ಪ್ಯಾನಿಂಡಿಯಾ ಅಲೆ, ಮಾಸ್ ಸಿನಿಮಾಗಳ ಭರಾಟೆಗಳ ನಡುವೆ ಒಂದು ಭಿನ್ನ ಪ್ರಯತ್ನದ ಸುಳಿವು ಸಿಕ್ಕರೂ ಸಾಕು; ಕನ್ನಡದ ಪ್ರೇಕ್ಷಕರು ರೋಮಾಂಚಿತರಾಗುತ್ತಾರೆ. ಹಾಗಿರುವಾಗ ವಿಟಿಲಿಗೋದಂಥಾ ಸಮಸ್ಯೆಯ ಸುತ್ತ ಕಮರ್ಶಿಯಲ್ ಹಾದಿಯಲ್ಲಿ ರೂಪುಗೊಂಡಿರುವ ಚಿತ್ರವೊಂದು ತಯಾರಾಗಿದೆ ಎಂದರೆ ಕುತೂಹಲ ಮೂಡದಿರಲು ಸಾಧ್ಯವೇ? ಮಹಿರಾ ಖ್ಯಾತಿಯ ಮಹೇಶ್ ಗೌಡ ನಿರ್ಮಾಣ ಮಾಡಿ, ನಿರ್ದೇಶಿಸಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದದ್ದು ಆ ಕಾರಣದಿಂದಲೇ. ಅಂಥಾದ್ದೊಂದು ಗಾಢ ನಿರೀಕ್ಷೆಯ ಒಡ್ಡೋಲಗದಲ್ಲಿ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ಬಿಡುಗಡೆಗೊಂಡಿದೆ.

ಎಲ್ಲರಿಗೂ ಗೊತ್ತಿರುವಂತೆ ವಿಟಿಲಿಗೋ ಅಥವಾ ತೊನ್ನಿನ ಸುತ್ತ ಹಬ್ಬಿಕೊಂಡಿರುವ ಕಥೆ ಈ ಚಿತ್ರದ ಜೀವಾಳ. ತೊನ್ನೆಂಬುದು ನಮಗೇನೂನ ಅಪರಿಚಿತವಾದ ದೈಹಿಕ ಸಮಸ್ಯೆಯಲ್ಲ. ಮೈ ತುಂಬಾ ಬಿಳಿಮಚ್ಚೆ ಹಬ್ಬಿರುವ ಜೀವಗಳು ನಮ್ಮ ಸುತ್ತಲೇ ಸುಳಿದಾಡುತ್ತಿರುತ್ತವೆ. ವಿಚಿತ್ರವೆಂದರೆ, ದೇಹದೊಳಗಿನ ಕೆಲ ವ್ಯತ್ಯಯಗಳಿಂದ ಹರಡಿಕೊಳ್ಳುವ ಈ ಕಾಯಿಲೆಯಲ್ಲದ ಕಾಯಿಲೆಯ ಬಗ್ಗೆ ಈ ಸಮಾಜದಲ್ಲಿ ಒಂದಷ್ಟು ಮೌಢ್ಯ ತುಂಬಿಕೊಂಡಿದೆ. ಅದುವೇ ತೊನ್ನುಪೀಡಿತ ವ್ಯಕ್ತಿಗಳು ಸಾಮಾಜಿಕವಾಗಿಯೂ ಘಾಸಿಗೊಳ್ಳುವಂತೆ ಮಾಡುತ್ತದೆ. ಸ್ವತಃ ತೊನ್ನಿನ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರು ಕೌಟುಂಬಿಕ ಹಿನ್ನೆಲೆಯಲ್ಲಿ ಬಿಳಿಚುಕ್ಕಿ ಹಳ್ಳಿಹಕ್ಕಿಯ ಕಥೆಯನ್ನು ಹರವಿದ್ದಾರೆ.

