ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡನೊಂದಿಗೆ ಅದ್ದೂರಿ ಮದುವೆ ಸುದ್ದಿಯೀಗ ನಾನಾ ರಂಗು ಮೆತ್ತಿಕೊಂಡು ಹರಿದಾಡುತ್ತಲೇ ಇದೆ. ಇಂಥಾ ಸೆಲೆಬ್ರಿಟಿಗಳು ಮದುವೆ, ಹನಿಮೂನು ಅಂತೆಲ್ಲ ತಿಂಗಳುಗಟ್ಟಲೆ ದಿನ ಕಳೆಯೋದು ಮಾಮೂಲು. ಆದರೆ, ರಶ್ಮಿಕಾ ಮಾತ್ರ ಮೈಗೆ ಹಚ್ಚಿದ ಅರಶಿಣದ ಛಾಯಹೆ ಮಾಸುವ ಮುನ್ನವೇ ತನ್ನ ಬದುಕಿನ ದಿಕ್ಕು ಬದಲಿಸಿದ ವೃತ್ತಿಗೆ ಮರಳಿದ್ದಾಳೆ. ತಾನು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಿಗೆ ತನ್ನ ಕಡೆಯಿಂದ ತೊಂದರೆಯಾಗ ಬಾರದೆಂಬ ಮನಃಸ್ಥಿತಿ ಹಾಗೂ ಎಲ್ಲ ಟೀಕೆಗಳನ್ನು ಮೀರಿಕೊಂಡು ದೊಡ್ಡ ಮಟ್ಟದಲ್ಲಿ ಗೆಲ್ಲಬೇಕೆಂಬ ಛಲದಿಂದಲೇ ರಶ್ಮಿಕಾ ಚಿತ್ರೀಕರಣಕ್ಕಿಳಿದಿದ್ದಾಳೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಹಂಚಿಕೊಂಡಿದ್ದ ಫೋಟೋವೊಂದೀಗ ವೈರಲ್ ಆಗಿದೆ!
ರಶ್ಮಿಕಾ ಮಂದಣ್ಣ ಮದುವೆಗೆ ಮುಂಚೆಯೇ ಒಂದಷ್ಟು ಪ್ಯಾನಿಂಡಿಯಾ ಮಟ್ಟದ ಸಿನಿಮಾಗಳನ್ನು ಒಪ್ಪಿಕೊಂಡಿದ್ದಳು. ರಶ್ಮಿಕಾ ಕೈಲಿರೋ ಅಷ್ಟೂ ಚಿತ್ರಗಳಿಗಿಂತಲೂ ಮೊದಲು ರಣಬಾಲಿ ಚಿತ್ರ ಚಾಲೂ ಆಗುತ್ತದೆ ಎಂಬಂತೆ ಸುದ್ದಿಗಳು ಹಬ್ಬಿಕೊಂಡಿದ್ದವು. ಆದರೆ, ಮದುವೆ ನಂತರದಲ್ಲಿ ರಶ್ಮಿಕಾ ತಿಂಗಳುಗಟ್ಟಲೆ ಚಿತ್ರೀಕರಣದತ್ತ ಮುಖ ಹಾಕೋದು ಡೌಟು ಅಂತಲೇ ಬಹುತೇಕರು ಅಂದುಕೊಂಡಿದ್ದರು. ಅಚ್ಚರಿಯೆಂಬಂತೆ, ರಶ್ಮಿಕಾ ಬಹುಬೇಗನೆ ಚಿತ್ರೀಕರಣದ ಅಖಾಡಕ್ಕಿಳಿದಾಗಿದೆ. ಹಾಗಂತ ಆಕೆ ಶುರುವಿಟ್ಟುಕೊಂಡಿರೋದು ರಣಬಾಲಿ ಚಿತ್ರೀಕರಣವಲ್ಲ; ಮೈಸಾ ಚಿತ್ರದ ಶೂಟಿಂಗ್ ಇದೀಗ ಶುರುವಾಗಿದೆ!
ಮೈಸಾ ರವೀಂದ್ರ ಪುಲ್ಲೆ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರ. ಮರುಭೂಮಿಯ ಪ್ರದೇಶದಲ್ಲಿ ಇದೀಗ ಚಿತ್ರೀಕರಣ ನಡೆಯುತ್ತಿದೆ. ಇದರ ಫೋಟೋವೊಂದನ್ನು ರಶ್ಮಿಕಾ ಹಂಚಿಕೊಂಡಿದ್ದಾಳೆ. ಅದರಲ್ಲಿ ಕಿರಿಕ್ ಹುಡುಗಿ ಕಾಣಿಸಿಕೊಂಡಿರುವ ಗೆಟಪ್ಪು ಕಂಡವರೆಲ್ಲ ಅಕ್ಷರಶಃ ಥ್ರಿಲ್ ಆಗಿದ್ದಾರೆ. ಮೈಸಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಈಗಾಗಲೇ ಜಾಗ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಈ ಹಿಂದೆ ಎಂದೂ ಮಾಡಿರದಂಥಾ ಪಾತ್ರವೊಂದಕ್ಕೆ ಜೀವ ತುಂಬಿರೋದು ಈಗಾಗಲೇ ಸ್ಪಷ್ಟವಾಗಿದೆ. ಹಾಗೆ ನೋಡಿದರೆ, ಸಿನಿಮಾ ಆಯ್ಕೆಗಳ ವಿಚಾರದಲ್ಲಿ ರಶ್ಮಿಕಾ ಭಲೇ ಬುದ್ಧಿವಂತೆ. ಒಂದು ಸಿನಿಮಾ ಒಪ್ಪಿಕೊಂಡ ಮೇಲೆ ಅದಕ್ಕೆ ಸಮರ್ಪಿಸಿಕೊಳ್ಳೋ ಗುಣವೂ ಆಕೆಯಲ್ಲಿದೆ. ಅದಿಲ್ಲದಿದ್ದರೆ, ಮದುವೆ ಸಂಭ್ರಮದ ನಡುವೆಯೂ ಚಿತ್ರೀಕರಣಕ್ಕೆ ಹಾಜರಾಗುತ್ತಿರಲಿಲ್ಲ. ಇಂಥಾ ಹಾರ್ಡ್ವರ್ಕ್ ಇಲ್ಲದೆ ಒಂಬತ್ತು ವರ್ಷಗಳಲ್ಲಿ ಈ ಪರಿಯ ಗೆಲುವು ದಕ್ಕಲೂ ಸಾಧ್ಯವಿರುತ್ತಿರಲಿಲ್ಲ!
keywords: mysaa movie, rashmika mandanna, bollywood

