ರಿಷಭ್ ಶೆಟ್ಟಿ ಮಹಾ ಗೆಲುವಿನ ಖುಷಿಯಲ್ಲಿದ್ದಾರೆ. ಕಾಂತಾರಾ ಚಾಪ್ಟರ್೧ ದೇಶಾದ್ಯಂತ ಭರ್ಜರಿ ಪ್ರದರ್ಶನ ನಡೆಸುತ್ತಾ, ಇನ್ನೇನು ಸಾವಿರ ಕೋಟಿ ಕ್ಲಬ್ ಸೇರುವ ಸಮೀಪದಲ್ಲಿದೆ. ಈ ಸಿನಿಮಾ ಬಿಡುಗಡೆಯಾಗಿ ಎಲ್ಲಡೆ ಸಕಾರಾತ್ಮಕ ವಾತಾವರಣ ಇರುವಾಗಲೇ ದೀಪಾವಳಿ ಹಬ್ಬ ಎದುರಾಗಿತ್ತು. ಹೇಳಿಕೇಳಿ ದೀಪಾವಳಿಗೆ ಒಂದಷ್ಟು ರಜೆಯಿತ್ತು. ಈ ಸಂದರ್ಭದಲ್ಲಿ ಕಲೆಕ್ಷನ್ನು ಮತ್ತಷ್ಟು ಏರುಗತಿ ಕಾಣುತ್ತದೆಂಬ ನಿರೀಕ್ಷೆಯಿತ್ತು. ದೀಪಾವಳಿಯ ಹೊಸ್ತಿಲಲ್ಲಿ ಅದು ನಿಜವಾಗೋ ಲಕ್ಷಣಗಳಿದ್ದರೂ ಕೂಡಾ, ಬೆಳಕಿನ ಹಬ್ಬದ ಆಸುಪಾಸಿನ ಸನ್ನಿವೇಶಗಳು ಕಾಂತಾರಾ ಚಾಪ್ಟರ್೧ ಪಾಲಿಗೆ ಸ್ಪೀಡ್ ಬ್ರೇಕರಿನಂತಾಗಿದೆ. ಇದೆಲ್ಲದರಾಚೆಗೂ ಕನ್ನಡ ಸಿನಿಮಾ ಪ್ರೇಮಿಗಳು ಈ ಚಿತ್ರ ಸಾವಿರ ಕೋಟಿ ಕ್ಲಬ್ ಸೇರಿ ದಾಖಲೆ ನಿರ್ಮಿಸುವ ಕ್ಷಣಕ್ಕಾಗಿ ಹಾತೊರೆಯುತ್ತಿದ್ದಾರೆ.

ಹಾಗೆನೋಡಿದರೆ, ಕಾಂತಾರಾ ಚಾಪ್ಟರ್೧ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿದ್ದಾವೆ. ಈ ಹಿಂದೆ ಕಾಂತಾರ ತೆರೆಗಂಡಾಗ ಯಾವ ನಿರೀಕ್ಷೆಗಳೂ ಇರಲಿಲ್ಲ. ಆದರೆ, ತನ್ನೊಳಗಿನ ಬೆರಗುಗಳ ಕಾರಣದಿಂದಲೇ ಅದು ಪ್ಯಾನಿಂಡಿಯಾ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಆದರೆ, ಚಾಪ್ಟರ್೧ ಅನ್ನು ಪ್ಯಾನಿಂಡಿಯಾ ಮಟ್ಟದಲ್ಲಿಯೇ ತಯಾರಿಸಿ, ಪ್ರೇಕ್ಷಕರ ನಿರೀಕ್ಷೆ ತಣಿಸುವ ಮಹಾ ಸವಾಲು ರಿಷಭ್ ಶೆಟ್ಟರ ಮುಂದಿತ್ತು. ಅದು ಯಾವ ನಿರ್ದೇಶಕರ ಪಾಲಿಗಾದರೂ ಅತ್ಯಂತ ಕಠಿಣವಾದ ಸವಾಲು. ಈವತ್ತಿಗೆ ಕಾಂತಾರಾ ಚಾಪ್ಟರ್ ೧ ಬಗ್ಗೆ ಸಮೂಹ ಸನ್ನಿಯಂತೆ ಕೆಲ ಮಂದಿ ಒಳ್ಳೆ ಮಾತುಗಳನ್ನಾಡುತ್ತಿದ್ದರೂ ಕೂಡಾ ನೋಡಿದ ಮಂದಿ ಒಂದಷ್ಟು ಹಿನ್ನಡೆಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಅದೆಲ್ಲವೂ ಕಾಂತಾರ ಚಾಪ್ಟರ್೧ ನಿರೀಕ್ಷೆಯಂತೆ ಮೂಡಿ ಬಂದಿಲ್ಲ ಎಂಬುದನ್ನು ಧ್ವನಿಸುತ್ತಿರೋದು ಸತ್ಯ.

