ದರ್ಶನ್ ಅಭಿನಯದ ಡೆವಿಲ್ ಸಿನಿಮಾ ತೆರೆಗಾಣಲು ದಿನಗಣನೆ ಶುರುವಾಗಿದೆ. ಈ ಕಡೇಗ ಕ್ಷಣಗಳಲ್ಲಿ ಅತ್ತ ದರ್ಶನ್ ಪರಪ್ಪನ ಅಗ್ರಹಾರದ ಇರಿಕ್ಕು ಕೋಣೆಯೊಳಗೆ ಮತ್ತೆ ಕಿರಿಕ್ಕು ಮಾಡಿಕೊಂಡಿರುವ ರೂಮರೊಂದು ಹಬ್ಬಿಕೊಂಡಿದೆ. ಬದುಕು ಅದೆಷ್ಟೇ ಪಾಠ ಕಲಿಸಿದರೂ ಕೂಡಾ ದರ್ಶನ್ ಎಂಬೋ ಆಸಾಮಿ ಅವಿಧೇಯ ವಿದ್ಯಾರ್ಥಿ ಅನ್ನೋದು ಯಾವತ್ತೋ ಸಾಬೀತಾಗಿದೆ. ಈಗ ಆತನಿರುವ ಸ್ಥಿತಿ ಕಂಡು ಮರುಕ ಹುಟ್ಟಿದರೂ ಕೂಡಾ, ಅದರಿಂದ ಒಂದು ವೇಳೆ ಮುಕ್ತನಾದರೆ ದರ್ಶನ್ ಬದಲಾಗುವುದಿಲ್ಲ. ಮತ್ತದೇ ಠೇಂಕಾರದೊಂದಿಗೆ ಮೆರೆಯುತ್ತಾನೆಂಬುದು ಎಲ್ಲರಿಗೂ ಅರ್ಥವಾಗಿದೆ. ದಾಸನ ರಂಖಲುಗಳು ಜೈಲೊಳಗೂ ಪಸರಿಸಿಕೊಂಡಿರುವ ಈ ಹೊತ್ತಿನಲ್ಲಿ ಡೆವಿಲ್ ಎಲ್ಲ ರೆಕಾರ್ಡುಗಳನ್ನೂ ಉಡೀಸ್ ಮಾಡುತ್ತೆ ಅಂತೆಲ್ಲ ದಾಸನ ಅಭಿಮಾನಿ ಬಳಗ ಅಂಡು ಬಡಿದುಕೊಂಡು ಚೀರಾಡುತ್ತಿದೆ!
ಈ ಕ್ಷಣಕ್ಕೆ ಡೆವಿಲ್ ಟ್ರೈಲರ್ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರೋದು ನಿಜ. ಟ್ರೆಂಡಿಗ್ ವಿಚಾರದಲ್ಲಿಯೂ ಡೆವಿಲ್ ಮುಂಚೂಣಿಯಲ್ಲಿದೆ ಅನ್ನೋದರಲ್ಲಿಯೂ ಅನುಮಾನಗಳಿಲ್ಲ. ನಿರ್ದೇಶಕ ಮಿಲನಾ ಪ್ರಕಾಶ್ ಅತ್ಯಂತ ನಾಜೂಕಿನಿಂದಲೇ ಈ ಟ್ರೈಲರ್ ಅನ್ನು ರೂಪಿಸಿದ್ದಾರೆ. ಒಟ್ಟಾರೆ ಕಥನದ ಬಗ್ಗೆ ನಿಖರವಾದ ಸುಳಿವು ಬಿಟ್ಟು ಕೊಡದಂತೆ ಸದರಿ ಟ್ರೈಲರ್ ಅನ್ನು ಕಟ್ಟಿ ಕೊಡಲಾಗಿದೆ. ಅದು ಈ ಕ್ಷಣಕ್ಕೆ ನಿರ್ದೇಶಕರ ಜಾಣ್ಮೆಯಂತೆ ಕಾಣಿಸುತ್ತಿದೆ. ಆದರೆ, ದರ್ಶನ್ ಬಳಗದ ಹೊರತಾಗಿ ಎಲ್ಲ ಸಿನಿಮಾಗಳನ್ನೂ ನೋಡಿ ಪ್ರೋತ್ಸಾಹಿಸೋ ಅಪ್ಪಟ ಸಿನಿಮಾ ಪ್ರೇಮಿಗಳ ಬಳಗವಿದೆಯಲ್ಲಾ? ಆ ವಲಯದಲ್ಲಿ ಡೆವಿಲ್ ಟ್ರೈಲರ್ ಬಗ್ಗೆ ಎಂಥಾ ಚರ್ಚೆಗಳು ನಡೆಯುತ್ತಿವೆ? ಅಲ್ಲಿ ಸಹಜವಾಗಿ ಕುತೂಹಲ ಮೂಡಿಕೊಂಡಿದೆಯಾ? ಇಂಥಾ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲೋದು ಮಿಶ್ರ ವಾತಾವರಣ!
