ಬಿಗ್ ಬಾಸ್ ಸೀಸನ್12ಕ್ಕೆ (biggboss season12) ವಿದ್ಯುಕ್ತ ಚಾಲನೆ ಸಿಕ್ಕಿದೆ. ಕಳೆದ ವರ್ಷದ ಜಾತ್ರೆ ಮುಗಿಸಿದ ಕಿಚ್ಚ ತಣ್ಣಗೆ ನಯವಾಗೊಂದು ದಾಳ ಉರುಳಿಸಿದ್ದರು. ಕಳೆದ ಸೀಜನ್ನಿನ ಕಡೇಯ ಭಾಗದ ಹೊತ್ತಿಗೆಲ್ಲ ಬಿಗ್ ಬಾಸ್ ಅನ್ನೋದು ಪಕ್ಕಾ ಬಿಗ್ ಬೂಸಾ ಶೋ ಅನ್ನೋ ವಿಚಾರ ಪ್ರೇಕ್ಷಕರಿಗೂ ಮನದಟ್ಟಾಗಿತ್ತು. ಇದು (kiccha sudeepa) ಸುದೀಪನಂಥಾ ನಟರಿಗೆ ಶೋಭೆ ತರುವ ಕಾರ್ಯಕ್ರಮವಲ್ಲ ಎಂಬಂಥಾ ಅಭಿಪ್ರಾಯ ಸೋಶಿಯಲ್ ಮೀಡಿಯಾ ತುಂಬೆಲ್ಲ ಹರಿದಾಡಲಾರಂಭಿಸಿತ್ತು. ತಕ್ಷಣವೇ ಮುಂದಿನ ಸೀಜನ್ನಿನಿಂದ ತಾನು ಈ ಶೋ ಹೋಸ್ಟ್ ಮಾಡಲ್ಲ ಅನ್ನುವ ಮೂಲಕ ಕಿಚ್ಚ ಡ್ಯಾಮೇಜ್ ಕಂಟ್ರೋಲಿನ ಪಟ್ಟು ಪ್ರದರ್ಶಿಸಿದ್ದರು. ಕಿಚ್ಚನ ನಾಜೂಕು ನಡೆಯ ಅರಿವಿರುವವರಿಗೆಲ್ಲ, ಈ ನಿರ್ಧಾರದ ವ್ಯಾಲಿಡಿಟಿಯ ಅಂದಾಜು ಸಿಕ್ಕಿ ಹೋಗಿತ್ತು. ಕಡೆಗೂ ಕಾಗೆ ಕಥೆ ಹೇಳುತ್ತಾ, ಭಾರೀ ಬದಲಾವಣೆಯ ಆಕಾಶ ತೋರಿಸುತ್ತಾ ಈ ಶೋ ಆರಂಭವಾಗಿದೆ. ಸದ್ಯದ ಮಟ್ಟಿಗೆ ಬಿಗ್ ಬಾಸ್ ಮನೆಯ ಒಳಾಂಗಣ ವಿನ್ಯಾಸ ಮತ್ತು ಕಿಚ್ಚನ ಕೆದರುಜುಟ್ಟಿನ ಹೊರತಾಗಿ ಗಹನವಾದ ಬದಲಾವಣೆಗಳ್ಯಾವುವೂ ಕಾಣಿಸಿಲ್ಲ!
