ಈಗೊಂದು ಹನ್ನೊಂದು ವರ್ಷಗಳ ಹಿಂದೆ ಬಿಗ್‌ಬಾಸ್ ಅಂತೊಂದು ಶೋ ಕನ್ನಡದಲ್ಲಿ ಶುರುವಾದಾಗ ಕಿರುತೆರೆ ಪ್ರೇಕ್ಷಕರ ಥ್ರಿಲ್ ಆಗಿದ್ದದ್ದು ನಿಜ. ಅಂಥಾದ್ದೊಂದು ಕಾತರ ಮೊದಲ ಸೀಜನ್ನಿನಲ್ಲಿ ಸಾರ್ಥಕ್ಯ ಕಂಡಿತ್ತು. ಆ ನಂತರದ ಸೀಜನ್ನುಗಳ ಮೂಲಕ ಕಿಚ್ಚಾ ಸುದೀಪ್ ಸಾರಥ್ಯದಲ್ಲಿ ಪ್ರೇಕ್ಷಕರನ್ನೆಲ್ಲ ನಿರಾಸೆಗೆ ತಳ್ಳುತ್ತಾ, ಬೆಚ್ಚಿ ಬೀಳಿಸುತ್ತಾ ಸಾಗಿದ್ದೇ ಸಾಧನೆ. ಆರಂಭಿಕವಾಗಿ ಒಂದಷ್ಟು ಸೀಜನ್ನುಗಳಲ್ಲಿ ತಲೆ ಒಂದಷ್ಟು ನೆಟ್ಟಗಿರುವವರ ನಡುವೆ ಒಬ್ಬೊಬ್ಬರು ಹುಚ್ಚು ಆಸಾಮಿಗಳನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಇತ್ತೀಚೆಗೆ ಇರೋ ಹುಚ್ಚರ ನಡುವೆ ಸರಿಕಟ್ಟಾಗಿರುವವರನ್ನು ಹುಡುಕುವಷ್ಟರ ಮಟ್ಟಿಗೆ ಬಿಗ್‌ಬಾಸು ಹಡಾಲೆದ್ದಾಗಿದೆ. ಹನ್ನೊಂದನೇ ಸೀಜನ್ನು ದಾಟಿಕೊಳ್ಳುವ ಹೊತ್ತಿಗೆಲ್ಲ ಬಿಗ್‌ಬಾಸ್ ಅನ್ನೋದು ಅಕ್ಷರಶಃ ಹುಚ್ಚರ ಕಾರ್ಖಾನೆಯಂತಾಗಿತ್ತು. ಇದೀಗ ಮತ್ತೆ ಅದರ ಕದ ತೆರೆಯೋ ಹೊತ್ತು ಸಮೀಪಿಸುತ್ತಿದೆ!
ಇದೀಗ ಆ ಕಾರ್ಖಾನೆಗೆ ಯಾರ್‍ಯಾರು ಸೇರಿಕೊಳ್ಳುತ್ತಾರೆಂಬ ಬಗ್ಗೆ ಅಂತೆ ಕಂತೆಗಳು, ಊಹಾಪೋಹಗಳು ಹರಿದಾಡುತ್ತಿವೆ. ಆ ಸಾಲಿನಲ್ಲೀಗ ನಟ ನಟಿಯರೂ ಸೇರಿದಂತೆ ಒಂದಷ್ಟು ಮಂದಿಯ ಹೆಸರುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಈ ಶೋನ ಮೂಲ ಪರಿಕಲ್ಪನೆ ನಮ್ಮ ದೇಶದ್ದಲ್ಲ. ಆದರೆ, ಅದರ ಮೂಲಕ ಸತ್ವ ಮನುಷ್ಯ ಸಹಜ ಕೌತುಕಗಳನ್ನು ತಣಿಸುವಂತಿದೆ. ಭಿನ್ನ ಬಗೆಯ ಒಂದಷ್ಟು ವ್ಯಕ್ತಿಗಳನ್ನು ತಿಂಗಳುಗಟ್ಟಲೆ ಒಂದೇ ಮನೆಯಲ್ಲಿ ಕೂಡಿಡುವ, ಅದನ್ನು ಮನೋರಂಜನಾತ್ಮಕ ಪಥದಲ್ಲಿ ಕೊಂಡೊಯ್ಯೋ ಸೂತ್ರ ಈ ಶೋನದ್ದು. ಕನ್ನಡದ ಮಟ್ಟಿಗೆ ಹೇಳೋದಾದರೆ, ಆ ಮಾಮೂಲಿ ಶೈಲಿ ಕಾನ್ಸೆಪ್ಟು ಯಾವತ್ತೋ ಬೋರು ಹೊಡೆದಿದೆ. ಪ್ರತೀ ಸೀಜನ್ನಿನಲ್ಲಿಯೂ ಹೊಸತನದ ಪುಂಗಿ ಊದಲಾಗುತ್ತದಾದರೂ ಅವ್ಯಾವುವೂ ಫಲಪ್ರದವಾಗಿಲ್ಲ.
