ಕೆಲ ಮಂದಿ ಸಿನಿಮಾ ಧ್ಯಾನವನ್ನು ಆತ್ಮದಂತೆ ಹಚ್ಚಿಕೊಂಡು ತಾವಂದುಕೊಂಡ ಬಗೆಯಲ್ಲಿ ಅದನ್ನು ನನಸು ಮಾಡಿಕೊಂಡ ಉದಾಹರಣೆಗಳಿದ್ದಾವೆ. ಇನ್ನೂ ಕೆಲವರನ್ನು ಸಿನಿಮಾವೆಂಬ ಮಾಯೆಯೇ ತಾನೇತಾನಾಗಿ ತೆಕ್ಕೆಗಪ್ಪಿಕೊಳ್ಳುತ್ತೆ. ಹಾಗೊಂದು ಅಪ್ಪುಗೆ ಸಿಕ್ಕಾದ ನಂತರ ಬಲು ಆಸ್ಥೆಯಿಂದ ಮುಂದಡಿ ಇಟ್ಟವರನೇಕರು ನಿರ್ದೇಶಕರಾಗಿ, ನಟರಾಗಿ, ನಾನಾ ವಿಭಾಗಗಳಲ್ಲಿ ಮಿಂಚಿದ ವಿಪುಲ ಉದಾಹರಣೆಗಳಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರುವವರು ಮಲೆಮಹದೇಶ್ವರ ಸ್ವಾಮಿಯ ಬಿಳಿಗಿರಿರಂಗನ ಬೆಟ್ಟಗಳ ತಪ್ಪಲಿನ ಪ್ರತಿಭೆ ರಘು. ಇದೀಗ ಥರ ಥರದ ಪಾತ್ರಗಳನ್ನು ಮಾಡುತ್ತಾ ಚಿತ್ರರಂಗ ಮತ್ತು ಸಿನಿಮಾ ಒಪ್ರೇಮಿಗಳಿಗೆ ರಾಕ್ ರಘು ಅಂತಲೇ ಪರಿಚಿತರಾಗಿರುವ ಇವರು, ದುನಿಯಾ ವಿಜಯ್ ಅಭಿನಯದ ಸಲಗ, ಭೀಮದಂಥಾ ಸಿನಿಮಾಗಳ ಮೂಲಕ ಸೈ ಅನ್ನಿಸಿಕೊಂಡಿದ್ದಾರೆ. ಒಂದಷ್ಟು ಯಶಸ್ವೀ ಧಾರಾವಾಹಿಗಳಲ್ಲಿ ನಟಿಸುವ ಮೂಲಕವೂ ಮನೆ ಮಾತಾಗಿದ್ದಾರೆ.
ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಪ್ರಾಕೃತಿಕ ದೈವೀಕ ವಾತಾವರಣದಲ್ಲಿ ಬೆಳೆದವರು ರಾಕ್ ರಘು. ಆರಂಭದಿಂದಲೂ ಸಿನಿಮಾ ಬಗೆಗೊಂದು ಸಹಜವಾದ ಆಕರ್ಷಣೆಯಿಟ್ಟುಕೊಂಡಿದ್ದ ರಘು ಪಾಲಿಗೆ ನಟನಾಗಬೇಕೆಂಬ ಆಸೆಯೇನೂ ಇರಲಿಲ್ಲ. ಬೆಟ್ಟದ ಇಕ್ಕೆಲದಲ್ಲಿ ತಲೆಮಾರುಗಳ ಹಿಂದಿನಿಂದಲೂ ಅವರ ಅಸ್ತಿತ್ವವಿತ್ತು. ಅಲ್ಲಿಯೇ ಒಂದು ಸಣ್ಣ ಹೊಟೇಲು ಒಂದಿಡೀ ರಘು ಕುಟುಂಬದ ಜೀವನಾಧಾರವಾಗಿತ್ತು. ಅದನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಈತನ ಬದುಕಿನಲ್ಲಿ ಅನಿರೀಕ್ಷಿತ ಅವಘಡವೊಂದು ನಡೆದದ್ದು ೨೦೧೩ರಲ್ಲಿ. ಅದಾಗ ತಾನೇ ಹೊಸತಾಗಿ ಕಾರು ತೆಗೆದುಕೊಂಡಿದ್ದ ರಘು ಭೀಕರ ಅಪಘಾತಕ್ಕೀಡಾಗಿದ್ದರು. ಗಂಭೀರವಾಗಿ ಗಾಯಗೊಂಡ ಕಾರಣದಿಂದ ಒಂದು ವರ್ಷಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದರು.