ಶಿವ ಅಮ್ಮನ ಪ್ರೀತಿಯ ಕೂಸು. ಬದುಕಿಗೆ ಬೇಕಾದ ಕಸುಬಿನ ಮೂಲವೂ ಆತನ ಮುಂದಿರುತ್ತೆ. ಆದರೆ ಆತನನ್ನು ಹೆಜ್ಜೆ ಹೆಜ್ಜೆಗೂ ಎಳವೆಯಿಂದಲೇ ಕಾಡಿಸಲಾರಂಭಿಸಿದ್ದು ಮೈಮೇಲೆ ಮೂಡಿಕೊಂಡಿದ್ದ ತೊನ್ನಿನ ಕಲೆಗಳು. ಅಮ್ಮನ ಅದ್ಮ್ಯ ಪ್ರೀತಿ, ಆಕೆ ನೀಡುವ ಬೆಚ್ಚನೆಯ ಭಾವದಾಚೆಗೂ ಸಾಮಾಜಿಕವಾಗಿ ತನ್ನತ್ತ ಬೀರುವ ತೀಕ್ಷ್ಣ ದೃಷ್ಟಿ ಮತ್ತು ಸಹಪಾಠಿಗಳ ಮೂದಲಿಕೆಗಳು ಶಿವನ ಮನಸಿಗೂ ಗಾಯವಾಗಿಸಿರುತ್ತೆ. ಇಂಥಾ ಹುಡುಗ ಬೆಳೆದು ದೊಡ್ಡವನಾಗಿ, ತನ್ನ ಅನ್ನ ತಾನೇ ಸಂಪಾದಿಸುವಷ್ಟು ಶಕ್ತನಾದರೂ ಕೂಡಾ ಮೈಮೇಲಿನ ತೊನ್ನು ಕೀಳರಿಮೆಯಾಗಿ ಕಾಡಲಾರಂಭಿಸುತ್ತೆ. ಅಮ್ಮನ ಒತ್ತಾಸೆಗೆ ಕಟ್ಟು ಬಿದ್ದು ಮದುವೆಯಾಗುವ ಪ್ರಯತ್ನದಲ್ಲೂ ಮೈಮೇಲಿನ ಬಿಳಿ ಕಲೆಗಳು ವಿಲನ್‌ನಂತೆ ಕಂಗೆಡಿಸುತ್ತವೆ. ಆತನ ಮನಸಿನ ಗಾಯ ಮತ್ತಷ್ಟು ವ್ರಣವಾಗುತ್ತೆ.

ಇದೆಲ್ಲದರ ನಡುವೆ ಓರ್ವ ಹುಡುಗಿ ಶಿವನ ಬದುಕಿಗೆ ಬಂದಲ್ಲಿಂದಾಚೆಗೆ ಕಥೆ ಗರಿಬಿಚ್ಚಿಕೊಳ್ಳುತ್ತೆ. ಹಾಗೆ ಶಿವನ ಬದುಕಿಗೆ ಬಂದವಳ ಮನಸಲ್ಲೂ ಎಂದೂ ಮಾಸದ ಗಾಯವೊಂದಿರುತ್ತೆ. ಕಥೆಯುದ್ದಕ್ಕೂ ಅವರೊಳಗಿನ ಗಾಯಗಳು ಮುಖಾಮುಖಿಯಾಗುತ್ತವೆ. ಒಂದಷ್ಟು ಹಂತದಲ್ಲಿ ಸೀರಿಯಲ್ಲಿನ ಛಾಯೆ ಕಥೆಯ ಗಾಂಭೀರ್ಯಕ್ಕೆ ಪೆಟ್ಟು ಕೊಟ್ಟಿತೇನೋ ಅನ್ನಿಸೋದು ನಿಜ. ಇದೂ ಸೇರಿ ಸಿನಿಮಾದ ಅಲ್ಲಲ್ಲಿ ಒಂದಷ್ಟು ಕೊರತೆಗಳು ಕಾಣಿಸುತ್ತವೆ. ಆದರೆ ಕೈಮ್ಯಾಕ್ಸ್ ಸನ್ನಿವೇಶ ಎಲ್ಲ ಕೊರತೆಗಳನ್ನೂ ನೀಗಿಸುತ್ತದೆ. ವಿಶೇಷವಾಗಿ ತೊನ್ನಿನ ಸುತ್ತಲೇ ರೂಪುಗೊಂಡ ಈ ಸಿನಿಮಾ, ಅದರ ಬಗ್ಗೆ ಮ ನಮುಟ್ಟುವಂಥಾ ಸಂದೇಶ ರವಾನಿಸುವಲ್ಲಿ ಗೆದ್ದಿದೆ. ಅದು ಮಹೇಶ್ ಗೌಡರ ಒಟ್ಟಾರೆ ಶ್ರಮದ ಸಾರ್ಥಕ್ಯದಂತೆಯೂ ಭಾಸವಾಗುತ್ತದೆ.

