ನಿರ್ದೇಶನ: ಹರಿಕೃಷ್ಣ ಎಸ್
ತಾರಾಗಣ: ಕೋಮಲ್ ಕುಮಾರ್, ತನಿಷಾ ಕುಪ್ಪಂಡ, ಕೀರ್ತಿರಾಜ್ ಮತ್ತು ಕಾಮಿಡಿ ಕಲಾವಿದರು

ರೇಟಿಂಗ್: 2

ನಿಷಾ ಕುಪ್ಪಂಡ ಬಿಗ್‌ಬಾಸ್ ಪ್ರಭೆಯಲ್ಲಿಯೇ ನಿರ್ಮಾಪಕಿಯಾಗಿ ಅವತರಿಸಿದ್ದ ಚಿತ್ರ ಕೋಣ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆಂಬ ಸುದ್ದಿ ಹೊರಬಂದಾಗಲೂ ಹೆಚ್ಚೇನೂ ನಿರೀಕ್ಷೆಗಳಿರಲಿಲ್ಲ. ಅಷ್ಟಕ್ಕೂ ಈ ಕೋಣ ಅನ್ನೋ ಟೈಟಲ್ಲೇ ಹೆಚ್ಚೇನೂ ಕುತೂಹಲ ಹುಟ್ಟಿಸಿರಲಿಲ್ಲ. ಅದೇನು ಕಂಬಳದ ಕೋಣವೋ, ಮಾರಿ ಜಾತ್ರೆಯಲ್ಲಿ ಬಲಿಕೊಡುವ ಕೋಣವೋ ಎಂಬಂಥಾ ಗೊಂದಲ ಸೃಷ್ಟಿಯಾಗಿತ್ತೇ ಹೊರತು, ನಿರೀಕ್ಷೆಗಳೇನೂ ಮೂಡಿರಲಿಲ್ಲ. ಇದೀಗ ಬಿಡುಗಡೆಗೊಂಡಿರೋ ಈ ಸಿನಿಮಾದುದ್ದಕ್ಕೂ ಅಂಥಾ ಗೊಂದಲಗಳೇ ಗೂಡುಕಟ್ಟಿಕೊಂಡಿವೆ. ಒಂದಷ್ಟು ಅಚ್ಚುಕಟ್ಟಾಗಿದ್ದಂತೆ ಕಂಡಿದ್ದ ಟ್ರೈಲರ್ ನೋಡಿ ಚಿತ್ರಮಂದಿರಕ್ಕೆ ತೆರಳಿದ್ದವರನ್ನೆಲ್ಲ ಕೋಮಲ್ ಕುಮಾರನ ಕೋಣ ಅಕ್ಷರಶಃ ರೊಚ್ಚಿಗೆಬ್ಬಿಸುತ್ತೆ!


