ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ವೀರ ಕಂಬಳ ಚಿತ್ರದ ಮೂಲಕ ಮತ್ತೆ ಆಗಮಿಸಿರುವ ವಿಚಾರ ಕನ್ನಡ ಸಿನಿಮಾ ಪ್ರೇಮಿಗಳನ್ನು ಖುಷಿಗೊಳಿಸಿತ್ತು. ಸದಾ ಹೊಸತನದ ಕಥೆ, ಪ್ರಯೋಗಾತ್ಮಕ ಗುಣಗಳೊಂದಿಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದವರು ರಾಜೇಂದ್ರ ಸಿಂಗ್ ಬಾಬು. ಅವರೀಗ ತುಳುನಾಡಿನ ನೆಲಮೂಲದ ಕಥೆ ಹೊಂದಿರುವ ವೀರ ಕಂಬಳ ಚಿತ್ರವನ್ನ ತೆರೆಗಾಣಿಸುವ ಸನ್ನಾಹದಲ್ಲಿದ್ದಾರೆ. ತುಳು ಭಾಷೆಯಲ್ಲಿಯೂ ಅಣಿಗೊಂಡಿರುವ ಈ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ತಯಾರಾಗಿದೆ. ಈ ಹಿನ್ನೆಲೆಯಲ್ಲಿ ವೀರ ಕಂಬಳದ ಆಂತರ್ಯದಲ್ಲಿ ಅಡಕವಾಗಿರುವ ಒಂದಷ್ಟು ಬೆರಗಿನ ಅಂಶಗಳನ್ನು ತೆರೆದಿಡಲಾಗಿದೆ.
ಕಂಬಳ ಎಂಬುದು ತುಳುನಾಡಿನ ಜನಜೀವನದೊಂದಿಗೆ ಹೊಸೆದುಕೊಂಡಂತಿರೋ ಕ್ರೀಡೆ. ಸರಿಸುಮಾರು ಏಳುನೂರು ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರೋ ಈ ಕ್ರೀಡೆ ಹಂತ ಹಂತವಾಗಿ ಒಂದಷ್ಟು ರೂಪಾಂತರಿಗಳೊಂದಿಗೆ ಸಾಗಿ ಬಂದಿದೆ. ಪ್ರಕೃತಿ, ಪ್ರಾಣಿ ಪಕ್ಷಿಗಳೊಂದಿಗಿನ ಮಾನವರ ಸಹಜೀವನದ ಸಂಕೇತದಂತೆಯೂ ಕಾಣಿಸುವ ಕಂಬಳದ ಹಿಂಚುಮುಂಚಿನಲ್ಲಿ ದೈವೀಕ ಭಾವಗಳೂ ಮೇಳೈಸಿಕೊಂಡಿವೆ. ಇದೀಗ ತುಳುನಾಡನ್ನು ಕಂಬಳದ ವಿಶೇಷಣದ ಮೂಲಕವೇ ಗುರುತಿಸುವಂಥಾ ವಾತಾವರಣವೂ ನಿರ್ಮಾಣಗೊಂಡಿದೆ. ಇಂಥಾದ್ದೊಂದು ಐತಿಹ್ಯವಿರುವ ಕಂಬಳದ ಕಥನಕ್ಕೆ ಎರಡು ವರ್ಷಗಳ ಕಾಲ ಶ್ರಮವಹಿಸಿ, ರಾಜೇಂದ್ರ ಸಿಂಗ್ ಬಾಬು ಅವರು ಕಥೆ ಸಿದ್ಧಪಡಿಸಿದ್ದಾರೆ.
ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ದಕ್ಷಿಣ ಕನ್ನಡದ ಉಡುಪಿಯವರು. ಈ ಕಾರಣದಿಂದಲೇ ಎಳವೆಯಿಂದಲೂ ಅವರ ಪಾಲಿಗೆ ದಕ್ಷಿಣ ಕನ್ನಡ ಸೀಮೆಯ ನಿಕಟವಾದ ನಂಟು ಒದಗಿ ಬಂದಿತ್ತು. ಆ ಕಾಲದಿಂದಲೂ ಬಾಬು ಅವರ ಚಿತ್ತ ಕಂಬಳದ ಸುತ್ತಾ ಸುಳಿದಾಡಲಾರಂಭಿಸಿತ್ತು. ಈಗ್ಗೆ ದಶಕದ ಹಿಂದೆ ತರಂಗ ವಾರಪತ್ರಿಕೆಯಲ್ಲಿ ಕಂಬಳದ ಬಗೆಗೊಂದು ವಿಶೇಷ ಲೇಖನ ಪ್ರಕಟವಾಗಿತ್ತು. ಅದನ್ನು ಓದಿದ ಬಳಿಕ ರಾಜೇಂದ್ರ ಸಿಂಗ್ ಬಾಬು ಅವರೊಳಗೆ ಕಂಬಳ ಕೇಂದ್ರಿತವಾದ ಚಿತ್ರವೊಂದನ್ನು ನಿರ್ದೇಶನ ಮಾಡುವ ಅಚಲ ನಿರ್ಧಾರ ಬಲಗೊಂಡಿತ್ತು. ಪಟ್ಟು ಹಿಡಿದು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿ ಕಥೆ ಸಿದ್ಧಪಡಿಸಿದ್ದ ಬಾಬು ಅವರಿಗೆ ತುಳುನಾಡಿನ ಪ್ರಸಿದ್ಧ ರಂಗಭೂಮಿ ನಿರ್ದೇಶಕ ವಿಜಯ್ ಕೊಡಿಯಾಲ್ಬೈಲ್ ಚಿತ್ರಕಥೆ ಮತ್ತು ಸಂಭಾಷಣೆಯ ಮೂಲಕ ಸಾಥ್ ಕೊಟ್ಟಿದ್ದರು.
ಈಗ ಪ್ರಸಿದ್ಧಿ ಪಡೆದಿರೋ ಕಂಬಳ ಎಂಬುದು ಏಳು ನೂರು ವರ್ಷಗಳ ಹಿಂದೆ ಹೇಗೆ ಜೀವತಳೆದಿರಬಹುದು? ಅದರ ಹುಟ್ಟಿನ ಹಿಂದಿರೋ ವಿಸ್ಮಯಗಳೇನು? ಇಂಥಾ ಪ್ರಶ್ನೆಗಳಿಗೆ ವೀರ ಕಂಬಳ ಚಿತ್ರದಲ್ಲಿ ರಸವತ್ತಾದ ಉತ್ತರವಿದೆ. ಅದನ್ನು ಕಮರ್ಶಿಯಲ್ ಧಾಟಿಯಲ್ಲಿ, ಉತ್ತಮ ಗುಣ ಮಟ್ಟದಲ್ಲಿ ನಿರ್ದೇಶಕರು ರೂಪಿಸಿದ್ದಾರಂತೆ. ಈ ಚಿತ್ರವನ್ನು ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಸದರಿ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ವಿಜಯ್ ಕೊಡಿಯಾಲ್ಬೈಲ್ ಚಿತ್ರಕಥೆ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ಅವರ ವಸ್ತ್ರವಿನ್ಯಾಸದೊಂದಿಗೆ ವೀರ ಕಂಬಳ ಶೃಂಗಾರಗೊಂಡು ತೆರೆಗಾಣಲು ಅಣಿಯಾಗಿದೆ.
keywords: veerakambala, rajendrasingbabu, sandalwood, adithya

