ಸಿಕ್ಕ ಸಿಕ್ಕವರ ಮೇಲೆ ಗೂಂಡಾಗಳಂತೆ ಎಗರಿ ಬೀಳುತ್ತಿದ್ದ ಕೆಲ ದರ್ಶನ್ ಅಭಿಮಾನಿಗಳು ಕನಸು ಮನಸಲ್ಲಿಯೂ ಈ ಕ್ಷಣಗಳನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ. ತಮ್ಮ ಬಾಸು ಆನು ಮಾಡಿದರೂ ನಡೆಯುತ್ತೆ, ಎಣ್ಣೆ ಏಟಲ್ಲಿ ತಾರಾಡುತ್ತಾ ಎಂಥಾ ಮಾತಾಡಿದರೂ ಯಾರೂ ಕೆಮ್ಮುವಂತಿಲ್ಲ, ಆತನ ಮುಂದೆ ಸಿಎಮ್ಮು, ಪಿಎಮ್ಮುಗಳೂ ಲೆಕ್ಕಕ್ಕಿಲ್ಲ ಅನ್ನೋದೆಲ್ಲ ದಾಸನ ಅಭಿಮಾನಿಗಳ ಪಾಲಿಗೆ ಚಿಲ್ಲರೆ ವಿಚಾರಗಳಾಗಿದ್ದವು. ಅವರ ಕಲ್ಪಾನವಿಲಾಸದಲ್ಲಿ ತಮ್ಮ ಮೆಚ್ಚಿನ ಡಿಬಾಸನ್ನು ಬಂಧಿಸಿಡುವ ಜೈಲುಗಳೇ ಕರ್ನಾಟಕದಲ್ಲಿಲ್ಲ ಎಂಬಂಥಾ ಭಯಾನಕ ನಂಬಿಕೆ ನೆಲೆಗೊಂಡಿತ್ತು. ಅಂಥಾ ಕಲ್ಪನೆಯ ಕೋಟೆಯೆಲ್ಲ ಈಗ ಚದುರಿ ಚೆಲ್ಲಾಪಿಲ್ಲಿಯಾಗಿದೆ. ಸಾಕ್ಷಾತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸರಿಕಟ್ಟಾದೊಂದು ತಲೆದಿಂಬು ಮತ್ತು ಮೂಲಭೂತ ಅಗತ್ಯಗಳಿಗಾಗಿ ಕೋರ್ಟಿನ ಮುಂದೆ ಅಂಗಲಾಚುವ ಸ್ಥಿತಿ ಬಂದೊದಗಿದೆ.

ದರ್ಶನ್ ತಲುಪಿಕೊಂಡಿರುವ ಈ ಸ್ಥಿತಿ ಕಂಡರೆ ಒಂದು ಕಾಲದಲ್ಲಿ ಆತನ ಆವುಟಗಳನ್ನು ಕಂಡು ರೋಸತ್ತಿದ್ದವರಲ್ಲೂ ಮರುಕ ಹುಟ್ಟೋದು ಸುಳ್ಳಲ್ಲ. ಆದರೆ, ಅದರ ಹಿಂದೆ ಆತನ ಸ್ವಯಂಕೃತಾಪರಾಧಗಳಿದ್ದಾವೆ. ಅಭಿಮಾನಿಗಳೆನ್ನಿಸಿಕೊಂಡವರ ಸ್ವೇಚ್ಛೆಯ ವರ್ತನೆಗಳ ಪಾಲೂ ಯಥೇಚ್ಚವಾಗಿದೆ. ಜೈಲುವಾಸದ ಮೊದಲ ಅವಧಿಯನ್ನು ಒಂದಷ್ಟು ನಿರಾಳವಾಗಿ ಕಳೆದಿದ್ದ ದರ್ಶನ್‌ಗೆ ಎರಡನೇ ಅವಧಿಯಲ್ಲಿ ಅಕ್ಷರಶಃ ನರಕದರ್ಶನವಾಗುತ್ತಿದೆ. ಕೋಟಿ ಕಮಾಯಿಸಿದ ಅಧಿಕಾರಿಗಳು ತಮ್ಮದೇ ಜಗತ್ತಿನಲ್ಲಿ ಬೆಚ್ಚಗಿದ್ದಾರೆ. ಜೈಲಾಧಿಕಾರಿ ಸುರೇಶ ದರ್ಶನ್ ವಿಚಾರದಲ್ಲಿ ಆಟ ಕಟ್ಟಲು ಹಿಂದೇಟು ಹಾಕುತ್ತಿದ್ದಾನೆ. ತಲೆಮಾಸಿದ ರೌಡಿಗಳು ಜೈಲೊಳಗೇ ಬರ್ತ್‌ಡೇ ಪಾರ್ಟಿ ಆಚರಿಸುತ್ತಿದ್ದರೂ ದರ್ಶನ್‌ಗೆ ಹೆಚ್ಚುವರಿ ಸೌಕರ್ಯ ಒದಗಿಸಲು ಜೈಲೊಳಗಿನ ಖೂಳುಬಾಕರು ಹೆದರುತ್ತಿದ್ದಾರೆ.

