ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿರೋದರಿಂದ ಯಶ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಅತ್ಯಂತ ಪ್ರಶಸ್ತವಾದ ಘಳಿಗೆಯನ್ನು ಟಾಕ್ಸಿಕ್ ಚಿತ್ರತಂಡ ಯಾಕೆ ಕೈ ಜಾರಿಸಿಕೊಂಡಿದೆ ಅನ್ನೋದರ ಸುತ್ತಾ ಚರ್ಚೆಗಳು ನಡೆಯುತ್ತಿವೆ. ಯುಗಾದಿಯ ರಜೆ, ಅದರ ಬೆನ್ನಿಗಂಟಿಕೊಂಡು ಬರುವ ಮತ್ತೆರಡು ಹಬ್ಬಗಳು ಮತ್ತು ವೀಕೆಂಡಿನ ಸಾಥ್… ಮಾರ್ಚ್ ೧೯ರ ಮೇಲೆ ಸಿನಿಮಾ ಮಂದಿಯ ದೃಷ್ಟಿ ಕೇಂದ್ರೀಕರಿಸಿದ್ದದ್ದು ಈ ಕಾರಣದಿಂದಲೇ. ಇಂಥಾ ದಿನಾಂಕದಂದೇ ಲವ್ ಮಾಕ್ಟೇಲ್೩ಯನ್ನು ತೆರೆಗಾಣಿಸುವ ಸುವರ್ಣಾವಕಾಶವೊಂದು ಡಾರ್ಲಿಂಗ್ ಕೃಷ್ಣಗೆ ತಂತಾನೇ ಸಿಕ್ಕಿಬಿಟ್ಟಿದೆ. ಏಪ್ರಿಲ್ ಹತ್ತರಂದು ಬಿಡುಗಡೆಗೊಳ್ಳಲಿದ್ದ ಲವ್ ಮಾಕ್ಟೇಲ್೩ ಮಾರ್ಚ್ 19ಕ್ಕೆ ಬಿಡುಗಡೆಗೊಳ್ಳಲಿದೆ!
ಲವ್ ಮಾಕ್ಟೇಲ್
ಚಿತ್ರದ ಎರಡು ಆವೃತ್ತಿಗಳು ಗೆಲುವು ಕಂಡಿದ್ದವು. ಈ ಕಾರಣದಿಂದಲೇ ಮೂರನೇ ಆವೃತ್ತಿಯ ಸುತ್ತ ಗಾಢ ನಿರೀಕ್ಷೆ ಹಬ್ಬಿಕೊಂಡಿದೆ. ಈಗಾಗಲೇ ಹಾಡುಗಳ ಮೂಲಕವೂ ಸೆಳೆದುಕೊಂಡಿರುವ ಈ ಚಿತ್ರವನ್ನು ಟಾಕ್ಸಿಕ್ ಬಿಡುಗಡೆಯಾಗಬೇಕಿದ್ದ ದಿನದಂದೇ ತೆರೆಗಾಣಿಸಲು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಧರಿಸಿದೆ. ಲವ್ ಮಾಕ್ಟೇಲ್೩ಯ ಹಂಚಿಕೆಯ ಜವಾಬ್ದಾರಿಯನ್ನು ಕೆವಿಎನ್ ಸಂಸ್ಥೆ ಹೊತ್ತುಕೊಂಡಿದೆ. ಟಾಕ್ಸಿಕ್ ಮುಂದೂಡಲ್ಪಟ್ಟಿರೋದರಿಂದ ಕೈಬಿಟ್ಟಂತಿದ್ದ ಶುಭ ಮುಹೂರ್ತವನ್ನು ಲವ್ ಮಾಕ್ಟೇಲ್ ಚಿತ್ರದ ಮೂಲಕ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಡೆಯನ್ನು ಕೆವಿಎನ್ ಸಂಸ್ಥೆ ಅನುಸರಿಸಿದೆ.
