ಹೊಸಬರ ತಂಡವೊಂದು ಹೊಸತನದ ಸ್ಪಷ್ಟ ಸುಳಿವಿನೊಂದಿಗೆ ಟೈಮ್ ಪಾಸ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉತ್ಸಾಹದಲ್ಲಿದೆ. ಇದೇ ಅಕ್ಟೋಬರ್ ೧೭ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿರುವ ಈ ಸಿನಿಮಾ ಭೂಮಿಕೆಯಲ್ಲಿ ಒಂದಷ್ಟು ಪ್ರತಿಭಾನ್ವಿತರ ಸಮಾಗಮವಾಗಿದೆ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಮತ್ತು ಹಾಡುಗಳನ್ನು ಗಮನಿಸಿದ ಅನೇಕರು ಟೈಮ್ ಪಾಸ್ ಚಿತ್ರದ ಮೇಕಿಂಗ್ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಂಥಾದ್ದೊಂದು ಮೆಚ್ಚುಗೆ ದಕ್ಕಿಸಿಕೊಳ್ಳಲು ಪ್ರಧಾನ ಕಾರಣರಾಗಿರುವವರು ಈ ಚಿತ್ರದ ಛಾಯಾಗ್ರಾಹಕ ರಾಜೀವ್ ಗಣೇಸನ್. ನಿರ್ದೇಶನದ ಕನಸನ್ನು ಮನಸಲ್ಲಿಟ್ಟುಕೊಂಡು ಛಾಯಾಗ್ರಾಹಕರಾಗಿಯೂ ಚಾಲ್ತಿಯಲ್ಲಿರುವ ರಾಜೀವ್ ಪಾಲಿಗೆ ಟೈಮ್ ಪಾಸ್ ಮೂಲಕ ಅದ್ಭುತ ಅವಕಾಶವೇ ಒಲಿದು ಬಂದಿದೆ!


ನಿರ್ದೇಶಕನಾಗಬೇಕೆಂಬ ಬಯಕೆಯನ್ನು ಜೀವಮಾನದ ಗುರಿಯಾಗಿಟ್ಟುಕೊಂಡಿದ್ದವರು ರಾಜೀವ್ ಗಣೇಸನ್. ಸಿನಿಮಾ ರಂಗದಲ್ಲಿ ಇಂಥಾ ಗುರಿಗಳನ್ನಿಟ್ಟುಕೊಂಡು ಏಕಾಏಕಿ ಸಾಧಿಸಿ ಬಿಡಲಾಗೋದಿಲ್ಲ. ಅಂಥಾ ಅವಕಾಶ ಒಂದಷ್ಟು ಮಂದಿಗೆ ಮಾತ್ರವೇ ಸಿಗುತ್ತದೆ. ಸಿನಿಮಾ ಜಗತ್ತಿನ ಯಾವ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೂ ಕೂಡಾ, ಆ ಹಾದಿ ತನ್ನನ್ನು ಗಮ್ಯದತ್ತ ಕೊಂಡೊಯ್ಯುತ್ತದೆಂಬ ಗಾಢ ನಂಬಿಕೆಯೊಂದು ರಾಜೀವ್ ಮನಸಲ್ಲಿತ್ತು. ಆ ಕಾರಣದಿಂದಲೇ ಬದುಕು ಎತ್ತ ಹೊಯ್ದಾಡಿಸಿದರೂ, ಸಿಕ್ಕ ಜವಾಬ್ದಾರಿಯನ್ನೇ ಅತ್ಯಂತ ಅಚ್ಚುಟಾಗಿ ನಿಭಾಯಿಸುವ ಗುಣವನ್ನವರು ಬೆಳೆಸಿಕೊಂಡಿದ್ದರು. ಅಂಥಾ ಮನಃಸ್ಥಿತಿಯ ಕಾರಣದಿಂದಲೇ ಅವರು ಟೈಮ್ ಪಾಸ್ ಚಿತ್ರದ ನಿರ್ದೇಶಕ ಚೇತನ್ ಜೋಡಿದಾರ್ ಅವರ ಗಮನ ಸೆಳೆದು, ಈ ಸಿನಿಮಾದ ಛಾಯಾಗ್ರಾಹಕರಾಗುವ ಅವಕಾಶವನ್ನು ಪಡೆದುಕೊಂಡಿದ್ದರು.


ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿರುವ `ಸಾರಿ ಕರ್ಮ ರಿಟರ್ನ್ಸ್’ ಚಿತ್ರದ ಛಾಯಾಗ್ರಾಹಕರಾಗಿ ರಾಜೀವ್ ಕಾರ್ಯನಿರ್ವಹಿಸುತ್ತಿದ್ದರು. ಆ ಸಿನಿಮಾ ಮೂಲಕ ಮೊದಲ ಬಾರಿಗೆ ರಾಜೀವ್ ಮೋಷನ್ ಕ್ಯಾಪ್ಚರ್ ಎಂಬ ಪ್ರಯೋಗ ನಡೆಸಿದ್ದರು. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿಯೇ ರಾಜೀವ್ ಪ್ರಯೋಗ ಮೊದಲನೆಯದ್ದೆನ್ನಿಸಿಕೊಂಡಿದೆ. ಆ ಸಿನಿಮಾ ಇನ್ನೇನು ಬಿಡುಗಡೆಗೊಳ್ಳಲಿದೆ. ಸದರಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ಆ ಸೆಟ್ಟಿಗೆ ನಿರ್ದೇಶಕ ಚೇತನ್ ಜೋಡಿದಾರ್ ಭೇಟಿ ಕೊಟ್ಟಿದ್ದರಂತೆ. ಆ ಸಂದರ್ಭದಲ್ಲಿ ರಾಜೀವ್ ಅವರನ್ನು ಸಂಪರ್ಕಿಸಿದ ಚೇತನ್ ಅವರು ಟೈಮ್ ಪಾಸ್ ಚಿತ್ರದ ಬಗ್ಗೆ ಮಾತಾಡಿದ್ದರು. ಈ ಮೂಲಕ ರಾಜೀವ್ ಗಣೇಸನ್ ಟೈಮ್ ಪಾಸ್ ಚಿತ್ರದ ಛಾಯಾಗ್ರಾಹಕರಾಗಿ ಅಖಾಡಕ್ಕಿಳಿದಿದ್ದರು.


ಆರಂಭದಲ್ಲಿಯೇ ಚೇತನ್ ಅವರು ಇಂಚಿಂಚನ್ನೂ ವಿವರಿಸಿ ಕಥೆ ಹೇಳಿದ ರೀತಿಯೇ ರಾಜೀವ್ ಅವರಿಗೆ ಹಿಡಿಸಿತ್ತಂತೆ. ಅಷ್ಟಕ್ಕೂ ಚೇತನ್ ಅವರೊಂದಿಗೆ ರಾಜೀವ್ ಗೆಳೆತನಕ್ಕೆ ಅದಾಗಲೇಢ ಮೂರು ವರ್ಷ ಕಳೆದಿತ್ತು. ಆ ಸ್ನೇಹ ಸದರಿ ಸಿನಿಮಾದ ಮೂಲಕ ಮತ್ತಷ್ಟು ಗಾಢವಾಗಿದೆ. ಆರಂಭದಲ್ಲಿ ಕಥೆ ಹೇಳಿದ ನಂತರ ಒಂದು ವರ್ಷ ಕಳೆದ ನಂತರ ಮತ್ತೆ ಚೇತನ್ ಕಡೆಯಿಂದ ಕರೆ ಬಂದಿದ್ದೇ ಟೈಮ್ ಪಾಸ್ ಚಿತ್ರೀಕರಣ ಚಾಲೂ ಆಗಿತ್ತು. ಆ ನಂತತರದಲ್ಲಿ ಚಿತ್ರೀಕರಣದ ಹಂತದಲ್ಲಿ ಏನೇ ಸಲಹೆ ಸೂಚನೆ ನೀಡಿದರೂ ಕಡೆಗಣಿಸದೆ, ಎಲ್ಲರನ್ನೂ ಒಳಗೊಂಡು ಸಾಗುವ ಚೇತನ್ ಜೋಡಿದಾರ್ ನಿರ್ದೇಶನದ ಶೈಲಿ ರಾಜೀವ್‌ರನ್ನು ಸೆಳೆದುಕೊಂಡಿದೆ. ಈ ಚಿತ್ರದ ಮೂಲಕವೇ ತಮ್ಮ ಕನಸಿನ ಪಯಣಕ್ಕೆ ಮತ್ತಷ್ಟು ಕಸುವು ಸಿಗಲಿದೆಯೆಂಬ ಭರವಸೆಯೂ ಅವರಲ್ಲಿದೆ.


