ಕನ್ನಡದ ಹುಡುಗ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನಿಂಡಿಯಾ ಸ್ಟಾರ್. ಟಾಕ್ಸಿಕ್ ಮೂಲಕ ಮತ್ತೊಂದು ಮಟ್ಟ ಮುಟ್ಟಲು ಕೈ ಚಾಚಿರುವ ಯಶ್ ಬಗ್ಗೆ ಸಿನಿಮಾ ಪ್ರೇಮಿಗಳೆಲ್ಲ ಭಾಷಾತೀತವಾಗಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಉತ್ತರದ ಹಿಂದಿವಾಲಾಗಳಿಗೆ, ಅವರ ಮರ್ಜಿಯಲ್ಲಿ ಮೆಲೆತು ನಾರುತ್ತಿರುವವರಿಗೆ ಯಶ್ ವಿರುದ್ಧ ನಖಶಿಖಾಂತ ಉರಿ ಶುರುವಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿಯೂ ಸಮರವೇ ನಡೆಯುತ್ತಿದೆ. ಕನ್ನಡಿಗರೆಲ್ಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿ ಹಿಂದಿವಾಲಾಗಳ ತಿಮಿರಿನ ವಿರುದ್ಧ ಕತ್ತಿ ಝಳಪಿಸುತ್ತಿದ್ದಾರೆ. ಹೀಗೆ ಒಂದು ಆರೋಗ್ಯದಾಯಕ ಸ್ಪರ್ಧಾ ಮನೋಭಾವವನ್ನೇ ಮರೆತವರಂತೆ ವರ್ತಿಸುತ್ತಿರುವ ಉತ್ತರದ ಮಂದಿಗೀಗ ತಿಕ್ಕಲು ಆಸಾಮಿ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಾಥ್ ಕೊಟ್ಟಿದ್ದಾನೆ!
ದುರಂಧರ್ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಲೇ ಬಾಲಿವುಡ್ ಒಂಚೂರು ಚೇತರಿಸಿಕೊಂಡಿತ್ತು. ಗಳಿಕೆಯಲ್ಲಿ ಎಲ್ಲ ದಾಖಲೆಡಗಳನ್ನು ಪುಡಿಗಟ್ಟಿ ಮುಂದುವರೆಯುತ್ತಿರೋ ಈ ಸಿನಿಮಾ ಕೂಡಾ ಎಲ್ಲ ವರ್ಗದವರ ಮನಗೆದ್ದಿದೆ. ಇದರೊಳಗಿರುವ ಒಂದಷ್ಟು ವಿಚಾರಗಳ ಬಗ್ಗೆ ಆರಂಭಿಕವಾಗಿ ಒಂದಷ್ಟು ಮಂದಿ ತಕರಾರೆತ್ತಿದ್ದರು. ಅಂಥವರೂ ಕೂಡಾ ಒಂದು ಸಿನಿಮಾವಾಗಿ ದುರಂಧರ್ ಅನ್ನು ಸಂಭ್ರಮಿಸುತ್ತಿದ್ದಾರೆ. ಅದು ಅಸಲೀ ಸಿನಿಮಾ ಪ್ರೇಮ. ಆದರೆ, ಬಾಲಿವುಡ್ಡೇ ಶ್ರೇಷ್ಠ ಎಂಬಂಥಾ ಭ್ರಮೆ ಹೊಂದಿರುವ ಉತ್ತರದ ಮಂದಿಗೆ ಮಾತ್ರ ಅಂಥಾ ಔದಾರ್ಯ ಇದ್ದಂತಿಲ್ಲ. ಇಂಥಾ ಮನಃಸ್ಥಿತಿ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟವಾಗಿಯೇ ಜಾಹೀರಾಗುತ್ತಿದೆ. ಇದೆಲ್ಲ ಹಾಗಿರಲಿ; ಕೆಲ ಘಳಿಗೆಗಳಲ್ಲಿ ತಲೆ ನೆಟ್ಟಗಿರುವಂತೆ ಮಾತಾಡುವ, ಆಲೋಚನೆಗೆ ಹಚ್ಚುವಂತೆ ವಿಚಾರ ಹಂಚಿಕೊಳ್ಳುವ ವರ್ಮಾ ಅದೇಕೋ ಟಾಕ್ಸಿಕ್ ವಿಚಾರದಲ್ಲಿ ಉರಿ ತಡಕೊಳ್ಳಲಾರದೆ ಒದ್ದಾಡಹತ್ತಿದ್ದಾನೆ!
