ಕಬಾಲಿ ಚಿತ್ರದ ಮೂಲಕ ಹೀನಾಯ ಸೋಲು ಕಂಡಿದ್ದ ಸೂಪರ್ ಸ್ಟಾರ್ ರಜನೀಕಾಂತ್ ಜೈಲರ್ ಮೂಲಕ ಪುಷ್ಕಳ ಗೆಲುವನ್ನು ಎದುರುಗೊಂಡಿದ್ದಾರೆ. ಅದರಲ್ಲಿನ ಪ್ರತೀ ಪಾತ್ರಗಳೂ ಕೂಡಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿವೆ. ಕನ್ನಡದ ಶಿವರಾಜ್ ಕುಮಾರ್ ಸೇರಿದಂತೆ ಬೇರೆ ಬೇರೆ ಭಾಷೆಗಳ ನಟರು ಜೈಲರ್ ಚಿತ್ರದ ಭಾಗವಾಗಿದ್ದರು. ಇಂಥವರೆಲ್ಲರ ಪಾತ್ರಗಳು ಪಡೆದುಕೊಂಡಿದ್ದ ಮೈಲೇಜು ಗಮನಿಸಿದ್ದ ತೆಲುಗು ಸ್ಟಾರ್ ಬಾಲಯ್ಯನ ಅಭಿಮಾನಿಗಳು, ತಮ್ಮ ನೆಚ್ಚಿನ ನಟನೂ ಈ ಸಿನಿಮಾ ಭಾಗವಾಗಿತ್ತೆಂಬ ಆಸೆ ವ್ಯಕ್ತಪಡಿಸಿದ್ದರು. ಖುದ್ದು ಬಾಲಯ್ಯನಿಗೇ ಅಂಥಾದ್ದೊಂದು ಬಯಕೆ ಮೂಡಿಕೊಂಡಿದ್ದರೂ ಅಚ್ಚರಿಯೇನಿಲ್ಲ. ವಿಶೇಷವೆಂದರೆ, ಜೈಲರ್೨ನಲ್ಲಿ ಖುದ್ದು ಈ ಸಿನಿಮಾ ನಿರ್ದೇಶಕರೇ ನಟಿಸುವಂತೆ ಕೇಳಿಕೊಂಡರೂ ನಂದಮೂರಿ ಬಾಲಕೃಷ್ಣ ಒಲ್ಲೆ ಅಂದಿದ್ದಾರೆ!

ನಿರ್ದೇಶಕ ನೆಲ್ಸನ್ ಜೈಲರ್೨ ಕಥೆ ಸಿದ್ಧಪಡಿಸುವಾಗಲೇ ಬಾಲಯ್ಯನಿಗಾಗಿ ಒಂದು ಪಾತ್ರವನ್ನು ಸೃಷ್ಟಿಸಿದ್ದರಂತೆ. ಅದು ಮೇಲು ನೋಟಕ್ಕೆ ಅತಿಥಿ ಪಾತ್ರದಂತೆ ಕಂಡರೂ ಕೂಡಾ ಖುದ್ದು ರಜನಿ ಪಾತ್ರಕ್ಕೇ ಸರಿಸಮನಾಗಿತ್ತಂತೆ. ಇಂಥಾದ್ದೊಂದು ಪಾತ್ರವನ್ನು ಸೃಷ್ಟಿ ಮಾಡಿದ್ದ ನೆಲ್ಸನ್‌ಗೆ, ಅದರ ಚಹರೆ ಕೇಳುತ್ತಲೇ ಬಾಲಯ್ಯ ಥ್ರಿಲ್ ಆಗಿ ಒಪ್ಪಿಗೆ ಸೂಚಿಸುತ್ತಾರೆಂಬ ವಿಶ್ವಾಸವಿತ್ತು. ಆದರೆ, ಬಾಲಯ್ಯನನ್ನು ಸಂಪರ್ಕಿಸಿದಾಗ ನೆಲ್ಸನ್‌ಗೆ ಆದದ್ದು ಅಕ್ಷರಶಃ ಆಘಾತ. ಯಾಕೆಂದರೆ, ತೀರಾ ನಿರ್ಲಿಪ್ತವಾಗಿ ಈ ಅವಕಾಶವನ್ನು ಎದುರುಗೊಂಡ ಬಾಲಯ್ಯ ಆರಂಭದಿಂದಲೇ ನಾನಾ ರೊಳ್ಳೆ ತೆಗೆದಿದ್ದರು. ಕಡೆಗೂ ತಾನು ತೆಲುಗು ಬಿಟ್ಟು ಮತ್ಯಾವ ಭಾಷೆಯಲ್ಲಿಯೂ ನಟಿಸೋದಿಲ್ಲ ಎಂಬಂಥಾ ನಿರ್ಧಾರ ಪ್ರಕಟಿಸಿ ಜೈಲರ್೨ ಅವಕಾಶವನ್ನು ಸಾರಾಸಗಟಾಗಿ ನಿರಾಕರಿಸಿರುವ ಸುದ್ದಿ ಬಂದಿದೆ.

