ರಜನೀಕಾಂತ್ ಥರದ ಸೂಪರ್ ಸ್ಟಾರ್‌ಗಳ ಸಿನಿಮಾಗಳು ತೀರಾ ಕೆಟ್ಟದಾಗಿರಬೇಕೆಂದೇನೂ ಇಲ್ಲ; ಪ್ರೇಕ್ಷಕರ ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಕೂಡಾ ತೋಪು ಚಿತ್ರಗಳೆನ್ನಿಸಿಕೊಳ್ಳುತ್ತವೆ. ರಜನಿ ಸಿನಿಮಾಗಳೆಂದ ಮೇಲೆ ಕಾಸು ಹೂಡಿದ ನಿರ್ಮಾಪಕರಿಗೆ ಯಾವ ಕಾರಣಕ್ಕೂ ಲುಕ್ಸಾನಾಗುವುದಿಲ್ಲ. ಹಾಗಿದ್ದ ಮೇಲೆ ಅಭಿಮಾನಿಗಳಿಗೆ ತೀವ್ರ ನಿರಾಸೆ ಮಾಡಿದ್ದ ಕೂಲಿ ಕೂಡಾ ಗಳಿಕೆಯ ಲೆಕ್ಕದಲ್ಲಿ ಸೋತಿದೆ ಅಂದುಕೊಳ್ಳುವಂತಿಲ್ಲ. ಆದರೆ, ಓರ್ವ ನಿರ್ದೇಶಕನಾಗಿ ಲೋಕೇಶ್ ಕನಗರಾಜ್ ರಜನಿ ಅಭಿಮಾನಿಗಳನ್ನು ಸಂತೃಪ್ತಗೊಳಿಸುವಲ್ಲಿ ಸೋತಿದ್ದಾರೆ. ಇಂಥಾ ಹತ್ತಾರು ತಕರಾರುಗಳ ನಡುವೆ ಸಿನಿಮಾ ಮಂದಿರಗಳಿಂದ ಎಗರಿಕೊಂಡಿದ್ದ ಕೂಲಿಯೀಗ ಓಟಿಟಿಗೆ ಎಂಟ್ರಿ ಕೊಟ್ಟು ಅಲ್ಲಿಯೂ ನೀರಸ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಈ ತಿಂಗಳ ಹನ್ನೆರಡರಂದೇ ಕೂಲಿ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡಿತ್ತು. ಸಾಮಾನ್ಯವಾಗಿ ಸಿನಿಮಾ ಮಂದಿರಗಳಲ್ಲಿ ಮುಗ್ಗರಿಸಿದ ಅದೆಷ್ಟೋ ಸಿನಿಮಾಗಳು ಓಟಿಟಿಯಲ್ಲಿ ಪುಟಿದೇಳುತ್ತವೆ. ಕೂಲಿ ಕೂಡಾ ಅಂಥಾದ್ದೊಂದು ಆಶಾದಾಯಕ ಬೆಳವಣಿಗೆ ಕಾಣಬಹುದೆಂಬ ನಿರೀಕ್ಷೆ ಸಹಜವಾಗಿಯೇ ಬಹುತೇಕರಲ್ಲಿತ್ತು. ಆದರೆ, ರಜನೀ ಸಿನಿಮಾಗಳು ದೊಡ್ಡ ಪರದೆಯ ಮೇಲೆ ಹುಟ್ಟಿಸೋ ಫೀಲ್ ಅನ್ನು ಅದರಾಚೆಗೆ ಮೂಡಿಸಲು ಸಾಧ್ಯವಿಲ್ಲ.ಹೇ ಹೇಳಿಕೇಳಿ ಕೂಲಿ ದೊಡ್ಡ ಪರದೆಯಲ್ಲೇ ಅಡ್ಡಡ್ಡ ಮಲಗಿತ್ತು. ಇಂಥಾ ಸಿನಿಮಾವೀಗ ಅಮೇಜಾನ್ ಪ್ರೈಮ್‌ನಲ್ಲಿಯೂ ತೆವಳುತ್ತಾ ಸಾಗುತ್ತಿದೆ.

ಇನ್ನುಳಿದಂತೆ ಹಬ್ಬದ ವಾರದ ಅಂಚಿನಲ್ಲಿಯೇ ಕೂಲಿ ಉದಯ ವಾಹಿನಿಯಲ್ಲಿಯೂ ಕೂಡಾ ಪ್ರಸಾರಗೊಂಡಿದೆ. ಆದರೆ, ಅಲ್ಲೂ ರಜನಿ ಸಿನಿಮಾ ಹೇಳಿಕೊಳ್ಳುವಂಥಾ ದಾಖಲೆ ಬರೆದಂತಿಲ್ಲ. ರಜನೀಕಾಂತ್ ಸಿನಿಮಾ ತೆರೆಗಬಾಣುತ್ತದೆಯೆಂದರೆ, ಬಹುಕೋಟಿ ಬ್ಯುಸಿನೆಸ್ ಆಗುವ ಅಂದಾಜಿರುತ್ತದೆ. ಆದರೆ, ಕೂಲಿ ಮುಕ್ಕರಿಸಿ ನೂರಾವ ಐವತ್ತು ಕೋಟಿ ಸಂಪಾದಿಸುವಷ್ಟರಲ್ಲಿ ಬಸವಳಿದು ಬಿಟ್ಟಿದೆ. ಈ ಮೂಲಕ ರಜನಿ ಸಿನಿಮಾದ ಸಮರ್ಥ ಸಾರಥಿಯಾಗುವಲ್ಲಿ ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿದ್ದಾರೆ. ವಿಶೇಷವೆಂದರೆ, ರಜನೀಕಾಂತ್ ಅದೇ ಲೋಕೇಶ್‌ಗೆ ತಮ್ಮ ಮತ್ತೊಂದು ಸಿನಿಮಾ ನಿರ್ದೇಶನ ಮಾಡುವ ಅವಕಾಶ ಕಲ್ಪಿಸಿದ್ದಾರೆ!
