ಬಹುನಿರೀಕ್ಷಿತ ಅ ಡೇಟ್ ಚಿತ್ರ ನಾಳೆ ಅಂದರೆ, ಸೆಪ್ಟೆಂಬರ್ 4ರಂದು ತೆರೆಗಾಣಲಿದೆ. ವಿಮಲ್ ರಾಜ್ ಎನ್ ಚೊಚ್ಚಲ ನಿರ್ದೇಶನದ ಈ ಸಿನಿಮಾ ಮೂಲಕ ಕುಂದಾಪುರ ಮೂಲದ ಸುಜನೀತ್ ಶೆಟ್ಟಿ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಅಣಿಗೊಂಡಿದ್ದಾರೆ. ಒಂದೊಳ್ಳೆ ಕೆಲಸ ಮಾಡುತ್ತಾ, ಅದರ ನಡುವಲ್ಲಿಯೇ ಸಿನಿಮಾ ನಟನಾಗಬೇಕೆಂಬ ಕನಸಿನ ಸಾಕಾರದತ್ತ ಪ್ರಯತ್ನ ಹಾಕಲಾರಂಭಿಸಿದ್ದವರು ಸುಜನಿತ್ ಶೆಟ್ಟಿ. ಒಂದಷ್ಟು ಹಿನ್ನಡೆ, ನಿರಾಸೆಗಳನ್ನು ದಾಟಿಕೊಂಡು, ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿರುವ ಸುಜನಿತ್ ಶೆಟ್ಟಿ ಪಾಲಿಗೆ ಅ ಡೇಟ್ ಚಿತ್ರದ ಮೂಲಕ ನಾಯಕ ನಟನಾಗೋ ಜೀವಮಾನದ ಕನಸು ನನಸಾದಂತಾಗಿದೆ!
ಒಂದಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದ ಸುಜನೀತ್ ಶೆಟ್ಟಿ, ಇತ್ತೀಚೆಗಷ್ಟೇ ವಿವಾದಗಳ ಮೂಲಕ ಸದ್ದು ಮಾಡಿ ಬಿಡುಗಡೆಗೊಂಡಿದ್ದ ಬಾಸ್ ಎಂಬ ಚಿತ್ರದಲ್ಲಿಯೂ ನಟಿಸಿದ್ದರು. ಬಾಸ್ ಚಿತ್ರೀಕರಣದ ಹಂತದಲ್ಲಿಯೇ ಪರಿಚಿತರೊಬ್ಬರ ಮೂಲಕ ಅ ಡೇಟ್ ಚಿತ್ರಕ್ಕಾಗಿ ಆಡಿಷನ್ ನಡೆಯುತ್ತಿರೋ ವಿಚಾರ ಗಮನಕ್ಕೆ ಬಂದಿದ್ದೇ, ಅದರಲ್ಲಿ ಪಾಲ್ಗೊಂಡಿದ್ದರು. ಆಡಿಷನ್ ಕೊಟ್ಟ ಬಳಿಕ ನಿರ್ದೇಶಕ ವಿಮಲ್ ರಾಜ್ ಅವರ ಕಡೆಯಿಂದ ಎರಡ್ಮೂರು ದಿನಗಳಲ್ಲಿ ಹೇಳುತ್ತೇವೆ ಎಂಬಂಥಾ ಉತ್ತರ ಬಂದಿತ್ತು. ಅದಾಗಲೇ ಅಂಥಾ ಒಂದಷ್ಟು ಹಿನ್ನಡೆಗಳನ್ನು ಕಂಡು ಗಟ್ಟಿಯಾಗಿದ್ದ ಸುಜನಿತ್ ಶೆಟ್ಟಿ ನಿರ್ಭಾವುಕರಾಗಿ ಮತ್ತೊಂದು ನಿರಾಸೆಗೆ ಮಾನಸಿಕವಾಗಿ ಸಜ್ಜಾಗಿದ್ದರಂತೆ.
ಆಡಿಷನ್ನು ನಡೆದ ಬಳಿಕ ನೋಡಿ ಹೇಳುತ್ತೇವೆ, ಕೆಲ ದಿನ ಬಿಟ್ಟು ಹೇಳುತ್ತೇವೆ ಎಂಬುದೆಲ್ಲ `ಇಲ್ಲ’ ಎಂಬುದರ ಸೌಮ್ಯ ಪೀಠಿಕೆ ಎಂಬ ವಿಚಾರ ಅದಾಗಲೇ ಸುಜನೀತ್ ಶೆಟ್ಟಿ ಅರಿವಿಗೆ ಬಂದಿತ್ತು. ಇದೂ ಕೂಡಾ ಅದೇ ಸಾಲಿಗೆ ಸೇರಬಹುದಾದ ಅನುಭವ ಅಂದುಕೊಳ್ಳುತ್ತಿರುವಾಗಲೇ, ಅಚ್ಚರಿದಾಯಕವಾಗಿ ಅದೊಂದು ದಿನ ನಿರ್ದೇಶಕ ವಿಮಲ್ ರಾಜ್ ಕಡೆಯಿಂದ ಶುಭ ಸುದ್ದಿ ಬಂದಿತ್ತು. ಹಾಗೆ ಅ ಡೇಟ್ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದ ಸುಜನೀತ್, ಆ ನಂತರ ನಾಯಕನ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ ತೃಪ್ತ ಭಾವ ಹೊಂದಿದ್ದಾರೆ. ಸದರಿ ಪಾತ್ರದ ಮುಲಕವೇ ತಾನು ಬ ಲು ಆಸೆಯಿಂದ ಆರಿಸಿಕೊಂಡಿರುವ ನಟನೆಯ ಹಾದಿ ಸುಗಮವಾಗುತ್ತದೆಂಬ ಗಾಢ ನಿರೀಕ್ಷೆಯೂ ಅವರಲ್ಲಿದೆ.