ಹಾಗೆ ಅಪಘಾತಕ್ಕೀಡಾಗಿ ಹಾಸಿಗೆಗೆ ಒರಗಿದ್ದ ರಘು ಪಾಲಿಗಾಗ ಟಿವಿಯೇ ಜಗತ್ತು. ಆ ಕಾಲಕ್ಕೆ ಆಂಡ್ರಾಯ್ಡ್ ಫೋನುಗಳಾಗಲಿ, ಈಗಿನಂತೆ ಇಂಟರ್ನೆಟ್ ಆಗಲಿ ಅಷ್ಟಾಗಿ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಆ ಹಂತದಲ್ಲಿ ಹಲವಾರು ಸಿನಿಮಾಗಳನ್ನು ನೋಡುತ್ತಾ, ಹಾಸ್ಯ ನಟನೆಯತ್ತ ರಘು ಮನಸು ವಾಲಿಕೊಂಡಿತ್ತು. ಬುಲೆಟ್ ಪ್ರಕಾಶ್ ಥರದ ನಟರನ್ನು ನೋಡುತ್ತಾ, ತಾನೂ ಕೂಡಾ ಅದೇ ರೀತಿಯಲ್ಲಿ ಜನರನ್ನು ರಂ ಜಿಸಬೇಕೆಂಬ ಆಕಾಂಕ್ಷೆಯೊಂದು ರಘು ಮನಸಲ್ಲಿ ಮೊಳಕೆಯೊಡೆಯಲಾರಂಭಿಸಿತ್ತು. ಸಾಮಾನ್ಯವಾಗಿ ಹೀಗೆ ಅನಾರೋಗ್ಯದಿಂದಲೋ, ಅಪಘಾತದಿಂದಲೋ ಹಾಸಿಗೆ ಹಿಡಿದ ಸಂದರ್ಭದಲ್ಲಿ ಉತ್ಕಟವಾಗಿ ಹಬ್ಬಿಕೊಳ್ಳುವ ಕನಸೊಂದು ಪವಾಡ ಸದೃಶವಾಗಿ ಹಾಸಿಗೆಯಿಂದ ಎದ್ದು ಕೂರುವಂತೆ ಮಾಡಿಬಿಡೋದಿದೆ. ರಘು ಕೂಡಾ ನಟನಾಗಬೇಕೆಂಬ ಕನಸಿನ ಕಸುವಿನೊಂದಿಗೆ ಆರು ತಿಂಗಳಿಗೆಲ್ಲ ಚೇತರಿಸಿಕೊಂಡು ಬಿಟ್ಟಿದ್ದರು.
ಹಾಗೆ ಚೇತರಿಸಿಕೊಂಡ ಬಳಿಕ ರಘು ನಟನಾಗುವ ಸಲುವಾಗಿ ಗಂಭೀರವಾಗಿ ಪ್ರಯತ್ನಿಸಲಾರಂಭಿಸಿದ್ದರು. ಇದೇ ಹೊತ್ತಿನಲ್ಲಿ ಬಿಆರ್ ಹಿಲ್ಸ್ನಲ್ಲಿ ರಾಹಿ ಅಂತೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಗೆಳೆಯರೋರ್ವರ ಕಡೆಯಿಂದ ಈ ವಿಚಾರ ತಿಳಿದ ರಘು ನಿರ್ದೇಶಕ ಗಿರೀಶ್ ಅವರನ್ನು ಭೇಟಿಯಾದಾಗ, ಅಚ್ಚರಿದಾಯಕವಾಗಿ ಆ ಸಿನಿಮಾದ ಹನಾಸ್ಯ ಪಾತ್ರವೊಂದು ಸಿಕ್ಕಿಬಿಟ್ಟಿತ್ತು. ಅದು ನಟನಾಗಿ ರಘು ಪಾಲಿನ ಮೊದಲ ಹೆಜ್ಜೆ. ಆ ನಂತರ ನಿರ್ದೇಶಕ ಮಹೇಶ್ ಸುಖಧರೆ ಬಿಆರ್ ಹಿಲ್ಸ್ನ ಐಬಿಗೆ ಬಂದಿದ್ದಾಗ ರಘು ಅವರನ್ನು ಸಂಧಿಸಿ ಅವಕಾಶ ಕೇಳಿದ್ದರಂತೆ. ಆ ಹೊತ್ತಿನಲ್ಲಿ ಉಘೇ ಉಘೇ ಮಾದಪ್ಪ ಎಂಬ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದ ಸುಖಧರೆ ಅದರಲ್ಲೊಂದು ಪಾತ್ರದಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರು. ಆ ನಂತರ ಮಹಾದೇವಿ ಎಂಬ ಧಾರಾವಾಹಿಯಲ್ಲಿಯೂ ಒಂದೊಳ್ಳೆ ಪಾತ್ರವೇ ಸಿಕ್ಕಿತ್ತು.
