ಒಂದು ಸಿನಿನಾದಿಂದ ಮತ್ತೊಂದಕ್ಕೆ ದಾಟಿಕೊಳ್ಳುವಾಗ, ಎಲ್ಲ ಹ್ಯಾಂಗೋವರುಗಳನ್ನೂ ಕಳಚಿಕೊಂಡು ಹೊಸಾ ಪಥಕ್ಕೆ ಹೆಜ್ಜೆಯೂರುವವರು ಮಾತ್ರವೇ ನಿರ್ದೇಶಕರಾಗಿ ನೆಲೆಗೊಳ್ಳಲು ಸಾಧ್ಯ. ಇಂಥಾದ್ದೊಂದು ಸೂಕ್ಷ್ಮವನ್ನು ಮನಗಂಡು ಮೂರು ಸಿನಿಮಾಗಳ ಮೂಲಕ ಗೆಲುವು ಕಂಡಿರುವವರು ನಿರ್ದೇಶಕ ಕುಮಾರ್. ಅವರೀಗ ಅಮರಾವತಿ ಎಂಬ ನೆಲಮೂಲದ ಕಥನದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ. ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿದ್ದ ಈ ಸಿನಿಮಾವೀಗ ಬಿಡುಗಡೆಯ ಹೊಸ್ತಿಲಲ್ಲಿರುವಾಗಲೇ, ದೂರಿಯಮ್ಮ ಎಂಬ ಹಾಡೊಂದರ ಮೂಲಕ ಸದ್ದು ಮಾಡಲಾರಂಭಿಸಿದೆ.
ವಿಶಿಷ್ಟ ಶೈಲಿಯ ಗಾಯಕನಾಗಿ ಹೆಸರಾಗಿರುವ ನವೀನ್ ಸಜ್ಜು ಇತ್ತೀಚಿನ ದಿನಗಳಲ್ಲಿ ಸಂಗೀತ ನಿರ್ದೇಶಕರಾಗಿ, ನಟನಾಗಿಯೂ ಭಿನ್ನ ಪಥಗಳತ್ತ ಹೊರಳಿಕೊಳ್ಳುತ್ತಿದ್ದಾರೆ. ಅಮರಾವತಿ ಚಿತ್ರದಲ್ಲಿ ಅವರೇ ನಾಯಕನಾಗಿ, ಭಿನ್ನವಾದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ನಾಯಕ ನಟನಾಗಿ ಮಾತ್ರವಲ್ಲದೇ ಗೀತರಚನೆಕಾರರಾಗಿ, ಸಂಗೀತ ನಿರ್ದೇಶಕರಾಗಿಯೂ ಈ ಸಿನಿಮಾಕ್ಕೆ ಸಾಥ್ ಕೊಟ್ಟಿದ್ದಾರೆ. ಈಗ ಬಿಡುಗಡೆಗೊಂಡಿರುವ ದೂರಿಯಮ್ಮ ಎಂಬ ಹಾಡಿಗೂ ಖುದ್ದು ನವೀನ್ ಸಜ್ಜು ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಹಳ್ಳಿಗಾಡಿನ ಪ್ರತಿಭೆಯಾಗಿ, ಸೋಶಿಯಲ್ ಮೀಡಿಯಾ ಮೂಲಕ ಪ್ರವರ್ಧಮಾನಕ್ಕೆ ಬಂದಿದ್ದ ಕಿನ್ನರಿ ಜೋಗಿ ಸಿದ್ದಪ್ಪ ಈ ಹಾಡನ್ನು ಹಾಡಿದ್ದಾರೆ. ನವೀನ್ ಸಜ್ಜು ಧ್ವನಿಗೂಡಿಸಿದ್ದಾರೆ.

ಈ ಹಾಡು ಮೂಡಿ ಬಂದಿರೋ ರೀತಿ, ಅದರ ಮೂಲಕ ಸಿಕ್ಕಿರುವ ಒಟ್ಟಾರೆ ಕಥೆಯ ಹೊಳಹು ಅಮರಾವತಿಯತ್ತ ಪ್ರೇಕ್ಷಕರನ್ನು ಸೆಳೆದುಕೊಳ್ಳುವಂತಿದೆ. ಇದರೊಂದಿಗೆ ಕೆಮಿಸ್ಟ್ರಿ ಆಫ್ ಕರಿಯಪ್ಪ, ಕ್ರಿಟಿಕಲ್ ಕೀರ್ತನೆಗಳು, ಲವ್ ಯೂ ಮುದ್ದು ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದ ಕುಮಾರ್, ವಿಶೇಷವಾದ ಕಥೆಯೊಂದಕ್ಕೆ ದೃಶ್ಯ ರೂಪ ನೀಡಿದ್ದಾರೆ. ಕಾಡು ನಾಶವೂ ಸೇರಿದಂತೆ ಗಹನವಾದ ವಿಚಾರಗಳನ್ನೊಳಗೊಂಡಿರುವ, ಕಾಮಿಡಿ ಥ್ರಿಲ್ಲರ್ ಜಾನರಿನ ಈ ಸಿನಿಮಾ, ಕುಟುಂಬ ಸಮೇತರಾಗಿ ನೋಡಿಸಿಕೊಳ್ಳುವ ಗುಣ ಹೊಂದಿದೆಯಂತೆ. ಹಾಡಿನ ಮೂಲಕ ಹಬ್ಬಿಕೊಂಡಿರೋ ಕ್ರೇಜ್ ಅನ್ನು ಗಮನಿಸಿದರೆ, ಅಮರಾವತಿ ಈ ವರ್ಷದ ಕಡೇಯ ಘಟ್ಟವನ್ನು ಸಮ್ಮೋಹಕ ಗೆಲುವಿನಿಂದ ರಂಗೇರಿಸುವ ಲಕ್ಷಣಗಳು ಢಾಳಾಗಿಯೇ ಗೋಚರಿಸುತ್ತಿದೆ.
ಕೇಸರಿ ಫಿಲಂ ಕ್ಯಾಪ್ಚರ್ ಬ್ಯಾನರಿನಡಿಯಲ್ಲಿ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದುವರೆಗೂ ನಿರ್ದೇಶಕರಾಗಿ ಹೆಸರಾಗಿದ್ದ ಕುಮಾರ್, ಅಮರಾವತಿಯ ಮೂಲಕ ನಿರ್ಮಾಣ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದಾರೆ. ನವೀನ್ ಸಜ್ಜು ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ, ಗಿರೀಶ್ ಶಿವಣ್ಣ, ಯಶ್ ಶೆಟ್ಟಿ, ಸಮೀಕ್ಷಾ ರಾಮ್, ಗೌರಿ ಶೈವ, ಸುಮಂತ್, ವಿಶ್ವ ವಿಜೇತ ಮುಂತಾದವರ ತಾರಾಗಣವಿದೆ. ನವೀನ್ ಚಲ್ಲ ಛಾಯಾಗ್ರಹಣ, ವೆಂಕಿ ಯುಡಿವಿ ಮತ್ತು ದೀಪು ಸಿ.ಎಸ್ ಸಂಕಲನ, ಪುರುಷೋತ್ತಮ್ ಕಲಾ ನಿರ್ದೇಶನ, ನವೀನ್ ಸಜ್ಜು ಮತ್ತು ಆಕಾಶ್ ಪರ್ವ ಸಂಗೀತ ನಿರ್ದೇಶನವಿರುವ ಈ ಚಿತ್ರದ ಬಿಡುಗಡೆ ದಿನಾಂಕ ಇಷ್ಟರಲ್ಲಿಯೇ ಘೋಷಣೆಯಾಗಲಿದೆ.

