ಕನ್ನಡ ಚಿತ್ರರಂಗದಲ್ಲೀಗ ಹಂತ ಹಂತವಾಗಿ ಹೊಸಾ ಅಲೆ ಮೂಡಿಕೊಳ್ಳುತ್ತಿದೆ. ಕೆಲ ಮಂದಿ ಇನ್ನೂ (kgf movie) ಕೆಜಿಎಫ್‌ನ ಮಸಿ ಮಸಿ ಛಾಯೆಯಲ್ಲಿ ಉರುಳಾಡುತ್ತಿರುವಾಗಲೇ, ಒಂದಷ್ಟು ಭಿನ್ನ ಧಾಟಿಯ ಪ್ರಯೋಗಗಳೂ ನಡೆಯುತ್ತಿವೆ. ಮಾಸ್ ಭ್ರಮೆಯ ಏಕತಾನತೆಯನ್ನು ದಾಟಿಕೊಳ್ಳವ ಇರಾದೆ ಹೊಂದಿರುವವರಿಗೆ ವರದಂತೆ ಕಾಣಿಸುತ್ತಿರುವ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ಅಣಿಯಾಗಿ ನಿಂತಿವೆ. ಆ ಸಾಲಿನಲ್ಲಿ ಪ್ರಮುಖವಾಗಿ ಗುರುಜತಿಸಿಕೊಂಡುಇರುವ ಸಿನಿಮಾ (swapna mantapa movie) `ಸ್ವಪ್ನ ಮಂಟಪ’. ಬರಗೂರು ರಾಮಚಂದ್ರಪ್ಪ (baraguru ramachandrappa) ತಮ್ಮದೇ ಕಾದಂಬರಿ ಆಧಾರಿತವಾಗಿ, ತಾವೇ ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿರೋದು ವಿಶೇಷ. ಹೊಸಾ ಬಗೆಯ ಪಾತ್ರಗಳಿಗೆ ಒಡ್ಡಿಕೊಳ್ಳುತ್ತಾ ಬಂದಿರುವ (actor vijay raghavendra) ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದ್ದರೆ, ಕನ್ನಡತಿ ಖ್ಯಾತಿಯ (ranjani raghavan) ರಂಜಿನಿ ರಾಘವನ್ ನಾಯಕಿಯಾಗಿ ಜೊತೆಯಾಗಿದ್ದಾರೆ.
ಇದು ಹೊಸಾ ಅಲೆ, ಹೊಸಾ ಆಲೋಚನೆಗಳಿಗೆ ಚಿತ್ರರಂಗ ಒಡ್ಡಿಕೊಂಡಿಕರುವ ಕಾಲಮಾನ. ಈ ಹೊತ್ತಿನಲ್ಲಿ ಹಳೇ ಘಮವೊಂದು ಹೊಸತನದೊಂದಿಗೆ ಮಿಳಿತವಾದಂತೆ ಭಾಸವಾಗುತ್ತಿರೋದಕ್ಕೆ ಪ್ರಧಾನ ಕಾರಣವಾಗಿ ನಿಲ್ಲುವವರು ಬರಗೂರು ರಾಮಚಂದ್ರಪ್ಪ. ಈವತ್ತಿಗೆ ಸ್ವಪ್ನ ಮಂಟಪ ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆ ಮೂಡಿಕೊಂಡಿರೋದರ ಹಿಂದೆ ಈ ಕಾರಣ ಪ್ರಧಾನವಾಗಿರುವಂತೆ ಭಾಸವಾಗುತ್ತದೆ. ಬರಗೂರು ರಾಮಚಂದ್ರಪ್ಪ ಕನ್ನಡದ ಮಹತ್ವದ ಸಾಹಿತಿ. ಈ ನೆಲದ ಮಿಡಿತಗಳತ್ತ ಸದಾ ಒಳಗಣ್ಣು ತೆರೆದಿಟ್ಟುಕೊಂಡಿರುವ ಬರಗೂರರು ಒಂದು ಸಿನಿಮಾ ಸಾರಥ್ಯ ವಹಿಸುತ್ತಾರೆಂದರೆ ಸಹಜವಾಗಿಯೇ ಅದು ವಿಶೇಷವಾಗಿರುತ್ತದೆಂಬ ನಂಬಿಕೆ ಮೂಡಿಕೊಳ್ಳುತ್ತದೆ. ಇಲ್ಲಿ ಪಾರಂಪರಿಕ ಸ್ಥಳಗಳ ಮಹತ್ವ ಮತ್ತು ಅವುಗಳ ಉಳಿವಿನ ಜರೂರತ್ತನ್ನು ಪ್ರತಿಪಾದಿಸುವ ಕಥನವಿದೆಯಂತೆ. ಮನೋರಂಜನಾತ್ಮಕ ಗುಣಗಳೊಂದಿಗೆ ಒಂದು ಘನವಾದ ಸಂದೇಶವನ್ನು ರವಾನಿಸುವ ಬಗೆಯಲ್ಲಿ ಬರಗೂರರು ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರಂತೆ.
ಈಗಾಗಲೇ ವಿಜಯ್ ರಾಘವೇಂದ್ರ ಮತ್ತು ರಂಜಿನಿ ರಾಘವನ್ ಅವರಿಗಳ ಒಂದಷ್ಟು ಗೆಟಪ್ಪುಗಳು ಜಾಹೀರಾಗಿವೆ. ವಿಶೇಷವೆಂದರೆ, ಇವರಿಬ್ಬರೂ ದ್ವಿಪಾತ್ರಗಳಿಗೆ ಜೀವ ತುಂಬಿದ್ದಾರಂತೆ. ರಂಜನಿಗೂ ಕೂಡಾ ಬಹುಕಾಲದ ನಂತರ ವಿಭಿನ್ನ ಪಾತ್ರ ಸಿಕ್ಕ ಖುಷಿಯಿದೆ. ಇವರಿಬ್ಬರ ಜೊತೆಗೆ ದೊಡ್ಡ ತಾರಾಗಣ ಸಾಥ್ ಕೊಟ್ಟಿದೆ. ಸುಂದರ್ ರಾಜ್, ಶೋಭಾ ರಾಘವೇಂದ್ರ, ರಜಿನಿ, ಅಂಬರೀಶ್ ಸಾರಂಗಿ, ರಾಜಪ್ಪ ದಳವಾಯಿ, ವೆಂಕಟರಾಜು, ಶಿವಲಿಂಗ ಪ್ರಸಾದ್, ಭಾರತಿ ರಮೇಶ್, ಗುಂಡಿ ರಮೇಶ್ ಮುಂತಾದವರ ತಾರಾಗಣವಿದೆ. ನಾಗರಾಜ್ ಅದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿಕರುವ ಈ ಚಿತ್ರ ಇದೇ ತಿಂಗಳ ೨೫ರಂದು ರಾಜ್ಯಾದ್ಯಂತ ತೆರೆಗಾಣಲಿದೆ.