ನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕನಸಿಟ್ಟುಕೊಂಡವರು, ಅದಕ್ಕಾಗಿ ಶತಾಯಗತಾಯ ಶ್ರಮ ಹಾಕುವವವರ ಸಂಖ್ಯೆ ಈ ಕ್ಷಣಕ್ಕೂ ಅಂದಾಜಿಗೆ ನಿಲುಕದಷ್ಟಿದೆ. ಹೀಗೆ ಬಹುತೇಕರ ಆಕರ್ಷಣೆಯಂತಿರೋ ಸಿನಿಮಾ ಜಗತ್ತಿನ ಕಥನವೇ ಆಗಾಗ ದೃಶ್ಯ ರೂಪ ಧರಿಸೋದೂ ಇದೆ. ಇದೀಗ ಹೊಸಬರ ತಂಡವೊಂದು ಅಂಥಾದ್ದೊಂದು ಪ್ರಯತ್ನಕ್ಕೆ ಕೈ ಹಾಕಿದಂತಿದೆ. ಅದರ ಫಲವಾಗಿಯೇ ಚೇತನ್ ಜೋಡಿದಾರ್ ನಿರ್ದೇಶನದ `ಟೈಮ್ ಪಾಸ್’ ಚಿತ್ರವೀಗ ಚಿತ್ರೀಕರಣವನ್ನೆಲ್ಲ ತಣ್ಣಗೆ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಸಿನಿಮಾ ಧ್ಯಾನ ಹೊಂದಿರೋ ಪ್ರತಿಭಾನ್ವಿತರ ತಂಡವೊಂದು ಸೇರಿಕೊಂಡು ರೂಪಿಸಿರುವ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಗೊಂಡಿದೆ.

ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರುವ ನಿರ್ದೇಶಕ ಚೇತನ್ ಜೋಡಿದಾರ್ ಇದೀಗ ಒಟ್ಟಾರೆ ಸಿನಿಮಾದ ಬಗ್ಗೆ ಒಂದಷ್ಟು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಇಲ್ಲಿ ಕನ್ನಡ ಸಿನಿಮಾ ರಂಗದ ಇಂದಿನ ಸ್ಥಿತಿಗತಿಗಳ ಕೇಂದ್ರದಲ್ಲಿ ಚಲಿಸುವ ಕಥನವಿದೆ. ಅದನ್ನು ಪಕ್ಕಾ ಹಾಸ್ಯದ ಧಾಟಿಯಲ್ಲಿ ಪ್ರೇಕ್ಷಕರತ್ತ ದಾಟಿಸುವ ಪ್ರಯತ್ನ ಮಾಡಲಾಗಿದೆ. ಇದು ಡಾರ್ಕ್ ಹ್ಯೂಮರ್ ಜಾನರಿಗೆ ಸೇರುವ ಚಿತ್ರ ಎಂಬ ವಿಚಾರವನ್ನೂ ಚಿತ್ರತಂಡ ಖಚಿತಪಡಿಸಿದೆ. ಇಂಥಾ ಹೊಸಬರ ತಂಡಗಳು ಆಗಮಿಸಿದಾಗ ಪ್ರೇಕ್ಷಕರಲ್ಲೊಂದು ಕೌತುಕ ತಾನೇ ತಾನಾಗಿ ಚಿಗಿತುಕೊಳ್ಳುತ್ತದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಹೊಸಬರ ಆಗಮನವಾದಾಗ ತಾಜಾ ಕಥನವೊಂದು ದೃಶ್ಯರೂಪ ಧರಿಸುತ್ತದೆಂಬ ಗಾಢ ನಂಬಿಕೆ ಪ್ರೇಕ್ಷಕರಲ್ಲಿದೆ. ಅದು ಟೈಮ್ ಪಾಸ್ ವಿಚಾರದಲ್ಲಿಯೂ ನಿಜವಾಗುತ್ತಾ ಎಂಬ ಪ್ರಶ್ನೆಗೆ ಇಕಷ್ಟರಲ್ಲಿಯೇ ಉತ್ತರ ಸಿಗಲಿದೆ.

