ತೆಲುಗು ನಟ ಅಲ್ಲು ಅರ್ಜುನ್ ಪುಷ್ಪಾ ಸರಣಿ ಸಿನಿಮಾಗಳ ಮೂಲಕ ವಿಶ್ವ ಮಟ್ಟದಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾಗಳನ್ನು ಬಾಲಿವುಡ್ಡೇ ಮಂಕಾಗುವಂತೆ ಪ್ರತಿಷ್ಠಾಪಿಸಿದ ಕೀರ್ತಿಯೂ ಅಲ್ಲು ಪಾಲಿಗೆ ದಕ್ಕಿ ಬಿಟ್ಟಿದೆ. ಪುಷ್ಪಾ೨ ನಂತರದಲ್ಲಿ ಅಲ್ಲು ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ? ಪುಷ್ಪಾ ಸರಣಿಯನ್ನ ಮುಂದುವರೆಸುತ್ತಾರಾ? ಹೀಗೆ ಹತ್ತಾರು ಪ್ರಶ್ನೆಗಳು ಮೂಡಿಕೊಂಡಿದ್ದವು. ಇದೀಗ ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ಅಲ್ಲು ಬ್ಯುಸಿಯಾಗಿದ್ದಾರೆ. ಹಾಗಾದರೆ ಪುಷ್ಪಾ ಸರಣಿಯ ಕಥೆ ಸಮಾಪ್ತಿಯಾಯ್ತಾ ಅಂತೊಂದು ಗಾಢ ಕೌತುಕ ಅಲ್ಲು ಅಭಿಮಾನಿಗಳಲ್ಲಿತ್ತು. ಅವರೆಲ್ಲರೂ ಖುಷಿಯಾಗುವಂಥಾ ಸುದ್ದಿಯೊಂದೀಗ ತೆಲುಗು ನಾಡಿನ ತುಂಬೆಲ್ಲ ಹಬ್ಬಿಕೊಂಡಿದೆ!
ಅಲ್ಲು ಅರ್ಜುನ್ ಕೂಡಾ ಸಿನಿಮಾ ಆಯ್ಕೆಯ ವಿಚಾರದಲ್ಲಿ ಇತ್ತೀಚೆಗೆ ನನ್ನ ಯಶ್ರಂತೆ ಚಾಲಾಕಿಯಾಗಿದ್ದಾರೆ. ಪುಷ್ಪ ಗೆಲುವಿನ ನಂತರ ದೊಡ್ಡ ದೊಡ್ಡ ಅವಕಾಶಗಳು ಬಂದರೂ ಕೂಡಾ ಅದೆಲ್ಲವನ್ನು ನಯವಾಗಿಯೇ ಸೈಡಿಗೆ ಸರಿಸುತ್ತಾ ಬಂದಿದ್ದಾರೆ. ಪುಷ್ಪ ಗೆಲುವಿನ ಪ್ರಭೆಯಲ್ಲಿ ಮುಂದುವರೆದ ಭಾಗಕ್ಕಾಗಿ ಒತ್ತಾಯಿಸಿದ್ದೇ ಅಲ್ಲು. ಆ ಮೂಲಕ ರಕ್ತಚಂದನ ದಂಧೆಯ ರುಚಿ ಹತ್ತಿಸಿಕೊಂಡಿದ್ದ ಅಲ್ಲುಗೆ ಪಾರ್ಟ್೨ ಮೂಲಕವೂ ಭಾರೀ ಗೆಲುವೇ ಸಿಕ್ಕಿದೆ. ಪಾರ್ಟ್೨ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಸುಕುಮಾರ್ ಥರ ಥರದಲ್ಲಿ ಅಲ್ಲುವನ್ನು ಕಾಡಿಸಿಬಿಟ್ಟಿದ್ದ. ಸೆಟ್ಟಲ್ಲಿ ಬಂದು ಸ್ಕ್ರಿರ್ಪಟು ಹೊಸೆಯುತ್ತಾ ಕೂರುತ್ತಿದ್ದ ಸುಕುಮಾರನ ಮೇಲೆ ಅಲ್ಲು ಮುನಿಸಿಕೊಂಡಿದ್ದೂ ಇತ್ತು.
