ಸಿನಿಮಾ ನಟನಟಿಯರ ಬಗ್ಗೆ ರೂಮರ್ ಗಳು ಹರಿದಾಡಲು ಬಲವಾದ ಕಾರಣಗಳೇನೂ ಬೇಕಿಲ್ಲ. ಅದರಲ್ಲಿಯೂ ಸ್ಟಾರ್ ನಟರ ಸುತ್ತಲಂತೂ ಅಕ್ಷರಶಃ ಗಾಸಿಪ್ಪುಗಳ ಗುಡಾಣವೇ ತುಂಬಿಕೊಂಡಿರುತ್ತೆ. ಹಾಗಿರುವಾಗ ತಮಿಳುನಾಡಿನ ತುಂಬಾ ತೀವ್ರವಾದ ಕ್ರೇಜ್ ಮೂಡಿಸಿರುವ (thala ajith) ತಲಾ ಅಜಿತ್ ಇಂಥಾ ರೂಮರುಗಳಿಂದ ಹೊರತಾಗಿರಲು ಸಾಧ್ಯವೇ? ಇತ್ತೀಚೆಗಂತೂ ಅಜಿತ್ ಬಗ್ಗೆ ನಾನಾ ದಿಕ್ಕುಗಳಲ್ಲಿ ಅಂತೆಕಂತೆಗಳು ಹಬ್ಬಿಕೊಳ್ಳುತ್ತಿವೆ. ಅದರಲ್ಲಿಯೂ ಯಾವಾಗ ಅಜಿತ್ ಆಸ್ಪತ್ರೆಯ ಕಾರಿಡಾರುಗಳಲ್ಲಿ ಕಾಣಿಸಿಕೊಂಡರೋ, ಆ ಕ್ಷಣದಿಂದಲೇ ಅವರ ಅನಾರೋಗ್ಯದ ಬಗ್ಗೆ ಆಘಾತಕರ ಸುದ್ದಿಗಳು ಹರಿದಾಡುತ್ತಿವೆ. ಅದನ್ನು ಕೇಳಿದ ಅಜಿತ್ ಅಭಿಮಾನಿಗಳೆಲ್ಲ ಕಂಗಾಲಾಗಿ ಹೋಗಿದ್ದಾರೆ!

ಅಜಿತ್‍ಗೆ ಬ್ರೈನ್ ಟ್ಯೂಮರ್ ಇದೆ ಅನ್ನೋದು ಇತ್ತೀಚೆಗೆ ಹರಡಿಕೊಂಡಿದ್ದ ಸುದ್ದಿ. ಅದಕ್ಕೆ ಸರಿಯಾಗಿ ಅಜಿತ್ ಕೂಡಾ ಆಗಾಗ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಾ, ವಾರದ ಹಿಂದೆ ಸರ್ಜರಿ ಮಾಡಿಸಿಕೊಳ್ಳುತ್ತಿರುವ ಸುದ್ದಿ ಜಾಹೀರಾಗಿತ್ತು. ಹಾಗಾದರೆ, ಅಜಿತ್ ಗೆ ನಿಜಕ್ಕೂ ಆಗಿರೋದೇನು? ಹಬ್ಬಿಕೊಂಡಿರುವ ಗಾಸಿಪ್ಪುಗಳೆಲ್ಲ ನಿಜವೇ ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತವೆ. ಅದಕ್ಕುತ್ತರವಾಗಿ ಒಂದಷ್ಟು ಸೂಕ್ಷ್ಮ ಸಂಗತಿಗಳೂ ಹೊರಬೀಳುತ್ತವೆ. ಈ ಬಗ್ಗೆ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ಒಂದಷ್ಟು ವಿವರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ಪ್ರಾಣ ಸ್ನೇಹಿತ ವೆಟ್ರಿ ಮರಣದ ನಂತರ ಅಜಿತ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅಗೋಚರ ಭಯವೊಂದು ಈ ಸೂಪರ್ ಸ್ಟಾರ್ ನಟನನ್ನು ಹೈರಾಣು ಮಾಡಿ ಹಾಕಿದೆ.