ಸಾಮಾನ್ಯವಾಗಿ ಸನಿಮಾರಂಗಕ್ಕೆ ನಿರ್ದೇಶಕರಾಗಿ ಆಗಮಿಸುವವರು ದಶಕಗಟ್ಟಲೆ ಸಿನಿಮಾ ರಂಗದ ಭಾಗವಾಗಿ ಕಾರ್ಯ ನಿರ್ವಹಿಸಿರುತ್ತಾರೆ. ನಾನಾ ನಿರ್ದೇಶಕರ ಮಾರ್ಗದರ್ಶನದಲ್ಲಿ ಪಳಗಿಕೊಂಡಿರುತ್ತಾರೆ. ಆದರೆ, ಟೈಮ್ ಪಾಸ್ ಚಿತ್ರದ ನಿರ್ದೇಶಕ ಚೇತನ್ ಜೋಡಿದಾರ್ ವಿಚಾರದಲ್ಲಿ ಮಾತ್ರ ಭಿನ್ನ ಹಿನ್ನೆಲೆಯೊಂದಿದೆ. ಚೇತನ್ ಜೋಡಿದಾರ್ ಈವರೆಗೂ ಯಾವ ನಿರ್ದೇಶಕರೊಂದಿಗೂ ಕೆಲಸ ಮಾಡಿಲ್ಲ. ಸಿನಿಮಾ ಸಂಬಂಧಿತವಾದ ಯಾವ ಕೋರ್ಸುಗಳನ್ನೂ ಅವರು ಮಾಡಿಕೊಂಡಿಲ್ಲ. ಸಿನಿಮಾ ನೋಡುತ್ತಾ, ಯೂಟ್ಯೂಬ್ ಮೂಲಕ ಅನೇಕ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಲೇ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಶ್ರೀ ಚೇತನ ಸರ್ವಿಸಸ್ ಬ್ಯಾನರಿನಡಿಯಲ್ಲಿ ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ, ಎಂ.ಹೆಚ್ ಕೃಷ್ಣಮೂರ್ತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ರಂಗದ ನಾನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಕನಸು ಕಂಡ ಏಳು ಪಾತ್ರಗಳ ಸಂಗಮದ ಮೂಲಕ ಈ ಕಥನ ತೆರೆದುಕೊಳ್ಳುತ್ತದೆಯಂತೆ. ಅನೇಕ ತಿರುವುಗಳೊಂದಿಗೆ, ಭರಪೂರ ಮನೋರಂಜನೆಯೊಂದಿಗೆ ಈ ಚಿತ್ರ ಪ್ರೇಕ್ಷಕರಿಗೆ ಹಿಡಿಸಲಿದೆ ಎಂಬ ನಂಬಿಕೆ ನಿರ್ದೇಶಕರದ್ದು. ಇಲ್ಲಿ ಎರಡು ಫೈಟ್ ಸೀನುಗಳು ಹಾಗೂ ನಾಲಕ್ಕು ಹಾಡುಗಳಿದ್ದಾವೆ. ಇಳೆಯರಾಜ ಮತ್ತು ಎ.ಆರ್ ರೆಹಮಾನ್ ಗರಡಿಯಲ್ಲಿ ಪಳಗಿಕೊಂಡವರು ಲೈವ್ ಮ್ಯೂಸಿಕ್ ಮೂಲಕ ಹಾಡುಗಳನ್ನು ರೂಪಿಸಿದ್ದಾರೆ.

ಇದುವರೆಗೂ ಸರಿಸುಮಾರು ಒಂಬೈನೂರಾ ಐವತ್ತರಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಪ್ರಚಾರ ಕಲೆಯ ನಿಪುಣರಾದ ಮಣಿ ಅವರೇ ಈ ಚಿತ್ರದ ಪ್ರಚಾರ ಕಲೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ರತ್ಷಾರಾಮ್, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗಿರೀಶ್ ಗೌಡ ಸಾಹಸ ನಿರ್ದೇಶನ, ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ, ರಾಜೀವ್ ಗಣೇಶ್ ಛಾಯಾಗ್ರಹಣ, ಮಣಿ ಪ್ರಚಾರ ಕಲೆ, ಡಿ. ಶಾಮಸುಂದರ್, ಬಿ.ಕೆ ದಯಾನಂದ ನಿರ್ಮಾಣ ನಿರ್ವಹಣೆ, ಹರಿ ಪರಮ್ ಸಂಕಲನ, ಡಿ.ಎಂ ಉದಯ ಕುಮಾರ್ (ಡಿಕೆ) ಸಂಗೀತ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!