ತ್ಯಂತ ಕಡಿಮೆ ಅವಧಿಯಲ್ಲಿಯೇ ನಿರ್ದೇಶಕನಾಗಿ, ನಟನಾಗಿ ಸ್ಟಾರ್ ಗಿರಿ ಪಡೆದುಕೊಂಡವರು (raj b shetty) ರಾಜ್ ಬಿ ಶೆಟ್ಟಿ. ಕನ್ನಡದ ಮಟ್ಟಿಗೆ ಪ್ರತಿಭೆ, ಕ್ರಿಯಾಶೀಲತೆಯ ಬಲದಿಂದಲೇ ಹೀರೋಗಿರಿಯ ವ್ಯಾಖ್ಯಾನ ಬದಲಿಸಿದ ಹಿರಿಮೆಯೂ ಅವರಿಗೇ ಸಲ್ಲುತ್ತದೆ. ಪ್ರೇಕ್ಷಕರನ್ನು ಚಿತ್ರದಿಂದ ಚಿತ್ರಕ್ಕೆ ಹಿಡಿದಿಟ್ಟುಕೊಳ್ಳುವ ಸೂಕ್ಷ್ಮವಂತಿಕೆ, ಹೊಸತೇನನ್ನೋ ಹೇಳ ಹೊರಡುವ ಹುಂಬತನಗಳೆಲ್ಲವೂ ಶೆಟ್ಟರ ಪಾಲಿಗೆ ಸ್ವಂತ. ಹೀಗಿರೋದರಿಂದಲೇ ಅವರು ನಾಯಕನಾಗಿ ನಟಿಸುತ್ತಿರೋ (toby) `ಟೋಬಿ’ ಚಿತ್ರದ ಬಗ್ಗೆ ಅಗಾಧ ಪ್ರಮಾಣದಲ್ಲಿ ನಿರೀಕ್ಷೆಗಳು ಮೂಡಿಕೊಂಡಿದ್ದವು. ಇಲ್ಲಿ ರಾಜ್ ಶೆಟ್ಟಿ ಬೇರೆಯದ್ದೇ ಲುಕ್ಕಿನಲ್ಲಿ ಕಾಣಿಸಿಕೊಂಡಿರುತ್ತಾರೆಂಬ ನಂಬಿಕೆ, ಆ ಪಾತ್ರಕ್ಕೆ ಹೊಸಾ ಬಗೆಯ ಛಾಯೆಯಿರಬಹುದೆಂಬ ನಿರೀಕ್ಷೆ ಸೇರಿದಂತೆ ಟೋಬಿಯ ಸುತ್ತ ನಾನಾ ನಿರೀಕ್ಷೆಗಳು ಮೂಡಿಕೊಂಡಿದ್ದವು. ಇದೀಗ ಟೋಬಿಯ ಟ್ರೈಲರ್ ಲಾಂಚ್ ಆಗಿದೆ. ಎಲ್ಲೋ ಒಂದು ಕಡೆ ಟೋಬಿ ಪ್ರೇಕ್ಷಕರ ನಿರೀಕ್ಷೆಯ ನೆತ್ತಿಯ ಮೇಲೆ ಟೋಪಿ ಮಡಗಿತಾ ಅಂತೊಂದು ಗುಮಾನಿ ಚರ್ಚೆಯ ಸ್ವರೂಪ ಪಡೆದುಕೊಂಡಿದೆ!

