ಕಿಚ್ಚಾ ಸುದೀಪ್ ಸಾರಥ್ಯದ ಈ ವರ್ಷದ ಹುಚ್ಚರ ಸಂತೆಗೆ ಚಾಲನೆ ಸಿಗುವ ಕ್ಷಣಗಳು ಹತ್ತಿರಾಗಿವೆ. ಸೀಮೆಗಿಲ್ಲದ ಜಡ್ಜುಗಳು, ಸೋಶಿಯಲ್ ಮೀಡಿಯಾದಲ್ಲಿ ಕೆಕರುಮಕರಾಗಿ ಆಡುವ ಮಂದಿಯನ್ನು ಆಡಿಷನ್ ಹೆಸರಲ್ಲಿ ಗುಡ್ಡೆ ಹಾಕಿಕೊಂಡು ಹೇಸಿಗೆ ಸೃಷ್ಟಿಸುತ್ತಿದ್ದಾರೆ. ಸಾಮಾನ್ಯವಾಗಿ ಮಳೆಗಾಲ ಮುಗಿಯುವ ಹೊತ್ತಿನಲ್ಲಿ ಆರಂಭವಾಗುತ್ತಿದ್ದ ಬಿಗ್ ಬಾಸ್ ಈ ಬಾರಿ ಥೇಟು ಸಾಂಕ್ರಾಮಿಕದಂತೆ ನಡು ಮಳೆಗಾಲದಲ್ಲಿಯೇ ಶುರುವಾಗುವ ಲಕ್ಷಣಗಳಿದ್ದಾವೆ. ಇದೇ ಹೊತ್ತಿನಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಳೇ ದಿಗಿಲು ಹೊಸಾ ರೂಪದಲ್ಲಿ ಬಾಧಿಸಲಾರಂಭಿಸಿದೆ. ಸುದೀಪ್ ವರ್ಷಕ್ಕೊಂದಾದರೂ ಸಿನಿಮಾ ಅಣಿಗೊಳಿಸುತ್ತಾರೆಂಬ ನಿರೀಕ್ಷೆ ಬಿಗ್ಬಾಸ್ ಕೊಚ್ಚೆಯಲ್ಲಿ ಕಳೆದು ಹೋಗಬಹುದೆಂಬುದು ಅಭಿಮಾನಿಗಳ ದಿಗಿಲಿಗೆ ಮೂಲ ಕಾರಣ!
ಈ ವರ್ಷದ ಕಡೇಯ ಭಾಗದಲ್ಲಾದರೂ ಬಿಲ್ಲ ರಂಗ ಬಾಷಾ ಚಿತ್ರ ಬಿಡುಗಡೆಗೊಳ್ಳಲೆಂಬುದು ಬಹುತೇಕ ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಹಾಗೆ ನೋಡಿದರೆ, ಈ ಸಿನಿಮಾ ಘೋಷಣೆಯ ಹಂತದಿಂದಲೇ ಅಡಿಗಡಿಗೆ ಗ್ರಹಣ ಕವುಚಿಕೊಳ್ಳುತ್ತಾ ಬಂದಿತ್ತು. ಪ್ರತಿಭಾನ್ವಿತ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದ ಬಗ್ಗೆ ಸುದ್ದೀಪ್ ಮೇಲಿನ ಅಭಿಮಾನದಾಚೆಗೂ ಒಂದು ನಿರೀಕ್ಷೆ ಮೂಡಿಕೊಂಡಿರೋದು ನಿಜ. ಆದರೆ, ಅದನ್ನೆಲ್ಲ ಪದೇ ಪದೆ ಖುದ್ದು ಕಿಚ್ಚನೇ ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕುತ್ತಾ ಮುಂದುವರೆಯುತ್ತಿದ್ದಾರೆಂಬುದೂ ಅಷ್ಟೇ ನಿಜ. ಹೀಗೆ ಸುದೀಪ್ ಸಿನಿಮಾಗಳತ್ತ ನಿರಾಸಕ್ತಿ ಹೊಂದೋದಕ್ಕೆ ಪ್ರಧಾನ ಕಾರಣ ಬಿಗ್ಬಾಸ್ ಎಂಬ ಬೂಸಾ ಶೋ ಎಂಬ ತಕರಾರು ಬಹುತೇಕ ಕಿಚ್ಚನ ಅಭಿಮಾನಿಗಳಲ್ಲಿದೆ.