ಈಗ ವಾಹಿನಿಯ ಮುಂದಿರೋದು ಚಿತ್ರವಿಚಿತ್ರ ಆಸಾಮಿಗಳನ್ನು ಮನೆಯೊಳಗೆ ತುಂಬಿಕೊಂಡು, ಅವುಗಳ ಹುಚ್ಚಾಟ, ವಿಕೃತಿಗಳನ್ನೇ ಟಿಆರ್‌ಪಿ ಸರಕಾಗಿಸಿಕೊಳ್ಳೋದು ಮಾತ್ರ. ಈ ಹಿಂದೆ ವಾಹಿನಿಯ ಹೆಡ್ ಆಗಿದ್ದವರು ಬಿಗ್ ಬಾಸನ್ನು ಯಶಸ್ವಿಯಾಗಿಸಲು ಹೀನಾಮಾನ ಶ್ರಮಿಸಿದ್ದರು. ಇದರಿಂದ ಅವರು ಅದೆಷ್ಟು ಸುಸ್ತಾಗಿದ್ದರೆಂದರೆ, ಅದೊಂದು ಸೀಜನ್ನಿನ ಬಿಗ್ ಬಾಸ್ ಶೋ ನಡೆಯುತ್ತಿರುವಾಗಲೇ, ವೃದ್ಧಾಪ್ಯದ ಹೊಸ್ತಿಲಲ್ಲಿದ್ದ ನಟಿಯೊಬ್ಬಳ ಸೊಂಟ ತಬ್ಬಿ ವಿಶಾಂತಿ ತೆಗೆದುಕೊಂಡಿದ್ದರು. ನಂತರ ಲೊಚಲೊಚನೆ ಮುತ್ತಿಟ್ಟು ವಿಶ್ರಾಂತಿ ಪಡೆಯಲು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದೂ ನಡೆದಿತ್ತು. ಬಿಗ್ ಬಾಸ್ ಮನೆಯ ಸುತ್ತಾ ಇಂಥಾ ಅನೇಕ ಮಾನವೀಯ ಮೌಲ್ಯದ ಅಮೂಲ್ಯ ಕಥನಗಳು ಚದುರಿಬಿದ್ದಿರೋ ಅಚ್ಚರಿಗಳೂ ಎದುರಾಗುತ್ತವೆ.
ಇಂಥಾ ಶೋ ಬಗ್ಗೆ ಈ ಹಿಂದಿನಿಂದಲೂ ಅಪಸ್ವರ ಕೇಳಿ ಬರುತ್ತಲೇ ಇತ್ತು. ಅದರಲ್ಲಿ ಸ್ಪರ್ಧಿಗಳಾಗಿದ್ದವರ ಬಗ್ಗೆಯೂ ಆರಂಭದಲ್ಲಿಯೇ ವಿವಾದಗಳೆದ್ದಿದ್ದೂ ಇದೆ. ಆದರೆ, ಅತೀಬುದ್ಧಿವಂತಿಕೆಗೆ ಹೆಸರಾಗಿರುವ ಕಿಚ್ಚಾ ಸುದೀಪ್ ಮಾತಿನ ಮೂಲಕವೇ ಎಲ್ಲವನ್ನೂ ಥಂಡಾ ಹೊಡೆಸುತ್ತಾ ಹನ್ನೊಂದು ಸೀಜನ್ನುಗಳನ್ನು ದಾಟಿಕೊಂಡಿದ್ದಾರೆ. ಇದೀಗ ಹನ್ನೆಡನೇ ಆವೃತ್ತಿ ಶುರುವಾಗಲು ದಿನಗಣನೆ ಶುರುವಾಗಿದೆ. ಈ ಬಾರಿಯಂತೂ ಟಿಆರ್‌ಪಿಯನ್ನು ಸಂಭಾಳಿಸಿಕೊಳ್ಳುವ ಅನಿವಾರ್ಯತೆ ಆಯೋಜಕರಿಗಿದೆ. ಅದಕ್ಕಾಗಿ ಕ್ರಿಯೇಟಿವಿಟಿಯನ್ನು ನೆಚ್ಚಿಕೊಂಡು, ಹೊಸಾ ಕಾನ ಸೆಪ್ಟುಗಳ ಮೂಲಕ ಮೋಡಿ ಮಾಡಿದರೆ ತಕರಾರೇನಿಲ್ಲ. ಆದರೆ, ವಾಹಿನಿಯ ಮಂದಿ ಪಳಗಿಸುತ್ತಿರುವ ಕಂಟೆಸ್ಟೆಂಟುಗಳನ್ನು ನೋಡಿದರೆ, ಈ ಬಾರಿ ಹುಚ್ಚರು, ಅರೆಹುಚ್ಚರು, ಭೂಗತ ಜೀವಿಗಳೆಲ್ಲ ಬಿಗ್ ಬಾಸ್ ಮನೆಸಾಏರಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಇನ್ನೇನು ತಿಂಗಳೊಪ್ಪತ್ತಿನಲ್ಲಿ ಹುಚ್ಚರ ಕಾರ್ಖಾನೆಯ ಕದ ತೆರೆಯುತ್ತದೆ. ಅಸಲೀಯತ್ತೆಂಬುದು ಆ ಮೂಲಕವೇ ಜಾಹೀರಾಗಬೇಕಿದೆ!