ಈ ಬಾರಿಯ ಕಂಟೆಸ್ಟೆಂಟುಗಳ ಮಟ್ಟಿಗೆ ಹೇಳೋದಾದರೆ ಸಂಪೂರ್ಣ ಹುಚ್ಚರ ಸಂಖ್ಯೆ ಕಡಿಮೆಯಿದೆ. ಸೋಶಿಯಲ್ ಮೀಡಿಯಾ ಮೂಲಕ ಅಪದ್ಧ ಒದರಾಟ ನಡೆಸುವವರು, ಅದ್ಯಾವುದೋ ಯಕ್ಕಾಚಿಕ್ಕಿ ಕಾಪಿ ಮ್ಯೂಸಿಕ್ಕಿಗೆ ಗಂಟಲು ಹರಿಯುವಂತೆ, ಕಿವಿಯ ತಮಟೆ ಕಿತ್ತೆದ್ದು ಹೋಗುವಂತೆ ಅರಚಾಡುವವರು, ಅವನ್ಯಾವನೋ ಕೋಟಿ ಕಥೆ ಕಟ್ಟುವ ನಾಯಿ ಸತೀಶ, ನಟನೆಯ ಗಂಧ ಗಾಳಿಯೂ ಗೊತ್ತಿಲ್ಲದ ಕಿರುತೆರೆ ಸ್ಟಾರ್… ಬಿಗ್ ಬಾಸ್ ಮನೆಯೊಳಗೆ ಇಂಥಾ ಸರಕುಗಳದ್ದೇ ಮೇಲುಗೈ. ಕನ್ನಡದ ಸೂಪರ್ ಸ್ಟಾರ್ ಕಿಚ್ಚಾ ಸುದೀಪನ ಪಾಲಿಗೆ ಇಕನ್ನು ಮೂರು ತಿಂಗಳು ಇಂಥಾ ವಿಚಿತ್ರ ಪ್ರಾಣಿಗಳನ್ನು ಮೇಯಿಸುವ ಕೆಲಸ ನಿಕ್ಕಿ. ಕರ್ನಾಟಕದ ಬಡಪಾಯಿ ಪ್ರೇಕ್ಷಕರ ಪ್ರತೀ ದಿನ ಇವುಗಳ ತಾರಾತಿಗಡಿಗಳನ್ನು ಕಣ್ತುಂಬಿಕೊಳ್ಳುವ ಮಹಾಭಾಗ್ಯ ಪುಕ್ಕಟೆಯೆಂಬಂತೆ ಅಮರಿಕೊಂಡಿದೆ!
ಇದ್ದುದರಲ್ಲಿ ಎಲ್ಲರ ನಿರೀಕ್ಷೆಯಂತೆ ಪ್ರತಿಭಾವಂತ ಹುಡುಗ ಗಿಲ್ಲಿ ನಟ ಸ್ಪರ್ಧಿಯಾಗಿದ್ದಾನೆ. ಈತನ ಬಗ್ಗೆ ನಿರೀಕ್ಷೆ ಮೂಡುವುದಕ್ಕೂ ಕಾರಣಗಳಿದ್ದಾವೆ. ಇಂಥಾ ಕಾಮಿಡಿ ಶೋಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡವರು, ಕಾಮಿಡಿ ಕಿಲಾಡಿಗಳಡೆನ್ನಿಸಿಕೊಂಡ ಅನೇಕರು ಸ್ಕ್ರಿಫ್ಟ್ ಇಲ್ಲದೆ ನಗಿಸುವ ಛಾತಿ ಹೊಂದಿರುವುದಿಲ್ಲ. ಯಾರೋ ಬರೆದು ಕೊಟ್ಟ ಡೈಲಾಗುಗಳನ್ನು ಉರು ಹೊಡೆದು ಮೈಲೇಜು ಗಿಟ್ಟಿಸಿಕೊಂಡಿದ್ದ ಕುರಿಪ್ರತಾಪ ಇದೇ ವೇದಿಕೆಯಲ್ಲಿ ಏದುಸಿರು ಬಿಟ್ಟಿದ್ದ. ಕಡೆಕಡೆಗೆ ಈತ ನಗಿಸಲಾಗದೆ ಉಬುಕಾಡೋದೇ ಮಹಾನ್ ಕಾಮಿಡಿಯಂತಾಗಿತ್ತು. ಈ ಸೀಜನ್ನಿನಲ್ಲಿ ಚಂ ದ್ರಪ್ರಭ ಎಂಬ ಪ್ರತಿಭೆ ಕುರಿ ಪ್ರತಾಪನ ಸ್ಥಾನ ತುಂಬುವಂತಿದ್ದಾನೆ. ಕೆಟ್ಟಾಕೊಳಕು ಡೈಲಾಗುಗಳ ಮೂಲಕವೇ ಪ್ರಸಿದ್ಧನಾಗಿದ್ದ ಈತ ಅದರಾಚೆಗೆ ನಗಿಸುವ ಸಾಧ್ಯತೆಗಳು ಕಡಿಮೆ.
