ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಪ್ರಯತ್ನ ನಡೆದಾಗ ಸ್ಟಾರ್ ನಟರೆನ್ನಿಸಿಕೊಂಡವರು ಸಾಥ್ ಕೊಡುವದಿದೆ. ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪಿಆರ್‌ಕೆ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಸಬರಿಗೆ ಉತ್ತೇಜನ ನೀಡಲೆಂದೇವ ಶುರುವಿಟ್ಟುಕೊಂಡಿದ್ದವರು ಪುನೀತ್. ಆ ಬಳಿಕ ಆ ಬ್ಯಾನರಿನ ಮೂಲಕ ಹಲವಾರು ಸಿನಿಮಾಗಳಿಗೆ ಬೆನ್ನೆಲುಬಾಗಿದ್ದರು. ಸಿನಿಮಾ ಮಾಡಿ ಚಿತ್ರರಂಗದ ಚಕ್ರವ್ಯೂಹದಲ್ಲಿ ಕಂಗಾಲೆದ್ದು ನಿಂತವರಿಗೆ ನೆರವಾಗಿದ್ದರು. ಇದೀಗ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಕೂಡಾ ತಮ್ಮ ಮಾವನ ಹಾದಿಯಲ್ಲಿಯೇ ಹೆಜ್ಜೆಯೂರಿದ್ದಾರೆ; ಮಹಿರಾ ಖ್ಯಾತಿಯ ಮಹೇಶ್ ಗೌಡ ಅವರು ನಿರ್ದೇಶನ, ನಿರ್ಮಾಣ ಮಾಡಿ, ನಾಯಕರಾಗಿ ನಟಿಸಿರುವ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರಕ್ಕೆ ಸಾಥ್ ಕೊಡುವ ಮೂಲಕ!
ವಿಟಿಲಿಗೋ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಂಡ ಸಿನಿಮಾ ಬಿಳಿಚುಕ್ಕಿ ಹಳ್ಳಿಹಕ್ಕಿ. ಗ್ರಾಮ್ಯ ಭಾಷೆಯಲ್ಲಿ ತೊನ್ನು ಎಂದು ಕರೆಸಿಕೊಳ್ಳುವ ಈ ಕಾಯಿಲೆಯಲ್ಲದ ಕಾಯಿಲೆಯ ಸುತ್ತ ಒಂದು ಸಿನಿಮಾ, ಕಮರ್ಶಿಯಲ್ ಹಾದಿಯಲ್ಲಿ ತಯಾರಾಗಿದೆ ಅನ್ನೋದೇ ಪ್ರಧಾನ ಆಕರ್ಷಣೆ. ಅಂಥಾದ್ದೇ ತೀವ್ರ ಸೆಳೆತದೊಂದಿಗೆ ಶ್ರೀಮುರುಳಿಯವರು ಚಿತ್ರತಂಡದೊಂದಿಗೆ ಕೆಲ ತುಣುಕುಗಳನ್ನು ನೋಡಿ ಥ್ರಿಲ್ ಆಗಿದ್ದಾರೆ. ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಯಾರೂ ಮುಟ್ಟದ ಕಥಾ ವಸ್ತುವನ್ನು ಒಡಲಲ್ಲಿಟ್ಟುಕೊಂಡ ಈ ಸಿನಿಮಾವನ್ನು ತಾವೇ ಅರ್ಪಿಸಿ, ಈ ತಂಡಕ್ಕೆ ಸಾಥ್ ಕೊಡುವ ನಿರ್ಧಾರ ಪ್ರಕಟಿಸಿದ್ದಾರೆ. ಭಿನ್ನವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡಕ್ಕಿದು ಬಿಡುಗಡೆಯ ಹೊಸ್ತಿಲಲ್ಲಿ ಸಿಕ್ಕಿರುವ ಬೂಸ್ಟರ್ ಡೋಸ್‌ನಂತಾಗಿದೆ.
ಮಹಿರಾ ಚಿತ್ರದ ಮೂಲಕ ಪ್ರತಿಭಾನ್ವಿತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮಹೇಶ್ ಗೌಡ ತಮ್ಮದೇ ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಮಹೇಶ್ ಅವರು ಅತ್ಯಂತ ಕಾಳಜಿಯಿಂದ ಸೃಷ್ಟಿರುವ ಸದರಿ ಸಿನಿಮಾವನ್ನು ಪ್ರೆಸೆಂಟ್ ಮಾಡುವ ಮೂಲಕ ಶ್ರೀಮುರುಳಿ ಜೊತೆಯಾಗಿರುವುದರಿಂದ ಚಿತ್ರತಂಡಕ್ಕೆ ಮತ್ತಷ್ಟು ಹುರುಪು ಸಿಕ್ಕಂತಾಗಿದೆ. ಇಂಥಾದ್ದೊಂದು ಅಪರೂಪದ ಪ್ರಯತ್ನ ಮಾಡಿ, ನಿರ್ದೇಶನ, ನಿರ್ಮಾಣದ ಜವಾಬ್ದಾರಿಯೊಂದಿಗೆ ನಾಯಕನಾಗಿಯೂ ನಟಿಸಿರುವ ಮಹೇಶ್ ಗೌಡರಿಗೆ ಶ್ರೀಮುರುಳಿ ಪ್ರೀತಿಯಿಂದ ಅಭಿನಂದಿಸಿದ್ದಾರೆ. ವಿಶೇಷವೆಂದರೆ, ಇದೇ ಮೊದಲ ಬಾರಿ ಶ್ರೀಮುರುಳಿ ಚಿತ್ರವೊಂದನ್ನು ಅರ್ಪಿಸುವ ಮೂಲಕ ಜೊತೆಯಾಗಿದ್ದಾರೆ. ಈ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಯನ್ನೇ ಅನುಸರಿಸಿದ್ದಾರೆ…