ಎಪ್ಪತ್ತೊಂದನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಪ್ರಕಟಗೊಂಡಿದೆ. ಕನ್ನಡದ ಕಂದೀಲು ಚಿತ್ರವೂ ಅತ್ಯತ್ತಮ ಚಿತ್ರವಾಗಿ ಪ್ರಶಸ್ತಿಗೆ ಪಾತ್ರವಾಗಿದೆ. ಇದು ಸಮಸ್ತ ಕರುನಾಡ ಮಂದಿಯೂ ಹೆಮ್ಮೆ ಪಡುವ ವಿಚಾರ. ಇದೇ ಹೊತ್ತಿನಲ್ಲಿ ಸದರಿ ಪ್ರಶಸ್ತಿಯ ಸುತ್ತಾ ಒಂದಷ್ಟು ಅಪಸ್ವರಗಳು ದೇಶವ್ಯಾಪಿ ಹಬ್ಬಿಕೊಂಡಿವೆ. ಅದಕ್ಕೆ ಕಾರಣವಾಗಿರೋದು ಬಾಲಿವುಡ್ ಬಾದ್‌ಷಾ ಅಂತಲೇ ಖ್ಯಾತಿವೆತ್ತಿರುವ ಶಾರೂಖ್ ಖಾನ ಗೆ ಲಭಿಸಿರುವ ಅತ್ಯುತ್ತಮ ನಟ ಪ್ರಶಸ್ತಿ. ಈಗಾಗಲೇ ಲೆಕ್ಕವಿಡಲಾಗಷ್ಟು ವೆರೈಟಿಯ ಪ್ರಶಸ್ತಿಗಳಿಗೆ ಭಾಜನನಾಗಿರುವಾತ ಶಾರೂಖ್. ಹಾಗಾದರೆ, ಶಾರೂಖ್ ಅತ್ಯುತ್ತಮ ನಟನೆಂಬೋ ರಾಷ್ಟ್ರ ಪ್ರಶಸ್ತಿ ಪಡೆಯಲು ಅರ್ಹನಲ್ಲವೇ? ಆತನಿಗೆ ಸಿಕ್ಕ ಪ್ರಶಸ್ತಿಯ ಸುತ್ತ ಯಾಕಿಂಥಾ ಕೊಂಕು ನುಡಿಗಳು ಹಬ್ಬಿಕೊಂಡಿವೆ? ಇಂಥಾ ಪ್ರಶ್ನೆಗಳಿಗೆ ನಿಖರ ಉತ್ತರವೂ ಸಿಕ್ಕಿದೆ!
ಈಗ ರಾಷ್ಟ್ರ ಪ್ರಶಸ್ತಿಯನ್ನು ಶಾರೂಖ್ ಖಾನ ಪಡೆದ ಬಗ್ಗೆ ಹೆಚ್ಚಿನವರಿಗೆ ತಕರಾರಿಲ್ಲ. ಆದರೆ, ಅದು ಲಭಿಸಿದ ಸಿನಿಮಾದ ಬಗ್ಗೆ ಅಸಮಾಧಾನ ಹಬವೆಯಾಡುತ್ತಿದೆ. ಅಂದಹಾಗೆ ಶಾರೂಖ್ ಖಾನ್‌ಗೆ ಕಳೆದ ವರ್ಷ ಬಿಡುಗಡೆಗೊಂಡಿದ್ದ ತೋಪು ಚಿತ್ರ ಜವಾನ್‌ನಲ್ಲಿಯ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ತಮಿಳುನಾಡಿನ ಅಟ್ಲಿ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸದರಿ ಸಿನಿಮಾದಲ್ಲಿ ಶಾರೂಖ್ ಚಿತ್ರ ವಿಚಿತ್ರ ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ಅದೆಲ್ಲವೂ ವ್ಯಾಪಕ ಟ್ರೋಲುಗಳಿಗೆ ಸರಕಾಗಿ ಬಿಟ್ಟಿದ್ದವು. ಮಕಾಮೂತಿಗೆಲ್ಲ ಬ್ಯಾಂಡೇಜು ಸುತ್ತಿಕೊಂಡಿರೋ ಆ ಚಿತ್ರ ಶಾರೂಕ್ ವೃತ್ತಿ ಬದುಕಿಗೂ ಒಂದಷ್ಟು ಗಾಯಹ ಮಾಡುವಂತಿತ್ತು.
ಇಂಥಾ ಸಿನಿಮಾದ ಕಥೆಯಾಗಲಿ, ಶಾರೂಖನ ನಟನೆಯಾಗಲಿ ಹೆಚ್ಚಿನವರಿಗೆ ಹಿಡಿಸಿರಲಿಲ್ಲ. ಇಂಥಾ ಸಿನಿಮಾದಲ್ಲಿನ ನಟನೆಗಾಗಿ ಬಾದ್‌ಷಾನಿಗೆ ಅದ್ಯಾವ ಸೌಭಾಗ್ಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಕೊಟ್ಟರೋ ಅಂತ ಮಂದಿ ವ್ಯಂಗ್ಯವಾಡಲಾರಂಭಿಸಿದ್ದಾರೆ. ಅಷ್ಟಕ್ಕೂ ಜವಾನ್ ಅಟ್ಲಿ ಶೈಲಿಯ ಚಿತ್ರಾನ್ನದಂಥಾ ಸಿನಿಮಾ. ಶಾರೂಖ್ ಥರದ ಸ್ಟಾರ್ ನಟರ ಸಿನಿಮಾಗಳೆಂದ ಮೇಲೆ ಬಾಕ್ಸಾಫೀಸಿನಲ್ಲಿಯೂ ಮಿನಿಮಮ್ ಗಳಿಕೆ ಗ್ಯಾರೆಂಟಿ. ಅಂಥಾದ್ದೊಂದು ಸಾಧಾರಣವಾದ ಗಳಿಕೆಯನ್ನಷ್ಟೇ ಮಾಡಿದ್ದ ಚಿತ್ರವಿದು. ಯಾವ ಕೋನದಲ್ಲಿಯೂ ಹೊಸತನವಿಲ್ಲದ ಜವಾನ್ ಬಾಲಿವುಡ್ ಸೋಲಿನ ಸುಳಿಯಿಂದ ಪಾರಾಗುವಂತೆಯೂ ಮೂಡಿ ಬಂದಿರಲಿಲ್ಲ. ಎಲ್ಲ ಪ್ರಶಸ್ತಿಗಳ ಮೌಲ್ಯವೂ ಮಣ್ಣುಪಾಲಾಗಿರುವ ಈ ಹೊತ್ತಿನಲ್ಲಿ ಶಾರೂಖ್‌ಗೆ ಸಿಕ್ಕ ರಾಷ್ಟ್ರ ಪ್ರಶಸ್ತಿ ಕೂಡಾ ಘನತೆ ಕುಂದಿಸಿಕೊಂಡಂತೆ ಭಾಸವಾಗುತ್ತಿದೆ!