ಅದೆಂಥಾ ಅಲೆಗಳು ಚಾಲ್ತಿಯಲ್ಲಿದ್ದರೂ ಕೂಡಾ, ನವಿರು ಪ್ರೇಮ ಕಥಾನಕಗಳ ಬಗ್ಗೆ ಸಿನಿಮಾ ಪ್ರೇಮಿಗಳೊಳಗಿನ ಬೆರಗು ಬತ್ತುವುದೇ ಇಲ್ಲ. ಒಂದು ವೇಳೆ ನೋಡುಗರನ್ನೆಲ್ಲ ಆವರಿಸಿಕೊಳ್ಳುವಂಥಾ ಭಾವತೀವ್ರತೆ ಶಕ್ತವಾಗಿ ದೃಷ್ಯವಾಗಿದ್ದರಂತೂ ಅಂಥಾ ಸಿನಿಮಾಗಳು ಸೂಪರ್ ಹಿಟ್ ಆಗಿ ಬಿಡುತ್ತವೆ. ಮುಂಗಾರುಮಳೆ ಸೇರಿದಂತೆ ಅನೇಕ ಸಿನಿಮಾಗಳು ಕಥೆಯ ಕಸುವಿನಾಚೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದದ್ದು ಅಂಥಾ ಗುಣದಿಂದಲೇ. ಹಾಗಿರುವಾಗ ಒಂದು ರಿಯಲಿಸ್ಟಿಕ್ ಪ್ರೇಮಕಥಾನಕಕ್ಕೆ ಅಂಥಾದ್ದೊಂದು ಸೆಳೆತ ಇಲ್ಲದಿರಲು ಸಾಧ್ಯವೇ? ಈ ಕಾರಣದಿಂದಲೇ ಬಹುವಾಗಿ ಚರ್ಚೆಗೀಡಾಗಿದ್ದ ಚಿತ್ರ ಲವ್ ಯೂ ಮುದ್ದು. ಸೋಶಿಯಲ್ ಮೀಡಿಯಾ ಮೂಲಕ ಪ್ರಸಿದ್ಧಿ ಪಡೆದಿದ್ದ ಜೋಡಿಯೊಂದರ ಕಥೆಯನ್ನೊಳಗೊಂಡಿರೋ ಸಿನಿಮಾವೀಗ ಬಿಡುಗಡೆಗೊಂಡು, ಒಂದಷ್ಟು ಆಶಾದಾಯಕ ಪ್ರದರ್ಶನ ಕಾಣುತ್ತಿದೆ.

ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಅಂತೊಂದು ಸಿನಿಮಾ ಮೂಲಕ ಗಮನ ಸೆಳೆದಿದ್ದ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಲವ್ ಯೂ ಮುದ್ದು ಒಂದಷ್ಟು ನಿರೀಕ್ಷೆ ಮೂಡಿಸಿದ್ದರ ಹಿಂದೆ ಈ ವಿಚಾರವೂ ಕೆಲಸ ಮಾಡಿರೋದು ಸುಳ್ಳಲ್ಲ. ಆದರೆ, ಇಂಥಾ ನಿರೀಕ್ಷೆಯ ಭಾರ ಹೊತ್ತು ಮುನ್ನಡೆದ ನಿರ್ದೇಶಕರು ಅಲ್ಲಲ್ಲಿ ಎಡವಿದ್ದಾರೆ. ಮತ್ತೆ ಸಾವರಿಸಿಕೊಂಡುಮುಂದುವರೆದರೂ ಕೂಡಾ ಯಾವುದಕ್ಕೆ ಪ್ರಾಧಾನ್ಯತೆ ಕೊಡಬೇಕು, ಹೇಗೆ ಮುಂದುವರೆಯಬೇಕೆಂಬ ನಿಖರ ದಾರಿ ಕಾಣದಂತೆ ತಬ್ಬಿಬ್ಬಾಗಿ ನಿಲ್ಲುತ್ತಾರೆ. ಒಂದಿಡೀ ಸಿನಿಮಾದ ಎಲ್ಲ ಕೊರತೆಗಳನ್ನೂ ಮಾಫಿ ಮಾಡುವಂತೆ ತೀವ್ರವಾಗಿ ಕಟ್ಟಬೇಕಿದ್ದ ದೃಷ್ಯಗಳ ವಿಚಾರದಲ್ಲಿ ನಿರ್ದೇಶಕರು ಅಕ್ಷರಶಃ ಅಸಹಾಯಕರಂತೆ ಕೈಚೆಲ್ಲಿದ್ದಾರೆ. ಇದೆಲ್ಲದರಾಚೆಗೂ ಲವ್ ಯೂ ಮುದ್ದು ಪ್ರೇಕ್ಷಕರ ಕಣ್ಣಾಲಿಗಳು ತುಂಬಿ ಬರುವಂತೆ ಮಾಡುತ್ತೆ. ಬಹುಶಃ ಅದು ಪರಿಶುದ್ಧ ಪ್ರೇಮಕ್ಕಿರೋ ಅಸಲೀ ಶಕ್ತಿಯೇನೋ…