ಅ ಡೇಟ್ ಚಿತ್ರದಲ್ಲಿ ಪ್ರತಿಯೊಂದರ ಬಗ್ಗೆಯೂ ತೀವ್ರವಾದ ಕುತೂಹಲವನ್ನು ನರನಾಡಿಗಳಿಗೆ ತುಂಬಿಕೊಂಡ ಲವಲವಿಕೆಯ ಪಾತ್ರದಲ್ಲಿ ಸುಜನೀತ್ ಶೆಟ್ಟಿ ನಟಿಸಿದ್ದಾರೆ. ಐಟಿ ಸೆಕ್ಟರಿನಲ್ಲಿ ಕೆಲಸ ಮಾಡುತ್ತಾ, ಟ್ರಾವೆಲಿಂಗ್ ಹುಚ್ಚು ಹತ್ತಿಸಿಕೊಂಡು, ಪ್ರತೀ ಪಲ್ಲಟದ ಬಗ್ಗೆಯೂ ಕುತೂಹಲವಿಟ್ಟುಕೊಂಡಿರುವ ಮಗುವಿನಂಥಾ ಮನಸಿನ ಯುವಕನ ಪಾತ್ರವದು. ತನ್ನ ಸುತ್ತಲಿನ ಎಲ್ಲವನ್ನೂ ಅರಿತುಕೊಳ್ಳುವ ಉಮೇದು ಹೊಂದಿರುವ ಈ ಪಾತ್ರಕ್ಕಾಗಿ ಸುಜನೀತ್ ಸಾಕಷ್ಟು ತಯಾರಿ ನಡೆಸಿದ್ದಾರೆ. ನಿರ್ದೇಶಕರ ಮಾರ್ಗದರ್ಶನದೊಂದಿಗೆ ಮತ್ತಷ್ಟು ಹದಗೊಂಡು, ಒಂದು ಚೆಂದದ ಪಾತ್ರದ ಮೂಲಕ ನಾಯಕ ನಟನಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸಂಭ್ರಮದಲ್ಲಿದ್ದಾರೆ.
ಸುಜನೀತ್ ಪಾಲಿಗೆ ಸಿನಿಮಾ ರೂಪಿಸೋದೆಂದರೆ ಸಿದ್ಧ ಸೂತ್ರಗಳ ಸೆಳವಿಗೆ ಸಿಕ್ಕ ಕಲ್ಪನೆಯಿತ್ತು. ಆದರೆ ಚಿತ್ರೀಕರಣ ಆರಂಭವಾಗಿ ಕೆಲ ದಿನಗಳು ಕಳೆಯುತ್ತಲೇ ಸಿನಿಮಾವೊಂದನ್ನು ಹೀಗೂ ಮಾಡಬಹುದಾ ಎಂಬಂಥಾ ಅಚ್ಚರಿ ಮೂಡಿಕೊಂಡಿತ್ತು. ಅದಕ್ಕೆ ಕಾರಣವಾಗಿದ್ದದ್ದು ನಿರ್ದೇಶಕ ವಿಮಲ್ ರಾಜ್ ಎನ್ ಅವರ ನಿಖರವಾದ ಕಾರ್ಯವೈಖರಿ. ಐದಾರು ಜನರಷ್ಟೇ ಇದ್ದ ಈ ಚಿತ್ರತಂಡದಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಎಲ್ಲರೂ ಹಂಚಿಕೊಂಡು ಮಾಡುತ್ತಾ, ಅಂದುಕೊಂಡಂತೆಯೇ ಸಿನಿಮಾ ಮಾಡಿ ಮುಗಿಸಿದ ತೃಪ್ತಿಗೂ ಸುಜನೀತ್ ಶೆಟ್ಟಿ ಪಾಲುದಾರರಾಗಿದ್ದಾರೆ. ಒಂದು ಸಿನಿಮಾ ಎಂದರೆ ದೊಡ್ಡ ತಂಡ, ದೊಡ್ಡ ಸೆಟ್ಟುಗಳ ಅಗತ್ಯವಿಲ್ಲ; ಕಥೆ ಬೇಡಿದಂತೆ ದೃಶ್ಯಗಳನ್ನು ಸೃಷ್ಟಿದರೆ ಬೆರಗು ಮೂಡಿಸುವಂತೆ ದೃಶ್ಯ ಕಟ್ಟಬಹುದೆಂಬ ವಾಸ್ತವನ್ನು ವಿಮಲ್ ರಾಜ್ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದರಂತೆ. ಪ್ರತೀಯೊಂದರಲ್ಲೂ ಅಚ್ಚುಕಟ್ಟನ್ನು ಕಾಯ್ದುಕೊಂಡು, ಕೆಲ ಪ್ರಮುಖವಾದ ಒಂದೇ ದೃಶ್ಯವನ್ನು ಎರಡು ದಿನಗಳ ಕಾಲ ನಿರಂತರವಾಗಿ ಚಿತ್ರೀಕರಣ ನಡೆಸಿದ ಅನುಭವವೂ ಸುಜನಿತ್ ಪಾಲಿಗೆ ಹೊಸತಾಗಿತ್ತು. ತೀರಾ ತಾಜಾತನದಿಂದ ತುಂಬಿರುವ ಈ ಸಿನಿಮಾ ಖಂಡಿತವಾಗಿಯೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲಿದೆ ಎಂಬ ನಂಬಿಕೆಯೂ ಸುಜನೀತ್ ಶೆಟ್ಟಿಗಿದೆ.