ಇಂಥಾ ಹೊತ್ತಿನಲ್ಲಿ ಗಿಲ್ಲಿನಟ ಭಿನ್ನವಾಗಿ ಕಾಣಿಸುತ್ತಾನೆ. ಯಾಕೆಂದರೆ, ಆತ ಸ್ವತಃ ಡೈಲಾಗುಗಳನ್ನು ಸೃಷ್ಟಿಸಿ ಗೆದ್ದವನು. ಹಲವಾರು ಶೋಗಳಲ್ಲಿ ತನ್ನ ಅಸಲೀ ಪ್ರತಿಭೆ ಸಾಬೀತುಪಡಿಸಿರುವವನು. ಆರಂಭಿಕವಾಗಿಯೇ ಗಿಲ್ಲಿ ಗೆಲ್ಲೋ ಸಾಧ್ಯತೆಗಳ ಬಗ್ಗೆ ಚರ್ಚೆಗಳಾಗುತ್ತಿವೆ. ಇನ್ನುಳಿದಂತೆ ಗೀತಾ ಸೀರಿಯಲ್ಲಿನ ನಾಯಕನಾಗಿದ್ದ ಧನುಷ್ ಗೌಡ ನಟನಾಗುವ ಹಾದಿಯಲ್ಲಿನ್ನೂ ಫರ್ಲಾಂಗುಗಟ್ಟಲೆ ಸಾಗೋದಿದೆ. ಗೀತಾ ಸೀರಿಯಲ್ಲಿನ ಮಾಸ್ ಸೀನುಗಳಲ್ಲಿ ಮುಕ್ಕರಿದು ನಟಿಸಲು ಹರಸಾಹಸ ಪಡುತ್ತಿದ್ದ ಈತನ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿಲ್ಲ. ಇನ್ನು ಹಂತ ಹಂತವಾಗಿ ಅತ್ತು ಬಿಗ್ ಬಾಸ್ ಮನೆಯನ್ನು ರಂಗೇರಿಸಲೆಂದೇ ಒಂದಷ್ಟು ನಟೀಮಣಿಯರನ್ನು ತುಂಬಿಕೊಳ್ಳಲಾಗಿದೆ. ಒಂದು ಕಾಲದಲ್ಲಿ ಆಂಕರ್ ಆಗಿ ಹೆಸರಾಗಿದ್ದ ಜಾನ್ವಿ ಬಗ್ಗೆಯೂ ಹೆಚ್ಚಿನ ನಿರೀಕ್ಷೆಗಳಿದ್ದಂತಿಲ್ಲ.
