ಹಾರರ್ ಅಂಶಗಳೊಂದಿಗೆ, ಈಗಿನ ಯುವ ಸಮುದಾಯಕ್ಕೆ ಹೊಂದಿಕೆಯಾಗೋ ಕಥೆ ಹೊಂದಿರುವ ಚಿತ್ರ ಸೀಟ್ ಎಡ್ಜ್. ಇದರೊಂದಿಗೆ ದಶಕಗಳಿಂದೀಚೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಚೇತನ್ ಶೆಟ್ಟಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ಸೇರಿದಂತೆ ಅನೇಕ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ಚೇತನ್ ಶೆಟ್ಟಿ ಪಾಲಿಗೆ ಸ್ವತಂತ್ರ ನಿರ್ದೇಶನವೆಂಬುದು ಜೀವಮಾನದ ಕನಸಾಗಿತ್ತು. ಇಷ್ಟೂ ವರ್ಷಗಳ ಅನುಭವ, ಪರಿಶ್ರಮಗಳಿಂದ ಸೀಟ್ ಎಡ್ಜ್ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ನಾಳೆ ಅಂದರೆ, ಜನವರಿ ೩೦ರಂದು ಸದರಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಹೊತ್ತಿನಲ್ಲಿ ಕಥೆ ಹುಟ್ಟಿದ ಬಗ್ಗೆ, ಅದರಲ್ಲಿನ ಬೆರಗುಗಳ ಬಗ್ಗೆ ಚೇತನ್ ಶೆಟ್ಟಿ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈಗ್ಗೆ ಹಲವಾರು ವರ್ಷಗಳಿಂದ ಒಂದೊಳ್ಳೆ ಕಥೆಯೊಂದಿಗೆ ಸ್ವತಂತ್ರ ನಿರ್ದೇಶಕರಾಗೋ ಪ್ರಯತ್ನ ನಡೆಸಲಾರಂಭಿಸಿದವರು ಚೇತನ್ ಶೆಟ್ಟಿ. ಕಾಲವೆಂಬುದು ಆನ್ಲೈನ್ ಯುಗದೊಳಕ್ಕೆ ಪ್ರವೇಶಿಸುತ್ತಲೇ ಅದಕ್ಕೆ ಒಗ್ಗಿಕೊಳ್ಳುವ ಕಸರತ್ತು ನಡೆಸುವ ಯುವ ಮನಸುಗಳು ಚೇತನ್ರನ್ನು ಸೆಳೆದಿದ್ದವು. ಅದರಲ್ಲಿಯೂ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆದಿರೋ ವ್ಲಾಗಿಂಗ್ ವಿಚಾರ ಅವರನ್ನು ಬಹುವಾಗಿಯೇ ಸೆಳೆದುಕೊಂಡಿತ್ತು. ಒಂದಷ್ಟು ಕಾಲದಿಂದ ಇಂತಾದ್ದೊಂದು ಕಥಾ ಎಳೆ ತಲೆಯೊಳಗೆ ಗಿರಕಿ ಹೊಡೆಯುತ್ತಿದ್ದರೂ ಅದಕ್ಕೊಂದು ಸ್ಪಷ್ಟ ರೂಪುರೇಷೆ ಸಿಕ್ಕಿದ್ದು ಘೋಸ್ಟ್ ಹಂಟರ್ ಗೌರವ್ ತಿವಾರಿ ದುರಂತ ಅಂತ್ಯ ಕಂಡ ಸುದ್ದಿಯ ಮೂಲಕ!
ವ್ಲಾಗರ್ ತಿವಾರಿ ಘೋಸ್ಟ್ ಹಂಟಿಂಗ್ ಎಂಬೋ ಭ್ರಮೆಯ ಬೆಂಬಿದ್ದು ಹೊರಟಿದ್ದಾತ. ಆತನ ಸಾವು ಈವತ್ತಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ. ಹೀಗೆ ದುರಂತ ಅಂತ್ಯ ಕಂಡ ಘೋಸ್ಟ್ ಹಂಟರ್ ತಿವಾರಿಯ ಕಥೆ ಇದೆಯಲ್ಲಾ? ಅದು ಪ್ರಸಿದ್ಧಿ ಪಡೆಯೋದಕ್ಕೋಸ್ಕರ ಈಗಿನ ಯುವ ಜನಾಂಗ ಅದೆಂಥಾ ಅಪಾಯವನ್ನು ಮೈಮೇಲೆಳೆದುಕೊಳ್ಳಬಹುದೆಂಬುದಕ್ಕೊಂದು ಸ್ಪಷ್ಟ ಉದಾಹರಣೆ. ಇದೇ ಬಿಂದುವಿನೊಂದಿಗೆ ವ್ಲಾಗರ್ ಪಾತ್ರವೊಂದರ ಸುತ್ತ ಹೆಣೆದ ಕಥೆಯೇ ಈವತ್ತಿಗೆ ಸೀಟ್ ಎಡ್ಜ್ ಆಗಿ ತೆರೆಗಾಣಲು ಸಿದ್ಧವಾಗಿದೆ. ಇದರಲ್ಲಿ ಬರೀ ಹಾರರ್ ಮಾತ್ರವಲ್ಲದೇ ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಭರ್ಜರಿ ಮನೋರಂಜನೆಯನ್ನೂ ನಿರ್ದೇಶಕರು ಅಡಕವಾಗಿಸಿದ್ದಾರೆ.
ಮೂಲತಃ ಹಾಸನದವರಾದ ಚೇತನ್ ಶೆಟ್ಟಿ ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು.ಈ ಹಾದಿಯಲ್ಲಿ ಒಂದಷ್ಟು ಅಡೆತಡೆಗಳು ಬಂದರೂ ಕೂಡಾ ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಕನಸಿನ ಹಾದಿಯಲ್ಲಿ ಗಟ್ಟಿಯಾಗಿ ಹೆಜ್ಜೆಯೂರುವ ಅವಕಾಶವೊಂದು ಕೂಡಿ ಬಂದಿತ್ತು. ಆ ನಂತರದಲ್ಲಿ ಸುದೀರ್ಘ ಹನ್ನೆರಡು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಚೇತನ್ ಕುಮಾರ್ ವೃತ್ತಿ ಬದುಕೀಗ ಸೀಟ್ ಎಡ್ಜ್ ಮೂಲಕ ಗುರಿಯ ನೇರಕ್ಕೆ ಬಂದು ನಿಂತಿದೆ. ಎನ್.ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ, ರವಿಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಕಿರಣ್ ಕುಮಾರ್, ಗಿರೀಶ್ ಶಿವಣ್ಣ ಮುಂತಾದವರ ತಾರಾಗಣವಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ವೆಂಕಟೇಶ್ ಚಂದ್ರ ಸಹ ನಿರ್ದೇಶನ, ದೀಪಕ್ ಕುಮಾರ್ ಜೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ.
keywords: seatedge, movie, chethankumar, director

