ಕನ್ನಡ ಚಿತ್ರರಂಗದ ಕೊಂಡಿಯಂತಿದ್ದ ಅದೆಷ್ಟೋ ಹಿರಿಯರು ಇಲ್ಲವಾಗಿದ್ದಾರೆ. ಕಪ್ಪು ಬಿಳುಪಿನ ಕಾಲಮಾನದಿಂದ ಮೊದಲ್ಗೊಂಡು, ಪ್ಯಾನಿಂಡಿಯಾ ಜಮಾನದವರೆಗೂ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಾಕ್ಷಿಯಾದ ಕೆಲವೇ ಮಂದಿ ಮಾತ್ರವೇ ಈಗ ನಮ್ಮ ನಡುವಲ್ಲಿದ್ದಾರೆ. ಅದರಲ್ಲಿ ಹಿರಿಯ ನಟ, ಸ್ನೇಹಶೀಲ ವ್ಯಕ್ತಿತ್ವದಿಂದಲೇ ಎಲ್ಲರನ್ನೂ ಸೆಳೆದುಕೊಂಡಿರುವ ಉಮೇಶ್ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಉಮೇಶ್ ಅವರಿಗೀಗ ಉಯಸ್ಸು ಎಂಬತ್ತು. ಈ ವಯೋಮಾನದಲ್ಲಿಯೂ ಲವಲವಿಕೆಯಿಂದಿದ್ದ ಉಮೇಶ್ ಮನೆಯಲ್ಲೇ ಕಾಲುಜಾರಿ ಬಿದ್ದ ಆಸ್ಪತ್ರಗೆ ದಾಖಲಾಗಿದ್ದಾರೆ. ಇಂಥಾದ್ದೊಂದು ನೋವಿನ ಘಳಿಗೆಯಲ್ಲಿಯೇ ಈ ಹಿರಿಯ ಜೀವಕ್ಕೆ ಮತ್ತೊಂದು ಆಘಾತವೂ ಎದುರಾಗಿದೆ.

ಆರಂಭದಲ್ಲಿ ಉಮೇಶ್ ಅವರ ಲಿವರ್ ಮೇಲೊಂದು ಗಡ್ಡೆ ಬೆಳೆದಿರೋದನ್ನು ಪತ್ತೆ ಹಚ್ಚಿದ್ದ ವೈದ್ಯರು ಹೆಚ್ಚಿನ ಪರೀಕ್ಷೆ ನಡೆಸಿದಾಗ ಕ್ಯಾನ್ಸರ್ ಆವರಿಸಿರೋದು ಪತ್ತೆಯಾಗಿದೆ. ಅದೂ ಕೂಡಾ ನಾಲ್ಕನೇ ಹಂತ ತಲುಪಿಕೊಂಡಿರೋದು ಮತ್ತೊಂದು ಆಘಾತ. ಕೆಲವೊಂದು ಬಗೆಯ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲಾಗೋದಿಲ್ಲ. ಈ ಮಹಾಮಾರಿ ನಾಲ್ಕನೇ ಹಂತ ತಲುಪಿಕೊಂಡ ಮೇಲೆ ಏನನ್ನೂ ಖಾತರಿಯಾಗಿ ಹೇಳಲು ಬರುವುದಿಲ್ಲ. ಆದರೆ, ಉಮೇಶ್ ವಿಚಾರದಲ್ಲಿ ವೈದ್ಯರು ಒಂದಷ್ಟು ಸಕಾರಾತ್ಮಕವಾಗಿ ಮಾತಾಡಿದ್ದಾರೆ. ಸರಿಯಾದ ಚಿಕಿತ್ಸೆ ನೀಡಿದರೆ ಬಚಾವಾಗಲು ಸಾಧ್ಯ ಎಂಬಂಥಾ ಆಶಾದಾಯಕ ವಾತಾವರಣ ಸೃಷ್ಟಿಸಿದ್ದಾರೆ.

೧೯೬೦ರಲ್ಲಿ ತೆರೆಕಂಡಿದ್ದ ಮಕ್ಕಳ ರಾಜ್ಯ ಎಂಬ ಚಿತ್ರದ ಮೂಲಕ ಬಾಲ ಕಲಾವಿದನಾಗಿ ಬಣ್ಣ ಹಚ್ಚಿದ್ದವರು ಉಮೇಶ್. ಆ ಬಳಿಕ ಮುನ್ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ, ಥರ ಥರದ ಪಾತ್ರಗಳನ್ನು ನಿಭಾಯಿಸುವ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳ ಮನ ಗೆದ್ದಿದ್ದರು. ಈವತ್ತಿಗೆ ಅವರು ಸಿನಿಮಾ ರಂಗದ ಭಾಗವಾಗಿ ಭರ್ತಿ ಅರವತ್ತು ವಸಂತಗಳು ಕಳೆದಿವೆ. ಅವರಿಗೀಗ ಎಂಬತ್ತು ವರ್ಷವಾಗಿದೆ. ಈ ಹೊತ್ತಿನಲ್ಲಿಯೂ ತಾವು ವೈಯಕ್ತಿಕ ಬದುಕಲ್ಲಿ ಕಂಡುಂಡ ಕಷ್ಟಗಳನ್ನು ಮರೆತಂತೆ ಎಲ್ಲರನ್ನೂ ನಗಿಸುತ್ತಾ, ಪ್ರೀತಿಯಿಂದ ಪ್ರೋತ್ಸಾಹಿಸುತ್ತಾ ಬದುಕುತ್ತಿದ್ದವರು ಉಮೇಶ್. ಇಂಥಾ ಜೀವವೊಂದು ಸಂಧ್ಯಾಕಾಲದಲ್ಲಿ ಕ್ಯಾನ್ಸರ್‌ನಿಂದ ನೋವುಣ್ಣಬೇಕಾಗಿ ಬಂದಿರೋದು ನಿಜಕ್ಕೂ ದುರಂತ. ಉಮೇಶ್ ಅವರು ಆದಷ್ಟು ಬೇಗ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬರಲೆಂಬುದು ಕರುನಾಡ ಹಾರೈಕೆ!