ಡೆವಿಲ್ ಬಗ್ಗೆ ಆರಂಭದಿಂದಲೂ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆಗಳಿದ್ದವು. ಕಾಟೇರದಂಥಾ ದೊಡ್ಡ ಯಶದ ನಂತರ ಫಾರ್ಮಿಗೆ ಮರಳಿದಂತಿದ್ದ ದರ್ಶನ್ ಮಿಲನಾ ಪ್ರಕಾಶ್ ಜೊತೆ ಸೇರಿದ ಸುದ್ದಿ ಬಂದಾಕ್ಷಣವೇ ಕುತೂಹಲ ಮೂಡಿಕೊಂಡಿತ್ತು. ನಂತರ ಹೊರ ಬಂದ ಫಸ್ಟ್ ಲುಕ್ ನೋಡಿಯೇ ಅಭಿಮಾನದಾಚೆಗೂ ಸಂಚಲನ ಸೃಷ್ಟಿಯಾಗಿತ್ತು. ಆ ಬಳಿಕ ದರ್ಶನ್ ಮಣ್ಣು ತಿನ್ನೋ ಕೆಲಸ ಮಾಡಿ ಜೈಲು ಪಾಲಾದ ನಂತರವೂ ಡೆವಿಲ್ ಹವಾ ತಗ್ಗಿರಲಿಲ್ಲ. ಹಾಗೆ ದಾಸ ಜೈಲುಪಾಲಾಗುತ್ತಲೇ ಆತನ ಅಭಿಮಾನಿ ಬಳಗದಲ್ಲಿ ಡೆವಿಲ್ ಮೂಲಕ ಸಾರಥಿ ಇತಿಹಾಸ ಮತ್ತೊಮ್ಮೆ ಸೃಷ್ಟಿಯಾಗುವ ಭ್ರಮೆ ಕವುಚಿಕೊಂಡಿತ್ತು. ಆ ನಂತರದಲ್ಲಿ ದಿನೇ ದಿನೆ ದರ್ಶನ್ ಕೊರಳಿಗೆ ಕಾನೂನಿನ ಉರುಳು ಬಿಗಿಯಾಗುತ್ತಲೇ ಬರುತ್ತಿದೆ. ಈ ಹಂತದಲ್ಲಿ ಡೆವಿಲ್ ಬಿಡುಗಡೆ ದಿನಾಂಕ ಘೋಷಣೆಯಾಗಿ ಟ್ರೈಲರ್ ಕೂಡಾ ಧೂಳೆಬ್ಬಿಸುತ್ತಿದೆ.
Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!
ಆದರೆ, ಡೆವಿಲ್ ಟ್ರೈಲರಿನಲ್ಲಿ ನಿರೀಕ್ಷೆಗೆ ತಕ್ಕಂಥಾ ದೃಷ್ಯಗಳ ಸುಳಿವಿಲ್ಲ. ದರ್ಶನ್ ಗೆಟಪ್ಪು ಬದಲಾದರೂ ಕೂಡಾ ದೃಷ್ಯಗಳಲ್ಲಿ ಮತ್ತೇನೋ ಹೊಸತನ ಇದ್ದಿರಬಹುದೆಂಬ ನಿರೀಕ್ಷೆ ಮೂಡಿಸುವ ಸಮ್ಮೋಹಕ ಗುಣಗಳೂ ಕಾಣಿಸುತ್ತಿಲ್ಲ. ಡೆವಿಲ್ ಚಿತ್ರೀಕರಣದ ಹೊತ್ತಿಗೆಲ್ಲ ಸುಬ್ಬಿಯ ಪ್ರೀತಿಯ ಸುಬ್ಬನ ಮೋರೆ ಬಾತುಕೊಂಡಿತ್ತು. ಡೆವಿಲ್ ಬಹುಭಾಗ ಅಂಥಾ ಬಾತುಮೋರೆಯಿಂದಲೇ ತುಂಬಿಕೊಂಡಿರೋದರಲ್ಲಿ ಯಾವ ಸಂದೇಹವೂ ಇಲ್ಲ. ಇಂಥಾ ಸ್ಥಿತಿಯಲ್ಲಿ ನಿರ್ದೇಶಕ ಮಿಲನಾ ಪ್ರಕಾಶ್ ಕೂಡಾ ಚಿತ್ರೀಕರಣದ ಹಂತದಲ್ಲಿ ಸಹಜವಾಗಿಯೇ ಒತ್ತಡ ಅನುಭಿಸುವಂತಾಗಿರಬಹುದು. ಈ ಎಲ್ಲ ಬಗೆಯಲ್ಲಿ ನಿಂತು ದಿಟ್ಟಿಸಿದರೆ, ಟ್ರೈಲರ್ ಮೂಡಿ ಬಂದಿರೋ ರೀತಿ ಗಮನಿಸಿದರೆ ಡೆವಿಲ್ ಮತ್ತೊಂದು ಮಟ್ಟದಲ್ಲಿ ಮೂಡಿ ಬರುತ್ತದೆಂಬ ನಿರೀಕ್ಷೆ ಹುಸಿಯಾಗೋ ಸಂದರ್ಭವೇ ಹೆಚ್ಚಾಗಿರುವಂತಿದೆ. ಡೆವಿಲ್ ಅಸಲೀ ಸ್ವರೂಪ ಇನ್ನೇನು ದಿನದೊಪ್ಪತ್ತಿನಲ್ಲಿಯೇ ಜಾಹೀರಾಗಲಿದೆ!
keywords: challenging star, darshan, dboss, devil movie, devil craze, milana prakash, rachana rai