ಆದರೆ, ಈ ಸಿನಿಮಾ ಸಿನಿಮಾ ಮಂದಿರಗಳಲ್ಲಿ ಸಮ್ಮೋಹಕ ಫೀಲ್ ಮೂಡಿಸುವಲ್ಲಿ ಒಂದಷ್ಟು ಗೆದ್ದಿದೆ. ದೀಪಾವಳಿಯ ಶುರುವಾತಿನ ಹೊತ್ತಿಗೆಲ್ಲ ಗಳಿಕೆಯೆಂಬುದು ಏಳುನೂರು ಕೋಟಿಯ ಹಂತ ತಲುಪಿತ್ತು. ಆದರೆ ದೀಪಾವಳಿಯ ನಂತರದಲ್ಲಿ ಎಂಟು ಕೋಟಿ, ಆರುಕೋಟಿಯಂತೆ ಈ ಸಿನಿಮಾದ ಗಳಿಕೆ ಒಂದಂಕಿ ತಲುಪಿಕೊಂಡಿದೆ. ಹಿಂದಿಯಲ್ಲಿ ದೊಡ್ಡ ಸಿನಿಮಾ ಬಿಡುಗಡೆಯಾದರೂ ಕೂಡಾ ಹೇಳಿಕೊಳ್ಳುವಂಥಾ ಹಿನ್ನಡೆ ಆಗಿಲ್ಲ. ಆದರೆ, ಸಾವಿರ ಕೋಟಿಯ ಕ್ಲಬ್ ಸೇರಿಕೊಳ್ಳುವ ನಿಟ್ಟಿನಲ್ಲಿ ಕಡೇ ಕ್ಷಣದಲ್ಲಿ ಒಂದಷ್ಟು ಅಡೆತಡೆಗಳು ಎದುರಾಗಿರೋದಂತೂ ಸತ್ಯ. ಹೀಗೆ ಗಳಿಕೆಯಲ್ಲಿ ದಾಖಲೆಯತ್ತ ಮುನ್ನಡೆದರೂ ಕೂಡಾ, ಈ ಬಾರಿಯ ಗೆಲುವು ರಿಷಭ್ ಶೆಟ್ಟರಿಗೆ ಎಚ್ಚರಿಕೆಯೊಂದನ್ನು ರವಾನಿಸಿರೋದಂತೂ ನಿಜ.

ಕಾಂತಾರದ ಪಂಜುರ್ಲಿ ದೈವದ ಅಬ್ಬರ ಜನಮನ ಸೆಳೆಯುತ್ತಲೇ, ಕರಾವಳಿ ಸೀಮೆಯ ಅಷ್ಟೂ ದೈವಗಳನ್ನಿಟ್ಟುಕೊಂಡು ಮತ್ತೊಂದಷ್ಟು ಸರಣಿಯ ರೀಲು ಸುತ್ತಿ ಗೆಲ್ಲುವ ಉಮೇದು ಶೆಟ್ಟರೊಳಗಿತ್ತು. ಆದರೆ, ಅದುಹೆಚ್ಚು ಕಾಲ ರೋಚಕತೆ ಉಳಿಸಿಕೊಳ್ಳೋದಿಲ್ಲ ಎಂಬ ವಿಚಾರ ಈ ಮೂಲಕವೇ ಸಾಬೀತಾಗಿದೆ. ಕಾಂತಾರ ಗೆಲ್ಲುತ್ತಲೇ ಪಂಜುರ್ಲಿ ದೈವವನ್ನು ಗಣಮಗನಾಗಿ ಆವಾಹಿಸಿಕೊಂಡಿದ್ದೇನೋ ಎಂಬಂತೆ ರಿಷಭ್ ಶೆಟ್ಟಿ ಭಳಾಂಗು ಬಿಟ್ಟಿದ್ದರು. ಈ ಸರಣಿ ಕೂಡಾ ತುಳುನಾಡ ದೈವಗಳ ಅಸಲೀ ಕಥೆಯ ಡಾಮಕ್ಯುಮೆಂಟರಿ ಎಂಬಂತೆ ಪುಂಗಿದ್ದರು. ಅದೆಲ್ಲವೂ ಅವರಿಗೇ ಉಲ್ಟಾ ಹೊಡೆದಿದೆ. ಅಷ್ಟಕ್ಕೂ ಇಂಥಾ ದೈವಗಳನ್ನು ಬ್ಯುಸಿನೆಸ್ಸಿಗೆ ಬಳಸಿಕೊಂಡು ಯಾವುದೋ ಕಾಲವಾಗಿದೆ. ಪಂಜುರ್ಲಿ ಮುಂತಾದ ದೈವಗಳನ್ನು ಮೈಮೇಲೆ ಬರಿಸಿಕೊಳ್ಳುವ ಭ್ರಮೆ ಬಿತ್ತುತ್ತಲೇ ಕೆಲ ಖದೀಮರು ಅದೆಷ್ಟೋ ಕುಟುಂಬಗಳ ಕೈ ಖಾಲಿ ಮಾಡಿದ್ದಾರೆ. ಹಾಗಿರುವಾಗ ಶೆಟ್ಟರು ಮತ್ತೆ ಮತ್ತೆ ಅದದೇ ರೀಲು ಸುತ್ತಿದರೆ ಬರಖತ್ತಾಗೋದು ಕಷ್ಟವಿದೆ. ಇದರಾಚೆಗೆ ಕಾಂತಾರ ೧ ಚಿತ್ರದ ಅಮೋಘ ಗೆಲುವು ಕನ್ನಡಿಗರೆಲ್ಲರ ಪಾಲಿನ ಸಂಭ್ರಮವೆಂಬುದರಲ್ಲಿ ಎರಡು ಮಾತಿಲ್ಲ. ಹಾಗಂತ ಮುಂದೆಯೂ ಇಂಥಾದ್ದೇ ಸರಣಿ ಶುರುವಿಟ್ಟುಕೊಂಡರೆ ಕರಾವಳಿಯ ದೈವಗಳೂ ರಿಷಭ್ ಪಡೆಯನ್ನು ಕಾಪಾಡಲಿಕ್ಕಿಲ್ಲ!