ಬಿಎಸ್‌ಸಿ ಪದವಿ ಪೂರೈಸಿಕೊಂಡ ಕ್ಷಣದಿಂದಲೇ ರಾಜೀವ್ ಗಣೇಸನ್ ಪಾಲಿಗೆ ನಿರ್ದೇಶನವೇ ಬದುಕಿನ ಉದ್ದೇಶವಾಗಿತ್ತು. ಆದರೆ ಅನಿವಾರ್ಯತೆಗಳಿಗೆ ವಶವಾಗಿ ೨೦೦೮ರಲ್ಲಿ ಕಾಲೇಜೊಂದರಲ್ಲಿ ವಿಎಫ್‌ಎಕ್ಸ್ ಬಗೆಗೆ ಬೋಧಿಸುವ ಕೆಲಸವನ್ನು ಆರಂಭಿಸಿದ್ದರು. ನಾಲಕ್ಕು ವರ್ಷ ಅದರಲ್ಲಿ ಮುಂದುವರೆದ ರಾಜೀವ್ ತನ್ನ ಕನಸಿನತ್ತ ಹೊರಳಿಕೊಂಡು, ಖ್ಯಾತ ನಿರ್ದೇಶಕ ನಾಗಾಭರಣರ ಪುತ್ರ ಪನ್ನಗ ಭರಣ ನಿರ್ದೇಶನದ ಸಿನಿಮಾದಲ್ಲಿ ಸಹಾಯಕ ನಿರ್ದೇಶನದ ಅವಕಾಶ ಪಡೆದುಕೊಂಡಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ಟೇಕಾಫ್ ಆಗಲಿಲ್ಲ. ನಂತರ ಅದೇ ವರ್ಷ ಸಿನಿಮಾ ಶಾಲೆ ಸೇರಿಕೊಂಡು, ಒಂದಷ್ಟು ಪಟ್ಟುಗಳನ್ನೂ ರಾಜೀವ್ ಕರಗತ ಮಾಡಿಕೊಂಡಿದ್ದರು.


ಕಡೆಗೂ ಒಂದಷ್ಟು ಒಲವಿದ್ದ ಸಿನಿಮಾಟೋಗ್ರಫಿಯತ್ತ ವಾಲಿಕೊಂಡ ಅವರಿಗೆ ಒಂದಷ್ಟು ಅವಕಾಶಗಳು ಒಲಿದು ಬರಲಾರಂಭಿಸಿದ್ದವು. ಸದ್ಯದ ಮಟ್ಟಿಗೆ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಒಂದಷ್ಟು ಸಿನಿಮಾಗಳು ಬಿಡುಗಡೆಯ ರೇಸಿನಲ್ಲಿವೆ. ಅದೆಲ್ಲರ ನಡುವೆ ಟೈಮ್ ಪಾಸ್ ಚಿತ್ರ ಇದೇ ಅಕ್ಟೋಬರ್ ೧೭ರಂದು ತೆರೆಗಾಣುತ್ತಿದೆ. ಈ ಸಿನಿಮಾವನ್ನು ನಿರ್ದೇಶಕರು ಕಟ್ಟಿ ಕೊಟ್ಟಿರುಜವ ಬಗೆ, ಅದಕ್ಕೆ ಕಲಾವಿದರು ಜೀವ ತುಂಬಿರುವ ರೀತಿಗಳ ಬಗ್ಗೆ ರಾಜೀವ್ ಅವರಲ್ಲೊಂದು ಬೆರಗಿದೆ. ಟೈಮ್ ಪಾಸ್ ಪ್ರೇಕ್ಷಕರಿಗೆ ಹಿಡಿಸುತ್ತದೆಂಬಂಥಾ ಭರವಸೆಯೂ ಇದೆ. ಈ ಸಿನಿಮಾದ ನಂತರ ಅವಕಾಶ ಸಿಕ್ಕರೆ ಮೆಲ್ಲಗೆ ನಿರ್ದೇಶನದತ್ತ ಹೊರಡುವ ಆಲೋಚನೆ ರಾಜೀವ್‌ರದ್ದು. ಒಟ್ಟಾರೆಯಾಗಿ, ಓರ್ವ ಛಾಯಾಗ್ರಾಹಕನಾಗಿ ಟೈಮ್ ಪಾಸ್ ತನ್ನ ವೃತ್ತಿ ಬದುಕಿನ ಮಹತ್ವದ ಚಿತ್ರವೆಂಬ ಭಾವ ಅವರೊಳಗಿದೆ. ಮೂಲತಃ ತಮಿಳುನಾಡಿನವರಾದರೂ ಅಲ್ಲಿನ ಕನ್ನಡದ ನಂಟಿನ ಕುಟುಂಬದಿಂದ ಬಂದವರು ರಾಜೀವ್. ಕಲೆಗೆ ಭಾಷೆಯ ಹಂಗಿಲ್ಲ ಎಂಬ ಸಿದ್ಧಾಂತ ಹೊಂದಿರುವ ಅವರೀಗ ಕನ್ನಡ ಚಿತ್ರರಂಗದ ಭಾಗವಾಗಿದ್ದಾರೆ!

About The Author