ನವಿರು ಭಾವದ ಮೂಲಕ ಎದೆಗಿಳಿಯೋ ಹಾಡುಗಳಿಗಾಗಿ ಸದಾ ತಹತಹಿಸುವ ಅಪ್ಪಟ ಸಂಗೀತಾಸಕ್ತರ ಸಂಖ್ಯೆ ನಮ್ಮಲ್ಲಿ ಹೆಚ್ಚಿನದ್ದಿದೆ. ಈ ಬಗೆಯ ಮಂದಿ ಚೆಂದದ ಸಿನಿಮಾ ಹಾಡುಗಳಿಗಾಗಿ ಕಾತರಿಸಿರುತ್ತಾರೆ. ಅಂಥಾ ಪಡೆಯೀಗ ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಮ್ಯಾರೇಜ್ ಪಾರ್ಟಿಯ ಅಂದಗಾತಿಯೇ ಎಂಬ ಲಿರಿಕಲ್ ಹಾಡು ಕೇಳಿ ಅಕ್ಷರಶಃ ಖುಷಿಗೊಂಡಿದ್ದಾರೆ. ಈ ಹಾಡನ್ನು ಚಿತ್ರತಂಡ ಮೊನ್ನೆಯಷ್ಟೇ ಬಿಡುಗಡೆಗೊಳಿಸಿತ್ತು. ಹಾಗೆ ಹೊರ ಬಂದ ಕ್ಷಣದಿಂದಲೇ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿದ್ದ ಸದರಿ ಹಾಡಿನ ವೀಕ್ಷಣೆಯೀಗ ಮಿಲಿಯನ್ನಿನ ಗಡಿಯತ್ತ ದಾಪುಗಾಲಿಡುತ್ತಿದೆ!
ಈ ಹಿಂದೆ ಅಧಿಪತ್ರ ಎಂಬ ಸಿನಿಮಾದ ಮೂಲಕ ಸದ್ದು ಮಾಡಿದ್ದ ಚಯನ್ ಶೆಟ್ಟಿ ಮ್ಯಾರೇಜ್ ಪಾರ್ಟಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆರಂಭದಿಂದಲೂ ಇದರ ಕಥಾ ಹಂದರದ ಬಗ್ಗೆ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಹಾಗೊಂದು ಕುತೂಹಲ ಹಬೆಯಾಡುತ್ತಿರುವಾಗಲೇ ಮ್ಯಾರೇಜ್ ಪಾರ್ಟಿಯ ಗಲಾಟೆ ಸಾಂಗು ಬಿಡುಗಡೆಗೊಂಡು ಟ್ರೆಂಡ್ ಸೃಷ್ಟಿಸಿತ್ತು. ಅದರ ಬೆನ್ನಲ್ಲಿಯೇ ಅಂದಗಾತಿಯೇ ಎಂಬ ಚೆಂದದ ಹಾಡು ಬಿಡುಗಡೆಗೊಂಡಿದೆ. ದಿನದೊಪ್ಪತ್ತಿನಲ್ಲಿಯೇ ಹೆಚ್ಚೆಚ್ಚು ವೀಕ್ಷಣೆ ಪಡೆದಿದ್ದ ಈ ಹಾಡೀಗ ಈ ವರ್ಷದ ಸೂಪರ್ ಹಿಟ್ ಮೆಲೋಡಿ ಲಿಸ್ಟಿಗೆ ಸೇರಿಕೊಂಡಿದೆ!
ಮೊದಲಾ ಮಳೆಹನಿ ಎದೆಯೊಳಗಡೆ ಇಳಿದು… ಅಂತ ಶುರುವಾಗೋ ಈ ಹಾಡಿನ ಮೂಲಕ ಸಂಗೀತ ನಿರ್ದೇಶಕ ರಿತ್ವಿಕ್ ಮುರಳೀಧನ್ ಎರಡನೇ ಗೆಲುವು ಪಡೆದುಕೊಂಡಿದ್ದಾರೆ. ಕಾಂತಾರಾ ಖ್ಯಾತಿಯ ಗೀತರಚನೆಕಜಾರರಾದ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರೋ ಈ ಹಾಡಿಗೆ ಕಪಿಲ್ ಕಪಿಲನ್ ಮತ್ತು ಸುಮನ್ ನಾರಾಯಣ್ ಧ್ವನಿಯಾಗಿದ್ದಾರೆ. ಗಲಾಟೆ ಸಾಂಗಿನ ಮೂಲಕ ಮೋಜು ಮಸ್ತಿಯ ಕಥನದ ತುಣುಕೊಂದು ಜಾಹೀರಾಗಿದ್ದರೆ, ಈ ಹಾಡಿನ ಮೂಲಕ ಮೊದಲ ಪ್ರೀತಿಯ ಮಧುರಾನುಭೂತಿಯ ಜೊತೆಗೇ ಮ್ಯಾರೇಜ್ ಪಾರ್ಟಿಯೊಳಗಿನ ಪ್ರೇಮ ತೀವ್ರತೆ ಪ್ರೇಕ್ಷಕರ ಮನಸಿಗೆ ತಾಕಿದಂತಾಗಿದೆ.
ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ನಿರ್ಮಾಣ ಮಾಡಿರುವ ಮ್ಯಾರೇಜ್ ಪಾರ್ಟಿ ಚಿತ್ರ ಡಿಸೆಂಬರ್ ೪ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ, ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ವಾಸ್ಟರ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆ.

