ನಾಯಕ ನಟನಾಗಿ ಅತ್ಯಂತ ಸೂಕ್ಷ್ಮವಾಗಿ ಕಥೆ, ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಲೇಹಂತ ಹಂತವಾಗಿ ಗೆಲುವು ಕಾಣುತ್ತಿರುವವರು ರಿಷಿ. ಕವಲುದಾರಿ ಮುಂತಾದ ಒಂದಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಿಷಿಯೀಗ ಮತ್ತೊಂದು ಸಿನಿಮಾಕ್ಕಾಗಿ ತಯಾರಿ ಆರಂಭಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡಿರುವ ಕಿಶೋರ್ ಭಾರ್ಗವ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ವಿಶೇಷವೆಂದರೆ, ಸದರಿ ಸಿನಿಮಾ ಮೂಲಕ ಮರಾಠಿ ಚಿತ್ರರಂಗದ ಸ್ಟಾರ್ ನಟ, ಬಾಲಿವುಡ್ ಮಟ್ಟದಲ್ಲಿಯೂ ಹೆಸರಾಗಿರುವ ಉಪೇಂದ್ರ ಲಿಮಾಯೆ ಕನ್ನಡ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ.

ಇಂಥಾದ್ದೊಂದು ಸುದ್ದಿಯ ಮೂಲಕವೇ ರಿಷಿ ನಾಯಕನಾಗಿ ನಟಿಸಲಿರುವ ಈ ಚಿತ್ರವೀಗ ಸದ್ದು ಮಾಡಲಾರಂಭಿಸಿದೆ. ತನ್ನ ಮುಂದಿನ ಹೆಜ್ಜೆಗಾಗಿ ಸುದೀರ್ಘ ಕಾಲಾವಧಿಯಲ್ಲಿ ತಾಲೀಮು ನಡೆಸಿರುವ ರಿಷಿ ಪ್ರತಿಭಾನ್ವಿತ ನಿರ್ದೇಶರು ಮತ್ತು ಅದಕ್ಕೆ ಪೂರಕವಾದ ತಂಡದೊಂದಿಗೆ ಅಖಾಡಕ್ಕಿಳಿದಿದ್ದಾರೆ. ಇದೀಗ ತಾರಾಗಣದ ಆಯ್ಕೆ ಕಾರ್ಯ ಚಾಲ್ತಿಯಲ್ಲಿದೆ. ಒಂದಷ್ಟು ಮುಖ್ಯ ಪಾತ್ರಗಳತ್ತ ಗಮನ ಹರಿಸಿರುವ ಚಿತ್ರತಂಡ ಉಪೇಂದ್ರ ಲಿಮಾಯೆಯನ್ನು ಮುಖ್ಯ ಖಳನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದೆ. ಖುದ್ದು ಲಿಮಾಯೆ ಖುಷಿಯಿಂದ ಇ ಪಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಇದೀಗ ನಾಯಕಿಗಾಗಿ ಹುಡುಕಾಟ ಆರಂಭವಾಗಿದೆ. ಆ ಪಾತ್ರಕ್ಕೊಪ್ಪುವಂಥಾ ನಟಿಗಾಗಿ ಶೋಧ ಕಾರ್ಯ ಚಾಲ್ತಿಯಲ್ಲಿದೆ. ಹೊಸಬರಿಗೆ ಮಣೆ ಹಾಕುತ್ತಾರಾ? ಸ್ಟಾರ್ ನಟಿಯೇ ನಾಯಕಿಯಾಗುತ್ತಾರಾ ಎಂಬ ಪ್ರಶ್ನೆಗೆ ಇಷ್ಟರಲ್ಲಿಯೇ ಉತ್ತರ ಸಿಗಲಿದೆ. ಉಪೇಂದ್ರ ಲಿಮಾಯೆ ಈ ಸಿನಿಮಾದಲ್ಲಿ ನಟಿಸುತ್ತಿರೋದರಿಂದ ಕುತೂಹಲ ಇಮ್ಮಡಿಯಾಗಿದೆ. ಲಿಮಾಯೆ ಮರಾಠಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರೋದಲ್ಲದೇ, ಅನಿಮಲ್, ಪೆಡ್ಡಿಯಂಥಾ ಸಿನಿಮಾಗಳ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿಯೂ ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ.

ಹಂಗೇಸ್ ಸಾಯಿ ವಿಷನ್ಸ್ ಬ್ಯಾನರ್ನಡಿಯಲ್ಲಿ ವಸಂತ್ ಹಂಗೆ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಸಂಭಾಷಣೆ, ಸಾಹಿತ್ಯ ಮತ್ತು ಸಂಕಲನದ ಹೊಣೆಯನ್ನು ಸೋಮಶೇಖರ ವಹಿಸಿಕೊಂಡಿದ್ದಾರೆ. ಅನಂತ ಭಾರದ್ವಾಜ್ ಛಾಯಾಗ್ರಹಣ ಮತ್ತು ಸ್ಕಂದ ಕಶ್ಯಪ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿರಲಿದೆ. ಸದ್ಯದ ಮಟ್ಟಿಗೆ ತಾರಾಗಣದ ಆಯ್ಕೆ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇದೇ ನವೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ಸಿದ್ಧಗೊಂಡಿದೆ. ಈ ಸಿನಿಮಾದವ ಶೀರ್ಷಿಕೆ, ತಾರಾಗಣದ ವಿವರಗಳು ಹಂತ ಹಂತವಾಗಿ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿವೆ.