ಅದಾದ ಬಳಿಕ ನಟ ದುನಿಯಾ ವಿಜಯ್ ಅದೊಂದು ಸಲ ಕುಟುಂಬ ಸಮೇತರಾಗಿ ಬಿಆರ್ ಹಿಲ್ಸ್ಗೆ ಬಂ ದುಳಿದಿದ್ದರು. ಅವರನ್ನು ಭೇಟಿಯಾದ ರಘುಗೆ ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ಕೊಡೋದಾಗಿ ವಿಜಯ್ ಅಭಯ ಕೊಟ್ಟಿದ್ದರು. ಅದಕ್ಕನುಸಾರವಾಗಿ ಸಲಗ ಚಿತ್ರದಲ್ಲೊಂದು ಪುಟ್ಟ ಪಾತ್ರ ರಘುಗೆ ಸಿಕ್ಕಿತ್ತು. ಆ ನಂತರ ಭೀಮ ಚಿತ್ರದಲ್ಲಿ ಸದಾ ನಾಯಕನ ಜೊತೆಗಿರುವ ಮಹತ್ವದ ಪಾತ್ರದ ಮೂಲಕ ರಾಕ್ ರಘು ಮಿಂಚಿದ್ದರು. ಆ ಸಿನಿಮಾದಲ್ಲಿ ನಟನೆ ಮಾತ್ರವಲ್ಲದೆ, ನಿರ್ದೇಶನ ಸೇರಿದಂತೆ ಎಲ್ಲದರಲ್ಲಿಯೂ ಅನುಭವ ಗಿಟ್ಟಿಸಿಕೊಳ್ಳುವ ಅವಕಾಶವನ್ನು ದುನಿಯಾ ವಿಜಯ್ ಕಲ್ಪಿಸಿದ್ದರು. ಆ ಬಳಿಕ ಪ್ರಸಿದ್ಧ ಕೃಷ್ಣ ನಿರ್ದೇಶನದ, ಕನ್ನಡತಿ ಖ್ಯಾತಿಯ ಕಿರಣ್ ರಾಜ್ ನಾಯಕನಾಗಿ ನಟಿಸಿದ್ದ ಭರ್ಜರಿ ಗಂಡು ಚಿತ್ರದಲ್ಲಿಯೂ ರಘು ನಟಿಸಿದ್ದರು.
ಸದ್ಯ ಅದೇ ಕಿರಣ್ ರಾಜ್ ನಟಿಸಿರುವ ಶೇರ್ ಚಿತ್ರದಲ್ಲೊಂದು ಮಹತ್ವದ ಪಾತ್ರದಲ್ಲಿ ರಾಕ್ ರಘು ನಟಿಸಿದ್ದಾರೆ. ಎಸ್ ಮಹೇಂದರ್ ನಿರ್ದೇಶನದ ಕೊಂಬುಡಕಿ ಚಿತ್ರದಲ್ಲೂ ಅವಕಾಶ ಗಿಟ್ಟಸಿಕೊಂಡಿದ್ದಾರೆ. ವಿಕ್ಕಿ ವರುಣ್ ನಟನೆಯ ಸೈಕೋ ಚಿತ್ರದಲ್ಲೂ ಅವರೊಂದು ಪಾತ್ರವಾಗಿದ್ದಾರೆ. ಅದಲ್ಲದೇ ಮಹೇಶ್ ಸುಖಧರೆ ನಿರ್ದೇಶನದ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲೂ ಅವರು ನಟಿಸಲಿದ್ದಾರೆ. ಬುರುಡೆ ಬಂಗ್ಲೆ ರಹಸ್ಯ ಬಿಡುಗಡೆಯ ಹಾದಿಯಲ್ಲಿದೆ. ಇನ್ನೇನು ಶುರುವಾಗಲಿರುವ ಗಿಚ್ಚಿಗಿಲಿಗಿಲಿ ಶೋನಲ್ಲಿ ಸಾಧು ಕೋಕಿಲಾ ಮಾರ್ಗದರ್ಶನದಲ್ಲಿ ಮಿಂಚಲು ರಾಕ್ ರಘು ಅಣಿಯಾಗಿದ್ದಾರೆ. ಸದ್ಯ ಆ ಶೋಗಾಗಿನ ತಯಾರಿ ಚಾಲ್ತಿಯಲ್ಲಿದೆ. ಒಟ್ಟಾರೆಯಾಗಿ, ಒಂದು ಅಪಘಾತದ ಆಘಾತದ ನಡುವೆ ನಟನ ಆಗೋ ಕನಸು ಕಂಡ ರಾಕ್ ರಘು ಇದೀಗ ಬಹುಬೇಡಿಕೆಯ ನಟರಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ!