ಗೊಂದಷ್ಟು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲೊಂದು ವೀಡಿಯೋ ಸಖತ್ ಟ್ರೆಂಡಿಂಗಿನಲ್ಲಿತ್ತು.; ಉತ್ತರ ಕರ್ನಾಟಕ ಸೀಮೆಯ ಇಬ್ಬರು ಪುಟ್ಟ ಹುಡುಗರು ತರಗತಿಯಲ್ಲಿ ನಡೆಸೋ ಮಜವಾದ ಸಂಭಾಷಣೆಯ ತುಣುಕದು. ಅತ್ಯಂತ ಸಹಜವಾಗಿ ಮೂಡಿ ಬಂದಿದ್ದ ಆ ವೀಡಿಯೋದ ಮೂಲವನ್ನು ಅದೆಷ್ಟೋ ಮಂದಿ ತಡಕಾಡಿದ್ದರು. ಮತ್ತೆ ಮತ್ತೆ ನೋಡಿ ಮನಸಾರೆ ನಕ್ಕಿದ್ದರು. ಇದೀಗ ಆ ತುಣುಕಿನ ಮೂಲ ತಾನೇ ತಾನಾಗಿ ತೆರೆದುಕೊಂಡಿದೆ. ಅದು ಪಪ್ಪಿ ಎಂಬ ಸಿನಿಮಾದ ಭಾಗವಾಗಿರೋ ವೀಡಿಯೋ ಎಂಬ ವಿಚಾರ ತಿಳಿದು ಮಂದಿ ಖುಷಿಗೊಂಡಿದ್ದಾರೆ. ಇಂಥಾದ್ದೊಂದು ಅಚಾನಕ್ಕಾದ ಅಚ್ಚರಿಗೆ ಕಾರಣವಾಗಿರೋದು ಇದೀಗ ಬಿಡುಗಡೆಗೊಂಡಿರೋ `ಪಪ್ಪಿ’ ಚಿತ್ರದ ಟ್ರೈಲರ್. ಬಹುಶಃ ಇತ್ತೀಚಿನ ವರ್ಷಗಳ ಎಲ್ಲ ದಾಖಲೆಗಳನ್ನೂ ನಿವಾಳಿಸಿ ಎಸೆಯುವಂತೆ ಈ ಟ್ರೈಲರ್ ಇದೀಗ ಕ್ರೇಜ್ ಮೂಡಿಸಿದೆ! 

ಯಾವುದೇ ಹೈಪ್ ಇಲ್ಲ; ಪ್ರಚಾರದ ಪಟ್ಟುಗಳೂ ಇಲ್ಲ. ಇದೆಲ್ಲದರಾಚೆಗೆ, ಸದ್ದೇ ಇರದಂತೆ ಈ ಸಿನಿಮಾ ತಯಾರಾಗಿ ಬಿಡುಗಡೆಗೆ ಸಜ್ಜಾಗಿದೆ. ಅಂದಹಾಗೆ, ಆಯುಶ್ ಮಲ್ಲಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಚಿತ್ರವಿದು. ಇದೇ ಮೊದಲ ಬಾರಿಗೆ ನಿರ್ದೇಶಕರು ತಮ್ಮ ಪುಟ್ಟ ತಂಡದೊಂದಿಗೆ ಪತ್ರಿಕಾಗೋಷ್ಠಿಯ ಮೂಲಕ ಮಾಧ್ಯಮ ಮಂದಿಯನ್ನು ಮುಖಾಮುಖಿಯಾಗಿದ್ದಾರೆ. ಆ ಹಂತದಲ್ಲಿ ಬಿಡುಗಡೆಗೊಂಡಿರೋ ಪಪ್ಪಿಯ ಟ್ರೈಲರ್ ಕಂಡು ಎಲ್ಲರೂ ಬೆಕ್ಕಸ ಬೆರಗಾಗಿದ್ದಾರೆ. ಅದ್ಧೂರಿತನವೊಂದಿದ್ದರೆ ಎಲ್ಲವನ್ನೂ ಮೀರಿ ಮಿಂಚಬಹುದೆಂಬ ಸೂತ್ರವೊಂದಕ್ಕೆ ಸದ್ಯ ಎಲ್ಲರೂ ನೇತುಬಿದ್ದಿದ್ದಾರೆ. ಅಂಥಾ ಸಿದ್ಧಸೂತ್ರಗಳನ್ನು ಮೀರಿಕೊಂಡು ಆಯುಷ್ ಮಲ್ಲಿ ಈ ಸಿನಿಮಾವನ್ನು ರೂಪಿಸಿರುವ ಪರಿ ಟ್ರೈಲರ್ ಮೂಲಕ ಅನಾವರಣಗೊಂಡಿದೆ.


