ಪಕ್ಕಾ ಹಾಲಿವುಡ್ ಛಾಯೆಯ ಮೂಲಕ ಟಾಕ್ಸಿಕ್ ರಾಯನ ಪರಿಚಯಾತ್ಮಕ ಟೀಸರ್ ಸದ್ದು ಮಾಡುತ್ತಿದೆ. ಅಭಿಮಾನದಾಚೆಗೂ ರಾಕಿಂಗ್ ಸ್ಟಾರ್ ಯಶ್ ಅವತಾರ ಕಂಡು ಒಂದಷ್ಟು ಮಂದಿ ಮೆಚ್ಚಿಕೊಳ್ಳುತ್ತಿದ್ದರೆ, ಮತ್ತೊಂದು ದಿಕ್ಕಿನಿಂದ ವಿಮರ್ಶೆ, ವಿರೋಧಾಭಾಸಗಳೂ ವ್ಯಕ್ತವಾಗುತ್ತಿವೆ. ಪ್ರಧಾನವಾಗಿ, ಸಿನಿಮಾದ ಕಥೆ ಯಾವ ಥರದ್ದಿರಬಹುದೆಂಬ ಚರ್ಚೆಯೊಂದು ಟ್ರೈಲರ್, ಟೀಸರ್ ಮೂಲಕ ಮೂಡಿಕೊಳ್ಳೋದು ಮಮೂಲು. ಆದರೆ, ಟಾಕ್ಷಿಕ್ ವಿಚಾರದಲ್ಲದು ಅನಿರೀಕ್ಷಿತ ತಿರುವು ಕಂಡಿದೆ. ಆದರೆ, ಅದು ಸಿನಿಮಾ ತಂಡದ ಪಾಲಿಗೆ ಅಪೇಕ್ಷಿತ ವಿಚಾರ. ಈ ನಿಟ್ಟಿನಲ್ಲಿ ಟಾಕ್ಸಿಕ್ ಟೀಮು ಭರ್ಜರಿಯಾಗಿಯೇ ಗೆದ್ದಿದೆ. ಮಂದಿ ತಲೆ ಕೆಡಿಕೊಳ್ಳಲೆಂದೇ ಕಾರೊಳಗೆ ಫಾರಿನ್ ಸ್ಟೈಲಿನ ಕಾಮ ಕೇಳಿಯ ದೃಷ್ಯಗಳನ್ನಿಟ್ಟಿದ್ದಾರೆ. ಈಗಂತೂ ಅದರ ಸುತ್ತಲೇ ಚರ್ಚೆಗಳು ನಡೆಯುತ್ತಿವೆ.
ಕನ್ನಡದ ಮಟ್ಟಿಗೆ ಟಾಕ್ಸಿಕ್ನದ್ದು ಮಡಿವಂತಿಕೆಯ ಡೌಲುಗಳನ್ನು ಅಲುಗಾಡಿಸುವ ನಡೆ. ಕನ್ನಡದಲ್ಲಿ ಇಂಥಾ ದೃಷ್ಯಗಳನ್ನು ಸಾಂಕೇತಿಕ ಸಂಜ್ಞೆಗಳ ಮೂಲಕ ತೋರಿಸುವ ಪರಿಪಾಠವಿತ್ತು. ಯಶ್ ಚಿತ್ರ ಅದನ್ನು ಸಾರಾಸಗಟಾಗಿ ಬದಲಾಯಿಸಿ ಬಿಟ್ಟಿದೆ. ಹಾಗಂತ ನಿರ್ದೇಶಕಿ ಗೀತು ಮೋಹನ್ ದಾಸ್ ಈ ವಿಚಾರದಲ್ಲಿ ಸ್ವಂತದ ಹಾದಿ ಹಿಡಿದಿಲ್ಲ. ಆಕೆ ಹಾಲಿವುಡ್ಡಿನ ಜನಪ್ರಿಯ ಧಾಟಿಯನ್ನು ಆಯ್ದುಕೊಂಡಿದ್ದಾರಷ್ಟೆ. ಇದೆಲ್ಲ ಏನೇ ಇದ್ದರೂ ಕಾರೊಳಗಿನ ಹಸಿಬಿಸಿ ರೊಮ್ಯಾನ್ಸಿನಲ್ಲಿ ಕಾಣಿಸಿಕೊಂಡ ನಟಿ ಯಾರು ಅಂತೊಂದು ಕುತೂಹಲ ಅನೇಕರಲ್ಲಿದೆ. ಅಂದಹಾಗೆ, ಟಾಕ್ಸಿಕ್ನ ಈ ಕಾಮಿಣಿ ಹಾಲಿವುಡ್ಡಿನ ಖ್ಯಾತ ನಟಿ, ನಿರ್ಮಾಪಿ, ಮಾಡಲ್ ನ್ಯಾಟಲಿ ಬರ್ನ್!
ನ್ಯಾಟಲಿ ಬರ್ನ್ ಹಾಲಿವುಡ್ ಸಿನಿಮಾ ವೀಕ್ಷಕರಿಗೆಲ್ಲ ಪರಿಚಿತ ನಟಿ. ಸದಾ ಕ್ರಿಯಾಶೀಲವಾಗಿರುವ ಈಕೆ ಒಂದಷ್ಟು ಯಶಸ್ವೀ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಇಂಥಾ ನ್ಯಾಟಲಿ ಬರ್ನ್ ಟಾಕ್ಸಿಕ್ಕಿಗೆ ಒಂದಷ್ಟು ಹಣ ಹೂಡಿದ್ದಾಳೆಂದೂ ಹೇಳಲಾಗುತ್ತಿದೆ. ಬಹುಶಃ ಭಾರತೀಯ ಚಿತ್ರರಂಗದ ನಾಯಕಿ ಇಂಥಾ ಸೀನುಗಳಲ್ಲಿ ನಟಿಸಲು ಒಪ್ಪಿಕೊಳ್ಳೋದು ಕಷ್ಟ. ರಾಕಿ ಸಾವಂತ್ ಮನಸು ಮಾಡಬಹುದಷ್ಟೆ. ಈ ಸತ್ಯ ಗೊತ್ತಿದ್ದೇ ಗೀತು ನ್ಯಾಟಲಿಯನ್ನು ಆಯ್ಕೆ ಮಾಡಿಕೊಂಡಂತಿದೆ. ಇದೊಂದು ಸೀನೇ ಒಂದಿಡೀ ಟಾಕ್ಸಿಕ್ ಟೀಸರ್ನ ಆಕರ್ಷಣೆಯಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಗೀತು ಮೋಹನ್ ದಾಸ್ ಸರಿಕಟ್ಟಾದ ದಾಳವನ್ನೇ ಉರುಳಿಸಿದ್ದಾರೆ. ಯಾಕೆಂದರೆ, ಪಡ್ಡೆಗಳು, ಮಡಿವಂತರು ಸೇರಿದಂತೆ ಎಲ್ಲರೊಳಗೂ ನ್ಯಾಟಲಿಯ ಕಡೇಯ ಕೂಗು ಮತ್ತು ನಿಂತಲ್ಲೇ ಕುಲುಕಿದ ಕಪ್ಪು ಕಾರಿನ ಛಾಯೆ ಆವರಿಸಿಕೊಂಡಿದೆ!
keywords: toxic, yash, geethu, mohandas, movie, teaser, romance