ಅತ್ಯಂತ ಆಸ್ಥೆಯಿಂದ ಈ ಚಿತ್ರವನ್ನು ನಿರ್ದೇಶನ ಮಾಡಿ, ನಿರ್ಮಾಣವನ್ನೂ ಮಾಡಿರುವ ಡಾರ್ಲಿಂಗ್ ಕೃಷ್ಣ ಪಾಕಲಿಗಿದು ಅಕ್ಷರಶಃ ಲಾಟರಿ ಹೊಡೆದಂಥಾ ವಿದ್ಯಮಾನ. ಅಳೆದೂ ತೂಗಿ ಏಪ್ರಿಲ್ ಹತ್ತರಂದು ತೆರೆಗಾಣುವ ಸನ್ನಾಹದಲ್ಲಿದ್ದ ಲವ್ ಮಾಕ್ಟೇಲ್ಗೀಗ ಒಂದೊಳ್ಳೆ ಅವಕಾಶ ಸಿಕ್ಕಂತಾಗಿದೆ. ಮಾರ್ಚ್ ೧೯ರಂದು ಯುಗಾದಿ ರಜೆ ಇದೆ. ಅದಾದ ಬಳಿಕ ರಂಜಾನ್ ಮುಂತಾದ ಹಬ್ಬಗಳಿಂದಾಗಿ ಸುದೀರ್ಘವಾದೊಂದು ವಾರಾಂತ್ಯ ಸಿಗುತ್ತಿರೋದು ಸಹಜವಾಗಿಯೇ ಈ ಚಿತ್ರಕ್ಕೆ ವರವಾಗಲಿದೆ. ಅದೆಷ್ಟೋ ಸಿನಿಮಾಗಳನ್ನು ಈ ದಿನದಲ್ಲಿ ಬಿಡುಗಡೆಗೊಳಿಸಲು ಪ್ರಯತ್ನಗಳು ನಡೆದಿದ್ದವು. ಆದರೆ, ಟಾಕ್ಸಿಕ್ನಂಥಾ ಸಿನಿಮಾ ಅಲೆಗೆದುರಾಗುವ ಇಚ್ಛೆಯಿಲ್ಲದೆ ಅನೇಕರಯ ಕೈಚೆಲ್ಲಿ ಕೂತಿದ್ದರು. ಅಂಥಾದ್ದೊಂದು ಅವಕಾಶವೀಗ ಅಚಾನಕ್ಕಾಗಿ ಡಾರ್ಲಿಂಗ್ ಕೃಷ್ಣನ ಬೊಗಸೆಗೆ ಬಿದ್ದಿದೆ.
Love Mocktail 3 Songs: ಬಿಡುಗಡೆಯಾಯ್ತು ಲವ್ ಮಾಕ್ಟೇಲ್3 ಲಿರಿಕಲ್ ವೀಡಿಯೋ ಸಾಂಗ್!
ಏಪ್ರಿಲ್ ಹತ್ತನೇ ತಾರೀಕಿಗಿಂತಲೂ ಮಾರ್ಚ್ ಹತ್ತೊಂಬತ್ತರ ಸುತ್ತಾ ಸಕಾರಾತ್ಮಕ ಅಂಶಗಳು ಹೆಚ್ಚಿವೆ. ಹೇಳಿಕೇಳಿ ಡಾರ್ಲಿಂಗ್ ಕೃಷ್ಣ ನಿರ್ದೇಶಕನಾಗಿ ಹೊಸತನದ ಪಟ್ಟುಗಳೊಂದಿಗೆ ಈ ಚಿತ್ರವನ್ನು ರೂಪಿಸಿದ್ದಾರಂತೆ. ಅದು ಪ್ರೇಕ್ಷಕರ ಮನ ಗೆದ್ದರೆ, ಚಿತ್ರಮಂದಿರಗಳು ತುಂಬಿಕೊಳ್ಳಬಹುದಾದ ಸಾಧ್ಯತೆಗಳೇ ದಟ್ಟವಾಗಿವೆ. ಒಟ್ಟಾರೆಯಾಗಿ ಹಠಾತ್ತನೆ ಸಿಕ್ಕ ಸದರಿ ಅವಕಾಶ ಲವ್ ಮಾಕ್ಟೇಲ್೩ ಚಿತ್ರತಂಡವನ್ನು ಥ್ರಿಲ್ ಆಗಿಸಿರೋದಂತೂ ನಿಜ. ಕ್ರಿಸ್ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
keywords: lovemocktail3 movie, darling krishna, kvn productions , toxic, sandalwood

