ಸಿನಿಮಾ ರಂಗ ಒಂದು ಅಲೆಯ ಭ್ರಾಮಕ ಸೆಳೆವಿಗೆ ಸಿಕ್ಕು ಸಾಗುತ್ತಿರುವಾಗಲೇ, ಅದರ ಇಕ್ಕೆಲದಲ್ಲಿ ಒಂದಷ್ಟು ಭಿನ್ನ ಬಗೆಯ ಪ್ರಯತ್ನಗಳು ಸದಾ ಚಾಲ್ತಿಯಲ್ಲಿರುತ್ತವೆ. ಪ್ಯಾನಿಂಡಿಯಾ ಸಿನಿಮಾಗಳು ಬಂದು, ಕೋಟಿ ಕೋಟಿ ಬ್ಯುಸಿನೆಸ್ಸು ಮಾಡೋದರಿಂದಲೇ ಸಿನಿಮಾ ರಂಗದ ಉಳಿವು ಸಾಧ್ಯ ಅನ್ನೋ ಭ್ರಮೆಯ ನಡುವೆ, ಸಿನಿಮಾ ರಂಗದ ಉಳಿವಿರೋದು ಹೊಸಾ ಪ್ರಯತ್ನಗಳಲ್ಲಿ ಎಂಬ ವಾಸ್ತವ ಎದುರಾಗುತ್ತೆ. ಆ ದಿಕ್ಕಿನ ಪ್ರಯತ್ನಗಳ ಸಾಲಿನಲ್ಲಿ ಸೇರ್ಪಡೆಗೊಳ್ಳುವ ಚಿತ್ರ ಸೀಸ್ ಕಡ್ಡಿ. ರತನ್ ಗಂಗಾಧರ್ ನಿರ್ದೇಶನ ಮಾಡಿರುವ ಈ ಮಕ್ಕಳ ಸಿನಿಮಾ ಆರಂಭದಲ್ಲಿಯೇ ಒಂದಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಸೈ ಅನ್ನಿಸಿಕೊಂಡಿತ್ತು. ಸಿನಿಮಾ ಮಂದಿರಗಳಲ್ಲಿಯೂ ಯಶಸ್ವೀ ಪ್ರದರ್ಶನ ಕಂಡಿದ್ದ ಸೀಸ್ ಕಡ್ಡಿಯೀಗ ಓಟಿಟಿಗೆ ಆಗಮಿಸಿದೆ.
ನಮ್ಮ ಸುತ್ತಲ ವಿಚಾರಗಳನೇ ಭಿನ್ನ ನೋಟದಲ್ಲಿ ನೋಡಬಲ್ಲ ದೃಷ್ಟಿಕೋನಕ್ಕಷ್ಟೇ ಹೊಸಾ ವಿಚಾರಗಳು ದಕ್ಕುತ್ತವೆ. ನಿರ್ದೇಶಕ ರತನ್ ಗಂಗಾಧರ್ ಅಂಥಾದ್ದೊಂದು ಬೆರಗಿನ ಭಾವದಿಂದ ನಮ್ಮೆಲ್ಲರಿಗೂ ಚಿರಪರಿಚಿತವಾದ ಪೆನ್ಸಿಲ್ ಅನ್ನು ದಿಟ್ಟಿಸಿದ್ದರ ಫಲವಾಗಿಯೇ ಸೀಸ್ ಕಡ್ಡಿ ಚಿತ್ರ ಜೀವ ಪಡೆದಿದೆ. ಪೆನ್ಸಿಲ್ಲಿನ ಗುಣಗಳನ್ನೇ ಐದು ಪಾತ್ರವಾಗಿಸಿ, ಬದುಕಿಗೆ ಹತ್ತಿರವಾದ ಅಂಶಗಳನ್ನು ಬೆರೆಸಿ ಅಣಿಗೊಳಿಸಿರುವ ಸಿನಿಮಾ ಸೀಸ್ ಕಡ್ಡಿ. ಈ ಮಕ್ಕಳ ಚಿತ್ರ ಬಿಡುಗಡೆಗೊಂಡಾಗ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಅದು ಅಮೇಜಾನ್ ಪ್ರೈಮ್‌ಗೆ ಆಗಮಿಸಿದೆ.
ಇದು ಮಕ್ಕಳ ಚಿತ್ರವಾದರೂ ಕೂಡಾ ಪ್ರತೀ ವಯೋಮಾನದವರನ್ನೂ, ಎಲ್ಲ ವ ರ್ಗದ ಪ್ರೇಕ್ಷಕರನ್ನೂ ಕಾಡುಗ ಗುಣಗಳೊಂದಿಗೆ ಮೂಡಿ ಬಂದಿರೋ ಸಿನಿಮಾ. ನಿರ್ದೇಶಕ ರತನ್ ಗಂಗಾಧರ್ ಅಷ್ಟೊಂದು ಆಸ್ಥೆಯಿಂದ ಸೀಸ್ ಕಡ್ಡಿಯನ್ನು ನಿರ್ದೇಶನ ಮಾಡಿದ್ದಾರೆ. ಇದು ಮಾತ್ರವಲ್ಲದೇ ಗ್ರಾಮ್ಯ ಸೊಗಡಿನ ಭಾಷೆ ಮತ್ತು ಸಂಸ್ಕೃತಿಯೂ ಕೂಡಾ ಇದರ ಭಾಗವಾಗಿರೋದು ವಿಶೇಷ. ಬೆಂಗಳೂರು ಕನ್ನಡ, ಹವ್ಯಕ ಕನ್ನಡ, ತುಮಕೂರು ಭಾಗದ ಹಳ್ಳಿ ಸೊಗಡಿನ ಕನ್ನಡ ಹಾಗೂ ಮೈಸೂರು ಭಾಗದ ಶೈಲಿಯ ಕನ್ನಡ ಭಾಷೆಗಳಲ್ಲಿ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಗ್ರಹಣ ಪ್ರೊಡಕ್ಷನ್ಸ್ ಮೂಲಕ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣ, ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ, ಅನಿರುದ್ಧ್ ಹರ್ಷವರ್ಧನ್ ಸಂಕಲನ, ಆಶಾ ಥಾಮಸ್ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಸಿತಿನ್ ಅಪ್ಪಯ್ಯ, ಬಿ ಎಸ್ ರಾಮಮೂರ್ತಿ, ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ, ಅನುಷ್ಕಾ ಟಕ್ಕಲಕಿ, ಸಂಜಯ್ ಗೌಡ, ಶ್ರೇಷ್ಠ್ ಜಪ್ತಿಮಠ್, ಮಹೇಂದ್ರ ಗೌಡ, ದೀಪಿಕಾ ಅಡ್ತಲೆ, ರಾಘವೇಂದ್ರ ಭಟ್, ನಾಗರಾಜ್ ರಾವ್, ರೇಖಾ ಕೂಡ್ಲಿಗಿ, ಉದಾತ್, ಜಯಂತ್ ವೆಂಕಟ್, ಅಮೋಘವರ್ಷ, ಅನೂಪ್ ಬಿ ಆರ್, ಶರ್ಮಿಳಾ ಕಾರ್ತಿಕ್, ಅಭಿಲಾಶ್ ಗೌಡ, ಗಂಗಾಧರ್, ಅಭಿಷೇಕ್, ಅಕುಲ್ ಮುಂತಾದವರ ತಾರಾಗಣದೊಂದಿಗೆ ಸೀಸ್ ಕಡ್ಡಿ ಕಳೆಗಟ್ಟಿಕೊಂಡಿದೆ.