ನಿರ್ದೇಶಕನೆನ್ನಿಸಿಕೊಂಡಿರುವ ಪುಣ್ಯಾತ್ಮ ಹರಿಕೃಷ್ಣ ಅದೇನೋ ಕಥೆ ಮಾಡಿಕೊಂಡಿದ್ದಾರೆ. ಆರಂಭ ಕೊಂಚ ಆಶಾದಾಯಕವಾಗಿದ್ದರೂ, ಕೋಣದ ಪಯಣ ಯಾವ ಘಟ್ಟದಲ್ಲಿಯೂ ಸಹ್ಯವಾಗಿ ಕಾಣಿಸೋದಿಲ್ಲ. ಕಾಡೊಂದರ ಮೂಲಕ ಈ ಚಿತ್ರ ತೆರೆದುಕೊಳ್ಳುತ್ತೆ. ಆ ಕಾಡಿನ ಮಧ್ಯದಲ್ಲೊಬ್ಬ ದನಗಾಹಿಯಂಥವನು ನದಿಯೊಂದರತ್ತ ಓಡಿ ಗಾಬರಿಯಾಗಿ ನಿಲ್ಲುತ್ತಾನೆ. ಆ ನದಿಯಲ್ಲಿ ಹೆಣಗಳ ರಾಶಿ ತೇಲಿ ಬರುತ್ತಿರುತ್ತೆ. ಹೀಗೆ ಹದಿನಾರನೇ ಶತಮಾನದಲ್ಲಿ ಘಟಿಸುವ ಈ ಸಿನಿಮಾ ಹದಿನಾರನೇ ಶತಮಾನಕ್ಕೂ ಲಿಂಕು ಪಡೆದುಕೊಳ್ಳುತ್ತೆ. ಅದ್ಯಾರೋ ರಾಜ, ಸಲೀಸಾಗಿ ಯುದ್ಧ ಗೆದ್ದುಕೊಳ್ಳಲು ಆತ ಮಾಂತ್ರಿಕರ ಮೂಲಕ ಸೃಷ್ಟಿಸಿದ್ದ ಬೆದರುಗೊಂಬೆ, ಬರ ಬರುತ್ತಾ ಮನುಷ್ಯರ ರಕ್ತಕ್ಕಾಗಿ ಬಾಯ್ತೆರೆದು ನಿಲ್ಲುತ್ತೆ. ಅದನ್ನು ಗಡಿಯಾಚೆ ಎಸೆಯೋ ಕ್ಷುದ್ರ ಕಾರ್ಯಾಚರಣೆಯ ಬೆನ್ನಲ್ಲಿಯೇ ಕಥೆಯೆಂಬುದು ಏಕಾಏಕಿ ಈ ಶತಮಾನಕ್ಕೆ ಬಂದು ನಿಲ್ಲುತ್ತೆ.


ಇಲ್ಲಿ ಕಥಾ ನಾಯಕ ಕೋಮಲ್ ಎಂಟ್ರಿಯಾಗುತ್ತೆ. ರೋಬೋಟ್ ಮೂಲಕ ಜ್ಯೋತಿಷ್ಯ ಹೇಳೋ ಆತ ಸತ್ತಿರೋ ತನ್ನ ಮಡದಿ ಬಳಿಯಿದ್ದಾಳೆಂದು ಭ್ರಮಿಸುತ್ತಾ ಆಕೆಯೊಂದಿಗೆ ಮಾತಾಡುತ್ತಿರುತ್ತಾನೆ. ವಿಕ್ಷಿಪ್ತ ಸ್ವಭಾವದ ಆ ಪಾತ್ರದ ಜೊತೆಗೆ ತನಿಷಾ ಕುಪ್ಪಂಡ ಸೇರಿದಂತೆ ಮತ್ತೊಂದಷ್ಟು ಪಾತ್ರಗಳು ಜಮೆಯಾಗುತ್ತವೆ. ಅಂಥಾ ಕೋಮಲ್ ಹೊಟೆಲ್ ಮುಂಭಾಗ ರೋಬೋಟ್ ನಿಲ್ಲಿಸಿಕೊಂಡು ಗ್ರಾಹಕರಿಗಾಗಿ ಕಾಯುತ್ತಿರುವಾಗ ಬಸ್ಸೊಂದರಲ್ಲಿ ಕಾಮಿಡಿ ಕಿಲಾಡಿಗಳ ಎಂಟ್ರಿಯಾಗುತ್ತೆ. ಹಾಗೆ ಬಂದವರು ಕಾಮಿಡಿ ಕಿಲಾಡಿಗಳು, ಗಿಚ್ಚಿಗಿಲಿಗಿಲಿಯಂಥಾ ಕಾಮಿಡಿ ಶೋಗಳ ಪ್ರತಿಭೆಗಳು. ಅವರೆಲ್ಲರೂ ಊರೊಂದರಲ್ಲಿ ನಡೆಯಲಿದ್ದ ನಾಟಕಕ್ಕಾಗಿ ಹೊರಟು ನಿಂತ ಕಲಾವಿದರು. ಒಂದು ಪಾತ್ರಕ್ಕಾಗಿ ಕಲಾವಿದ ಬೇಕಿರೋದರಿಂದ ಆ ತಂಡದ ಮಂದಿ ಕೋಮಲ್‌ನನ್ನೇ ಕರೆದುಕೊಂಡು ಹೊರಡುತ್ತಾರೆ. ಹಾಗೆ ಆ ಕಾಮಿಡಿ ಕಲಾವಿದರ ದಂಡಿನೊಂಡಿದೆ ಕೋಳೂರು ಎಂಬೂರಿಗೆ ಸಿನಿಮಾ ಶಿಫ್ಟಾಗುತ್ತೆ.
ಅಲ್ಲಿಂದಾಚೆಗೆ ನಡೆಯೋದು ಅಕ್ಷರಶಃ ಪ್ರೇಕ್ಷಕರ ತಾಳ್ಮೆ ಪರೀಕ್ಷೆ.