ಹಾಗೆ ನೋಡಿದರೆ, ಈ ಸಿನಿಮಾಕ್ಕಾಗಿ ನಿರ್ದೇಶಕರು ಆಯ್ದುಕೊಂಡಿದ್ದ ಅಸಲೀ ಕಥೆಯೇ ಚೆಂದಗಿದೆ. ಆದರೆ, ಅದನ್ನು ದೃಷ್ಯಕ್ಕೆ ಒಗ್ಗಿಸುವಾಗಿನ ಕುಸುರಿಯಲ್ಲಿ ಒಂದಷ್ಟು ಕಸಿವಿಸಿಗಳು ಘಟಿಸಿವೆ. ಲವಲವಿಕೆಯಿಂದಲೇ ಆರಂಭವಾಗುವ ಈ ಚಿತ್ರದ ಒಂದಷ್ಟು ಸಮಯವನ್ನು ನಿರ್ದೇಶಕರು ನಾಯಕ ನಾಯಕಿಯನ್ನು ಪ್ರೇಮಿಗಳಾಗಿ ನೋಡುಗರ ಮನಸಿಗೆ ಛಾಪಿಸುದಕ್ಕೆ ಮೀಸಲಿಟ್ಟಿದ್ದಾರೆ. ಆ ನಂತರದಲ್ಲಿ ಒಂದಿಡೀ ಕಥೆ ಒಂದಷ್ಟು ತಿರುವುಗಳೊಂದಿಗೆ ಮುನ್ನಡೆಯುತ್ತೆ. ಅನಿರೀಕ್ಷಿತವಾಗಿ ಒಂದಾಗಿ ಜೀವದಂತೆ ಹಚ್ಚಿಕೊಂಡ ಈ ಪ್ರೇಮಿಗಳ ಬಾಳಲ್ಲಿ ನಡೆಯೋ ದುರಂತ, ಅದಕ್ಕೆ ಹೊಸೆದುಕೊಂಡಂತಿರೋ ನಾಯಕನ ತಂದೆಯ ನಿಗೂಢ ನಡೆ, ಅಪಘಾತದಿಂದ ದೇಹದ ಒಂದು ಭಾಗದ ಚಲನೆಯನ್ನೇ ಕಳೆದುಕೊಳ್ಳೋ ನಾಯಕಿ, ಆಕೆಯನ್ನು ಉಳಿಸಿಕೊಳ್ಳಲು ನಾಯಕ ನಡೆಸೋ ಹರಸಾಹಸ… ಇಂಥಾ ಮನಮಿಡಿಯೋ ಕಥನದೊಂದಿಗೆ ಸಿನಿಮಾ ಸಾಗುತ್ತೆ.

ಚಿತ್ರವೇನೂ ಸಲೀಸಾಗಿ ಮುನ್ನಡೆದಂತೆ ಕಾಣಿಸುತ್ತೆ. ನಾಯಕನಾಗಿ ನಟಿಸಿರೋ ಸಿದ್ದು ಮೂಲಿಮನಿ ಮತ್ತು ನಾಯಕಿ ರೇಷ್ಮಾ ನಟನೆಯೂ ಚೆನ್ನಾಗಿದೆ. ಆದರೆ, ಆ ಪಾತ್ರಗಳಿಗೆ ಅವರು ಹೊಂದಿಕೆಯಾಗುತ್ತಿಲ್ಲ ಎಂಬ ಭಾವ ಪ್ರೇಕ್ಷಕರನ್ನು ಕಾಡುತ್ತೆ. ತಾರಾಗಣದ ಆಯ್ಕೆಯಲ್ಲಿಯೇ ನಿರ್ದೇಶಕರು ಎಡವಿದರಾ ಅಂತೊಂದು ಗುಮಾನಿ ನೋಡುಗರ ಮನಸಲ್ಲಿ ಗಿರಕಿ ಹೊಡೆಯುತ್ತೆ. ಹಾಗಂತ ನಾಯಕ ನಾಯಕಿಯನ್ನು ದೂರುವಂತಿಲ್ಲ. ಯಾಕೆಂದರೆ, ಅವರು ತಂತಮ್ಮ ಪಾತ್ರಕ್ಕೆ ಸಮರ್ಪಿಸಿಕೊಂಡಿದ್ದಾರೆ. ಆದರೂ ಕೊರತೆ ಕಾಡಿದ್ದರ ಹಿಂದಿರೋದು ಆಯ್ಕೆಯಲ್ಲಿನ ದೋಷವಷ್ಟೆ. ಇದೆಲ್ಲದರ ನಡುವೆ ಕೆಲ ಹಾಸ್ಯ ಸನ್ನಿವೇಶಗಳನ್ನು ತೂರಿಸುವ ಮೂಲಕ ಮತ್ತಷ್ಟು ಗೋಜಲು ಮೂಡಿಸಲಾಗಿದೆ. ಕ್ಲೈಮ್ಯಾಕ್ಸ್ ಹೊತ್ತಿನ ಬಹುಮುಖ್ಯ ದೃಷ್ಯಕ್ಕೆ ಇಡೀ ಚಿತ್ರಮಂದಿರವೇ ಹುಚ್ಚೆದ್ದು ಸಂಭ್ರಮಿಸಬೇಕಿತ್ತು. ಆದೃಷ್ಯ ಅಷ್ಟು ಪರಿಣಾಮಕಾರಿಯಾಗೋ ಅವಕಾಶ ತಪ್ಪಿಸಿಕೊಂಡಿದ್ದರೂ ಪ್ರೇಕ್ಷಕರಿಗೆ ಒಂದಷ್ಟು ನಾಟುವಂತಿದೆ.

ಇಂಥಾ ಪ್ರೇಮಕಥಾನಕಗಳಲ್ಲಿ ನಾಯಕ ನಾಯಕಿಯ ಕೆಮಿಸ್ಟ್ರಿ ಹೊಂದಾಣಿಕೆಯಾದರೆ ಮಾತ್ರ ಸಿನಿಮಾ ಗೆಲ್ಲಬಹುದು. ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ರಕ್ಷಿತ್ ಮತ್ತು ರುಕ್ಮಿಣಿ ನಡುವಿನ ಕೆಮಿಸ್ಟ್ರಿಯೇ ಗೆಲುವಿನ ಮೂಲ. ಆದರೆ, ಯಾವ ಸೀನುಗಳಲ್ಲಿಯೂ ಲವ್ ಯೂ ಮುದ್ದು ಚಿತ್ರದಲ್ಲಿ ಅದು ಸಾಧ್ಯವಾಗಿಲ್ಲ. ಇದ್ದುದರಲ್ಲಿ ಸಮುದ್ರದಂಚಿನ ಸೀನುಗಳಲ್ಲಿ ಈ ಜೋಡಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತೆ. ಅದಕ್ಕೆ ಕಾರಣವಾಗಿರೋದು ಸಿನಿಮಾಟೋಗ್ರಫಿ. ಈ ವಿಚಾರದಲ್ಲಿ ಕೃಷ್ಣ ದೀಪಕ್ ಅವರ ಕೈಚಳಕ ಅಚ್ಚರಿ ಮೂಡಿಸುತ್ತೆ. ಇನ್ನುಳಿದಂತೆ ಯಾವುದೇ ಪ್ರೇಮ ಕಥೆ ಗೆಲ್ಲವಬೇಕೆಂದರೆ ಅದರಲ್ಲಿ ಹಾಡುಗಳ ಪಾತ್ರ ದೊಡ್ಡದು. ಅನಿರುದ್ಧ ಶಾಸ್ತ್ರಿ ಆ ವಿಚಾರದಲಲಿ ಸೋತಿದ್ದಾರೆ. ಹಾಡುಗಳಾಗಲಿ, ಹಿನ್ನೆಲೆ ಸಂಗೀತವಾಗಲು ಮನಸಿಗಿಳಿಯುವಂತಿಲ್ಲ. ಇಂಥಾ ಹಲವಾರು ತಪ್ಪುಗಳಾಚೆಗೆ ಅಸಲೀ ಕಥೆಯನ್ನು ಹಾಗೆಯೇ ತೆರೆ ಮೇಲೆ ತಂದಿದ್ದರೂ ನಿರ್ದೇಶಕರು ಪ್ರೇಕ್ಷಕರನ್ನು ಮತ್ತಷ್ಟು ಮುದಗೊಳಿಸಬಹುದಿತ್ತು. ಅಂತೂ ಒಂದೊಳ್ಳೆ ಕಥೆ, ಸಂದೇಶದೊಂದಿಗೆ ಈ ಪ್ರೇಮ ಕಥನದ ಪರಾಗ ಪ್ರೇಕ್ಷಕರ ಮನಸಿಗೆ ಮೆತ್ತಿಕೊಳ್ಳುವಂತಿದೆ!