ಅಷ್ಟಕ್ಕೂ ಈ ಬಿಗ್ ಬಾಸ್ ಅನ್ನೋದೇ ಒಂದು ಭ್ರಾಮಕ ಶೋ. ಇದರಲ್ಲಿ ಮುಸುಡಿ ತೋರಿಸಿದವರು ವಿಶ್ದವಪ್ರಸಿದ್ಧಿ ಹೊಂದಿ ಬಿಡುತ್ತಾರೆಂಬ ಭ್ರಮೆ ಇದೆ. ಆದರೆ, ಒಂದು ಸೀಜನ್ನಿನಲ್ಲಿ ಸ್ಪರ್ಧಿಯಾಗಿದ್ದವರು ಮತ್ತೊಂದು ಸೀಜನ್ನಿನ ಹೊತ್ತಿಗೆ ಮರೆತೇ ಹೋಗುತ್ತಾರೆ. ಇಷ್ಟೂ ಸೀಜನ್ನುಗಳಲ್ಲಿ ಈ ಶೋನಿಂದ ಉದ್ದಾರಾದವರನ್ನು ದುರ್ಬೀನು ಹಾಕಿಕೊಂಡು ಹುಡುಕಿದರೂ ಸಿಗೋದು ಕಷ್ಟ. ತಿಕ್ಕಲುತನವನ್ನೇ ಬಂಡವಾಳವಾಗಿಸಿಕೊಂಡ ಬಿಗ್ ಬಾಸ್ ಪ್ರಾಡಕ್ಟುಗಳಂತೂ ಊರು ತುಂಬಾ ಇಟ್ಟಾಡುತ್ತಿವೆ. ಆ ಸಾಲಿನಲ್ಲಿ ಪ್ರಥಮ್ ಮತ್ತು ಕಿರಿಕ್ ಕೀರ್ತಿಯದ್ದು ಮುಂಚೂಣಿ ಸ್ಥಾನ. ಪ್ರಥಮ ಮತ್ತು ಕಿರಿಕ್ಕಿಗೆ ಮಾತಢೇ ಬಂಡವಾಳ. ಈ ಕೀರ್ತಿಯಂತೂ ಆಯಾ ಕಾಲಕ್ಕೆ ಪ್ರಚಾರ ಸಿಗಬಹುದಾದ ಟೊಂಗೆಯೊಂದಕ್ಕೆ ಛಕ್ಕನೆ ಹಾರಿ ಕೂರುವ ಓತಿಕ್ಯಾತದಂಥವನು. ಅಷ್ಟು ಭೀಕರವಾಗಿ ಅತ್ಯಾಚಾರಕ್ಕೀಡಾಗಿ ಸತ್ತ ಸೌಜನ್ಯಾಳದ್ದು ಪವಿತ್ರ ಸಾವೆಂಬ ಈತ ಪರಮ ನೀಚ.
ಇಂಥಾ ಅಯೋಗ್ಯರನ್ನೇ ಹೆಚ್ಚಾಗಿ ಸೃಷ್ಟಿಸಿದ ಬಿಗ್ ಬಾಸ್ ಶೋ ಬಗ್ಗೆ ಯಾರೂ ಗಂಭೀರವಾದ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಬೀದಿ ಬದಿಯಲ್ಲೆಲ್ಲೋ ಸರ್ಕಸ್ಸು ನಡೆಯುತ್ತಿದ್ದರೆ ಸುಮ್ಮನೆ ಅರೆಘಳಿಗೆ ನಿಂತು ನೋಡಿ ಹೊರಡುತ್ತೇವಲ್ಲ? ಅಂಥಾದ್ದೊಂದು ಕ್ಷಣಿಕ ಕುತೂಹಲಕ್ಕೆ ಮಾತ್ರವೇ ಅರ್ಹವಾದ ಶೋ ಇದು. ಖಂಡಿತವಾಗಿಯೂ ಈ ಬಾರಿ ಒಂದಷ್ಟು ಬದಲಾವಣೆಗಳಿರುತ್ತವೆ. ಟಾಸ್ಕುಗಳಲ್ಲಿಯೂ ಅದು ಇಣುಕಬಹುದೇನೋ. ಈ ಬಾರಿ ಶುರುವಾತಿಗಿಂತಲೂ ಮುನ್ನವೇ ಸ್ಪರ್ಧಿಗಳ ಗುರುತು ಬಯಲಾಗಿರೋದನ್ನೇ ಕಿಚ್ಚಗಾರು ಹೊಸತನ ಎಂಬಂತೆ ಸಂಭ್ರಮಿಸುತ್ತಿದ್ದಾರೆ. ಇಂಥಾ ಸಂಭ್ರಮಗಳೊಂದಿಗೆ ಇನ್ನು ಮೂರು ತಿಂಗಳ ಬಿಗ್ ಬೂಸಾ ಸಂಪನ್ನಗೊಳ್ಳಲಿದೆ!