ಒಂದಕ್ಕಿಂತ ಒಂದು ಭಿನ್ನವಾದ, ತಲೆಮಾರುಗಳಾಚೆಗೂ ಪಥ್ಯವಾಗುವ ಸಿನಿಮಾಗಳ ಮೂಲಕ ಮನೆಮಾತಾಗಿರುವವರು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಈ ವರೆಗಿನ ಸಿನಿಮಾ ಯಾನದಲ್ಲಿ ಭಿನ್ನವಾದ ಕಥನಗಳಿಗೆ ದೃಷ್ಯರೂಪ ಕೊಡುತ್ತಾ ಬಂದಿರುವ ಅವರು, ದಶಕಗಳ ಹಿಂದೆ ಮನಸಿಗೆ ನಾಟಿಕೊಂಡಿದ್ದ ಕೌತುಕವೊಂದರ ಬೆಂಬಿದ್ದು, ವರ್ಷಗಟ್ಟಲೆ ಶ್ರಮವಹಿಸಿ `ವೀರ ಕಂಬಳ’ ಚಿತ್ರವನ್ನು ರೂಪಿಸಿದ್ದಾರೆ. ಸರಿಸುಮಾರು ಎಂಟುನೂರು ವರ್ಷಗಳ ಐತಿಹ್ಯವಿರುವ ತುಳುನಾಡ ನೆಲಮೂಲದ ಕಂಬಳ ಕೇಂದ್ರಿತವಾದ ಸದರಿ ಸಿನಿಮಾದ ಟ್ರೈಲರ್ ಈಗ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ತುಳು ಭಾಷೆಯಲ್ಲಿ ಬಿರ್ದ್ದ ಕಂಬಳ ಹೆಸರಿನಲ್ಲಿ ಅಣಿಗೊಂಡಿರುವ ಟ್ರೈಲರ್ ಕೂಡಾ ಇದೇ ಹೊತ್ತಿನಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ.
ಅರ್ಥವತ್ತಾಗಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ನಾದಬ್ರಹ್ಮ ಹಂಸಲೇಖ ವೀರಕಂಬಳದ ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ. ದೇಸೀ ಸೊಗಡಿನ ಕಂಬಳದ ಕಥೆಯಾಧಾರಿತ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿರೋದರ ಬಗ್ಗೆ ಖುಷಿ ವ್ಯಕ್ತಪಡಿಸುತ್ತಲೇ ರಾಜೇಂದ್ರ ಸಿಂಗ್ ಬಾಬು ಮತ್ತು ತಮ್ಮ ನಂಟಿನ ಬಗ್ಗೆ ಮೆಲುಕು ಹಾಕಿದ್ದಾರೆ. ಈ ಪತ್ರಿಕಾಗೋಷ್ಠಿಯ ಕೇಂದ್ರಬಿಂದುವಾದ ರಾಜೇಂದ್ರ ಸಿಂಗ್ ಬಾಬು, ಈ ಕಥೆ ಹುಟ್ಟಿದ ಬಗೆ ಮತ್ತು ಅದಕ್ಕೆ ನಡೆಸಿದ ತಯಾರಿಯ ಬಗ್ಗೆ ಸವಿವರವಾದ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕನಸಿಗೆ ಜೊತೆಯಾದ ತುಳು ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಹಾಗೂ ಗುಣಪಾಲ್ ಕಡಂಬ ಅವರನ್ನು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಕಂಬಳದ ಬಗೆಗಿನ ಒಂದಷ್ಟು ಸೂಕ್ಷ್ಮ ಸಂಗತಿಗಳನ್ನು ಹಂಚಿಕೊಳ್ಳುವ ಮೂಲಕ ಒಂದಿಡೀ ಸಿನಿಮಾದೆಡೆಗೆ ಕುತೂಹಲ ತೀವ್ರಗೊಳ್ಳುವಂತೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕಂಬಳಕ್ಕೂ ಭೂಗತ ಜಗತ್ತಿಗೂ ಇದ್ದ ಭೂಗತ ನಂಟಿನದ್ದೊಂದು ರಸವತ್ತಾದ ವಿಚಾರ ಪ್ರಸ್ತಾಪಿಸುವ ಮೂಲಕ ವೀರಕಂಬಳದ ಮತ್ತೊಂದು ಮಜಲಿನ ಸೂಚನೆಯನ್ನೂ ಬಿಟ್ಟು ಕೊಟ್ಟಿದ್ದಾರೆ.
