ಸದರಿ ಸಿನಿಮಾ ಗೆದ್ದಿದೆ. ರುಕ್ಮಿಣಿಗೂ ಗೆಲುವಾಗಿದೆ. ಇಂಥಾ ಒಳಿತಿನ ಕಾಲದ ಕಾರುಣ್ಯ ನಿಶ್ವಿಕಾ ಥರದ ಅರ್ಹ ನಟಿಗೂ ಸಿಗುವಂತಾಗಲೆಂದು ಸಿನಿಮಾಸಕ್ತರು ಹಾರೈಸುತ್ತಿದ್ದಾರೆ!