ಟಾಕ್ಸಿಕ್ ಮತ್ತು ಧುರಂಧರ್೨ ಬಗ್ಗೆ ಮಾತಾಡಿರುವ ವರ್ಮಾ, ಧುರಂಧರ್ ನೈಜತೆಯ ಪಸೆ ಇರುವ ಚಿತ್ರವಾದರೆ, ಟಾಕ್ಸಿಕ್ ಹೀರೋನನ್ನು ವಜೃಂಬಿಸಲೆಂದೇ ಮೂಡಿ ಬಂದಿರುವ ಸಿನಿಮಾ ಎಂದಿದ್ದಾರೆ. ಟಾಕ್ಸಿಕ್ ನಾಯಕ ಬುಲೆಟ್ ಪ್ರೂಫ್ ಜಾಕೆಟ್ ಹಾಕಿಕೊಂಡೇ ಹುಟ್ಟಿದಂತೆ ಕಿರುಚಾಡುತ್ತಾನೆ. ಆದರೆ ಧುರಂಧರ್ ಮೌನದಲ್ಲೇ ಮಾತಾಡುತ್ತಾನೆ ಅಂತೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಬಡಬಡಿಸಿದ್ದಾನೆ. ಇದೇ ವರ್ಮಾ ಈ ಹಿಂದೆ ದುರಂಧರ್ ಚಿತ್ರ ಗೆದ್ದಾಗ `ಬಾಲಿವುಡ್ ಮೇಲಿನ ದಕ್ಷಿಣ ಭಾರತೀಯ ಅತಿಕ್ರಮಣವನ್ನು ದುರಂಧರ್ ಎಡಗಾಲಿನಿಂದ ಒದ್ದಿದ್ದಾನೆ’ ಅನ್ನುವ ಮೂಲಕ ದಕ್ಷಿಣ ಭಾರತೀಯ ಸಿನಿಮಾ ರಂಗದ ಮೇಲೆ ವಿಷ ಕಾರಿಕೊಂಡಿದ್ದ.
ಅಷ್ಟಕ್ಕೂ ಈ ವರ್ಮಾ ಈಗ ಸವಕಲು ಸರಕಿನಂತಾಗಿದ್ದಾನೆ. ಈ ಕಾರಣದಿಂದಲೇ ಓರ್ವ ನಿರ್ದೇಶಕನಾಗಿ ಭಾಷೆಗಳ ಹಂಗಿಲ್ಲದೆ ಎಲ್ಲ ಸಿನಿಮಾಗಳನ್ನೂ ಸಂಭ್ರಮಿಸುವ ಮನಃಸ್ಥಿತಿಯನ್ನೇ ಕಳೆದುಕೊಂಡಿದ್ದಾನೆ. ದಕ್ಷಿಣ ಭಾರತೀಯ ಸಿನಿಮಾಗಳು ಬಾಲಿವುಡ್ ಮಟ್ಟದಲ್ಲಿ ಮಿಂಚಿದರೆ ಅದು ಬಾಲಿವುಡ್ ಮೇಲಿನ ಆಕ್ರಮಣ ಹೇಗಾಗುತ್ತದೆ? ಬಾಲಿವುಡ್ ಮಂದಿ ಸವಕಲು ಸಿನಿಮಾಗಳನ್ನು ಮಾಡುತ್ತಾ ರೀಲು ಸುತ್ತುತ್ತಿರುವಾಗ, ದಕ್ಷಿಣ ಭಾರತೀಯ ಸಿನಿಮಾಗಳ ಕಂಟೆಂಟಿನ ಬಲದಿಂದಲೇ ಗೆದ್ದು ಬೀಗುತ್ತಿವೆ. ಇದರ ಭಾಗವಾಗಿಯೇ ಟಾಕ್ಸಿಕ್ ಕೂಡಾ ಸದ್ದು ಮಾಡುತ್ತಿದೆ. ಧುರಂಧರ್೨ ಬಗ್ಗೆ ಕೂಡಾ ಭಾರೀ ನಿರೀಕ್ಷೆಗಳಿದ್ದಾವೆ. ಇವೆರಡು ಸಿನಿಮಾಗಳು ಆರೋಗ್ಯಕರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿ. ಅಂತಿಮವಾಗಿ ಯಾವುದರ ಕಸುವು ಹೆಚ್ಚಿರುತ್ತೋ ಆ ಸಿನಿಮಾ ಗೆಲ್ಲುತ್ತದೆ. ಅವೆರಡರಲ್ಲಿ ಯಾವ ಸಿನಿಮಾ ಗೆದ್ದರೂ ಅದನ್ನು ಅಸಲೀ ಸಿನಿಮಾ ಪ್ರೇಮಿಗಳು ಸಂಭ್ರಮಿಸುತ್ತಾರೆ. ಇಂಥಾ ಮನಃಸ್ಥಿತಿ ಹಿಂದಿವಾಲಾಗಳಿಗೆ, ಅವರ ಪದತಲಕ್ಕೆ ಮೆದುಳನ್ನು ಅಡ ಇಟ್ಟಂತಿರುವ ವರ್ಮಾನಂತವರಿಗೆ ಬರಲು ಸಾಧ್ಯವೇ?
keywords: toxic, yash, ramgopal varma, dhurandhar2