Veera Kambala Movie: ಕಥೆ ಹುಟ್ಟಿದ ಬಗೆಯ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
ನಿರ್ಮಾಪಕರಾದ ವಿನಿತಾ ವಿಜಯ್ ಕುಮಾರ್ ರೆಡ್ಡಿ ವೀರ ಕಂಬಳದ ಮೂಲಕ ನಿರ್ಮಾಪಕಿಯಾಗಲು ಅವಕಾಶ ಮಾಡಿ ಕೊಟ್ಟ ನಿರ್ದೇಸಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಕೃತಜ್ಞತೆ ಸಲ್ಲಿಸುತ್ತಲೇ, ನೆಲಮೂಲದ ಕಥೆ ಹೊಂದಿರುವ ಈ ಚಿತ್ರವನ್ನು ನೋಡಿ ಗೆಲ್ಲಿಸುವ ಮೂಲಕ ಮತ್ತೊಂದಷ್ಟು ಪ್ರಯತ್ನಗಳಿಗೆ ಅನುವು ಮಾಡಿಕೊಡುವಂತೆ ಪ್ರೇಕ್ಷಕರನ್ನು ವಿನಂತಿಸಿಕೊಂಡಿದ್ದಾರೆ. ನಿರ್ಮಾಪಕರಲ್ಲೊಬ್ಬರಾದ ಅರುಣ್ ರೈ ತೊಡಾರ್ ತಮ್ಮ ಊರಿನ ಅಸ್ಮಿತೆಯಂಥಾ ಈ ಕಥನವನ್ನು ನಿರ್ಮಾಕರಾಗಿ ದೃಷ್ಯವಾಗಿಸಲು ಸಾಧ್ಯವಾದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಯುವಕರೇ ನಾಚುವಂತೆ ಕ್ರಿಯಾಶೀಲತೆಯಿಂದ ರಾಜೇಂದ್ರ ಸಿಂಗ್ ಬಾಬು ಅವರು ಈ ಚಿತ್ರವನ್ನು ಕಟ್ಟಿ ಕೊಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನುಳಿದಂತೆ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಹಾಡುಗಳನ್ನು ರೂಪಿಸಿದ ಪುಳಕದ ಬಗ್ಗೆ ಒಂದಷ್ಟು ವಿವರಗಳನ್ನು ತೆರೆದಿಟ್ಟರು. ನಟ ಆದಿತ್ಯ ಈ ಸಿನಿಮಾದಲ್ಲಿನ ಮುಖ್ಯ ಪಾತ್ರವೊಂದನ್ನು ತಮಗೆ ನೀಡಿದ ತಂದೆ ರಾಜೇಂದ್ರ ಸಿಂಗ್ ಬಾಬು ಅವರಿಗೆ ಕೃತಜ್ಞತೆ ಸಲ್ಲಿಸುತ್ತಲೇ ಹೆಚ್ಚೇನೂ ವಿವರ ಬಿಟ್ಟುಕೊಡದೆ ತಮ್ಮ ಪಾತ್ರದ ಖದರ್ ಎಂಥಾದ್ದೆಂಬುದರ ಸುಳಿವನ್ನಷ್ಟೇ ದಾಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತಾಡಿದ ಉಷಾ ಭಂಡಾರಿ, ತುಳುನಾಡ ದೈವಾರಾಧನೆ, ಸಂಸ್ಕೃತಿಯನ್ನು ಕಾಂತಾರ ಚಿತ್ರ ಬಯಲುಸೀಮೆಯಂಥಾ ಪ್ರದೇಶಗಳಿಗೂ ಪರಿಚಯಿಸಿದ್ದನ್ನು ಉಲ್ಲೇಖಿಸುತ್ತಾ, ವೀರ ಕಂಬಳ ಮತ್ತೊಂದು ಮಜಲನ್ನು ಜಗತ್ತಿನೆದುರು ತೆರೆದಿಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಂಬಳದ ಬಗ್ಗೆ ಅಮೂಲಾಗ್ರವಾಗಿ ಅಧ್ಯಯನ ನಡೆಸಿ ರೂಪಿಸಿರುವ ಈ ಸಿನಿಮಾ ಕಂಬಳದ ಒಳ ಹೊರಗನ್ನು ಹಿಡಿದಿಟ್ಟಿರುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಚಿತ್ರವನ್ನು ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ.

ಆದಿತ್ಯ, ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ನಾರಾಯಣ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಸದರಿ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಚಿತ್ರಕಥೆ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ಅವರ ವಸ್ತ್ರವಿನ್ಯಾಸವಿರುವ ವೀರ ಕಂಬಳ ಫೆಬ್ರವರಿ ೨೭ರಂದು ತೆರೆಗಾಣಲಿದೆ.
keywords: veera kambala, rajendra singh babu, adithya, sandalwood, kfi

