ತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ನಾನಾ ಪ್ರಯೋಗಾತ್ಮಕ ಪ್ರಯತ್ನಗಳಿಂದ, ಭಿನ್ನ ಧಾಟಿಯ ಸಿನಿಮಾಗಳಿಂದ ಶೃಂಗಾರಗೊಂಡಂತಿದೆ. ಇಂಥಾ ಬಗೆಬಗೆಯ ಸಿನಿಮಾಗಳ ಭರಾಟೆಯ ನಡುವಲ್ಲಿಯೂ ನಮ್ಮ ನಡುವೆ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳ ಧ್ಯಾನವೊಂದು ಸದಾ ಚಾಲ್ತಿಯಲ್ಲಿರುತ್ತೆ. ಕಥೆಯನ್ನೇ ಆತ್ಮವಾಗಿಸಿಕೊಂಡಿರುವ, ಆ ಮೂಲಕವೇ ಹೊಸಾ ಲೀಕವೊಂದನ್ನು ತಮ್ಮೆದುರು ತೆರೆದಿಡುವ ಸಿನಿಮಾಗಳಿಗಾಗಿ ಹಾತೊರೆಯುವ ಪ್ರೇಕ್ಷಕರ ಸಂಖ್ಯೆ ನಮ್ಮಲ್ಲಿ ಗಣನೀಯವಾಗಿದೆ. ಅಂಥಾ ಪ್ರೇಕ್ಷಕ ವರ್ಗದ ಮನಸೆಳೆಯಬಲ್ಲ ಕಂಟೆಂಟು ಹೊಂದಿರುವ ಸೀಸ್ ಕಡ್ಡಿ ಚಿತ್ರ ಈ ವಾರ ಬಿಡುಗಡೆಗೊಂಡಿದೆ.

ಇದು ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಸೀಸ್ ಕಡ್ಡಿಯ ಗುಣಲಕ್ಷಣಗಳನ್ನೇ ಐದು ಪಾತ್ರವಾಗಿಸಿಕೊಂಡು, ಆ ಮೂಲಕ ಐದು ಕಥನಗಳು ಗರಿಬಿಚ್ಚಿಕೊಳ್ಳುವ ಹೊಸತನದೊಂದಿಗೆ ಈ ಸಿನಿಮಾವನ್ನವರು ದೃಶ್ಯೀಕರಿಸಿದ್ದಾರೆ. ಈ ಹಿಂದೆಯೂ ಕೂಡಾ ಈ ಬಗೆಯ ಪ್ರಯೋಗಗಳು ನಡೆದಿರೋದು ನಿಜ. ಆದರೆ, ಅದೆಲ್ಲದರಾಚೆಗೆ ಹೊಸಾ ಗುಂಗಿಗೊಡ್ಡಿಕೊಳ್ಳುವಂತೆ ಈ ಕಥನವನ್ನು ನಿರೂಪಣೆ ಮಾಡಿರೋದು ಸೀಸ್ ಕಡ್ಡಿಯ ಹೆಚ್ಚುಗಾರಿಕೆ. ನಮಗೆಲ್ಲ ವಿಕ್ರಮ ಬೇತಾಳನ ಕಥೆಗಳು ಬಾಲ್ಯದ ಸಾಥಿಗಳಾಗಿವೆ. ನಮ್ಮೆಲ್ಲರ ಕಲ್ಪನಾ ಶಕ್ತಿಗೆ ಹೊಸಾ ಆವೇಗ ಸಿಕ್ಕಿದ್ದರ ಹಿಂದೆಯೂ ಇಂಥಾ ಕಥೆಗಳ ಋಣವಿದೆ. ಅಂಥಾದ್ದೊಂದು ಮಧುರಾನುಭೂತಿಯನ್ನು ಮತ್ತೆ ಪ್ರೇಕ್ಷಕರ ಬೊಗಸೆಗಿಟ್ಟು ಪುಳಕಗೊಳಿಸುವ ಪ್ರಯತ್ನವೊಂದು ಇಲ್ಲಿ ನಡೆದಂತೆ ಭಾಸವಾಗುತ್ತದೆ.