ಅದೆಂಥಾ ಸಿನಿಮಾಗಳು ಬಂದರೂ ಕೂಡಾ, ನೆಲದ ಘಮಲಿನ, ಗ್ರಾಮ್ಯ ಬದುಕಿನ ಗಂಧ ಮೆತ್ತಿಕೊಂಡ ಸಿನಿಮಾ ಧ್ಯಾನವೊಂದು ಸಿನಿಮಾ ಪ್ರೇಮಿಗಳಲ್ಲಿ ಸದಾ ಜೀವಂತವಿರುತ್ತೆ. ಆದರದು ಸಾಕಾರಗೊಳ್ಳುವುದು ಅಪರೂಪಕ್ಕೊಮ್ಮೆ ಮಾತ್ರ. ಇದೀಗ ಪಪ್ಪಿ ಚಿತ್ರದ ಮೂಲಕ ಅದು ಕೈಗೂಡಿದಂತಿದೆ. ಅತ್ಯಂತ ಸಹಜವಾಗಿ ಆಯುಷ್ ಮಲ್ಲಿ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಬೆಂಗಳೂರಿನಂಥಾ ಮಹಾ ನಗರಿಗೆ ಉತ್ತರ ಕರ್ನಾಟಕ ಭಾಗದ ನಾನಾ ಹಳ್ಳಿಗಳಿಂದ ಸಾಕಷ್ಟು ಮಂದಿ ಗುಳೇ ಬರುತ್ತಾರೆ. ಕಟ್ಟಡ ಕಾಮಗಾರಿಯ ಕೂಲಿ ಕೆಲಸವೂ ಸೇರಿದಂತೆ ಅನೇಕ ಕಸುಬುಗಳನ್ನು ಮಾಡಿ ಊರಿಗೆ ಮರಳುತ್ತಾರೆ. ಅದ್ಯಾವುದೋ ರೇಸಿಗೆ ಬಿದ್ದಂತೆ ಬದುಕೋ ಬೆಂಗಳೂರಿಗರ ಪಾಲಿಗೆ ಯಾವುದೋ ಓಣಿಯಲ್ಲಿ ಗುಡಿಸಲಲ್ಲಿ ಬದುಕೋ ಇಂಥಾ ಕಷ್ಟ ಜೀವಿಗಳು ಸೆಳೆಯೋದು ಕಡಿಮೆ. ಆದರೆ, ಉತ್ತರಕರ್ನಾಟಕದಿಂದ ಬಂದಿರುವ ಆಯುಷ್ ಮಲ್ಲಿ ಈ ಸಿನಿಮಾ ಮೂಲಕ ಅಂಥಾ ಬದುಕಿನಾಳಕ್ಕೆ ಹಣಕಿ ಹಾಕಿದ್ದಾದೆ. ಮನೋರಂಜನೆಯ ಧಾಟಿಯ ಒಂದು ಅದ್ಭುತ ಕಥಾನಕವನ್ನವರು ಹೆಕ್ಕಿ ತಂದಿದ್ದಾರೆಂಬ ಸ್ಪಷ್ಟ ಸುಳಿವು ಈ ಟ್ರೈಲರ್ ಮೂಲಕ ಸಿಕ್ಕಿದೆ!

ಸಿಂಧನೂರಿನ ದಡೇಸೂಗೂರು ಮೂಲದ ಆಯುಷ್ ಮಲ್ಲಿ ಈಗೊಂದು ಹದಿನೈದು ವರ್ಷಗಳಿಂದೀಚೆಗೆ ಕನ್ನಡ ಚಿತ್ರರಂಗದ ನಿರ್ದೇಶನ ವಿಭಾಗದಲ್ಲಿ ಸಕ್ರಿಯರಾಗಿದ್ದಾರೆ. ನಾನಾ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಅಗಾಧ ಅನುಭವವನ್ನು ತತನ್ನದಾಗಿಸಿಕೊಂಡಿದ್ದಾರೆ. ಆಯುಷ್ ಊರಿಗೆ ಹೋಗಿ ಬರುವಾಗ ತಮ್ಮ ನೆಲದ ಮಂದಿ ಬೆಂಗಳೂರಿನತ್ತ ಗುಳೇ ಹೊರಡೋದನ್ನು ಗಮನಸಿದ್ದರು. ತಾನು ನಿರ್ದೇಶಕನಾದಾಗ ಇಂಥಾ ಜೀವಗಳ ಕಥನವನ್ನು ಪಕ್ಕಾ ಮನೋರಂಜನಾತ್ಮಕವಾಗಿ ಹೇಳಬೇಕೆಂಬ ನಿರ್ಧಾರ ಮಾಡಿದ್ದರು. ಕಡೆಗೂ ಕಥೆಯೊಂದನ್ನು ಸಿದ್ಧ ಪಡಿಸಿಕೊಂಡಿರುವಾಗಲೇ ಅಂದಪ್ಪ ಸಂಕನೂರರ ಕಡೆಯಿಂದ ಕರೆ ಬಂದು ಒಂದು ಆಲ್ಬಂ ಸಾಂಗ್ ಮಾಡುವ ಆಫರ್ ಬಂದಿತ್ತಂತೆ. ಆ ಕಾಸಲ್ಲಿ ಸಿನಿಮಾ ಮಾಡುವ ಪ್ರಸ್ತಾಪವಿಟ್ಟ ಆಯುಷ್ ಕಥೆ ಹೇಳಿದಾಗ ಅಂದಪ್ಪ ಥ್ರಿಲ್ ಆಗಿ ಒಪ್ಪಿಕೊಂಡ ಫಲವಾಗಿಯೇ ಈ ಸಿನಿಮಾ ರೂಪುಗೊಂಡಿದೆ.

