ಹೊಸ ಸಂವತ್ಸರದ ಶುರುವಾತಿನಲ್ಲಿ ಕನ್ನಡ ಚಿತ್ರರಂಗ ಪ್ರೇಮ ಕಥಾನಕಗಳಿಂದ ಕಳೆಗಟ್ಟಿಕೊಳ್ಳಲಿದೆಯಾ? ಸದ್ಯದ ವಾತಾವರಣವನ್ನು ಪರಾಮರ್ಶಿಸಿದರೆ ಆ ಪ್ರಶ್ನೆಗೆ ಹೌದೆಂಬ ಉತ್ತರವೇ ಎದುರುಗೊಳ್ಳುತ್ತೆ. ಈ ದಿಸೆಯಲ್ಲಿ ಸದ್ಯದ ಮಟ್ಟಿಗೆ ಪ್ರೇಕ್ಷಕರ ನಿರೀಕ್ಷೆಯ ಪರಿಧಿಯಲ್ಲಿರುವ ಸಿನಿಮಾಗಳತ್ತ ಕಣ್ಣು ಹಾಯಿಸಿದಾದ ಮುಂಚೂಣಿಯಲ್ಲಿರುವ ಸಿನಿಮಾ (vishnupriya movie) `ವಿಷ್ಣುಪ್ರಿಯ’. ಪಡ್ಡೆಹುಲಿ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು ಶ್ರೇಯಸ್ ಮಂಜು. ಅವರೀಗ ವಿಷ್ಣುಪ್ರಿಯನಾಗಿ, ವಿಶಿಷ್ಟ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ. ಇದೀಗ ಈ ಚಿತ್ರದ ಚೆಂದದ ಪ್ರೇಮಗೀತೆಯೊಂದು ಬಿಡುಗಡೆಗೊಂಡಿದೆ.

ಚಿಗುರು ಚಿಗುರು ಸಮಯ ಹಿತವಾದ ಒಂದು ಮೌನ, ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಮೌನ… ಎಂಬ ಈ ಹಾಡು ಸಂಗೀತ, ಸಾಹಿತ್ಯ ಹಾಗೂ ದೃಷ್ಯ ಸೇರಿದಂತೆ ಎಲ್ಲ ಕೋನಗಳಲ್ಲಿಯೂ ಸಮ್ಮೋಹಕವಾಗಿದೆ. ಕೇರಳದ ಪ್ರಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ವಿಷ್ಣುಪ್ರಿಯನ ಸಂಗೀತ ಸಾರಥಿ. ಇದೀಗ ಬಿಡುಗಡೆಗೊಂಡಿರುವ ಹಾಡು ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ನಜೀನ್ ಅರ್ಷಾದ್ ಕಂಠಸಿರಿಯಲ್ಲಿ ಚೆಂದಗೆ ಮೂಡಿಬಂದಿದೆ. ಸಾಮಾನ್ಯವಾಗಿ ಬೇರೆ ಬೇರೆ ಬಗೆಗಳ ಹಾಡುಗಳು ಬರುತ್ತಿರುತ್ತವೆ.ಇಂಥಾ ಹೊತ್ತಿನಲ್ಲಿ ತೊಂಬತ್ತರ ದಶಕದ ಆಚೀಚೆಯ ಸಮ್ಮೋಹಕ ಮೆಲೋಡಿಯತ್ತ ಸಂಗೀತ ಪ್ರೇಮಿಗಳ ಮನಸು ಹಾತೊರೆಯುತ್ತದೆ. ವಿಷ್ಣುಪ್ರಿಯನ ಹಾಡು ಅಂಥವರನ್ನೆಲ್ಲ ಆವರಿಸಿಕೊಳ್ಳುವಂತಿದೆ.

ಬಹುಶಃ ಇದು ಈ ವರ್ಷಾರಂಭದ ಅತ್ಯಂತ ಮೆಲೋಡಿಯಸ್ ಹಾಡಾಗಿ ದಾಖಲಾಗುತ್ತದೆ. ಆಗಾಗ ಹಾಡುಗಳ ಮೂಲಕ ಅಚ್ಚರಿ ಮೂಡಿಸುವ ನಾಗೇಂದ್ರ ಪ್ರಸಾದ್ ಈ ಹಾಡನ್ನೂ ಕೂಡಾ ಅಷ್ಟೇ ತನ್ಮಯರಾಗಿ ಬರೆದಂತಿದೆ. ಒಂದೇ ಸಲಕ್ಕೆ ಸೆಳೆಯುವಂತಿರೋ ಈ ಗೀತೆಯ ದೃಷ್ಯಗಳು ಒಟ್ಟಾರೆ ಸಿನಿಮಾದ ಸಾರವನ್ನು ಸಣ್ಣಗೆ ದಾಟಿಸಿದೆ. ಇದರಲ್ಲಿ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಗಂಣಡುಗಲಿ ಕೆ ಮಂಜು ನಿರ್ಮಾಣ ಮಾಡಿರುವ ಈ ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಆ ಕುರಿತಾದ ಮಾಹಿತಿ ಇಷ್ಟರಲ್ಲೇ ಜಾಹೀರಾಗುವ ಸಾಧ್ಯತೆಗಳಿದ್ದಾವೆ.

About The Author