ನಯಾಪೈಸೆ ನಟನಾ ಕೌಶಲ್ಯ ಇಲ್ಲದಿದ್ದರೂ ಪರವಾಗಿಲ್ಲ; ಎತ್ತರದ ನಿಲುವು,ಒಂದಷ್ಟು ಚೆಂದವಿದ್ದುಬಿಟ್ಟರೆ ಹೀರೋ ಆಗೋದು ಸಲೀಸೆಂಬ ಭಾವ ಅನೇಕರಲ್ಲಿದೆ. ಇಂಥಾದ್ದರ ನಡುವೆ ನಟನೆಯ ಬಲವೊಂದಿದ್ದರೆ ಮತ್ತೆಲ್ಲವೂ ಗೌಣ ಎಂಬುದನ್ನು ಕೆಲ ನಟ ನಟಿಯರು ಸಾಬೀತುಪಡಿಸಿದ್ದಾರೆ. ಅಂಥಾ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವಾತ ವಿಜಯ್ ಸೇತುಪತಿ. ಭಿನ್ನ ಕಥೆ, ಅದಕ್ಕೆ ತಕ್ಕುದಾದ ಪಾತ್ರಗಳ ಮೂಲಕ ಸದ್ದು ಮಾಡುತ್ತಾ ಬಂದಿರುವ ಸೇತುಪತಿ ಈಗ ಸೂಪರ್ ಸ್ಟಾರ್ಗಳನ್ನೇ ಸರಿಗಟ್ಟುವಂತೆ ಬೆಳೆದು ನಿಂತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚೆರ್ಪು ಹಂಚಿದಂತೆ ಸಿಕ್ಕ ಸಿಕ್ಕವರಿಗೆಲ್ಲ ಕಾಲ್ ಶೀಟ್ ಕೊಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದೂ ಇದೆ. ಈ ವಿಚಾರದಲ್ಲಿ ಖುದ್ದು ಅಭಿಮಾನಿಗಳೇ ಅಸಮಾಧಾನಗೊಂಡಿದ್ದರು. ಅಂಥಾ ವಿಜಯ್ ಸೇತುಪತಿಯೀಗ ಧನುಷ್ ತಿರಸ್ಕರಿಸಿದ್ದ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ!
ಸಿನಿಮಾ ರಂಗದ ಪಡಸಾಲೆಯಲ್ಲಿ ಹಬ್ಬಿಕೊಂಡಿರೋ ಸುದ್ದಿಗಳ ಪ್ರಕಾರವಾಗಿ ಹೇಳೋದಾದರೆ, ವಿಜಯ್ ಸೇತುಪತಿ ಈಗಾಗಲೇ ಬೇರೆ ನಟರು ಒಲ್ಲೆ ಅಂದಿದ್ದ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲೊಂದಷ್ಟು ಗೆಲುವು ಕಂಡಿದ್ದೂ ಇದೆ. ಅದರ ಮುಂದುವರೆದ ಭಾಗವೆಂಬಂತೆ ಮಣಿರತ್ನಂ ನಿರ್ದೇಶನದ ಸಿನಿಮಾ ಒಂದನ್ನು ಸೇತುಪತಿ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಾಯಿಪಲ್ಲವಿ ನಾಯಕಿಯಾಗಿಯೂ ನಿಕ್ಕಿಯಾಗಿದ್ದಾರೆ. ಮಣಿರತ್ನಂ ಸಿನಿಮಾಗಳಲ್ಲಿ ನಟಿಸಲು ಸ್ಟಾರ್ ನಟರೇ ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗಿರುವಾಗ ಈ ಚಿತ್ರವನ್ನು ಧನುಷ್ ನಿರಾಕರಿಸಿದ್ದೇಕೆ ಎಂಬಂಥಾ ಪ್ರಶ್ನೆ ಸಹಜವಾಗಿಯೇ ಕಾಡುತ್ತೆ. ಈ ನಿಟ್ಟಿನಲ್ಲಿ ನೋಡ ಹೋದರೆ, ಧನುಷ್ಗೆ ಮಣಿರತ್ನಂ ಹೇಳಿದ್ದ ಕಥೆ ಇಷ್ಟವಾಗಿತ್ತಂತೆ. ಆದರೆ, ಸಂಭಾವನೆಯ ವಿಚಾರದಲ್ಲಿ ಹೊಂದಿಕೆಯಾಗದ ಕಾರಣದಿಂದ ಧನುಷ್ ಹಿಂದೆ ಸರಿದಿದ್ದರಂತೆ.
ಅಲ್ಲಿಗೆ ಮಣಿರತ್ನಂ ಸರಿಕಟ್ಟಾದೊಂದು ಕಥೆಯೊಂದಿಗೆ ಅಖಾಡಕ್ಕಿಳಿದಿರೋದು ಪಕ್ಕಾ ಆಗಿದೆ. ಇದು ಮಣಿರತ್ನಂ ಜೊತೆ ಸೇತುಪತಿಯ ಎರಡನೇ ಸಿನಿಮಾ. ತಾಜಾ ಸರಕುಗಳ ಮೂಲಕ ಸದ್ದು ಮಾಡುತ್ತಾ ಬಂದಿರುವ ಮಣಿರತ್ನಂ ಇತ್ತೀಚೆಗೆ ಒಂದಷ್ಟು ಎಡರು ತೊಡರುಗಳನ್ನು ಅನುಭವಿಸಿದ್ದಾರೆ. ಕಮಲ್ ಹಾಸನ್ ನಟನೆಯ ಥಗ್ಲೈಫ್ ಸೋಲಿನಿಂದ ಮಣಿರತ್ನಂ ಕಂಗಾಲಾಗಿದ್ದಾರೆ. ಆ ಸೋಲನ್ನು ದಾಟಿಕೊಳ್ಳುವ ಸಂಕಲ್ಪದೊಂದಿಗೆ ಈ ಕಥೆಯನ್ನು ಸಿದ್ಧ ಪಡಿಸಿಕೊಂಡಂತಿದೆ. ದೊಡ್ಡ ತಾರಾಗಣ ಹೊಂದಿರುವ, ಬಿಗ್ ಬಜೆಟ್ಟಿನ ಈ ಸಿನಿಮಾದ ನಾಯಕನಾಗಿ ಅನೇಕರ ಹೆಸರುಗಳು ತೇಲಿ ಬಂದಿದ್ದವು. ಕಡೆಗೂ ವಿಜಯ್ ಸೇತುಪತಿ ಆ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ.
keywords: vijay sethupathi, manirathnam, saipallavi