ನಂತರ ಕಥೆಯೇ ಇಲ್ಲದೆ, ಕೇವಲ ಕಾಮಿಡಿ ಕಿಲಾಡುಇಗಳು ಶೈಲಿಯ ಸ್ಕಿಟ್ಟುಗಳನ್ನು ನಂಬಿಯೇ ನಿರ್ದೇಶಕರು ದೃಷ್ಯ ಕಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಥರದ ಶೋಗಳಲ್ಲಿ ಥರ್ಡ್ ಕ್ಲಾಸ್ ಆದರೂ ಪಂಚುಗಳಾದರೂ ಇರುತ್ತವೆ. ಆದರೆ. ಇಲ್ಲಿ ಅದಕ್ಕೂ ಗತಿಯಿಲ್ಲ. ಕಡೆಗೂ ಕಾಮಿಡಿ ಕಿಲಾಡಿಗಳು ಭ್ರಾಮಕ ಹಾಸ್ಯದ ಭ್ರಮೆಯಲ್ಲಿ ತೊನೆದಾಡುತ್ತಾರೆ. ಅದಾಗಲೇ ತಾಳ್ಮೆ ಕಳೆದುಕೊಂಡ ಪ್ರೇಕ್ಷಕರ ಕಣ್ಣಿಗೆ ಕೋಮಲ್ ಸೇರಿದಂತೆ ಎಲ್ಲರೂ ಲಗಾಡಿಯೆದ್ದ ಕಥೆಯ ಕಳೇಬರದ ಮೇಲೆ ಹುಚ್ಚುದ್ದು ಕುಣಿಯೋ ಕೋತಿಯಂತೆ ಕಾಣಿಸುತ್ತಾರೆ. ಕಡೆಗೂ ಕ್ಲೈಮ್ಯಾಕ್ಸಿನಲ್ಲಿ ಎಲ್ಲಿಂದೆಲ್ಲಿಗೋ ಲಿಂಕು ಮಾಡಿ, ಸ್ಪಷ್ಟೀಕರಣ ನೀಡುವ ನೆಪದಲ್ಲಿ ಮತ್ತಷ್ಟು ಸಿಕ್ಕುಗಟ್ಟಿಸಿ ಬಿಟ್ಟಿದ್ದಾರೆ. ಆ ಹೊತ್ತಿಗೆಲ್ಲ ಕೋಮಲನ ಕೋಣಕ್ಕೆ ಅದೇ ಇಲ್ಲ ಎಂಬ ಸತ್ಯ ಪ್ರೇಕ್ಷಕರಿಗೆ ಅರ್ಥವಾಗುತ್ತೆ!