ಈ ಟ್ರೈಲರ್ ಪ್ರಧಾನವಾಗಿ ಮನೋರಂಜನಾತ್ಮಕ ಗುಣಗಳಿಂದ ಮತ್ತು ಸಮ್ಮೋಹಕ ದೃಷ್ಯಗಳಿಂದ ಗಮನ ಸೆಳೆದಿದೆ. ವಿಶೇಷವೆಂದರೆ, ಓರ್ವ ಛಾಯಾಗ್ರಾಹನಕರನ್ನು ಮಾತ್ರ ಜೊತೆಗಿಟ್ಟುಕೊಂಡು ಆಯುಷ್ ಒಂದಿಡೀ ಸಿನಿಮಾವನ್ನು ಚಿತ್ರೀಕರಿಸಿದ್ದಾರೆ. ಸಹ ನಿರ್ದೇಶಕರಿಲ್ಲ, ಸೌಲತ್ತುಗಳನ್ನೂ ಬೇಡಲಿಲ್ಲ. ಆದರೆ ಒಂದು ಅಚ್ಚುಕಟ್ಟಾದ, ತೀರಾ ಹೊಸತನದ ಸಿನಿಮಾವೊಂದನ್ನು ನಿರ್ದೇಶನ ಮಾಡಿದ ಖುಷಿ ಅವರಲ್ಲಿದೆ. ನಾಯಿ ಮತ್ತು ಪುಟ್ಟ ಹುಡುಗರ ಕಡೆಯಿಂದ ನಟನೆ ತೆಗೆಸೋದೊಂದು ಸವಾಲು. ಕೆಲ ಪಾತ್ರಗಳೊಂದಿಗೆ ಆಯುಷ್ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅದರ ಕ್ವಾಲಿಟಿ, ಖದರ್ ಟ್ರೈಲರ್‌ನಲ್ಲಿ ಸ್ಪಷ್ಟವಾಗಿಯೇ ಕಾಣಿಸಿದೆ. ಈ ಟ್ರೈಲರ್ ಈಗ ಅಕ್ಷರಶಃ ವೈರಲ್ ಆಗಿ ಬಿಟ್ಟಿದೆ.

ಚಿತ್ರರಂಗ ಮತ್ತು ರಂಗಭೂಮಿಯ ನಟ, ನಿರ್ದೇಶಕರು, ನಟಿಯರೆಲ್ಗಲ ಆಯುಷ್ ರನ್ನು ಸಂಪರ್ಕಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಈ ಟ್ರೈಲರ್ ಲಾಂಚ್ ಆಗಿ ಕೆಲವೇ ಗಂಟೆಗಳಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕರೆ ಮಾಡಿ ಬೆನ್ತಟ್ಟಿದ್ದಾರೆ. ತಮ್ಮ ಕಡೆಯಿಂದ ಸಾಧ್ಯವಾದಷ್ಟು ಸಾಥ್ ಕೊಡೋದಾಗಿ ಅಭಯ ನೀಡಿದ್ದಾರೆ. ಟ್ರೈಲರ್ ಬಿಡುಗಡೆಗೊಂಡು ಕ್ಷಣಾರ್ಧದಲ್ಲಿಯೇ ಘಟಿಸಿದ ಅನೇಕ ಸಕಾರಾತ್ಮಕ ವಿದ್ಯಮಾನ ಕಂಡು ಆಯುಷ್ ಖುಷಿಗೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದ ಸಿನಿಮಾ ಪ್ರೇಮಿಗಳ ನಡುವೆ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದರೆ, ಪಪ್ಪಿ ದೊಡ್ಡ ಮಟ್ಟದಲ್ಲಿ ಗೆಲ್ಲುವ ಸೂಚನೆಗಳು ಢಾಳಾಗಿವೆ. ನೆಲಗ ನಂಟು ಹೊಂದಿರೋ ಪಪ್ಪಿ ಮೇ ೧ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!