ಕನ್ನಡ ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ಮಹಿಳೆಯರ ಇರುವಿಕೆ ತೀರಾ ಕಡಿಮೆ ಇದೆ. ಹೆಣ್ಣುಮಕ್ಕಳೇನಿದ್ದರೂ ನಟಿಯರಾಗೋ ಕನಸು ಕಂಡು, ತೆರೆಯ ಮೇಲಷ್ಟೇ ಮಿಂಚಬಹುದೆಂಬಂಥಾ ಅಘೋಶಿತ ವಾತಾವರಣವೊಂದು ಇಲ್ಲಿ ಚಾಲ್ತಿಯಲ್ಲಿದೆ. ಮಹಿಳಾ ನಿರ್ದೇಶಕಿಯರೂ ಇಲ್ಲಿ ಬೆರಳೆಣಿಕೆಯಷ್ಟಿದ್ದಾರಷ್ಟೆ. ಹಾಗಿರುವಾಗ, ನಟಿಯಾಗಿ ಸೀರಿಯಲ್ಲು, ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದವರು ಏಕಾಏಕಿ ಸಿನಿಮಾವೊಂದರ ನಿರ್ದೇಶನ ವಿಭಾಗದಲ್ಲಿ, ತಾಂತ್ರಿಕ ವಲಯದಲ್ಲಿ ಕಾಣಿಸಿಕೊಳ್ಳುತ್ತಾರೆಂದರೆ ಸಹಜವಾಗಿಯೇ ಅಚ್ಚರಿಯಾಗುತ್ತೆ. ಇದೇ ಅಕ್ಟೋಬರ್ ೧೭ರಂದು ತೆರೆಗಾಣಲಿರುವ ಟೈಮ್ ಪಾಸ್ ಚಿತ್ರದ ಭೂಮಿಕೆಯಲ್ಲಿಯೂ ಅಂಥಾದ್ದೊಂದು ಅಚ್ಚರಿಯಿದೆ. ವೈಷ್ಣವಿ ಸತ್ಯನಾರಾಯಣ ಅದರ ಕೇಂದ್ರಬಿಂದುವಾಗಿದ್ದಾರೆ!

ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ಅಮೃತಧಾರೆ, ಮಿಥುನರಾಶಿ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದವರು ವೈಷ್ಣವಿ. ಒಂದಷ್ಟು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರುವ ಆಕೆ ಟೈಮ್ ಪಾಸ್ ಚಿತ್ರದ ಸಹ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಆರಂಭದಿಂದ ಇಲ್ಲಿಯವರೆಗೂ ಪ್ರತೀ ಹಂತದಲ್ಲಿಯೂ ನಿರ್ದೇಶಕ ಚೇತನ್ ಜೋಡಿದಾರ್ ಅವರಿಗೆ ಸಾಥ್ ಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ, ನೃತ್ಯ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ಎರಡು ಹಾಡುಗಳಿಗೆ ಸಾಹಿತ್ಯ ಬರೆಯುವ ಮೂಲಕವೂ ಗಮನ ಸೆಳೆದಿದ್ದಾರೆ. ಈಗಾಗಲೇ ಅವೆರಡೂ ಹಾಡುಗಳು ಬಿಡುಗಡೆಗೊಂಡು, ಕೇಳುಗರಿಂದ ಮೆಚ್ಚುಗೆ ಪಡೆದುಕೊಂಡ ಖುಷಿಯೂ ವೈಷ್ಣವಿಗಿದೆ.