ಕಡೇಯ ಸೀನಿನಲ್ಲಿ ಕೋಮಲ್ ಥೇಟು ಪಂಜುರ್ಲಿ ದೈವದ ಪಾತ್ರದಲ್ಲಿ ರಿಷಭ್ ಶೆಟ್ಟಿ ಅಬ್ಬರಿಸಿದಂತೆ ನಟಿಸಲು ಪ್ರಯತ್ನಿಸಿದ್ದಾರೆ. ಆ ದೃಷ್ಯ ಮಾತ್ರ ಅದ್ಭುತ. ಕಾಮಿಡಿ ಕಿಲಾಡಿಗಳೆಲ್ಲ ಮುಕ್ಕರಿಸಿ ಪ್ರಯತ್ನಿಸಿದರೂ ಮೂಡದ ನಗು ಆ ದೃಷ್ಯವನ್ನು ನೋಡಿ ಪ್ರೇಕ್ಷಕರ ಮುಖದಲ್ಲಿ ಕುಣಿದಾಡುತ್ತೆ. ಇನ್ನು ಈ ಚಿತ್ರದಿಂದ ಯಾರಿಗಾದರೂ ಉಪಯೋಗವಾಗಿದ್ದರೆ ಅದು ತನಿಷಾ ಕುಪ್ಪಂಡಳಿಗೆ ಮಾತ್ರ. ಯಾಕೆಂದರೆ, ಆಕೆ ಇಡೀ ಸಿನಿಮಾದಲ್ಲಿ ತಾನಿರುವಂತೆ ನೋಡಿಕೊಂಡಿದ್ದಾರೆ. ಕಷ್ಟಪಟ್ಟು ಉದ್ದಿಮೆಗಳನ್ನು ಕಟ್ಟಿ ಹಣ ಸಂಪಾದಿಸಿರುವ ಹೆಣ್ಣುಮ ಗಳು ತನಿಷಾ. ಅಂಥಾ ಕಷ್ಟದ ಲಾಸನ್ನು ಆಕೆ ಯಾಕಿಂಥಾ ಕೆಟ್ಟ ಚಿತ್ರಕ್ಕೆ ಸುರಿದರೋ ಗೊತ್ತಾಗೋದಿಲ್ಲ. ಕಡೆಗೂ ಇಂಥಾದ್ದೊಂದು ಕೆಟ್ಟ ಸಿನಿಮಾವನ್ನು ಈ ಆಸಾಮಿ ಕೋಮಲ್ ಅದ್ಯಾಕೆ ಒಪ್ಪಿಕೊಂಡರೆಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತೆ. ಇದಕ್ಕೆ ಸಿಗುವ ಉತ್ತರದಲ್ಲಿಯೇ ಕೋಮಲ್‌ನನ್ನು ಮುತ್ತಿಕೊಳ್ಳುತ್ತಾ ಬಂದಿರುವ ಸಾಲು ಸಾಲು ಸೋಲಿನ ಹಿಂದಿರೋ ಕಾರಣವೂ ಸ್ಪಷ್ಟವಾಗುತ್ತೆ. ಈ ಹಂತದಲ್ಲಿ ಪ್ರೇಕ್ಷಕgರು ಒಳಗಿಂದೊಳಗೇ ರೊಚ್ಚಿಗೆದ್ದಿರುವಾಗ ಕೋಮಲನ ಅಣ್ಣ ಜಗ್ಗಣ್ಣನ ಧ್ವನಿ ಕೇಳಿಸುತ್ತೆ. ಅದೂ ಕೂಡಾ ಹತಾಶ ಪ್ರೇಕ್ಷಕರನನ್ನು ಸಮಾಧಾನಿಸೋದಿಲ್ಲ. ನಿಜಕ್ಕೂ ಕೋಮಲ್ ಇನ್ನು ಮುಂದೆ ನಾಯಕನಾಗೋ ತಲುಬು ಬಿಟ್ಟು, ಮತ್ತೆ ಹಾಸ್ಯ ಪಾತ್ರಗಳಿಗೆ ಮರಳೋದೊಳಿತು. ಜಗ್ಗಣ್ಣ ತನ್ನ ತಮ್ಮನಿಗೆ ಒಂದಷ್ಟು ಬುದ್ಧಿ ಹೇಳಬಾರದೇ?

About The Author