ಯುವ ನಿರ್ದೇಶಕ ಗುರುದತ್ ಗಾಣಿಗ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ ಹುಟ್ಟುಹಾಕಿದ್ದಾರೆ; ಜಗಾರಿ ಕ್ರಾಸ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ. ಅಷ್ಟಕ್ಕೂ ಗುರುದತ್ ಗಾಣಿಗ ಓರ್ವ ನಿರ್ದೇಶಕನಾಗಿ ಇದುವರೆಗೂ ತನ್ನ ಅಸಲೀ ಕಸುವನ್ನು ನಿರೂಪಿಸಿಕೊಂಡಿಲ್ಲ. ಆದರೆ, ಕನ್ನಡದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನೇ ಗುರುದತ್ ಸಿನಿಮಾ ಮಾಡಲು ಹೊರಟಿರೋದು ಒಂದಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪೂರ್ಣಚಂದ್ರ ತೇಜಸ್ವಿ ಕಾಡ ಗರ್ಭದ ರೋಚಕ ಕಥನಗಳ ಮೂಲಕವೇ ಹೆಸರಾಗಿರುವವರು. ಅಮೋಘವಾದ ಬರವಣಿಗೆಯ ಶೈಲಿಯ ಮೂಲಕ ತಲೆಮಾರುಗಳಾಚೆಗೂ ಪ್ರಸ್ತುತವಾಗುಳಿದಿರುವವರು. ಅಂಥಾ ಸಾಹಿತಿಯ ಕಾದಂಬರಿಯೊಂದನ್ನು ಗುರುದತ್ ಮುಟ್ಟ ಹೊರಟಿರೋದು ಸಿನಿಮಾ ವಲಯ ಮಾತ್ರವಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿಯೂ ಸಂಚಲನ ಮೂಡಿಸಿದೆ.

ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿಗಳು ಸಿನಿಮಾ ರೂಪ ಧರಿಸಬೇಕೆಂಬುದು ಅವರ ಓದುಗರೆಲ್ಲರ ಬಯಕೆ. ಅದು ಆಗಾಗ ಸಾಕಾರಗೊಳ್ಳುತ್ತಾ ಬಂದಿತ್ತು. ಇತ್ತೀಚೆಗಷ್ಟೇ ಡೇರ್ ಡೆವಿಲ್ ಮುಸ್ತಫಾ ಅಂತೊಂದು ಸಿನಿಮಾ ತೆರೆಗಂಡು ಮೆಚ್ಚುಗೆ ಗಳಿಸಿಕೊಂಡಿತ್ತು. ಹೀಗೆ ತೇಜಸ್ವಿ ಕಥನಗಳು ದೃಷ್ಯ ರೂಪ ಧರಿಸಬೇಕೆಂಬ ಇಂಗಿತ ಹೊಂ ದಿದ್ದವರ ಪ್ರಧಾನ ಆಯ್ಕೆಯಾಗಿದ್ದದ್ದು ಜಗಾರಿ ಕ್ರಾಸ್. ಇದೀಗ ಗುರುದತ್ ಗಾಣಿಗ ಅದನ್ನೇ ಕೈಗೆತ್ತಿಕೊಂಡಿದ್ದಾರೆ. ಅದರಲ್ಲಿನ ಮುಖ್ಯ ಪಾತ್ರವನ್ನು ರಾಜ್ ಬಿ ಶೆಟ್ಟಿ ನಿರ್ವಹಿಸಲಿದ್ದಾರೆಂಬ ಮಾಹಿತಿಯೂ ಹೊರಬಿದ್ದಿದೆ. ಸದ್ಯದ ಮಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುದತ್ ಸಾಹಸದ ಬಗೆಗಿನ ಚರ್ಚೆಗಳು ಕಾವುಗಟ್ಟಿಕೊಂಡಿವೆ.

ಯಾವುದೇ ಕಥೆ, ಕಾದಂಬರಿಗಳನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸೋದು ತ್ರಾಸದಾಯಕ ಕೆಲಸ. ಅದರಲ್ಲಿಯೂ ತೇಜಸ್ವಿ ಕಥನಗಳು ಮತ್ತೊಂದಷ್ಟು ಸವಾಲುಗಳನ್ನೊಡ್ಡುತ್ತವೆ. ಅದರಲ್ಲಿಯೂ ಪಕ್ಕಾ ಕಮರ್ಶಿಯಲ್ ಧಾಟಿಯಲ್ಲಿ ಗುರುದತ್ ಜುಗಾರಿ ಕ್ರಾಸ್‌ಗೆ ದೃಷ್ಯರೂಪ ಕೊಡಲು ಮುಂದಾಗಿದ್ದಾರೆ. ಸದ್ಯದ ಮಟ್ಟಿಗೆ ಕರಾವಳಿ ಅಂತೊಂದು ನ ಎಲಮೂಲದ ಕಥೆಯನ್ನು ಆತ ನಿರ್ದೇಶನ ಮಾಡುತ್ತಿದ್ದಾರೆ. ಅದರ ಬೆನ್ನಲ್ಲಿಯೇ ಜುಗಾರಿ ಕ್ರಾಸ್ಗೆ ಚಾಲನೆ ಸಿಕ್ಕಿದೆ. ಇಂಥಾ ಘಳಿಗೆಯಲ್ಲಿ ಗುರುದತ್‌ಗೆ ಜುಗಾರಿ ಕ್ರಾಸ್ ಅನ್ನು ದೃಷ್ಯದಲ್ಲಿ ಸಮರ್ಥವಾಗಿ ಹಿಡಿಕದಿಡುವ ಛಾತಿ ಇದೆಯಾ ಎಂಬ ದಿಕ್ಕಿನಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಈ ಹುಡುಗ ಪರಿಣಾಮಕಾರಿಯಾಗಿ ನಿರ್ದೇಶನ ಮಾಡಿದರೆ ಜುಗಾರಿ ಕ್ರಾಸ್ ದಾಖಲೆ ಸೃಷ್ಟಿಸಬಹುದಾದ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿವೆ!
