ಬಾಲಿವುಡ್ ನಟಿಯಾಗಿ, ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಒಂದಷ್ಟು ಪ್ರಸಿದ್ಧಿ ಪಡೆದಿದ್ದಾಕೆ ಕಂಗನಾ ರಾಣೌತ್. ಒಂದಷ್ಟು ವರ್ಷಗಳ ಕಾಲ ಸಾಧಾರಣವೆಂಬಂಥಾ ಗೆಲುವುಗಳ ಮೂಲಕ ಚಾಲ್ತಿಯಲ್ಲಿದ್ದ ಈಕೆ, ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸೋಲು ಕಂಡಿದ್ದರು. ಇಂಥಾ ಹಿನ್ನಡೆಯಾಚೆಗೂ ಕಂಗನಾ ಚಾಲ್ತಿಯಲ್ಲಿದ್ದದ್ದು ಆಳುವ ಕೇಂದ್ರ ಸರ್ಕಾರದ ಪರವಾಗಿ ವಕಾಲತ್ತು ವಹಿಸುವ ಮೂಲಕ. ಈ ಮೂಲಕ ಒಂದಷ್ಟು ಪರ ವಿರೋಧಗಳ ಮೂಲಕ ಚಾಲ್ತಿಯಲ್ಲಿದ್ದ ಕಂಗನಾ ಈಗ ಸಂಸದೆಯಾಗಿದ್ದಾರೆ. ಇನ್ನೇನು ಪೂರ್ಣ ಪ್ರಮಾಣದಲ್ಲಿ ರಾಜಕಾರಣಕ್ಕಿಳಿದಿರೋ ಈಕೆಯ ವೃತ್ತಿ ಬದುಕಿನ ಕಥೆ ಮುಕ್ತಾಯವಾಯ್ತೆಂಬಷ್ಟರಲ್ಲಿಯೇ ಮತ್ತೆ ನಟಿಯಾಗಿ ಅಖಾಡಡಕ್ಕಿಳಿದಿದ್ದಾರೆ.
2008ರಲ್ಲಿ ಮುಂಬೈ ಮೇಲೆ ಭಯಾನಕ ಭಯೋತ್ಪಾದನಾ ದಾಳಿಯಾಗಿತ್ತು. ರಕ್ಕಸ ಭಯೋತ್ಪಾದಕರು ನಿರ್ದಾಕ್ಷಿಣ್ಯವಾಗಿ ಅದೆಷ್ಟೋ ಮಂದಿಯನ್ನು ಕೊಂದು ಕೆಡವಿದ್ದರು. ಈ ಸತ್ಯ ಘಟನೆಯನ್ನು ಆಧರಿಸಿ ಸಿನಿಮಾ ಒಂದು ತಯಾರಾಗಲಿದೆ. ಇದರ ಬಹುಮುಖ್ಯ ಪಾತ್ರದಲ್ಲಿ ನಟಿಸಲು ಕಂಗನಾ ರಾಣೌತ್ ಮುಂದಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಈ ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕರು ಹೊಟೇಲ್ ಸೇರಿದಂತೆ ಅನೇಕ ಜನನಿಬಿಢ ಪ್ರದೇಶಗಳಲ್ಲಿ ದಾಳಿ ನಡೆಸಿ ಜನರನ್ನು ಕೊಂದಿದ್ದರು. ನಾನಾ ಕಾಯಿಲೆ, ಸಂಕಟದಿಂದ ನರಳುತ್ತಿರುವ ರೋಗಿಗಳೇ ತುಂಬಿದ್ದ ಆಸ್ಪತ್ರೆಯೊಂದಕ್ಕೂ ದಾಳಿ ನಡೆಸಿದ್ದರು.
ನರಳುವವರನ್ನು ಮತ್ತಷ್ಟು ಚಿತ್ರ ಹಿಂಸೆ ಕೊಟ್ಟು ಸಾಯಿಸಿದ್ದ ಈ ಘಟನೆಯ ಸುತ್ತ ಸದರಿ ಕಥೆ ಹಬ್ಬಿಕೊಂಡಿದೆಯಂತೆ. ವಿಶೇಷವೆಂದರೆ, ಇದರಲ್ಲಿ ಕಂಗನಾ ನರ್ಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಭಾರತ ಭಾಗ್ಯ ವಿಧಾತ ಎಂಬ ಶೀರ್ಷಿಕೆ ಕೂಡಾ ನಿಗಧಿಯಾಗಿದೆ. ಇದು ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆಯಂತೆ. ಇನ್ನೇನು ಚಿತ್ರೀಕರಣ ಚಾಲೂ ಆಗಲಿದೆ. ಈ ಮೂಲಕವಾದರೂ ಪುಷ್ಕಳ ಗೆಲುವು ಸಿಕ್ಕೀತೆಂಬ ನಿರೀಕ್ಷೆ ಕಂಗನಾಗಿದ್ದಂತಿದೆ. ಯಾಕೆಂದರೆ, ತಲೈವಿ, ಎಮರ್ಜೆನ್ಸಿ ಮುಂತಾದ ಸಿನಿಮಾಗಳ ಮೂಲಕ ಕಂಗನಾ ಹೀನಾಯ ಸೋಲುಗಳನ್ನು ಕಂಡಿದ್ದಾರೆ. ಈ ಬಾರಿ ಸಂಸದೆಯೂ ಆಗಿರೋದರಿಂದ ಗೆಲ್ಲಲೇ ಬೇಕಾದ ಅನಿವಾರ್ಯತೆ ಕಂಗನಾ ಮುಂದಿದೆ!
keywords: kangana ranaut, kangana, bollywood, kangana ranaut upcoming movie updates

