ದಳಪತಿ ವಿಜಯ್ಗೆ ರಾಜಕೀಯ ಎಂಟ್ರಿಯೇ ಸಾಡೇಸಾತ್ ಶನಿ ಅಮರಿಕೊಳ್ಳಲು ಕಾರಣವಾಯ್ತಾ? ಹೀಗೊಂದು ಚರ್ಚೆ ತಮಿಳುನಾಡಿನ ಸಿನಿಮಾ ರಂಗದಲ್ಲಿ ಗಂಭೀರವಾಗಿಯೇ ನಡೆಯುತ್ತಿದೆ. ಒಂದೆರಡಲ್ಲ; ಪ್ರತೀ ದಿನವೂ ಜನನಾಯಗನ್ ಪಡಸಾಲೆಯಿಂದ ಒಂದೊಂದು ಆಘಾತಕರ ಸುದ್ದಿಗಳು ಜಾಹೀರಾಗುತ್ತಲೇ ಇವೆ. ಅಸಂಖ್ಯಾತ ವಿಜಯ್ ಅಭಿಮಾನಿಗಳು ಈ ಕ್ಷಣಕ್ಕೂ ಶುಭ ಸುದ್ದಿಯೇನಾದರೂ ಸಿಕ್ಕೀತಾ ಎಂಬಂತೆ ಗೋಣು ಚಾಚಿ ಕಾಯುತ್ತಿದ್ದಾರೆ. ಆದರೆ ಚಾಚಿದ ಗೋಣಿಗೆ ರಾಚುತ್ತಿರೋದು ಮಾತ್ರ ದುರಂತದಂಥಾ ಸುದ್ದಿಗಳೇ. ಈಗ ಹೊರ ಬಂದಿರೋದೂ ಕೂಡಾ ಅಂಥಾದ್ದೇ ಒಂದು ಸುದ್ದಿ!
ದಳಪತಿ ವಿಜಯ್ ವೃತ್ತಿ ಬದುಕಿನ ಕಟ್ಟ ಕಡೆಯ ಚಿತ್ರವೆಂಬ ಕಾರಣದಿಂದಲೇ ಜನನಾಯಗನ್ ಒಂದಷ್ಟು ಗಮನ ಸೆಳೆದಿತ್ತು. ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಹೊಂದಿರೋ ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ಅತ್ಯಂತ ಉತ್ಸಾಹದಿಂದಲೇ ನಿರ್ಮಾಣ ಮಾಡಿತ್ತು. ಆದರೀಗ ವಿಜಯ್ನನ್ನು ನಂಬಿ ಬಹುಕೋಟಿ ಹೂಡಿದ್ದ ಕೆವಿಎನ್ ಸಂಸ್ಥೆಯೇ ಕಂಗಾಲಾಗುವಂತಾಗಿದೆ. ಬಿಡುಗಡೆಯ ಹೊಸ್ತಿಲಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದ್ದೂ ಸೇರಿದಂತೆ ಲುಕ್ಸಾನಿನ ಪರ್ವವೊಂದಕ್ಕೆ ಈ ನಿರ್ಮಾಣ ಸಂಸ್ಥೆ ಎದೆಯೊಡ್ಡುವಂತಾಗಿದೆ. ಇದೆಲ್ಲವನ್ನೂ ಕಂಡು ಬೇಸತ್ತಿರೋ ವಿಜಯ್ ತಾನು ಪಡೆದಿದ್ದ ಸಂಭಾವನೆಯಲ್ಲಿಯೇ ಒಂದಷ್ಟು ಮೊತ್ತವನ್ನು ಹಿಂತಿರುಗಿಸುವ ಮೂಲಕ ನಿರ್ಮಾಪಕರ ಸಂಕಷ್ಟಕ್ಕೆ ನೆರವಾಗಲು ಮುಂದಾಗಿದ್ದಾನಂತೆ!
Jana Nayagan Movie Updates: ನೂರಿಪ್ಪತ್ತು ಕೋಟಿಯ ಡೀಲ್ ಕ್ಯಾನ್ಸಲ್!
ಹಾಗೆ ನೋಡಿದರೆ, ವಿಜಯ್ ಈ ಸಿನಿಮಾದ ಒಟ್ಟಾರೆ ಬಜೆಟ್ಟಿನ ಅರ್ಧದಷ್ಟು ಮೊತ್ತವನ್ನು ಸಂಭಾವನೆಯಾಗಿ ಪಡೆದಿದ್ದರು. ಈ ಕಾರಣದಿಂದಲೇ ದೇಶಾದ್ಯಂತ ಈ ಸಂಭಾವನೆಯ ಮೊತ್ತದ ಬಗ್ಗೆ ಚರ್ಚೆಯಾಗಿತ್ತು. ಅಂದಹಾಗೆ, ಜನನಾಯಗನ್ ಚಿತ್ರಕ್ಕಾಗಿ ವಿಜಯ್ ಪಡೆದಿದ್ದದ್ದು ಭರ್ತಿ ಇನ್ನೂರು ಕೋಟಿ. ಒಂದು ರೀಮೇಕ್ ಸರಕಿಗೆ ಈ ಸಂಸ್ಥೆ ಅದ್ಯಾಕೆ ಈ ಪಾಟಿ ಹೂಡಿಕೆ ಮಾಡಿತೋ ಗೊತ್ತಿಲ್ಲ. ಅಂತೂ ದಳಪತಿ ಚುನಾವಣಾ ಪೂರ್ವ ರ್ಯಾಲಿಗಳನ್ನು ಜನನಾಯಗಳ ಸಂಭಾವನೆ ಕಾಸಲ್ಲಿಯೇ ಸಂಭಾಳಿಸುವ ಯೋಜನೆ ಹಾಕಿಕೊಂಡಿರಲೂ ಬಹುದು. ಆದರೀಗ ಎಲ್ಲವೂ ಅದಲು ಬದಲಾಗಿದೆ. ಬಿಡುಗಡೆ ದಿನಾಂಕವೇ ನಿಗಧಿಯಾಗದಿರೋದರಿಂದಾಗಿ ವ್ಯವಹಾರಕ್ಕೆ ಭಾರೀ ಹಿನ್ನಡೆಯಾಗಿದೆ. ಒಂದು ವೇಳೆ ಎಲ್ಲ ಮುಗಿದು ಬಿಡುಗಡೆ ದಿನಾಂಕ ಘೋಶಣೆಯಾದರೂ ಕೂಡಾ ವ್ಯವಹಾರ ನಡೆಸೋ ಧೈರ್ಯ ಅನೇಕರಿಗಿಲ್ಲ. ಯಾಕೆಂದರೆ, ಜನನಾಯಕನಿಗೆ ಯಾವ ಕ್ಷಣದಲ್ಲಿ, ಯಾವ ಸ್ವರೂಪದ ಗುನ್ನಾ ಬೀಳುತ್ತದೆಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ!
keyword: jana nayagan, thalapathy vijay, kollywood, kvn productions

