ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನಿಂಡಿಯಾ ಸ್ಟಾರ್ ಆಗಿದ್ದಾರೆ. ತೀರಾ ಕಡುಗಷ್ಟದಿಂದ ಈ ಹಂತ ತಲುಪಿರುವ ಯಶ್ ಒಂದೊಂದು ಘಳಿಗೆಯಲ್ಲಿ ಬಿಡುಬೀಸಾಗಿ ಮಾತಾಡಿದರೂ ದುರಹಂಕಾರ ಪ್ರದರ್ಶಿಸಿದವರಲ್ಲ. ಆದರೆ, ಅಂಥಾ ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ಅವರ ಇತ್ತಿತ್ತಲಾಗಿನ ಅವತಾರ ಕಂಡು ಖುದ್ದು ಯಶ್ ಅಭಿಮಾನಿಗಳೇ ಕಂಗಾಲಾಗಿದ್ದಾರೆ. ಏಕಾಏಕಿ ನಿರ್ಮಾಪಕಿಯಾಗಿ ಅವತಾರವೆತ್ತಿರುವ ಪುಷ್ಪಾ ಪಿಎ ಪ್ರೊಡಕ್ಷನ್ಸ್ ಅಂತೊಂದು ಬ್ಯಾನರಿನಡಿಯಲ್ಲಿ ಕೊತ್ತಲವಾಡಿಯೆಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರ ಆಗಸ್ಟ್ ಒಂದರಂದು ತೆರೆಗಾಣಲಿದೆ ಎಂಬ ವಿಚಾರವನ್ನು ಚಿತ್ರ ತಂಡವೇ ಅಧಿಕೃತವಾಗಿ ಘೋಶಿಸಿದೆ. ಆದರೆ, ಸಿನಿಮಾ ಬಗ್ಗೆ ಹುಟ್ಟಿಕೊಳ್ಳಬೇಕಿದ್ದ ಚರ್ಚೆಗಳೆಲ್ಲವನ್ನೂ ಹಠಾತ್ ನಿರ್ಮಾಪಕಿ ಪುಷ್ಪಾ ಮೇಡಮ್ಮು ಲಂಗು ಲಗಾಮಿಲ್ಲದ ಮಾತುಗಳ ಮೂಲಕ ಮತ್ತೊಂದು ದಿಕ್ಕಿನತ್ತ ಹೊರಳಿಸಿ ಬಿಟ್ಟಿದ್ದಾರೆ!
ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಪಕಿಯಾಗಿದ್ದಾರೆಂಬ ವಿಚಾರ ಹೊರ ಬಿದ್ದಾಕ್ಷಣದಿಂದಲೂ ಸಹಜವಾಗಿಯೇ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಆ ನಂತರ ಪುಷ್ಪಾ ಅರುಣ್ ಕುಮಾರ್ ಪತ್ರಿಕಾ ಗೋಷ್ಠಿ ನಡೆಸಿದಾಗ ಆಕೆ ಮಾತಾಡಿದ ರೀತಿ ಕಂಡು ಪಾರ್ವತಮ್ಮ ರಾಜ್ ಕುಮಾರ್ ಥರದ ವಿರಳ ನಿರ್ಮಾಪಕಿಯರ ಸಾಲಿನಲ್ಲಿ ನಿಲ್ಲುತ್ತಾರೆಂಬಂಥಾ ಸಕಾರಾತ್ಮಕ ಮ ಆತುಗಳು ಸಾಮಾಜಿಕ ಜಾಕಲತಾಣದ ಮೂಲಕ ಕೇಳಿ ಬಂದಿದ್ದವು. ಆದರೆ, ಬರ ಬರುತ್ತಾ ಈಕೆ ಮಾಧ್ಯಮದವರನ್ನು ಮಾತಾಡಿಸುವ ರೀತಿ, ಅವರ ಪ್ರಶ್ನೆಗಳಿಗೆ ಉತ್ತರಿಸುವ ಪರಿ ಕಂಡು ಎಲ್ಲೋ ಲಯ ತಪ್ಪಿದೆಯೆಂಬ ಭಾವವೊಂದು ಪ್ರಜ್ಜಾವಂತ ಸಿನಿಮಾ ಪ್ರೇಮಿಗಳನ್ನು ಕಾಡಲಾರಂಭಿಸಿತ್ತು. ಅದಾಗಿ ವಾರದೊಪ್ಪತ್ತಿನಲ್ಲಿಯೇ ಈಕೆ ತ್ತಿದ ಅವತಾರ ಕಂಡವರಿಗೆಲ್ಲ ಇದು ದುರಹಂಕಾರದ ಪರಾಕಾಷ್ಠೆ ಎಂಬಂಥಾ ಭಾವ ಗಾಢವಾಗಿಯೇ ಕಾಡಿದೆ!