ಮೂಲರ್ತ ಕುಂದಾಪುರದವರಾದರೂ ಸುಜನೀತ್ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಶಾಲಾ ಕಾಲೇಜು ದಿನಗಳಿಂದಲೂ ಓದಿಗಿಂತ ಹೆಚ್ಚಾಗಿ ಸಿನಿಮಾ ಸೆಳೆತ ಹೊಂದಿದ್ದ ಸುಜನೀತ್ ಕಾಲೇಜು ದಿನಗಳಲ್ಲಿಯೇ ಸಿನಿಮಾ ಒಂದಕ್ಕೆ ಆಯ್ಕೆಯಾಗಿದ್ದರು. ಆದರೆ, ಆ ಪ್ರಥಮ ಹೆಜ್ಜೆಯಲ್ಲಿಯೇ ಒಂದಷ್ಟು ಆಘಾತ, ಕಹಿ ಅನುಭವಗಳು ದಕ್ಕಿದ್ದವು. ಈ ನಡುವೆ ಓದು ಮುಗಿಸಿಕೊಂಡು, ಕೆಲಸಕ್ಕೆ ಸೇರಿಕೊಂಡರೂ ವಾರಾಂತ್ಯದಲ್ಲಿ ಸಿನಿಮಾ ಸಂಬಂಧಿತ ಪ್ರಯತ್ನ ಮಾಡುವ ನಿಧಾರಕ್ಕೆ ಸುಜನಿತ್ ಬಂದಿದ್ದರು. ಈ ನಡುವೆ ಒಂದಿಷ್ಟು ನಟನಾ ತರಬೇತಿಯನ್ನೂ ಪಡೆದುಕೊಂಡಿದ್ದರು. ಅದೂ ಸಾಲದೆನ್ನಿಸಿದಾಗ ಒಂದು ವರ್ಷಗಳ ಕಾಲ ರಂಗಭೂಮಿಯಲ್ಲಿಯೂ ಸಕ್ರಿಯವಾಗಿ ಕಲಿಕೆ ನಡೆಸಿದ್ದರು.
ಅದಾದ ನಂತರ ಶಾರ್ಟ್ ಮೂವಿ ಒಂದಕ್ಕೆ ಆಯ್ಕೆಯಾಗಿದ್ದ ಸುಜನೀತ್, ಹೋಪ್, ರವಿಕೆ ಪ್ರಸಂಗ, ಬಾಸ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಈಗಾಗಲೇ ಒಂದು ತಮಿಳು ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಅದೂ ಸೇರಿದಂತೆ ಕನ್ನಡದಲ್ಲೊಂದು ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಆದರೆ, ನಾಯಕ ನಟನಾಗಿ ಅ ಡೇಟ್ ಸುಜನೀತ್ ಶೆಟ್ಟಿ ಪಾಲಿಗೆ ಮಹತ್ವದ ಚಿತ್ರ. ತಾನಿನ್ನೂ ಕಲಿಕೆಯ ಹಾದಿಯಲ್ಲಿರುವ ನಟ ಎಂಬ ವಿಧೇಯತೆ ಹೊಂದಿರುವ ಸುಜನೀತ್ ಶೆಟ್ಟಿ ಮುಂದೀಗ ಆ ಡೇಟ್ ಕಾರಣದಿಂದಲೇ ಒಂದಷ್ಟು ಅವಕಾಶಗಳಿದ್ದಾವೆ. ಮುಂದಿನ ದಿನಗಳಲ್ಲಿ ಅಂಥಾ ಒಂದೊಂದೇ ಸಿನಿಮಾಗಳನ್ನು ಒಪ್ಪಿಕೊಂಡು ನಾಯಕನಾಗಿ ನೆಲೆ ಕಂಡುಕೊಳ್ಳುವ ಕನಸು ಸುಜನೀತ್ ಶೆಟ್ಟಿಗಿದೆ.
keywords: sujanith shetty, a date movie

