ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸಬರ ತಂಡದ ಆಗಮನವಾಗಿದೆ; ಇದೇ ಅಕ್ಟೋಬರ್ ೧೭ರಂದು ಬಿಡುಗಡೆಗೆ ಅಣಿಗೊಂಡಿರುವ `ಟೈಮ್ ಪಾಸ್’ ಚಿತ್ರದ ಮೂಲಕ. ಚೇತನ್ ಜೋಡಿದಾರ್ ನಿರ್ದೇಶನ ದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ಒಂದಷ್ಟು ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಸಾಮಾನ್ಯವಾಗಿ, ಹೀಗೆ ಹೊಸಬರ ತಂಡದ ಆಗಮನವಾದಾಗೆಲ್ಲ ಹೊಸತನದ ನಿರೀಕ್ಷೆಗಳು ಗರಿಗೆದರಿಕೊಳ್ಳೋದು ಸಹಜ. ಹೆಚ್ಚಿನದಾಗಿ ಅಂಥಾ ನಿರೀಕ್ಷೆಗಳು ಒಂದು ಮಟ್ಟಕ್ಕಾದರೂ ಮುಟ್ಟಿದ ಕುರುಹುಗಳು ಸಾಕಷ್ಟಿವೆ. ಈ ದಿಸೆಯಲ್ಲಿ ನೋಡೋದಾದರೆ, ಇದೀಗ ಕರ್ನಾಟಕದ ಮೂಲೆ ಮೂಲೆಗೂ ತಲುಪಿಕೊಳ್ಳುತ್ತಿರೋ ಈ ಸಿನಿಮಾ ಕೂಡಾ ಆ ಸಾಲಿಗೆದ ಸೇರಬಹುದಾ ಎಂಬಂಥಾ ಕುತೂಹಲವೊಂದು ಚಾಲ್ತಿಯಲ್ಲಿದೆ.

ಇದೇ ಹೊತ್ತಿನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಟೈಮ್ ಪಾಸ್ ಟ್ರೈಲರ್ ಕೂಡಾ ಪ್ರೇಕ್ಷಕರ ನಡುವೆ ಒಂದಷ್ಟು ಚರ್ಚೆ ಹುಟ್ಟು ಹಾಕಿದೆ. ಒಂದು ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯ ಮೂಲಕ ಚಿತ್ರತಂಡ ಈ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ತಂತ್ರಜ್ಞರು ಸೇರಿದಂತೆ ಚಿತ್ರತಂಡವೇ ಭಾಗಿಯಾಗಿದ್ದ ಈ ಪಪ್ರಿಕಾಗೋಷ್ಠಿಯ ಮೂಲಕ ಮತ್ತೊಂದಷ್ಟು ವಿಚಾರಗಳ ಪ್ರೇಕ್ಷಕರ ಮುಂದೆ ಅನಾವರಣಗೊಂಡಿವೆ. ಇದು ಹೇಳಿಕೇಳಿ ಕಾಶಂತಾರಾ ಚಿತ್ರದ ಹವಾ ಊರೆಲ್ಲ ಹಬ್ಬಿಕೊಂಡಿರುವ ಕಾಲ. ಈ ಸಂದರ್ಭದಲ್ಲಿ ಬಿಡುಗಡೆಗೊಳ್ಳುತ್ತಿರುವ ತಮ್ಮ ಚಿತ್ರಕ್ಕೂ ಕೂಡಾ ಅಂಥಾದ್ದೇ ಪ್ರೀತಿ ತೋರಿಸುವಂತೆ, ಬೆಂಬಲ ನೀಡುವಂತೆ ಚಿತ್ರತಂಡ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದೆ.

ಇದುವರೆಗೂ ಸಿನಿಮಾ ಜಗತ್ತಿನ ನಾನಾ ಮುಖಗಳನ್ನು ಅನಾವರಣಗೊಳಿಸುವಂಥಾ ಒಂದಷ್ಟು ಪ್ರಯತ್ನಗಳಾಗಿದ್ದಾವೆ. ಈ ಚಿತ್ರದಲ್ಲಿ ಅದೆಲ್ಲಕ್ಕಿಂತಲೂ ಭಿನ್ನವಾದ ಅಂಶಗಳಿವೆಯಂತೆ. ಒಟ್ಟಾರೆಯಾಗಿ ಟೈಮ್ ಪಾಸ್ ನೊಳಗೆ ಮತ್ತೊಂದು ಸಿನಿಮಾ ಜಗತ್ತು ತೆರೆದುಕೊಳ್ಳಲಿರೋದು ಖಚಿತ. ಸಿನಿಮಾ ಸೆಳೆತಕ್ಕೆ ಸಿಕ್ಕು, ಅನೇಕ ಪ್ರಯತ್ನಗಳನ್ನು ನಡೆಸಿ ಒಂದಷ್ಟು ಕಹಿಗಳ ಮೂಲಕ ಪಾಠ ಕಲಿತಿರುವವರು ನಿರ್ದೇಶಕ ಚೇತನ್ ಜೋಡಿದಾರ್. ಅವರು ಇದುವರೆಗೂ ಯಾವೊಬ್ಬ ನಿರ್ದೇಶಕರ ಬಳಿಯೂ ಕೆಲಸ ಮಾಡದೆ, ಸಿನಿಮಾಗಳನ್ನು ನೋಡುವ ಮೂಲಕ, ಯೂಟ್ಯೂಬ್ ಮೂಲಕ ನಿರ್ದೇಶನದ ಪಟ್ಟುಗಳನ್ನು ಕಲಿತುಕೊಂಡು ಅಖಾಡಕ್ಕಿಳಿದಿರೋದು ವಿಶೇಷ.
ಎಂ.ಹೆಚ್ ಕೃಷ್ಣಮೂರ್ತಿ, ಕಿರಣ್ ಕುಮಾರ್ ಶೆಟ್ಟಿ ಮತ್ತು ಗುಂಡೂರ್ ಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಕ್ ಹ್ಯೂಮರ್ ಜಾನರಿಗೆ ಸೇರಿಕೊಳ್ಳುವ ಈ ಚಿತ್ರವನ್ನು ಶ್ರೀ ಚೇತನ ಸರ್ವಿಸಸ್ ಬ್ಯಾನರ್ ಮೂಲಕ ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ ಎಂ.ಹೆಚ್ ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ. ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ರತ್ಷಾರಾಮ್, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗಿರೀಶ್ ಗೌಡ ಸಾಹಸ ನಿರ್ದೇಶನ, ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ, ರಾಜೀವ್ ಗಣೇಶ್ ಛಾಯಾಗ್ರಹಣ, ಮಣಿ ಪ್ರಚಾರ ಕಲೆ, ಡಿ. ಶಾಮಸುಂದರ್, ಬಿ.ಕೆ ದಯಾನಂದ ನಿರ್ಮಾಣ ನಿರ್ವಹಣೆ, ಹರಿ ಪರಮ್ ಸಂಕಲನ, ಡಿ.ಎಂ ಉದಯ ಕುಮಾರ್ (ಡಿಕೆ) ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
