ಕರಾವಳಿ ಸೀಮೆಯ ಕಥೆ ಎಂದಾಕ್ಷಣವೇ ಥಟ್ಟನೆ ಭೂತ ಕೋಲದ ದೈವೀಕ ಪ್ರಭೆ ಆವರಿಸಿಕೊಳ್ಳುತ್ತೆ. ಅದರ ಮಗ್ಗುಲಲ್ಲೇ ಕಂಬಳ ಕ್ರೀಡೆಯ ಸೊಗಡು ಸುಳಿದಾಡುತ್ತದೆ. ಆದರೆ, ಅದರಾಚೆಗೂ ಕೂಡಾ ಕರಾವಳಿ ತೀರದಲ್ಲಿ, ಅದಕ್ಕೆ ಹೊಂದಿಕೊಂಡಿರೋ ಕಾಡಿನ ಗರ್ಭದಲ್ಲಿ ಮೊಗೆದಷ್ಟೂ ಜಿನುಗುವ ರೋಚಕ ಕಥನಗಳ ಒರತೆಯೊಂದಿದೆ. ಅದು ನಿರ್ದೇಶಕರ ಕ್ರಿಯಾಶೀಲತೆಗೆ ಮಾತ್ರವೇ ದಕ್ಕುವಂಥಾದ್ದು. ಸದ್ಯಕ್ಕೆ ಮ್ಯಾರೇಜ್ ಪಾರ್ಟಿ ಚಿತ್ರದ ನಿರ್ದೇಶಕ ಚಯನ್ ಶೆಟ್ಟಿ ಬೊಗಸೆಯಲ್ಲೂ ಅಂಥಾದ್ದೊಂದು ಅಚ್ಚರಿಯಿರೋದು ಸ್ಪಷ್ಟವಾಗಿದೆ. ಇದೀಗ ಬಿಡುಗಡೆಗೊಂಡಿರೋ ಮ್ಯಾರೇಜ್ ಪಾರ್ಟಿ ಚಿತ್ರದ ಟ್ರೈಲರ್ ಅದನ್ನು ಮತ್ತಷ್ಟು ನಿಚ್ಚಳವಾಗಿಸಿದೆ!
ಈಗಾಗಲೇ ಮ್ಯಾರೇಜ್ ಪಾರ್ಟಿಯ ಎರಡು ಹಾಡುಗಳು ಬಿಡುಗಡೆಗೊಂಡಿವೆ. ಗಲಾಟೆ ಸಾಂಗ್ನಲ್ಲಿ ಒಟ್ಟಾರೆ ಕಥೆಯ ಲವಲವಿಕೆಯ ಛಳುಕು ದಾಟಿಕೊಂಡಿತ್ತು. ಅಂದಗಾತಿಯೇ ಹಾಡಿನ ಮೂಲಕ ನವಿರು ಪ್ರೇಮದ ಪಕಳೆ ಕೇಳುಗರ ಮನಸಿನಲ್ಲಿ ನಯವಾಗಿ ಸರಿದಾಡಿತ್ತು. ಅವೆರಡು ಹಾಡುಗಳ ಗುಂಗು ಹಬೆಯಾಡುತ್ತಿರುವಾಗಲೇ ಟ್ರೈಲರ್ ಬಿಡುಗಡೆಗೊಂಡಿದೆ. ಸಾಮಾನ್ಯವಾಗಿ ಹಾಡುಗಳನ್ನು ಸಿನಿಮಾವೊಂದರ ಆಹ್ವಾನ ಪತ್ರಿಕೆ ಅಂತ ಪರಿಗಣಿಸಲಾಗುತ್ತೆ. ಟ್ರೈಲರ್ಗೆ ಪ್ರೇಕ್ಷಕರನ್ನು ಒಗ್ಗೂಡಿಸಿ ಸಿನಿಮಾ ಮಂದಿರಕ್ಕೆ ಕರೆತರುವ ಚೈತನ್ಯವಿರುತ್ತೆ. ಅಂಥಾ ಟ್ರೈಲರ್ ಅನ್ನು ಪ್ರೇಕ್ಷಕರ ನಿರೀಕ್ಷೆಯ ಮಟ್ಟ ಮುಟ್ಟುವಂತೆ ನಿರ್ದೇಶಕ ಚಯನ್ ಶೆಟ್ಟಿ ರೂಪಿಸಿದ್ದಾರೆ.
ಮ್ಯಾರೇಜ್ ಪಾರ್ಟಿ ಅಂದರೆ, ಮದುವೆಯೊಂದರ ಸಂಭ್ರಮದ ಸುತ್ತಾ ಘಟಿಸುವ ಕಥೆಯೆಂಬ ಕಲ್ಪನೆ ಮೂಡಿಕೊಳ್ಳುತ್ತೆ. ಆದರೆ ಇಲ್ಲಿ ಒಂದು ಮದುವೆ, ಅದರ ಸಂಭ್ರಮ, ಮತ್ತೊಂದು ಸಾವು, ದೆವ್ವದ ಮದುವೆ ಮತ್ತು ಪ್ರೇತ ಬಾಧೆಯ ನಿಗೂಢ ಕಾಡು… ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲ ಅಷ್ಟೂ ಅಂಶಗಳನ್ನು ಹದವಾಗಿ ಬೆರೆಸಿ ಮ್ಯಾರೇಜ್ ಪಾರ್ಟಿಯನ್ನು ರೂಪಿಸಿರುವ ಸ್ಪಷ್ಟವಾದ ಅಂದಾಜೊಂದು ಟ್ರೈಲರ್ ಮೂಲಕ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಬಿಡುಗಡೆಯಾದ ದಿನದೊಪ್ಪತ್ತಿನಲ್ಲಿಯೇ ಮ್ಯಾರೇಜ್ ಪಾರ್ಟಿಯ ಬಗೆಗಿನ ಕುತೂಹಲ ತೀವ್ರಗೊಳ್ಳುತ್ತಿದೆ. ಇದೇ ಡಿಸೆಂಬರ್ ೪ರಂದು ಬಿಡುಗಡೆಯಾಗಲಿರೋ ಮ್ಯಾರೇಜ್ ಪಾರ್ಟಿಗೆ ಸದರಿ ಟ್ರೈಲರ್ ಮತ್ತಷ್ಟು ಬಲ ತುಂಬಿದಂತಿದೆ.
ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ನಿರ್ಮಾಣ ಮಾಡಿರುವ ಮ್ಯಾರೇಜ್ ಪಾರ್ಟಿ ಚಿತ್ರ ದಲ್ಲಿ ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ, ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ವಾಸ್ಟರ್ ಮುಂತಾದವರ ತಾರಾಗಣವಿದೆ. ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ತೆರೆಗಾಣಲಿದೆ.

