ಈ ಸಿನಿಮಾ ನಟ ನಟಿಯರ ಶೋಕಿಗಳನ್ನು ಒಂದೇ ಸಲಕ್ಕೆ ಹೇಳಿ ಮುಗಿಸುವುದು ಕಷ್ಟವಿದೆ. ಅದರಲ್ಲಿಯೂ ಒಂದು ಕಾಲದಲ್ಲಿ ಪ್ರಭಾವ ಬಳಸಿ ದಟ್ಟ ಕಾಡುಗಳಿಗೆ ನುಗ್ಗಿ ಕುರಿ, ಜಿಂಕೆಯಂಥವುಗಳನ್ನು ಬೇಟೆಯಾಡೋ ಕ್ರೇಜ್ ಕೂಡಾ ಅನೇಕರಿಗಿತ್ತು. ಸಲ್ಮಾನ್ ಖಾನ್ ಥರದವರು ಕೃಷ್ಣಮೃಗ ಬೇಟೆಯಾಡುವ ಮೂಲಕ ಕಾನೂನು ಕ್ರಮ ಎದುರಿಸುವಂಥಾದದ್ದು ಮತ್ತು ಈಗಲೂ ಬಿಷ್ಣೋಯ್ ಗ್ಯಾಂಗಿನ ಗುರಿಯಾಗಿರೋದೆಲ್ಲ ಹಳೇ ವಿಚಾರ. ಇದೇ ರೀತಿ ಜಿಂಕೆ ಕೊಂಬು, ಹುಲಿ ಉಗುರು ಮತ್ತು ಆನೆ ದಂತಗಳನ್ನು ಮನೆಯಲ್ಲಿ ಶೇಖರಿಸಿಟ್ಟುಕೊಳ್ಳುವ ಖಯಾಲಿಯೂ ಜೋರಾಗಿತ್ತು. ಇದೇ ಖಯಾಲಿಯ ದೆಸೆಯಿಂದ ಮಲೆಯಾಳಂನ ಪ್ರಸಿದ್ಧ ನಟ ಮೋಹನ್ ಲಾಲ್ ಮೇಲೆ ಅರಣ್ಯ ಇಲಾಖೆ ಕಾನೂನು ಸಮರವನ್ನು ಚಾಲ್ತಿಯಲ್ಲಿಟ್ಟಿತ್ತು.

ಇದು ೨೦೧೧ರಲ್ಲಿ ಹೊರಬಂದಿದ್ದ ಪ್ರಕರಣ. ಆ ವರ್ಷ ಎರ್ನಾಕುಲಂನಲ್ಲಿರುವ ಮೋಹನ್ ಲಾಲ್ ಮನೆಗೆ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಹಂತದಲ್ಲಿ ಮೋಹನ್ ಲಾಲ್ ಪ್ರಭಾವ ಬಳಸಿಕೊಂಡು ಆನೆ ದಂತಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಆದರೆ ಯಾವ ಮುಲಾಜಿಗೂ ಬೀಳದ ಅರಣ್ಯಾಧಿಕಾರಿಗಳು ಪರವಾನಗಿ ಇಲ್ಲದ ಆನೆ ದಂತಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಆ ಕ್ಷಣದಲ್ಲಿ ಅದು ಅಕ್ರಮವೆಂಬುದನ್ನು ಒಪ್ಪಿಕೊಳ್ಳಲು ತಯಾರಿರದಂಥಾ ಮೋಹನ್ ಲಾಲ್ ಸರ್ಕಾರದ ಆಯಕಟ್ಟಿನ ಮಂತ್ರಿಗಳಿಗೆ ಫೋನಾಯಿಸಿ ತನ್ನ ದಂತಗಳನ್ನು ವಾಪಾಸು ಕೊಡುವಂತೆ ಬೇಲಾಡಿದ್ದೂ ನಡೆದಿತ್ತು.

ಹೇಳಿಕೇಳಿ ಕೇರಳದಲ್ಲಿ ಸ್ಥಿತಿವಂತರಿಗೆಲ್ಲ ಇಂಥಾ ಖಯಾಲಿ ಇತ್ತು. ಯಾವಾಗ ಮೋಹನ್ ಲಾಲ್ ಬಳಿಯಿದ್ದ ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಯ್ತೋ, ತಮ್ಮ ಬುಡಕ್ಕೂ ಕಾನೂನಿನ ಲಾಠಿ ಬೀಸಲಿದೆ ಎಂದರಿತ ಕೇರಳದ ಶ್ರೀಮಂತರ ಕೂಟ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಿತ್ತು. ಕಡೆಗೂ ಅದಕ್ಕೆ ಮಣಿದ ಕೇರಳ ಸರ್ಕಾರ ಅರಣ್ಯ ಕಾನೂನಿಗೇ ತಿದ್ದುಪಡಿ ತಂದು ೨೦೧೫ರಲ್ಲಿ ಮೋಹನ್ ಲಾಲ್ ಮೇಲಿದ್ದ ಪ್ರಕರಣ ಗಳನ್ನೆಲ್ಲ ರದ್ದುಗೊಳಿಸಿದ್ದಲ್ಲದೇ, ಆತನಿಂದ ವಶಪಡಿಸಿಕೊಂಡಿದ್ದ ಆನೆ ದಂತಗಳನ್ನೆಲ್ಲ ವಾಪಾಸು ಕೊಟ್ಟಿತ್ತು. ಈ ಪ್ರಕರಣಕ್ಕೆಡ ನಾನಾ ರೀತಿಯಲ್ಲಿ ಮರುಜೀವ ಬಂದು ಪರಿಸರಾಸ್ಕ್ತರು ಅರಣ್ಯ ಇಲಾಖೆ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯ ಪೀಠ ಮೋಹನ್ ಲಾಲ್ ಬಳಿಯಿರೋ ಆನೆ ದಂತಗಳನ್ನು ವಶಪಡಿಸಿಕೊಳ್ಳುವಂತೆ ಆದೇಶ ಕೊಟ್ಟಿದೆ.