ಕೊರೋನಾ ನಂತರದಲ್ಲಿ ಜನ ನಾನಾ ಬಗೆಯಲ್ಲಿ ಮರಣ ಹೊಂದುತ್ತಿದ್ದಾರೆ. ಅದರಂತೆಯೇ ಅಜಿತ್ ಜೀವದ ಗೆಳೆಯ ವೆಟ್ರಿ ಕೂಡಾ ಇಲ್ಲವಾಗಿದ್ದರು. ವಿಕ್ಷಿಪ್ತ ಸ್ವಭಾವದ, ಅಂತರ್ಮುಖಿ ಆಸಾಮಿ ಅಜಿತ್ ಗೆಳೆಯನ ಮರಣದ ನಂತರ ಮತ್ತಷ್ಟು ಮಂಕಾಗಿದ್ದರಂತೆ. ಹೀಗೆ ಆಪ್ತ ಜೀವಗಳು ಎದ್ದು ನಡೆದಾಗ ಅದೊಂದು ತೆರನಾದ ಶುಷ್ಕ ಭಾವ ಆವರಿಸಿಕೊಳ್ಳೋದು ಸಹಜ. ಹಾಗಂತ ಎಲ್ಲರಿಗೂ ಹಾಗಾಗುತ್ತದೆ ಅಂದುಕೊಳ್ಳುವಂತಿಲ್ಲ. ಕೆಲ ಲಫಂಗರಿಗೆ ಗೆಳೆತನ ಅನ್ನೋದೂ ಕೂಡಾ ಫಾಯಿದೆ ಗಿಟ್ಟಿಸಿಕೊಳ್ಳುವ ಮೂಲವಾಗಿರುತ್ತೆ. ಬದುಕಿರುವಾಗಲೇ ಸ್ನೇಹದ ಕತ್ತು ಹಿಸುಕುವ ಇಂಥಾ ಹಲಾಲುಕೋರರು ಸ್ನೇಹಕ್ಕಿರಲಿ, ಸಣ್ಣದೊಂದು ನಂಬಿಕೆಗೂ ಅರ್ಹರಲ್ಲ. ಅಂಥವರಿಗೆ ಮರುಗಲೂ ಗತಿಯಿಲ್ಲದಂಥಾ ಘೋರ ಸಾವು ಗ್ಯಾರೆಂಟಿ. ಆದರೆ, ನಿಜವಾದ ಸ್ನೇಹ ಮಾತ್ರ ವಿದಾಯದ ಕ್ಷಣಗಳ ಮೂಲಕವೇ ಕೊಂದು ಬಿಡುತ್ತೆ.

ಹಾಗೆ ಸ್ನೇಹಿತ ಎದ್ದು ಹೋದ ನಂತರದಲ್ಲಿ ಅಜಿತ್ ಅದೆಷ್ಟು ಕಂಗಾಲಾಗಿದ್ದರೆಂದರೆ, ಪದೇ ಪದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಶುರುವಿಟ್ಟಿದ್ದರು. ಇದೇ ಸಂದರ್ಭದಲ್ಲಿ ಸಣ್ಣದೊಂದು ಸಮಸ್ಯೆ ಕಾಣಿಸಿಕೊಂಡಿತ್ತು. ಕಿವಿಯ ಹಿಂಭಾಗದಲ್ಲೊಂದು ಇನ್ಫೆಕ್ಷನ್ ಕಾಣಿಸಿಕೊಂಡಿದ್ದೇ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಅದರನ್ವಯ ಅಜಿತ್ ಗೆ ಶಸ್ತ್ರ ಚಿಕಿತ್ಸೆ ನಡೆದಿದೆ. ಅವರೀಗ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಇದೇ ಮಾರ್ಚ್ ತಿಂಗಳಿನಲ್ಲಿಯೇ ಮತ್ತೆ ಚಿತ್ರೀಕರಣಕ್ಕೆ ಮರಳಲು ಅಜಿತ್ ಯೋಜನೆ ಹಾಕಿಕೊಂಡಿದ್ದಾರೆ. ಖುದ್ದು ಮ್ಯಾನೇಜರ್ ನೀಡಿರುವ ಇಷ್ಟೆಲ್ಲ ಮಾಹಿತಿಗಳು ಸದ್ಯ ಅಜಿತ್ ಅಭಿಮಾನಿ ಪಡೆಯನ್ನು ನಿರಾಳವಾಗಿಸಿದೆ!

About The Author