ಇಲ್ಲಿ ನಾನಾ ಬಗೆಯ ಬದುಕಿನ ಬಿಡಿ ಬಿಡಿ ಚಿತ್ರಗಳಿದ್ದಾವೆ. ಕೊಂಚ ಎಚ್ಚರ ತಪ್ಪಿದರೂ ಚದುಲಿ ಚೆಲ್ಲಾಪಿಲ್ಲಿಯಾಗಬಲ್ಲ ಸಂಕೀರ್ಣ ಕಥೆಯನ್ನು ಒಂದು ಬಿಂದುವಿನಲ್ಲಿ ಹಿಡಿದಿಡುವಲ್ಲಿ, ಒಂದಷ್ಟು ಕೊರತೆಗಳನ್ನೂ ಸಹ್ಯವಾಗಿಸಿಕೊಂಡು ನೋಡಿಸಿಕೊಂಡು ಹೋಗುವಲ್ಲಿ ನಿರ್ದೇಶನದ ಅಸಲೀ ಕಸುಬುದಾರಿಕ ಕಣ್ಣಿಗೆ ಕಟ್ಟುತ್ತೆ. ಇಲ್ಲಿನ ಬಹುತೇಕ ಕಥನಗಳು ಮನಮುಟ್ಟುವಂತಿವೆ. ಕೆಲವೆಡೆಗಳಲ್ಲಿ ನಿಧಾನಗತಿ ಹಾದುಹೋದಂತೆ ಭಾಸವಾದರೂ ಕೂಡಾ, ಒಟ್ಟಾರೆ ಕಥೆಯ ಓಘ ಅದೆಲ್ಲವನ್ನೂ ಸರಿದೂಗಿಸಿಕೊಂಡು ಮುಂದುವರೆಯುತ್ತದೆ. ಯಾವ ಗೊಂದಲ, ಗೋಜಲುಗಳಿಗೂ ಎಡೆಯಿಲ್ಲದಂತೆ, ನೋಡುಗರೆಲ್ಲರಿಗೂ ಅವರವರ ಭಾವಕ್ಕೆ ತಕ್ಕಂತೆ ಕಾಡಬಲ್ಲ ಗುಣಗಳೊಂದಿಗೆ ರತನ್ ಗಂಗಾಧರ್ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.

ಇಲ್ಲಿ ಸಿನಿಮಾ ಮಂದಿರದಾಚೆಗೂ ಗುಂಗಿನಂತೆ ಕಾಡುವ ಪಾತ್ರಗಳನ್ನು ಸೃಷ್ಟಿಸಿರೋದೇ ಪ್ಲಸ್ ಪಾಯಿಂಟ್. ಆಯಾ ಪಾತ್ರಗಳನ್ನು ಕಲಾವಿದರು ಪರಿಪೂರ್ಣವೆನ್ನಿಸುವಂತೆ ನಿಭಾಯಿಸಿರೋದು ಸೀಸ್ ಕಡ್ಡಿಯ ಅಸಲೀ ಶಕ್ತಿಯಂತೆ ಕಾಣಿಸುತ್ತೆ. ನಿಖರವಾಗಿ ಹೇಳಬೇಕೆಂದರೆ, ಇದು ಒಂದಷ್ಟು ಹೊಸಾ ಸಾಧ್ಯತೆಗಳ ಅನ್ವೇಷಣೆಯಲ್ಲಿ ಆವಿರ್ಭವಿಸಿದಂತಿರೋ ಚಿತ್ರ. ಆ ಮೂಲಕ ನಿರ್ಮಾಪಕ ಸಂಪತ್ ಶಿವಶಂಕರ್ ಅವರ ಸಿನಿಮಾ ಪ್ರೇಮವೂ ಸಾರ್ಥಕ್ಯ ಕಂಡಂತಾಗಿದೆ. ಈಗಾಗಲೇ ಅನೇಕ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿಯೂ ಈ ಸಿನಿಮಾ ಪ್ರದರ್ಶನಗೊಂಡು, ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಬಗ್ಗೆ ಸುದ್ದಿಗಳು ಜಾಹೀರಾಗಿದ್ದವು. ಈಗಾಗಲೇ ಸಿನಿಮಾ ನೋಡಿದವರ ಮುಖದಲ್ಲಿ ಸೀಸ್ ಕಡ್ಡಿ ಅಂಥಾ ಅರ್ಹತೆ ಹೊಂದಿರುವ ಸಿನಿಮಾ ಎಂಬಂಥಾ ಛಾಯೆ ಕಾಣಿಸುತ್ತಿದೆ. ಅದರ ಅಸಲೀ ಸ್ವಾದವನ್ನು ಸಿನಿಮಾ ಮಂದಿರಗಳಲ್ಲಿಯೇ ಆಸ್ವಾದಿಸಿದರೊಳಿತು…

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!