ಯಾವ ಭಾಷೆಯ ಸೂಪರ್ ಸ್ಟಾರುಗಳೇ ಆಗಿದ್ದರೂ ಕೂಡಾ ರಜನಿ ಜೊತೆ ನಟಿಸುವ ಅವಕಾಶಕ್ಕಾಗಿ ಹಂಬಲಿಸುತ್ತಾರೆ. ಕನ್ನಡದ ಶಿವಣ್ಣ, ಉಪ್ಪಿ ನಟಿಸಿದ್ದು ಕೂಡಾ ಅಂಥಾ ಅದಮ್ಯ ಪ್ರೀತಿಯಿಂದಲೇ. ಆದರೆ ಈ ಬಾಲಯ್ಯ ವಿಕ್ಷಿಪ್ತ ನಟ. ಕಾಮಿಡಿಯಂಥಾ ಪಾತ್ರಗಳನ್ನು ಮಾಡುತ್ತಾ, ಬೇರೆ ಭಾಷೆದಗಳ ಪ್ರೇಕ್ಷಕರು ಲೇವಡಿಯಾಡುವಂಥಾ ಬಿಲ್ಡಪ್ಪುಗಳ ಮೂಲಕ ಚಾಲ್ತಿಯಲ್ಲಿರುವಾತ ಬಾಲಯ್ಯ. ಎಣ್ಣೆ ಏಟಲ್ಲಿ ಏನೇನೋ ಅಧ್ವಾನ ಮಾಡಿಕೊಳ್ಳುವ ಮೂಲಕವೂ ಈತ ಸುದ್ದಿಕೇಂದ್ರದಲ್ಲಿರುತ್ತಾನೆ. ಇಂಥಾ ಬಾಲಯ್ಯ ತಾನು ರಜನಿಯನ್ನೂ ಮೀರಿದ ಸೂಪರ್ ಸ್ಟಾರ್ ಎಂಬ ಭ್ರಮೆಯಲ್ಲಿರುವಂತಿದೆ. ಈ ಕಾರಣದಿಂದಲೇ ಜೈಲರ್೨ ಅವಕಾಸ ಬರುತ್ತಲೇ ಐವತ್ತು ಕೋಟಿ ಸಂಭಾವನೆ ಕೊಡುವಂತೆ ಬೇಡಿಕೆ ಇಡುವ ಮೂಲಕ ಸೀರಿಯಸ್ ಆಗಿಯೇ ಕಾಮಿಡಿ ಮಾಡಿದ್ದ. ಬಾಲಯ್ಯನ ಇಂಥಾ ದುರಹಂಕಾರದ ವರ್ತನೆಯಿಂದ ತಲೈವಾ ಅಭಿಮಾನಿಗಳು ಕೆಂಡವಾಗಿದ್ದಾರೆ!