ಎಲ್ಲರ ಫೋಕಸ್ಸು ದರ್ಶನ್ ಮೇಲಿರೋದರಿಂದ ಕೊಂಚ ಯಾಮಾರಿದರೆ ಯಡವಟ್ಟಾದೀತೆಂಬ ಭಯವೇ ಅದಕ್ಕೆ ಕಾರಣ. ಈ ಸಂಬಂಧವಾಗಿ ದರ್ಶನ್ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದಾರೆ. ಇದೀಗ ಆ ವಿಚಾರಣೆಯೂ ಮುಂದೂಡಲ್ಪಟ್ಟಿದೆ. ಅಲ್ಲಿಗೆ ಒಂದು ತಲೆದಿಂಬೂ ಕೂಡಾ ದರ್ಶನ್‌ಗೆ ಸದ್ಯದ ಮಟ್ಟಿಗೆ ಮರೀಚಿಕೆಯಾಗಿದೆ. ಅಲ್ಲೇ ಮತ್ತೊಂದು ಮಗ್ಗುಲಿನ ಸೆಲ್ಲಿನಲ್ಲಿರುವ ಮಾಯಾಂಗನೆ ಪವಿತ್ರಾ ದರ್ಶನ್ ಕಥೆ ಹೇಗಾದರೂ ತಾನು ಬಚಾವ ಆದರೆ ಸಾಕೆಂಬಂತೆ ಲಾಯರ್‌ಗಳ ಮೂಲಕ ಶತ ಪ್ರಯತ್ನ ನಡೆಸುತ್ತಿದ್ದಾಳೆ. ಈ ನಡುವೆ ದಿನೇ ದಿನೆ ದಾಸನಿಗೆ ಕಾನೂನಿನ ಉರುಳು ಬಿಗಿಯಾಗುತ್ತಿರುವ ಭಯವೂ ಕಾಡುತ್ತಿದೆ. ಈ ಕ್ಷಣದಲ್ಲಿ ಆತನ ಪರವಾಗಿ ಅಚಲವಾಗಿ ಹೋರಾಟ ನಡೆಸುತ್ತಿರೋದು ವಿಜಯಲಕ್ಷ್ಮಿ ಮಾತ್ರ. ಇದ್ರೆ ನೆಮ್ದಿಯಾಗಿರ್ಬೇಕ್ ಅಂತಗ ಅಬ್ಬರಿಸಿದ್ದ ದಾಸನ ಸ್ಥಿತಿ ನಿಜಕ್ಕೂ ಮರುಕ ಮೂಡಿಸುವಂತಾಗಿದೆ… ಆದರೆ ಆತನಿರೋದು ತಪ್ಪಿನ ಅರಿವು ಮೂಡಿಸುವ ಜೈಲಿನಲ್ಲಿ; ಬೇಕೆಂದ ಸೌಕರ್ಯಗಳು ಸಲೀಸಾಗಿ ದಕ್ಕಲು ಅದೇನು ಕ್ಯಾರವಾನ್ ಅಲ್ಲ ಅನ್ನೋದು ಅರಗಿಸಿಕೊಳ್ಳಲೇಬೇಕಾದ ವಾಸ್ತವ!