ಈ ಟ್ರೈಲರ್ ಬಗ್ಗೆ ಒಂದಷ್ಟು ದೊಡ್ಡ ಧ್ವನಿಯ ಮೆಚ್ಚುಗೆಗಳು ಆರಂಭದಲ್ಲಿ ಕೇಳಿ ಬಂದಿದ್ದವು. ಅದರ ಮಗ್ಗುಲಲ್ಲಿಯೇ ಇಷ್ಟೇನಾ ಎಂಬಂಥಾ ಅತೃಪ್ತಿಯ ಅಲೆಯೆದ್ದಿದ್ದು ಕೂಡಾ ಸುಳ್ಳಲ್ಲ. ಒಂದಷ್ಟು ಹೊಸತನಗಳಿರುವಂತೆ ಭಾಸವಾಗುವ ಟೋಬಿ ಟ್ರಲರ್ ಬಗ್ಗೆ ಇಂಥಾದ್ದೊಂದು ನೆಗೆಟಿವ್ ವಿಮರ್ಶೆ ಮೂಡಿಕೊಳ್ಳಲು ಕಾರಣವೇನು? ಒಂದಷ್ಟು ಮಂದಿಗೆ ನಿರಾಸೆ ಕವುಚಿಕೊಂಡಿದ್ದರ ಹಿಂದಿರೋ ಮರ್ಮವೇನು? ಇಂಥಾ ಪ್ರಶ್ನೆಗಳನ್ನಿಟ್ಟುಕೊಂಡು, ಈ ಟ್ರೈಲರ್ ಅನ್ನು ಪರಾಮಾರ್ಶಿಸಿದರೆ, ಒಂದಷ್ಟು ಸೂಕ್ಷ್ಮಾತಿ ಸೂಕ್ಷ್ಮ ಅಂಶಗಳು ಪತ್ತೆಯಾಗುತ್ತವೆ. ಅದರಲ್ಲಿಯೇ ಅತೃಪ್ತಿಯ ಮೂಲವಿರೋದೂ ಕೂಡಾ ನಿಕ್ಕಿಯಾಗುತ್ತೆ.

ಟೋಬಿಯ ಟ್ರೈಲರ್‍ನ ತುಂಬಾ ಗರುಡ ಗಮನ ವೃಷಭ ವಾಹನ ಚಿತ್ರದ ನೆರಳು ದಟ್ಟವಾಗಿಯೇ ಗೋಚರಿಸುತ್ತಿದೆ. ಆ ಚಿತ್ರದ ಯಶಸ್ಸಿನ ಫಾರ್ಮುಲಾದ ಚುಂಗು ಹಿಡಿದೇ, ಶೆಟ್ಟರು ಟೋಬಿಯಲ್ಲಿನ ಮಾರಿತ್ತಿರೋದೂ ಕೂಡಾ ಸ್ಪಷ್ಟವಾಗುತ್ತದೆ. ಗರುಡ ಗಮನ ಚಿತ್ರದಲ್ಲಿ ಶೆಟ್ಟರ ಪಾತ್ರ ಜನರಿಗೆ ಹಿಡಿಸಲು ಬಹಳಷ್ಟು ಕಾರಣಗಳಿದ್ದವು.. ಆ ಮೂಲಕ ಅವರಿಗೊಂದು ಇಮೇಜು ಸುತ್ತಿಕೊಂಡಿತ್ತು. ಹಾಗೆ ನೋಡಿದರೆ, ರಾಜ್ ಬಿ ಶೆಟ್ಟಿಯಂಥಾ ಕ್ರಿಯೇಟಿವ್ ಮನಸುಗಳ ಪಾಲಿಗೆ ಗೆಲುವೊಂದು ಬೇಗನೆ ಬೋರು ಹೊಡೆಸುತ್ತೆ. ಆದ್ದರಿದಲೇ ಅದಾಗಲೇ ಸಿಕ್ಕ ಗೆಲುವನ್ನು ಮಂಕಾಗಿಸುವ ಮತ್ತೊಂದು ಮಹಾ ಗೆಲುವಿನತ್ತ ಕೈ ಚಾಚುತ್ತಾರೆ. ತಮ್ಮನ್ನು ಸುತ್ತುವರಿದ ಇಮೇಜನ್ನು ಕಳಚಿ ಎಸೆದು ಮತ್ತೊಂದು ಅಚ್ಚರಿಯತ್ತ ಕಣ್ತೆರೆಯುತ್ತಾರೆ. ಹಾಗಿರುವಾಗ, ಶೆಟ್ಟರೇಕೆ ಮತ್ತದೇ ಗರುಡ ಗಮನ ವೃಷಭ ವಾಹನದ ಶಿವನ ಧ್ಯಾನಕ್ಕೆ ಬಿದ್ದಿದ್ದಾರೆಂಬ ಅಚ್ಚರಿ ಕಾಡೇ ಕಾಡುತ್ತದೆ. ಟೋಬಿ ಟ್ರೇಲರಿನ ತುಂಬೆಲ್ಲ ಅದಕ್ಕೆ ಸಹಮತವೂ ಸಿಗುತ್ತಾ ಹೋಗುತ್ತದೆ.

