ವರ್ಷದ ಹಿಂದೆ ಕೆಂಡ ಅಂತೊಂದು ಸಿನಿಮಾ ತೆರೆಗಂಡು ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಹಾಗೆ ನೋಡಿದರೆ, ಆರಂಭದಿಂದಲೇ ಕೆಂಡದ ಬಗೆಗೊಂದು ಕುತೂಹಲ ಕೀಲಿಸಿಕೊಂಡಿತ್ತು. ಅದಕ್ಕೆ ಕಾರಣವಾಗಿದ್ದದ್ದು ನಿರ್ದೇಶಕಿಯಾಗಿ ಗಮನ ಸೆಳೆದಿದ್ದ ರೂಪಾ ರಾವ್ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದ ಸುದ್ದಿ. ಇನ್ನುಳಿದಂತೆ ಸಹದೇವ್ ಕೆಲವಡಿ ಹಂಚಿಕೊಂಡಿದ್ದ ಒಂದಷ್ಟು ಸುಳಿವುಗಳು ಮೂಲಕವೂ ಕೆಂಡ ಕೌತುಕದ ಕೇಂದ್ರ ಬಿಂದುವಾಗಿತ್ತು. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೊಂಡಿದ್ದ ಕೆಂಡವೀಗ ಓಟಿಟಿಗೆ ಲಗ್ಗೆಯಿಟ್ಟಿದೆ!
ಹೊಸಾ ಧಾಟಿಯ ಸಿನಿಮಾಗಳನ್ನು ಮೆಚ್ಚಿ ಕೊಂಡಾಡುವ, ನೋಡಿ ಗೆಲ್ಲಿಸುವ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಅಂಥಾ ಸಿನಿಮಾ ಪ್ರೇಮಿಗಳನ್ನೆಲ್ಲ ಖುಷಿಗೊಳಿಸಿದ್ದ ಚಿತ್ರ ಕೆಂಡ. ಸಾಮಾನ್ಯವಾಗಿ ಭೂಗತ ಜಗತ್ತಿನ ಕಥೆಯೆಂದರೆ, ಪಕ್ಕಾ ಕಮರ್ಶಿಯಲ್ ಶೈಲಿಯ ಚಿತ್ರಣವೊಂದು ಕಣ್ಮುಂದೆ ಸುಳಿದಾಡುತ್ತೆ. ಆದರೆ, ಅದನ್ನು ಮತ್ತೊಂದು ಆಯಾಮದಲ್ಲೂ ದೃಶ್ಯೀಕರಿಸಬಹುದೆಂಬುದನ್ನು ನಿರೂಪಿಸಿದ್ದ ಸಿನಿಮಾವಾಗಿ ಕೆಂಡ ಗಮನ ಸೆಳೆದುಕೊಂಡಿತ್ತು. ನಿರ್ದೇಶಕ ಸಹದೇವ್ ಕೆಲವಡಿ ಮೊದಲ ಹೆಜ್ಜೆಯಲ್ಲಿಯೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದರು. ಜೊತೆಗೆ ನಿರ್ದೇಶನಕ್ಕಾಗಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.
ಇಂಥಾ ಕೆಂಡವೀಗ ಅಮೇಜಾನ್ ಪ್ರೈಮ್ಗೆ ಆಗಮಿಸಿದೆ. ನೀವೇನಾದರೂ ಕೆಂಡವನ್ನು ಸಿನಿಮಾ ಮಂದಿರದಲ್ಲಿ ನೋಡಿಲ್ಲವಾದರೆ, ಆಮೇಜಾನ್ ಪ್ರೈಮ್ ಮೂಲಕ ಭಿನ್ನ ಅನುಭೂತಿಗೆ ಒಡ್ಡಿಕೊಳ್ಳುವ ಅವಕಾಶ ಈ ಮೂಲಕ ಕೂಡಿ ಬಂದಿದೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಮುಂತಾದವರು ನಟಿಸಿದ್ದಾರೆ. ಓಟಿಟಿಯಲ್ಲಿಯೂ ಇದೀಗ ಕೆಂಡದ ಖದರ್ ಮೆಲ್ಲಗೆ ಹಬೆಯಾಡಲಾರಂಭಿಸಿದೆ.