ಚೇತನ್ ಜೋಡಿದಾರ್ ನಿರ್ದೇಶನದ ಟೈಮ್ ಪಾಸ್ ಚಿತ್ರ ಇದೇ ಅಕ್ಟೋಬರ್ 17ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಹೆಚ್ಚಾಗಿ ಹೊಸಬರೇ ತುಂಬಿಕೊಂಡಂತಿರುವ ಸದರಿ ಸಿನಿಮಾದ ತಾರಾಗಣದಲ್ಲಿ ರಂಗಭೂಮಿ ಪ್ರತಿಭೆಗಳದ್ದೇ ಮೇಲುಗೈ. ನಟ ನಟಿಯರನ್ನು ಪರಿಪೂರ್ಣವಾಗಿ ಅಣಿಗೊಳಿಸುವ ಸಮ್ಮೋಹಕ ಗುಣ ಹೊಂದಿರುವ ರಂಗಭೂಮಿಯಿಂದ ನಟ ನಟಿಯರ ಆಗಮನವಾದರೆ ಸಹಜವಾಗಿಯೇ ಅದರ ಬಗೆಗೊಂದು ಸೆಳೆತ ಮೂಡಿಕೊಳ್ಳುತ್ತೆ. ಯಾಕೆಂದರೆ, ರಂಗಭೂಮಿಯಲ್ಲಿ ರೂಪುಗೊಂಡ ಕಲಾವಿದರಿಗೆ ಎಂಥಾದ್ದೇ ಪಾತ್ರವಾದರೂ ಸಲೀಸಾಗಿ ಜೀವ ತುಂಬಬಲ್ಲ ಛಾತಿ ಇರುತ್ತದೆಂಬ ನಂಬಿಕೆಯಿದೆ. ಟೈಮ್ ಪಾಸ್ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ಯುವ ನಟ ಇಮ್ರಾನ್ ಪಾಷಾ ಕೂಡಾ ರಂಗಭೂಮಿಯನ್ನೇ ಶಕ್ತಿಕೇಂದ್ರವಾಗಿಸಿಕೊಂಡವರು!

ಅಪ್ಪಟ ಬೆಂಗಳರು ಹುಡುಗ ಇಮ್ರಾನ್ ಪಾಷ ಸರಿಸುಮಾರು ಹದಿನಾಲಕ್ಕು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವವರು. ಖ್ಯಾತ ರಂಗಕರ್ಮಿ ಎಂ.ಎಸ್ ಸತ್ಯು ಮತ್ತು ಎಂ.ಸಿ ಆನಂದ್ ಅವರ ಗರಡಿಯಲ್ಲಿ ಪಳಗಿಕೊಂಡಿದ್ದ ಪಾಷಾ, ಇದೀಗ ತಮ್ಮದೇ ತಂಡ ಕಟ್ಟಿಕೊಂಡು ಹಿಂದಿ, ಇಂಗ್ಲಿಷ್ ನಾಟಕಗಳತ್ತಲೂ ತಮ್ಮ ಪರಿಧಿಯನ್ನು ವಿಸ್ತರಿಸಿಕೊಂಡಿದ್ದಾರೆ. ಆ ಹಾದಿಯಲ್ಲಿ ಅವರಿಗೆ ಪೂಜಾ ಪಾಂಡೆ ತ್ರಿಪಾಠಿ ಗುರುವಾಗಿ ಸಿಕ್ಕಿದ್ದಾರೆ. ಹೀಗೆ ಸಕ್ರಿಯವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಇಮ್ರಾನ್ ಪಾಷಾ ಪಾಲಿಗೆ ಆರಂಭದಿಂದಲೂ ವಜ್ರಮುನಿ ಎಂದರೆ ಬಲು ಅಭಿಮಾನ. ವಜ್ರಮುನಿಯವರ ಅಭಿನಯವನ್ನು ಕಣ್ತುಂಬಿಕೊಳ್ಳುತ್ತಲೇ ಸಾಗಿ ಬಂದ ಇಮ್ರಾನ್‌ರೊಳಗೆ ಆ ಕಾರಣದಿಂದಲೇ ಸಿನಿಮಾ ನಟನಾಗುವ ಕನಸು ಟಿಸಿಲೊಡೆದಿತ್ತು.

