ವಿಮಲ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅ ಡೇಟ್ ಚಿತ್ರ ಇಂದು ತೆರೆಗಂಡಿದೆ. ಮೊದಲ ದಿನವೇ ನೋಡುಗರ ಕಡೆಯಿಂದ ಮೂಡಿಕೊಂಡಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು ಚಿತ್ರತಂಡವನ್ನು ಖುಷಿಗೊಳಿಸಿವೆ. ಈ ಖುಷಿ ಕೇವಲ ಚಿತ್ರತಂಡಕ್ಕೆ ಮಾತ್ರವೇ ಸೀಮಿತವಾದುದಲ್ಲ; ಅದು ಸಮಸ್ತ ಕನ್ನಡ ಚಿತ್ರರಂಗದ ಪಾಲಿನ ಸಂಭ್ರಮವೂ ಹೌದು. ಯಾಕೆಂದರೆ, ಇಂಥಾ ಪ್ರಯೋಗಾತ್ಮಕ ಪ್ರಯತ್ನಗಳು ಗೆಲುವು ಕಾಣುತ್ತಾ ಬಂದರೆ ಮಾತ್ರವೇ ಸಿನಿಮಾ ರಂಗದ ಜೀವಂತಿಕೆ ಸಾಧ್ಯವಾಗುತ್ತೆ. ಈ ನಿಟ್ಟಿನಲ್ಲಿ ನೋಡ ಹೋದರೆ, ಪ್ರಚಾರದ ಯಾವ ಪಟ್ಟುಗಳನ್ನೂ ಪ್ರದರ್ಶಿಸದೆ, ಕೇವಲ ಟ್ರೈಲರ್ ಮೂಲಕವೇ ಗಮನ ಸೆಳೆದಿದ್ದ ಈ ಚಿತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರೋ ಪ್ರತಿಕ್ರಿಯೆಗಳು ಆಶಾದಾಯಕವಾಗಿವೆ!
ಅ ಡೇಟ್ ಚಿತ್ರದ ಹಿಂದೆ ನಿರ್ದೇಶಕ ವಿಮಲ್ ರಾಜ್ ಅವರ ಬಹುವರ್ಷಗಳ ಶ್ರಮವಿದೆ, ಕನಸಿದೆ. ನಿಖರವಾಗಿ ಹೇಳಬೇಕೆಂದರೆ, ಇದು ಪುಟ್ಟದಾಗಿ ಕಾಣಿಸೋ ಕ್ಯಾನ್ವಾಸೊಂದರಲ್ಲಿ ಅರಳಿದು ದೊಡ್ಡ ಕಲಾಕೃತಿ. ಈಗಾಗಲೇ ಇದರ ಟ್ರೈಲರ್ ಪ್ರೇಕ್ಷಕರನ್ನು ಮಾತ್ರವಲ್ಲದೇ ಸಿನಿಮಾ ರಂಗದ ಘಟಾನುಘಟಿಗಳನ್ನೂ ಸೆಳೆದಿದೆ. ಹೊಸಬರ ಸಿನಿಮಾಗಳನ್ನು ಸದಾ ಗಮನಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ಈ ಬಗ್ಗೆ ಮಾತಾಡಿದ್ದಾರೆ. ಅ ಡೇಟ್ ಟ್ರೈಲರ್ ಅನ್ನು ಮೆಚ್ಚಿಕೊಂಡು ಮಾತಾಡಿರುವ ಶಿವಣ್ಣ, ಇಂಥಾ ಸಿನಿಮಾಗಳು ಗೆಲ್ಲಬೇಕೆಂದು ಆಶಿಸಿದ್ದಾರೆ. ಶಿವಣ್ಣ ಈ ಬೆಂಗಲವೂ ಕೂಡಾ ಅ ಡೇಟ್ ಚಿತ್ರತಂಡಕ್ಕೆ ಹೊಸಾ ಹುರುಪು ಕೊಟ್ಟಿದೆ. ಅದು ಪ್ರೇಕ್ಷಕರ ಬೆಂಬಲದ ಮೂಲಕ ಮತ್ತಷ್ಟು ತೀವ್ರಗೊಂಡಿದೆ.
ಎಲ್ಲ ಅಂಶಗಳನ್ನೂ ಅತ್ಯಂತ ಸಹಜವಾಗಿ ಕ್ರೋಢೀಕರಿಸಿ, ದೃಶ್ಯಕ್ಕೆ ಒಗ್ಗಿಸುವ ಕುಸುರಿಯ ಮೂಲಕ ನಿರ್ದೇಶಕ ವಿಮಲ್ ರಾಜ್ ಎನ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸುಜನೀತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈ ಕೂಡಾ ಕಥೆಗೆ ತಕ್ಕಂಥಾ ಸಹಜ ನಟನೆಯ ಮೂಲಕ ಮೆಚ್ಚುಗೆ ಗಳಿಸುತ್ತಿದ್ದಾರೆ. ಒಟ್ಟಾರೆಯಾಗಿ, ಒಂದಷ್ಟು ಸವಾಲುಗಳನ್ನು ದಾಟಿಕೊಂಡು ಬಿಡುಗಡೆಗೊಂಡಿರುವ ಅ ಡೇಟ್ ಚಿತ್ರದ ಮುಂದೀಗ ಎಲ್ಲೆಡೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಹೇಳಿಕೇಳಿ, ಕನ್ನಡದ ಪ್ರೇಕ್ಷಕರು ಅಡಿಗಡಿಗೆ ಇಂಥಾ ಸಿನಿಮಾಗಳನ್ನು ಕೈ ಹಿಡಿದು ಗೆಲ್ಲಿಸಿದ್ದಾರೆ. ಮೊದಲ ದಿನದ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಅ ಡೇಟ್ ಈ ವರ್ಷದ ಭಿನ್ನ ಸಿನಿಮಾವಾಗಿ ಛಾಪು ಮೂಡಿಸುವ ಲಕ್ಷಣಗಳಿದ್ದಾವೆ.
keywords: a date movie, vimalraj n, sujanith shetty, ashwini shenoy