ಬಿಲ್ಲ ರಂಗ ಬಾಷಾ ಚಿತ್ರದ ಬಗ್ಗೆ ಚರ್ಚೆ ಶುರುವಾಗಿ ಸಾಕಷ್ಟು ವರ್ಷಗಳೇ ಕಳೆದು ಹೋಗಿವೆ. ಆದರೆ, ಅನೂಪ್ ಭಂಡಾರಿ ಅಚ್ಚರಿದಾಯಕವಾಗಿ ವಿಕ್ರಾಂತ್ ರೋಣ ಚಿತ್ರಕ್ಕೆ ಚಾಲನೆ ಕೊಟ್ಟಿದ್ದರು. ಭಾರೀ ಕ್ರೇಜ್ ಮೂಡಿಸಿದ್ದ ಆ ಚಿತ್ರ ಕೂಡಾ ಹೇಳಿಕೊಳ್ಳುವಂಥಾ ಗೆಲುವು ಕಂಡಿರಲಿಲ್ಲ. ಈ ಹಂತದಲ್ಲಿ ಬಿಲ್ಲ ರಂಗ ಬಾಷಾ ಚಿತ್ರದ ಕಥೆ ಮುಗಿದೇ ಹೋಯ್ತೆಂಬಂಥಾ ವಾತಾವರಣ ನಿರ್ಮಾಣಗೊಂಡಿತ್ತು. ಕಡೆಗೂ ೨೦೨೪ರಲ್ಲಿ ಬಿಲ್ಲ ರಂಗ ಬಾಷಾಗೆ ಅಧಿಕೃತ ಚಾಲನೆ ಸಿಕ್ಕಿತ್ತಾದರೂ, ಕಿಚ್ಚ ಸಾಹೇಬರು ಮ್ಯಾಕ್ಸ್, ಮಾರ್ಕ್ ಅಂತೆಲ್ಲ ಸಾಧಾರಣ ಗೆಲುವುಗಳ ನಶೆಗೆ ವಶವಾಗಿದ್ದರು. ಅದ್ಯಾಕೋ ಬಿಲ್ಲ ರಂಗ ಬಾಷಾ ಮೂಲಕ ಮ್ಯಾಕ್ಸಿಮಮ್ ಗೆಲುವು ಕಾಣ ಬೇಕೆಂಬಂಥಾ ಉತ್ಸಾಹವೇ ಕಿಚ್ಚನೊಳಗೆ ಉಡುಗಿ ಹೋದಂತೆ ಭಾಸವಾಗಲಾರಂಭಿಸಿತ್ತು.
ಈಗ ೨೦೨೬ರ ಮುಕ್ತಾಯದ ಘಟ್ಟದಲ್ಲಿದ್ದೇವೆ. ಆದರೆ, ನಿರ್ದೇಸಕ ಅನೂಪ್ ಭಂಡಾರಿ ಈಗತಾನೇ ದ್ವಾರಕೆಯಲ್ಲಿ ಮತ್ತೊಂದು ಹಂತದ ಚಿತ್ರೀಕರಣ ನಡೆಸಲು ತೆರಳುತ್ತಿರೋದಾಗಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೇನು ಕೆಲವೇ ದಿಕನಗಳಲ್ಲಿ ಬಿಗ್ ಬಾಸ್ ಶೋ ಆರಂಭವಾಗೋದರಿಂದ ಕಿಚ್ಚ ಮೂರು ತಿಂಗಳ ಕಾಲ ಆ ಹ್ಯಾಂಗೋವರಿಗೆ ಜಾರುತ್ತಾರೆ. ಅಲ್ಲಿಗೆ ಬಿಲ್ಲ ರಂಗ ಬಾಷಾ ಕೂಡಾ ಪಂಚವಾರ್ಶಿಕ ಯೋಜನೆಯಂತಾಗೋದರಲ್ಲಿ ಯಾವ ಅನುಮಾನಗಳೂ ಉಳಿದಿಲ್ಲ. ಅಷ್ಟಕ್ಕೂ ಸುದೀಪ್ ಒಂದು ಸದಭಿರುಚಿಯ ಕಾರ್ಯಕ್ರಮಕ್ಕಾಗಿ ಸಿನಿಮಾಗಳನ್ನು ಕಡೆಗಣಿಸಿದ್ದರೆ ಅದಕ್ಕೊಂದು ಮಾಫಿ ಇರುತ್ತಿತ್ತು. ಆದರೆ ಬಿಗ್ ಬಾಸ್ ಎಂಬುದು ಹುಚ್ಚರು, ಅರೆಹುಚ್ಚರನ್ನು ಮೆರೆಸುವಂಥಾ ಅತ್ಯಂತ ಬುರ್ನಾಸು ಕಾರ್ಯಕ್ರಮ. ಇಂಥಾ ಅಭಿರುಚಿಯ ಗಂಧವಿಲ್ಲದ ಶೋಗಾಗಿ ಕಿಚ್ಚ ಯಾಕೆ ಅಭಿಮಾನಿಗಳ ಭಾವನೆಗಳ ಜೊತೆ ಆಟವಾಡುತ್ತಿದ್ದಾರೋಳ ಬಿಗ್ ಬಾಸೇ ಬಲ್ಲ!
keyword: kiccha sudeep, billa ranga baashaa, sandalwood, anup bhandari