ಮೂಲತಃ ಸಾಪ್ಟ್‌ವೇರ್ ಇಂಜಿನಿಯರ್ ಆಗಿರುವ ಇಮ್ರಾನ್ ಪಾಷಾ ಆರಂಭದಲ್ಲಿ ಮೂರು ವರ್ಷಗಳ ಕಾಲ ಟಿಸಿಎಸ್ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ಆದರೆ, ಅವರ ಒಲವೆಲ್ಲವೂ ಕಲಾಕೇಂದ್ರಿತವಾಗಿದ್ದದ್ದರಿಂದ ಆ ಕ್ಷೇತ್ರದಲ್ಲಿ ಹೆಚ್ಚು ಕಾಲ ಇಕರಲು ಸಾಧ್ಯವಾಗಿರಲಿಲ್ಲ. ಕಡೆಗೂ ಕಲೆಯ ಸೆಳವಿಗೆ ಸಿಕ್ಕು ಕೈತುಂಬಾ ಸಂಪಾದನೆಯಿದ್ದ ಕೆಲಸವನ್ನು ಬಿಟ್ಟು ಬಂದಿದ್ದ ಪಾಷಾ, ರೇಡಿಯೋ ಮಿರ್ಷಿಯಲ್ಲಿ ಸೀನಿಯರ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ನಮ್ ರೇಡಿಯೋದಲ್ಲಿ ಆರ್‌ಜೆ ಆಗಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದ ಇಮ್ರಾನ್‌ಗೆ ಒಂದಷ್ಟು ಖ್ಯಾತಿ ಸಿಕ್ಕಿತ್ತು. ಇದಾದ ನಂತರ ತನ್ನ ಬದುಕೇನಿದ್ದರೂ ನಟನೆಗೇ ಅರ್ಪಿತ ಅಂತೊಂದು ನಿರ್ಧಾರ ಮಾಡಿದವರೇ ರಂಗಭೂಮಿಗೆ ಅಡಿಯಿರಿಸಿದ್ದರು.

ರಂಗಭೂಮಿಯ ಜೊತೆ ಜೊತೆಗೇ ಉದಯ ಮ್ಯೂಸಿಕ್ ಚಾನೆಲ್ಲಿನಲ್ಲಿ ಒಂಬತ್ತು ವರ್ಷಗಳ ಕಾಲ ಆಂಕರ್ ಆಗಿಯೂ ಕೆಲಸ ಮಾಡಿದ್ದ ಇಮ್ರಾನ್ ಪಾಶಾ ಜ್ಯೂನಿಯರ್ ಆರ್ಟಿಸ್ಟ್ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಈ ಹಾದಿಯಲ್ಲಿ ಲೆಕ್ಕವಿಲ್ಲದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದ ಇಮ್ರಾನ್ ಪಾಲಿಗೆ ಆ ಹೆಜ್ಜೆಗಳೆಲ್ಲವೂ ಗಮ್ಯವನ್ನು ಹತ್ತಿರಾಗಿಸುತ್ತವೆಂಬ ಭಾವವಿತ್ತು. ಕಡೆ ಕಡೆಗೆ ತನ್ನಿಷ್ಟದಂತೆಯೇ ಮುಖ್ಯವಾದ ಖಳನ ಪಾತ್ರಗಳು ಒಲಿದು ಬರಲಾರಂಭಿಸಿದ್ದವು. ಅಂಥಾ ಗುರುತಿಟ್ಟುಕೊಳ್ಳಬಹುದಾದ ಪಾತ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇಮ್ರಾನ್ ನಟಿಸಿದ್ದಾರೆ. ಈ ನಡುವೆ ನಿರೂಪಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಇಮ್ರಾನ್‌ರ ವೃತ್ತಿ ಬದುಕು ಮಹತ್ವದ ಘಟ್ಟದತ್ತ ಹೊರಳಿಕೊಂಡಿದ್ದು ಟೈಮ್ ಪಾಸ್ ಚಿತ್ರದಲ್ಲಿ ಕೂಡಿ ಬಂದ ಅವಕಾಶದ ಮೂಲಕ!

ವರ್ಷಗಳ ಹಿಂದೆ ಅದಾಗಲೇ ಟೈಮ್ ಪಾಸ್ ಚಿತ್ರಕ್ಕೆ ತಯಾರಿ ಮಾಡಿಕೊಂಡಿದ್ದ ಚೇತನ್ ಜೋಡಿದಾರ್ ನಾಟಕವೊಂದನ್ನು ನೋಡಲು ಹೋಗಿದ್ದರು. ಆ ನಾಟಕದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದ ಇಮ್ರಾನ್‌ರನ್ನು ಕಂಡು ಮಾತಾಡಿಸಿದ್ದರಂತೆ. ಬಳಿಕ ಈ ಸಿನಿಮಾ ಬಗ್ಗೆ ಮಾತಾಡಿದ್ದ ಚೇತನ್ ಜೋಡಿದಾರ್, ಸಹ ನಿರ್ದೇಶಕಿ ವೈಷ್ಣವಿ ಮೂಲಕ ಕಥಾ ಹಂದರವನ್ನು ವಿವರಿಸಿದ್ದರು. ಅದಾಗಿ ಒಂದಷ್ಟು ಕಾಲ ನೀರವ ವಾತಾವರಣವಿತ್ತು. ಕಡೆಗೂ ಅಚಾನಕ್ಕಾಗಿ ಕರೆ ಮಾಡಿದ್ದ ಚೇತನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಲು ಹೇಳಿದಾಗ ಇಮ್ರಾನ್‌ಗೆ ಖುಷಿ ಮತ್ತು ಭಯ ಒಟ್ಟೊಟ್ಟಿಗೇ ಕಾಡಿತ್ತಂತೆ. ಆದರೂ, ಅದಾಗಿಯೇ ಒಲಿದು ಬಂದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಂಕಲ್ಪದೊಂದಿಗೆ ಇಮ್ರಾನ್ ಟೈಮ್ ಪಾಸ್ ಭಾಗವಾಗಿದ್ದರು.