ಟೋಬಿಯಲ್ಲಿ ಮಾರಿಯಾದ ಶೆಟ್ಟರ ಮೋರೆಗೆ ತಗುಲಿಕೊಂಡ ಬೃಹದಾಕಾರದ ರಿಂಗೊಂದನ್ನು ಪಕ್ಕಕ್ಕಿಟ್ಟರೆ, ಸಾಕ್ಷಾತ್ತು ಗರುಡಗಮನದ ಶಿವನೇ ಮಾರಿಯಾದಂತೆಯೂ ಭಾಸವಾಗುತ್ತದೆ. ನಿಖರವಾಗಿ ಹೇಳಬೇಕೆಂದರೆ ಗರುಡ ಗಮನ ವೃಷಭ ವಾಹನದ ಶಿವನ ಪಾತ್ರಕ್ಕೂ, ಟೋಬಿಯ ಪಾತ್ರಕ್ಕೂ ಸಾಮ್ಯತೆ ಕಾಣಿಸುತ್ತದೆ. ಇದು ಅದರ ಮುಂದುವರೆದ ಭಾಗದಂತಿದೆ ಅಂತ ಅನೇಕರಿಗೆ ಈಗಾಗಲೇ ಅನ್ನಿಸಿದೆ. ರೌಧ್ರ ಸ್ಥಿತಿಯಾಚೆಗೂ ಟೋಬಿ ಪಾತ್ರಕ್ಕೆ ಶಿವನ ಛಾಯೆಯೇ ಮೆತ್ತಿಕೊಂಡಂತಿದೆ. ಇದೆಲ್ಲವನ್ನೂ ನೋಡಿದರೆ, ರಾಜ್ ಬಿ ಶೆಟ್ಟಿ ಕೂಡಾ ಇತರೇ ಹೀರೋಗಳತೆ ಇಮೇಜಿಗೆ ಕಟ್ಟು ಬಿದ್ದರಾ ಅಂತೊಂದು ಪ್ರಶ್ನೆಯೂ ಗಾಢವಾಗಿಯೇ ಕಾಡುತ್ತದೆ.

ಹಾಗೆ ನೋಡಿದರೆ, ದೈವದ ಭಾಗದ ಕೆಲ ದೃಷ್ಯಗಳನ್ನು ನಿರ್ದೇಶನ ಮಾಡಿದ್ದ ರಾಜ್ ಶಟ್ಟಿ ಕಾಂತಾರ ಚಿತ್ರಕ್ಕೂ ಗರುಡ ಗಮನ ವೃಷಭ ವಾಹನದ ಪ್ರಭೆಯನ್ನು ಹಬ್ಬಿಸಿದ್ದರು. ಅದೇನೋ ಆವಾಹನೆಯಾದಂತೆ, ಹುಚ್ಚೆದ್ದು ಫೈಟ್ ಸೀನುಗಳಲ್ಲಿ ಅಬ್ಬರಿಸುವ ಫಾರ್ಮುಲಾ ಇದೆಯಲ್ಲಾ? ಅದು ಗರುಡ ಗಮನ ವೃಷಭ ವಾಹನದಿಂದ ಕಡ ತಂದಿದ್ದೆಂದೇ ಅನ್ನಿಸುತ್ತೆ. ಅಂಥಾದ್ದನ್ನೇ ಟೋಬಿಯಲ್ಲೂ ಕೂಡಾ ವ್ಯವಸ್ಥಿತವಾಗಿ ಬಳಸಿಕೊಂಡಂತಿದೆ. ಗರುಡ ಗಮನ ವೃಷಭ ವಾಹನದಲ್ಲಿ ಶೆಟ್ಟರ ಪಾತ್ರದ ಬಗ್ಗೆ ಒಂದಷ್ಟು ರಹಸ್ಯ ಕಾಪಾಡಿಕೊಳ್ಳಲಾಗಿತ್ತು. ಅದು ಟೋಬಿ ವಿಚಾರದಲ್ಲಿ ಟ್ರೈಲರ್ ಮೂಲಕ ಬಯಲಾಗಿದೆ. ಆ ಪಾತ್ರದ ಪ್ರತೀ ಕದಲಿಕೆಗಳ ಅಂದಾಜೂ ಕೂಡಾ ಸಿಕ್ಕಿ ಹೋಗಿದೆ. ಏನಾದರೂ ಕೌತುಕ ಉಳಿದಿದ್ದರೆ ಅದು ಕಥೆಯ ಬಗ್ಗೆ ಮಾತ್ರ!