ಎಲ್ಲ ಜವಾಬ್ದಾರಿಗಳನ್ನು ಮೈಮೇಲೆಳೆದುಕೊಂಡಿದ್ದರೂ ಓರ್ವ ನಟನಾಗಿಯೂ ಮಹೇಶ್ ಗೌಡ ಆಪ್ತವಾಗುತ್ತಾರೆ. ಭಾವಗಳ ಮೂಲಕವೇ ಸಂವಹನ ನಡೆಸುವ ನಾಯಕಿಯಾಗಿ ಕಾಜಲ್ ಕುಂದರ್ ಮನಸಿಗಿಳಿಯುತ್ತಾರೆ. ವೀಣಾ ಸುಂದರ್, ಲಕ್ಷ್ಮಿ ಸಿದ್ದಯ್ಯ, ಜಹಾಂಗೀರ್, ರವಿಭಟ್ ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರದ ಒಳಗಿಳಿದು ನಟಿಸಿದ್ದಾರೆ. ಪ್ರತಿಭಾನ್ವಿತ ಪೋಶಕ ನಟರಾಗಿ ಗುರುತಿಸಿಕೊಂಡಿರುವ ರವಿ ಭಟ್ ನಾಯಕಿಯ ತಂದೆಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಅವರ ಪಾತ್ರ ಒಟ್ಟಾರೆ ಸಿನಿಮಾದ ಅಂತಃಶಕ್ತಿಯಂತಿದೆ. ಇನ್ನು ತೊನ್ನಿನ ಸಮಸ್ಯೆ ಹೊಂದಿರುವ ಮಗನನ್ನು ಕೀಳರಿಮೆ ಕಾಡದಂತೆ ಕಾಪಿಟ್ಟುಕೊಳ್ಳುವ, ಪ್ರತೀ ಹಂತದಲ್ಲಿಯೂ ನೆತ್ತಿ ನೇವರಿಸಿ ಜೊತೆಯಾಗುವ ಲಕ್ಷ್ಮಿ ಸಿದ್ದಯ್ಯರ ತಾಯಿ ಪಾತ್ರ ನೋಡುಗರಿಗೆ ತಾಯ್ತನದ ಮಧುರಾನುಭೂತಿಯನ್ನು ದಾಟಿಸುವಂತಿದೆ. ಇನ್ನು ಅಳಿಯನ ತೊನ್ನಿನ ಸಮಸ್ಯೆಯನ್ನು ಆಡಿಕೊಳ್ಳುತ್ತಲೇ ಮಗಳ ಬದುಕಿಗೆ ಮಗ್ಗುಲಮುಳ್ಳಾಗುವ ಬಜಾರಿ ತಾಯಿಯಾಗಿ ವೀಣಾ ಸುಂದರ್ ಅವರ ನಟನೆಯೂ ಈ ಸಿನಿಮಾದ ಹೈಲೈಟ್‌ಗಳಲ್ಲೊಂದು. ಆ ಪಾತ್ರ ತೊನ್ನಿನ ಸಮಸ್ಯೆಯ ಬಗ್ಗೆ ಈ ಸಮಾಜದಲ್ಲಿರುವ ಮನಃಸ್ಥಿತಿಯ ರೂಪಕದಂತಿದೆ. ಭೋಳೇ ಸ್ವಭಾವದ ಮಾವನಾಗಿ ಜಹಾಂಗೀರ್ ಅವರ ನಟನೆಯೂ ಗಮನ ಸೆಳೆಯುತ್ತದೆ.