ಯಾವಾಗ ಸುಕುಮಾರ್ ತಾನು ನಡೆದದ್ದೇ ದಾರಿ ಎಂಬಂತೆ ವರ್ತಿಸಲಾರಂಭಿಸಿದ್ದರೋ, ಆಗಲೇ ಪಾರ್ಟ್೩ ಆಸೆಯನ್ನು ಅಲ್ಲು ಕೈಬಿಟ್ಟಿದ್ದರೆಂದು ಹೇಳಲಾಗುತ್ತಿದೆ. ಒಂದು ವೇಳೆ ಪುಷ್ಪಾ೨ ಚಿತ್ರವನ್ನು ಸುಕುಮಾರ್ ಸರಾಗವಾಗಿ ಮುಗಿಸಿ ಕೊಟ್ಟಿದ್ದರೆ ಖಂಡಿತವಾಗಿಯೂ ಈಗ ಪುಷ್ಪಾ೩ ಚಿತ್ರೀಕರಣ ನಡೆಯುತ್ತಿತ್ತು. ನಾನೇನು ನಿನ್ನನ್ನು ನಂಬಿಕೊಂಡಿಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶದಿಂದಲೇ ಅಲ್ಲು ಏಕಾಏಕಿ ಅಟ್ಲಿ ನಿರ್ದೇಶನದ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಅದೇನೇ ಮುನಿಸಿದ್ದರೂ ರಕ್ತಚಂದನದ ಆಸೆಯಿಂದ ಅಲ್ಲು ಮೆತ್ತಗಾಗುತ್ತಾನೆಂಬ ಸುಕುಮಾರನ ನಿರೀಕ್ಷೆ ನೆಗೆದು ಬಿದ್ದಿತ್ತು. ತೆಲುಗು ಚಿತ್ರರಂಗದಲ್ಲಿ ಹಬ್ಬಿಕೊಂಡಿರುವ ಸುದ್ದಿಗಳ ಆಧಾರದಲ್ಲಿ ಹೇಳೋದಾದರೆ, ಅಲ್ಲು ನಿರ್ಧಾರದಿಂದ ಸುಕುಮಾರ್ ಕಂಗಾಲಾಗಿದ್ದರು.
ಸುಕುಮಾರ್ ಪುಷ್ಪಾ೩ ಮಾಡೋ ನಿರ್ಧಾರವನ್ನು ಎರಡನೇ ಭಾಗದ ಆರಂಭದಲ್ಲಿಯೇ ಅಲ್ಲು ಬಳಿ ಹೇಳಿಕೊಂಡಿದ್ದರಂತೆ. ಆದರೆ, ಅದಕ್ಕೆ ಬೇಕಾದ ಯಾವ ತಯಾರಿಗಳನ್ನೂ ಮಾಡಿಕೊಂಡಿರಲಿಲ್ಲ. ಇದರಿಂದ ಅಲ್ಲು ಮುನಿಸಿಕೊಳ್ಳುತ್ತಲೇ ಸುಕುಮಾರ್ ಸೋಂಭೇರಿತನ ಬದಿಗಿಟ್ಟು ಆಕ್ಟೀವ್ ಆಗಿದ್ದಾರೆ. ವಾರದ ಹಿಂದಷ್ಟೆ ಅಲ್ಲುವನ್ನು ಖಾಸಗಿಯಾಗಿ ಭೇಟಿಯಾಗಿ ಸಮಾಧಾನಿಸಿದ್ದಾರೆ. ಪಾರ್ಟ್೩ ವಿಚಾರವನ್ನು ಚರ್ಚಿಸಿ, ಆದ ಕೆಲಸ ಕಾರ್ಯಗಳ ವರದಿ ಒಪ್ಪಿಸಿದ್ದಾರೆ. ಕಡೆಗೂ ಮತ್ತೊಮ್ಮೆ ರಕ್ತಚಂದನ ದಂಧೆಯ ಸಾರಥ್ಯ ಸಿಕ್ಕ ಖುಷಿಯಲ್ಲಿ ಅಟ್ಲಿ ಚಿತ್ರೀಕರಣ ಮುಗಿಯುತ್ತಲೇ ಪುಷ್ಪಾ೩ಗೆ ಒಪ್ಪಿಗೆ ಸೂಚಿಸಿದ್ದಾರೆ. ಇದೇ ಖುಷಿಯಲ್ಲಿ ಸುಕುಮಾರ್ ಪುಷ್ಪಾ೩ ಕೆಲಸ ಕಾರ್ಯಕ್ಕೆಂದೇ ಹೈದ್ರಾಬಾದಿನಲ್ಲೊಂದು ಆಫೀಸನ್ನೂ ತೆರೆದಿದ್ದಾರೆ. ಈ ಮೂಲಕ ಪುಷ್ಪಾ ಸರಣಿಯ ಮೂರನೇ ಆವೃತ್ತಿಗೆ ಮತ್ತಷ್ಟು ಓಘ ಬಂದಂತಾಗಿದೆ!
keywords: alluarjun, pushpa3, sukumar