ಅದ್ಯಾವುದೋ ಚಾನೆಲ್ಲಿನ ವರದಿಗಾರ್ತಿಯೊಬ್ಬಾಕೆ ಅದೇನೋ ಪ್ರಶ್ನೆ ಕೇಳುತ್ತಾಳೆ. ಅದಕ್ಕೆ ಪುಷ್ಪಾ ಮೇಡಮ್ಮು `ನಾವು ಒಕ್ಕಲಿಗರು ಗೊತ್ತಲ್ವಾ ಡಂಡಂ ದಶಗುಣಂ’ ಎಂಬರ್ಥದಲ್ಲಿ ಮಾತಾಡಿದ್ದಾರೆ. ಅದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಶೈಲಿಯ ಮಾತುಗಳ ಉದಾಹರಣೆ ಕೊಟ್ಟು ಸಮಜಾಯಿಷಿ ಕೊಡುವ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದಾರೆ. ಇಂಥಾದ್ದೊಂದು ಮಾತಾಡುವ ಮೂಲಕ ಪುಷ್ಪಾ ತಮ್ಮ ಘನತೆಯನ್ನು ಗವಾಳಿಗೆ ತೂರುವ ಮೂಲಕ ಯಶ್ ಹೆಸರಿಗೂ ಮಸಿ ಬಳಿಯೋ ಕೆಲಸ ಮಾಡಿದ್ದಾರೆ. ಸಹಜವಾಗಿಯೇ ಈ ಮಾತಿನ ಕಾರಣದಿಂದ ಒಂದಷ್ಟು ಮೂದಲಿಕೆಗಳಿಗೂ ತುತ್ತಾಗಿದ್ದಾರೆ. ಸಾರ್ವಜನಿಕವಾಗಿ ಹೇಗೆ ಮಾತಾಡಬೇಕು, ಏನನ್ನು ಮಾತಾಡಬೇಕೆಂಬ ಕನಿಷ್ಟ ತಿಳಿವಳಿಕೆ ಇಲ್ಲದ ಈಕೆ ಅದೆಂಥಾ ಸಿನಿಮಾ ನಿರ್ಮಾಣ ಮಾಡುತ್ತಾರೋ ಭಗವಂತನೇ ಬಲ್ಲ. ತಾನು ಯಶ್‌ನಂಥಾ ಸೂಪರ್ ಸ್ಟಾರ್ ತಾಯಿಯಾದ್ದರಿಂದ ಏನು ಮಾತಾಡಿದರೂ ನಡೆಯುತ್ತದೆಂಬಂಥಾ ದಾಷ್ಟ್ಯ ಈಕೆಗಿದ್ದಂತಿದೆ. ಆದರೆ, ಈಗ ಯಶ್ ಏರಿರುವ ಎತ್ತರವಿದೆಯಲ್ಲಾ? ಅದು ಕನ್ನಡದ ಸಿನಿಮಾ ಪ್ರೇಮಿಗಳು ನೀಡಿರುವ ಪ್ರೀತಿಯ ಭಿಕ್ಷೆಯಿಂದ ಸಿಕ್ಕ ಪಟ್ಟವೆಂಬ ವಾಸ್ತವ ಈಕೆಗೆ ಅರಿವಿದ್ದಂತಿಲ್ಲ.
ಅಷ್ಟಕ್ಕೂ ಯಶ್ ಒಕ್ಕಲಿಗನೆಂಬ ಕಾರಣಕ್ಕೆ ಯಾವನೂ ಅಭಿಮಾನಿಯಾಗಿಲ್ಲ. ಆತನೋರ್ವ ನಟನೆಂಬ ಕಾರಣದಿಂದಷ್ಟೇ ಕನ್ನಡಿಗರು ಅಪ್ಪಿಕೊಂಡು ಬೆಳೆದಿದ್ದಾರಷ್ಟೆ. ಹಾಗೇನಾದರೂ ಯಶ್ ಅವಕಾಶಕ್ಕಾಗಿ ಸಷರ್ಕಸ್ಸು ನಡೆಸುತ್ತಿದ್ದಾಗ ಪುಷ್ಪಾ ಮೇಡಮ್ಮು ದಂಡಂ ದಶಗುಣಂ ಎಂಬಂಥಾ ತಿಮಿರು ತೋರಿಸಿದ್ದರೆ ತಿಪ್ಪೆಯೇ ಗತಿಯಾಗುತ್ತಿತ್ತು. ಹೀಗೆ ಜವಾಬ್ಧಾರಿಯುತ ಜಾಗದಲ್ಲಿ ನಿಂತ ಪುಷ್ಪಾ ಬಾಯಿಂದ ಇಂಥಾದ್ದೊಂದು ಮಾತು ಬರಲು ಹೇಗೆ ಸಾಧ್ಯ ಅಂತೊಂದು ಪ್ರಶ್ನೆ ಸಿನಿಮಾ ಪ್ರೇಮಿಗಳನ್ನು ಕಾಡಿದೆ. ಅದಕ್ಕುತ್ತರವ ಆಗಿ ನಿಲ್ಲೋದು ಮಗ ನಟನಾಗುವ ಮುನ್ನ ಪುಷ್ಪಾ ನಡೆಸುತ್ತಿದ್ದ ಚೀಟಿ ವ್ಯವಹಾರ. ಆ ವ್ಯವಹಾರದಲ್ಲಿ ಸಾಕಷ್ಟು ಲಫಡಾ ನಡೆಸಲಾಗಿತ್ತೆಂಬಂಥಾ ಆರೋಪಗಳು ಆರಂಭದಿಂದಲೂ ಕೇಳಿ ಬಂದಿದ್ದವು. ಹಾಗೆ ಚೀಟಿ ಕಟ್ಟಿಸಿಕೊಂಡು ಕೈಯೆತ್ತೋ ಘಳಿಗೆಯಲ್ಲಿ ಈಕೆ ದಂಡಂ ದಶಗುಣಂ ಫಾರ್ಮುಲಾವನ್ನು ಬಳಸಿ ಅಭ್ಯಾಸವಾಗಿರಲಿಕ್ಕೂ ಸಾಕು!
ಆದರೆ, ಸಿನಿಮಾ ರಂಗದಲ್ಲಿ ಇಂಥಾ ದುರಹಂಕಾರ ವರ್ಕೌಟ್ ಆಗುವುದಿಲ್ಲ.ಹೀಗೆ ಮೆರೆದ ಮಂದಿ ಗಾಂಧಿ ನಗರದ ಡಸ್ಟ್ ಬಿನ್ನಿನಲ್ಲಿ ಮಿಸುಕಲೂ ಸಾಧ್ಯವಾಗದಂತೆ ಜೀರ್ಣವಾಗಿ ಹೋಗಿದ್ದಾರೆ. ಅಂಥಾದ್ದೊಂದು ವಾಸ್ತವವನ್ನು ಯಶ್ ಅಮ್ಮ ತುರ್ತಾಗಿ ಅರಿತುಕೊಳ್ಳಬೇಕಿದೆ. ಅದು ಬಿಟ್ಟು ಜಾತಿ ಮತ್ತು ಪಾಳೇಗಾರಿಕೆಯ ಪಟ್ಟುಗಳನ್ನು ಪ್ರದರ್ಶಿಸಿದರೆ ಗಾಂಧಿನಗರದಲ್ಲಿ ಕಳೆದುಕೊಂಡಿದ್ದನ ನು ಮತ್ತೆ ಚೀಟಿ ವ್ಯವಹಾರಕ್ಕಿಳಿದು ಸಂಪಾದಿಸಬೇಕಾಗಿ ಬಂದರೂ ಅಚ್ಚರಿಯೇನಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಈಕೆ ಮಾಧ್ಯಮದ ಮಂದಿಯನ್ನು ಮುಖಾಮುಖಿಯಾಗೋ ವಿಚಾರದಲ್ಲಿ ಅಂಬಿಯನ್ನು ಅನುಕರಿಸಲು ಹವಣಿಸುತ್ತಿರುವಂತಿದೆ. ಈಗಿನ ದೃಷ್ಯ ಮಾಧ್ಯಮದ ಪ್ರತಿನಿಧಿಗಳಂತೂ ಇಂಥವರ ಮುಂದೆ ದೈನೇಸಿಯಂತೆ ನಿಂತು ಬಿಡುತ್ತಾರೆ. ಈ ಕಾರಣದಿಂದಲೇ ಪುಷ್ಟಾ ಥರದವರು ತಿರ್ಕೆ ದೌಲತ್ತು ಪ್ರದರ್ಶಿಸುತ್ತಾರೆ. ಇನ್ನಾದರೂ ಈಕೆ ಘನತೆವೆತ್ತ ಮಾತು ವ ರ್ತನೆಗಳೊಂದಿಗೆ ಕಾಣಿಸಿಕೊಂಡರೆ ನಿರ್ಮಾಪಕಿಯಾಗಿ ಗೆಲುವು ಸಿಗುತ್ತದೋ ಇಲ್ಲವೋ; ರಾಕಿಂಗ್ ಸ್ಟಾರ್ ಯಶ್ ಸಾರ್ವಜನಿಕ ಮುಜುಗರದಿಂದಾದರೂ ತಪ್ಪಿಸಿಕೊಳ್ಳುವ ಸಾಧ್ಯತೆಗಳಿದ್ದಾವೆ!