ಹಾಗೆ ಕಥೆಯ ವಿಚಾರದಲ್ಲಿ ಪ್ರೇಕ್ಷಕರಲ್ಲೊಂದು ನಂಬಿಕೆ ಉಳಿದಿರೋದಕ್ಕೆ ಕಾರಣ ಟಿ.ಕೆ ದಯಾನಂದ್. ಜನರ ನಡುವೆ ಅವಧೂತನಂತೆ ಸುಳಿದಾಡುತ್ತಾ, ಚಿತ್ರವಿಚಿತ್ರ ಕಥೆಗಳನ್ನು ಹೆಕ್ಕಿತರುವ ಛಾತಿ ಹೊಂದಿರುವವರು ದಯಾನಂದ್. ಅವರೇ ಟೋಬಿಯ ಸೃಷ್ಟಿಕರ್ತನಾಗಿರೋದರಿಂದ ಕಥನ ಭಿನ್ನವಾಗಿರುತ್ತದೆಂಬ ನಂಬಿಕೆ ಇದೆ. ಟೋಬಿ ಟ್ರೈಲರ್ ಬಗ್ಗೆ ಇಷ್ಟೆಲ್ಲ ದಿಕ್ಕಿಲ್ಲಿ ಪರಾಮರ್ಶೆ ನಡೆಯುತ್ತಿದೆ, ಒಂದಷ್ಟು ನಿರಾಸೆ ಮೂಡಿಕೊಂಡಿವೆ ಎಂದಾಕ್ಷಣ ಅದನ್ನು ಪ್ಲಾಪ್ ಟ್ರೈಲರ್ ಅನ್ನುವಂತಿಲ್ಲ. ಯಾಕೆಂದರೆ, ನಿಗಧಿತ ಪ್ರೇಕ್ಷಕರನ್ನು ಅದು ಪರಿಣಾಮಕಾರಿಯಾಗಿ ತಲುಪಿದೆ. ಅದರ ಬಲದಿಂದಲೇ ಟೋಬಿಗೆ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆಗಳೂ ಇದ್ದಾವೆ. ಅದುವೇ ಮಧ್ಯ ಮಳೆಗಾಲದಲ್ಲೊಂದು ಮಾರಿಹಬ್ಬದ ಆವೇಗ ಸೃಷ್ಟಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇದೆಲ್ಲ ಏನೇ ಇದ್ದರೂ, ಟೋಬಿಯ ಮಾರಿಯಾದ ರಾಜ್ ಶೆಟ್ಟರ ಪಾತ್ರ ಗತದ ಛಾಯೆಗಳನ್ನೆಲ್ಲ ಕಳಚಿಕೊಂಡು ಮಿಂಚಿದ್ದರೆ ಅದರ ಖದರ್ರೇ ಬೇರೆಯದ್ದಿರುತ್ತಿತ್ತು!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!