ಡಾರ್ಕ್ ಕಾಮಿಡಿ ಜಾನರಿನ ಈ ಸಿನಿಮಾದಲ್ಲಿ ಶಂಕರ್ ಎಂಬ ಮುಖ್ಯ ಪಾತ್ರಕ್ಕೆ ಇಮ್ರಾನ್ ಪಾಷಾ ಜೀವ ತುಂಬಿದ್ದಾರೆ. ಆ ಪಾತ್ರದ ಚಹರೆಗಳನ ನು ಒಳಗಿಳಿಸಿಕೊಂಡು, ಅದಕ್ಕಾಗಿ ಒಂದಷ್ಟು ತಾಲೀಮು ನಡೆಸಿಯೇ ಇಮ್ರಾನ್ ಬಣ್ಣ ಹಚ್ಚಿದ್ದಾರೆ. ನಿರ್ದೇಶಕನಾಗೋ ಕನಸು ಹೊತ್ತು ಸಾಗುವ ಆ ಪಾತ್ರದಲ್ಲಿ ಉತ್ಕಟವಾಗಿ ಹಬ್ಬಿಕೊಂಡಿರುವ ಸಿನಿಮಾ ಧ್ಯಾನಕ್ಕೂ, ತಗನ್ನೊಳಗಿನ ಸಿನಿಮಾ ಪ್ರೇಮಕ್ಕೂ ಸಾಮ್ಯತೆಗಳಿವೆ ಎನ್ನುವ ಇಮ್ರಾನ್‌ಗೆ, ಈ ಪಾತ್ರದ ಮೂಲಕವೇ ತನ್ನ ಕನಸಿನ ಹಾದಿ ಸುಗಮವಾಗುತ್ತದೆಂಬ ಭರವಸೆಯಿದೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಸಿಕ್ಕರೂ ಕೂಡಾ, ಮುಂದೆ ಕೂಡಾ ಅಂಥಾದ್ದೇ ಪಾತ್ರಗಳು ಬೇಕೆಂಬ ಇಂಗಿತ ಅವರಲ್ಲಿಲ್ಲ. ಪಾತ್ರ ಯಾವುದಾದರೂ ಸರಿ; ಒಳ್ಳೆ ನಟನಾಗಿ ನೆಲೆಗಾಣಬೇಕೆಂಬುದು ಇಮ್ರಾನ್‌ರ ಏಕಮಾತ್ರ ಆಸೆ.

ಮೊದಲೇ ಹೇಳಿದಂತೆ ವಜ್ರಮುನಿಯ ಖಟ್ಟರ್ ಭಕ್ತನಾಗಿರುವ ಇಮ್ರಾನ್‌ಗೆ ನೆಗೆಟಿವ್ ರೋಲ್‌ಗಳತ್ತಲೇ ಹೆಚ್ಚು ಒಲವಿದೆ. ಈಗಾಗಲೇ ಅವರು ನಟಿಸಿರುವ ಮತ್ತೊಂದಷ್ಟು ಸಿನಿಮಾಗಳೂ ಕೂಡಾ ಬಿಡುಗಡೆಯ ಹಾದಿಯಲ್ಲಿವೆ. ಟೈಮ್ ಪಾಸ್ ಚಿತ್ರದ ಬಗ್ಗೆ ಅವರೊಳಗೆ ಗಾಢವಾದ ನಿರೀಕ್ಷೆಗಳಿದ್ದಾವೆ. ಅಪರಿಚಿತನಾಗಿದ್ದ ತನಗೆ ಈ ಚಿತ್ರದಲ್ಲಿ ಮುಖ್ಯ ಪಾತ್ರ ಕೊಟ್ಟು ಪ್ರೋತ್ಸಾಹಿಸಿದ, ಮಾಶರ್ಗದರ್ಶನ ನೀಡಿದ ಚೇತನ್ ಜೋಡಿದಾರ್ ಮತ್ತು ಸಾಥ್ ಕೊಟ್ಟ ಚಿತ್ರತಂಡದ ಬಗ್ಗೆ ಕೃತಜ್ಞತಾ ಭಾವವಿದೆ. ಅಂತೂ ಟೈಮ್ ಪಾಸ್ ಮೂಲಕ ಇಮ್ರಾನ್ ಪಾಷಾ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳುವ ಸೂಚನೆಗಳು ದಟ್ಟವಾಗಿವೆ.