ತೆರೆಮೇಲೆ ಕಾಣಿಸಿಕೊಂಡ ಅನುಭವವಿದ್ದ ವೈಷ್ಣವಿ ಸತ್ಯನಾರಾಯಣರದ್ದು ಸಿನಿಮಾ ಜಗತ್ತಿನ ಎಲ್ಲ ವಿಭಾಗಗಳನ್ನೂ ಕೂಡಾ ಅರಿತುಕೊಳ್ಳಬೇಕೆಂಬ ಹಂಬಲ. ನಟಿಯಾಗಿ ನೆಲೆಗೊಳ್ಳುವ ಸಾಧ್ಯತೆಗಳು ಇದ್ದಾಗಲೂ ಕೂಡಾ, ಅವರ ಪ್ರಧಾನ ಆಸಕ್ತಿ ನಿರ್ದೇಶನದತ್ತ ಕೀಲಿಸಿಕೊಂಡಿತ್ತು. ಅಂಥಾದ್ದೊಂದು ಅವಕಾಶವನ್ನು ಟೈಮ್ ಪಾಸ್ ಮೂಲಕ ನಿರ್ದೇಶಕ ಚೇತನ್ ಜೋಡಿದಾರ್ ಕಲ್ಪಿಸಿದ್ದಾರೆ. ಹಾಗೆ ಸಿಕ್ಕ ಅವಕಾಶವನ್ನು ಸರಿಕಟ್ಟಾಗಿ ಬಳಸಿಕೊಂಡ ಆತ್ಮತೃಪ್ತಿ ಮತ್ತು ಹೆಣ್ಣುಮಕ್ಕಳು ವಿರಳವಾಗಿರುವ ವಲಯದಲ್ಲಿ ಕಾರ್ಯನಿರ್ವಹಿಸಿದ ಹೆಮ್ಮೆ ವೈಷ್ಣವಿಯದ್ದು. ವರ್ಷಗಟ್ಟಲೆ ಹಾಕಿದ ಶ್ರಮದಿಂದ ಎಲ್ಲ ವರ್ಗಕ್ಕೂ ರುಚಿಸುವಂತೆ ಟೈಮ್ ಪಾಸ್ ಚಿತ್ರ ಮೂಡಿ ಬಂದಿದೆ ಎಂಬ ಖುಷಿಯೂ ಅವರಲ್ಲಿದೆ.

ಬೆಂಗಳೂರು ಹುಡುಗಿಯಾಗಿರುವ ವೈಷ್ಣವಿ ಬಿಕಾಂ ಪದವೀಧರೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಟನೆಯ ಗುಂಗು ಹತ್ತಿಸಿಕೊಂಡಿದ್‌ದ ಅವರು, ಓದು ಮುಗಿಯುತ್ತಲೇ ರಂಗಭೂಮಿ ತಂಡಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಲ್ಲಿಯೂ ಕೂಡಾ ಬರೀ ನಟನೆಗೆ ಮಾತ್ರವೇ ಸೀಮಿತವಾಗದೆ ಎಲ್ಲ ವಿಭಾಗಗಳನ್ನೂ ಅರಗಿಸಿಕೊಳ್ಳಲು ಪ್ರಯತ್ನಿಸಿದ್ದರು. ಹೀಗೆ ರಂಗಭೂಮಿಯಲ್ಲಿ ಒಂದಷ್ಟು ಕಾಲ ಪಳಗಿಕೊಂಡ ನಂತರ ಧಾರಾವಾಹಿಗಳತ್ತ ವಾಲಿಕೊಂಡ ವೈಷ್ಣವಿ ಪಾಲಿಗೆ ಕಲರ್ಸ್ ಮತ್ತು ಜೀ ಕನ್ನಡ ವಾಹಿನಿಗಳ ಜನಪ್ರಿಯ ಧಾರಾವಾಹಿಗಳಲ್ಲಿ ಗುರುತಾಗುವಂಥಾ ಪಾತ್ರಗಳು ಸಿಕ್ಕಿದ್ದವು. ಪ್ರಿಯಾಂಕಾ ಉಪೇಂದ್ರ ನಟಿಸಿರುವ, ಇನ್ನಷ್ಟೇ ಬಿಡುಗಡೆಗೊಳ್ಳಬೇಕಿರುವ ಕತೃ ಕ್ರಿಯಾ ಕರ್ಮ ಚಿತ್ರದಲ್ಲಿಯೂ ಆಕೆ ನಟಿಸಿದ್ದಾರೆ. ಸ್ಲೋಗನ್ ಚಿತ್ರದಲ್ಲಿಯೂ ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗೆ ನಟಿಯಾಗಿ ಚಿಗುರಿಕೊಳ್ಳುತ್ತಿದ್ದ ವೈಷ್ಣವಿ ಪಾಲಿಗೆ ಟೈಮ್ ಪಾಸ್ ಚಿತ್ರ ರೂಪಾಂತರವಿದ್ದಂತೆ. ಇದರ ಮೂಲಕ ತನ್ನ ವೃತ್ತಿ ಬದುಕು ಮತ್ತೊಂದು ಬಗೆಯಲ್ಲಿ ಟಿಸಿಲೊಡೆಯಹುವ, ಗೆಲುವು ದಕ್ಕುವ ನಿರೀಕ್ಷೆ ವೈಷ್ಣವಿ ಅವರದ್ದು!
